ಶನಿವಾರ, ಸೆಪ್ಟೆಂಬರ್ 25, 2021
22 °C

‘ಸ್ಥಳೀಯ ಸಂಸ್ಥೆ ಚುನಾವಣೆ ಯಾರೊಂದಿಗೂ ಮೈತ್ರಿ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಯಾರ ಜೊತೆಗೂ ಪಕ್ಷವು ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ಸ್ಪಷ್ಟಪಡಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಅವರು, ‘ಮೈತ್ರಿ ಏನಿದ್ದರೂ ಲೋಕಸಭೆ ಚುನಾವಣೆಗೆ ಸೀಮಿತ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ ಮಾಡಲಿದೆ’ ಎಂದರು.

ಶ್ರೀನಿವಾಸ್ ಪ್ರಸಾದ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಉಭಯ ಕುಶಲೋಪರಿ ಮಾತನಾಡಲು ಸೇರಿದ್ದೆವು. ನಾವಿಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದರೂ, 40 ವರ್ಷದ ಸ್ನೇಹಿತರು. ಆರೋಗ್ಯ ವಿಚಾರಿಸಿಕೊಳ್ಳಲು ಹೋಗಿದ್ದೆ ಅಷ್ಟೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಲೆಕ್ಕ ಹೇಗಿದೆ ಅಂತ ಕೇಳಿದೆ. ಅದಕ್ಕೆ ಅವರು, ಈ ಬಾರಿ ಬದಲಾವಣೆ ಆಗುತ್ತದೆ ಅಂತ ಹೇಳಿದ್ದಾರೆ. ಈ ವಿಷಯ ಬಿಟ್ಟು ಬೇರೆ ಚರ್ಚೆ ಮಾಡಿಲ್ಲ’ ಎಂದರು.

‘ಮೈಸೂರಿನಲ್ಲಿ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿದ್ದಾರೆ’ ಎಂಬ ಸಚಿವ ಜಿ.ಟಿ. ದೇವೇಗೌಡ ಹೇಳಿಕೆಗೆ ಅವರು, ‘ಯಾರು, ಯಾರಿಗೆ ಮತ ಹಾಕಿದರು ಅಂತ ಹೇಳುವುದಕ್ಕೆ ಆಗುತ್ತಿಲ್ಲ. ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಮೇ 23ರ ನಂತರ ಎಲ್ಲ ಪ್ರಶ್ನೆ, ಚರ್ಚೆಗಳಿಗೆ ಉತ್ತರ ಸಿಗಲಿದೆ’ ಎಂದರು.

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ರೆಸಾರ್ಟ್ ವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರೆಸಾರ್ಟ್‌ನಲ್ಲಿಯೂ ದೇವಸ್ಥಾನಗಳಿವೆ. ಹಿರಣ್ಯಕಶಿಪು ಪ್ರಹ್ಲಾದನಿಗೆ ಈ ಕಂಬದಲ್ಲಿ ನಾರಾಯಣನಿದ್ದಾನೋ ಎಂದು ಕೇಳುತ್ತಾನೆ. ಎಲ್ಲೆಲ್ಲೂ ಇದ್ದಾನೆ ಎಂದು ಪ್ರಹ್ಲಾದ ಹೇಳುತ್ತಾನೆ. ಹಾಗೆಯೇ ರೆಸಾರ್ಟಿನ ಕಂಬ ಕಂಬದಲ್ಲೂ ದೇವರಿದ್ದಾನೆ’ ಎಂದು ಹೇಳಿ ನಗೆ ಬೀರಿದರು.

‘ಬಿಜೆಪಿಯವರು ದೇವಸ್ಥಾನದ ಗಿರಾಕಿಗಳು. ಅವರು ಬೆಳಿಗ್ಗೆ, ಸಂಜೆ ದೇವಸ್ಥಾನಕ್ಕೆ ಹೋಗುತ್ತಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಆಗೊಮ್ಮೆ, ಈಗೊಮ್ಮೆ ಹೋಗುತ್ತಾರೆ ಅಷ್ಟೇ. ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ’ ಎಂದು ಕುಮಾರಸ್ವಾಮಿ ಅವರ ಟೆಂಪಲ್ ರನ್‌ಗೆ ಸಮರ್ಥನೆ ನೀಡಿದರು.

ಬಿಜೆಪಿ– ಜೆಡಿಎಸ್ ಒಪ್ಪಂದ: ಸಿದ್ದರಾಮಯ್ಯ
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಸಿದ್ದರಾಮಯ್ಯ ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಒಪ್ಪಂದ ಮಾಡಿಕೊಂಡಿದ್ದರಿಂದಾಗಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದವು. ಅದೊಂದು ವಿಭಿನ್ನ ಚುನಾವಣೆಯಾಗಿತ್ತು. ಬಿಜೆಪಿಯವರು ಈಗ ಮತ್ತೆ ಚುನಾವಣೆ ಎದುರಿಸಲಿ ನೋಡೋಣ’ ಎಂದು ಸವಾಲು ಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್‌. ವಿಶ್ವನಾಥ್, ‘ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌, ಬಿಜೆಪಿಯ 'ಬಿ' ಟೀಂ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಹೀಗಾಗಿ, ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಹೆಚ್ಚು ಸ್ಥಾನ ಬಂತು. ಅದಕ್ಕೆ ಜೆಡಿಎಸ್ ಕಾರಣ ಅಲ್ಲವೇ ಅಲ್ಲ’ ಎಂದು ತಿರುಗೇಟು ನೀಡಿದರು.

‌‘ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶ್ಲೇಷಣೆ ಇರುತ್ತದೆ. ಕಾಂಗ್ರೆಸ್‌ಗೆ 79 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ ಎನ್ನುವುದು ವಿಶ್ವನಾಥ್‌ ವಿಶ್ಲೇಷಣೆ. ಅದೇ ರೀತಿ ಮತ್ತೊಬ್ಬರಿಗೆ ಮತ್ತೊಂದು ರೀತಿಯ ವಿಶ್ಲೇಷಣೆ ಇರುತ್ತದೆ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಪ್ರತಿಕ್ರಿಯಿಸಿದರು.

**

ವಿಶ್ವನಾಥ್‌–ಪ್ರಸಾದ್‌ ಭೇಟಿ
ಮೈಸೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ಅವರನ್ನು ಮಂಗಳವಾರ ಸಂಜೆ ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

**

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಯಾರ ಜತೆಗಾದರೂ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ವಿಶ್ವನಾಥ್‌ ಹೇಳಿಕೆ ಕುರಿತು ಅವರನ್ನೇ ಕೇಳಿ.
-ದಿನೇಶ್ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು