ಶುಕ್ರವಾರ, ಮಾರ್ಚ್ 5, 2021
26 °C

ಮತ್ತೆ ಜೈಲಿಗೆ ವರವರರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಎರಡು ದಿನಗಳ ವಿಚಾರಣೆಯ ನಂತರ ತೆಲುಗು ಕವಿ ವರವರ ರಾವ್ ಅವರನ್ನು ಇಲ್ಲಿನ ಪೊಲೀಸರು ಮತ್ತೆ ಮಹಾರಾಷ್ಟ್ರದ  ಯರವಾಡಾ ಜೈಲಿಗೆ ಕಳುಹಿಸಿದರು.

ಭೀಮಾ ಕೋರೆಗಾಂವ್‌ ಹಿಂಸಾಚಾರ ಪ‍್ರಕರಣಕ್ಕೆ ಸಂಬಂಧಿಸಿದಂತೆ ರಾವ್, ಪುಣೆಯ ಯರವಾಡಾ ಜೈಲಿನಲ್ಲಿ ಬಂಧನದಲ್ಲಿ ಇದ್ದರು. ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 2005ರ ಫೆ.11ರಂದು ನಕ್ಸಲಿಯರು ನಡೆಸಿದ ಪೋಲಿಸರ ಹತ್ಯಾಕಾಂಡದ ಆರೋಪಿ ಆಗಿರುವ ರಾವ್ ಅವರನ್ನು ವಿಚಾರಣೆಗಾಗಿ ಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದರು.

ವರವರರಾವ್ ಅವರನ್ನು ಶನಿವಾರ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪತ್ನಿ, ಪುತ್ರಿ ಹಾಗೂ ಮೊಮ್ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರ ಜತೆ ಮಾತನಾಡಲು ಅವಕಾಶ ನೀಡಬೇಕು ಎಂದು ವರವರರಾವ್ ನ್ಯಾಯಾಧೀಶರಲ್ಲಿ ಕೋರಿದರು. 

ನ್ಯಾಯಾಧೀಶ ಭರತ್ ಯೋಗೀಶ ಕರಗುದರಿ, ಮೊಬೈಲ್ ಇತ್ಯಾದಿ ಪರಿಕರ ಬಳಸಬಾರದು. ಯಾವುದೇ ದಾಖಲೆಗಳಿಗೆ ಸಹಿ ಮಾಡಬಾರದು ಎಂಬ ಷರತ್ತಿನೊಂದಿಗೆ 20 ನಿಮಿಷ ಮಾತನಾಡಲು ಅನುಮತಿ ಕೊಟ್ಟರು. ಆದರೆ ಅಳಿಯನ ಜತೆ ಮಾತನಾಡಲು ಅವಕಾಶ ನೀಡಲಿಲ್ಲ.

ಕುಟುಂಬ ಸದಸ್ಯರ ಜತೆ ಮಾತನಾ ಡುವ ವಿಚಾರವಾಗಿ ನ್ಯಾಯಾಧೀಶರಿಗೆ ವರವರರಾವ್ ಮನವಿ ಮಾಡಿಕೊಳ್ಳುತ್ತಿದ್ದರು. ಆಗ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿದರು. ಆಗ ವರವರ ರಾವ್, ‘ನಾನು ನ್ಯಾಯಾಧೀಶರ ಜತೆ ಮಾತನಾಡುತ್ತಿದ್ದೇನೆ. ನಿಮ್ಮ ಆಕ್ಷೇಪಣೆ ಇದ್ದರೆ ನ್ಯಾಯಾಧೀಶರಿಗೆ ತಿಳಿಸಿ. ನೀವು ಮಧ್ಯೆ ಪ್ರವೇಶಿಸಬೇಡಿ’ ಎಂದರು.

ಪತಿಗೆ ಕಿರುಕುಳ: ‘ವರವರರಾವ್ ಅವರ ಮೇಲೆ ಇಲ್ಲ ಸಲ್ಲದ ಆರೋಪ ಹೊರೆಸಿ ಕಿರುಕುಳ ನೀಡಲಾಗುತ್ತಿದೆ’ ಎಂದು ವರವರ ರಾವ್ ಅವರ ಪತ್ನಿ ಹೇಮಲತಾ ಆರೋಪಿಸಿದರು. ‘ಸತತ 40 ವರ್ಷಗಳಿಂದ ನ್ಯಾಯಾಲಯಕ್ಕೆ ಸುತ್ತಾಟ ನಡೆಸಿದ್ದಾರೆ. ಆದರೆ ಕಳೆದ 9 ತಿಂಗಳಿಂದ ಸಾಕಷ್ಟು ಕಷ್ಟ ಎದುರಿಸುತ್ತಿದ್ದಾರೆ. 80 ವರ್ಷದ ವೃದ್ಧರಾದ ನನ್ನ ಪತಿಗೆ ಯರವಾಡಾ ಜೈಲಿನಲ್ಲಿ ಮೂಲಸೌಕರ್ಯ ನೀಡದೆ ಹಿಂಸಿಸ ಲಾಗುತ್ತಿದೆ. ಅವರನ್ನು ನೆಲದ ಮೇಲೆ ಮಲಗಿಸುತ್ತಿದ್ದಾರೆ. ಕನಿಷ್ಠ ಸೌಕರ್ಯಗಳನ್ನೂ ನೀಡುತ್ತಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು