ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ 3 ತಿಂಗಳ ಬಳಿಕ ‘ತಗಡಿನ ಗೋಡೆ’!

ಅಂಬೇಡ್ಕರ್‌ ಭವನದಲ್ಲಿ 6 ಸಂತ್ರಸ್ತ ಕುಟುಂಬಗಳ ಬವಣೆ
Last Updated 4 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಮಾಂಜರಿ (ಬೆಳಗಾವಿ ಜಿಲ್ಲೆ): ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ಕಾಲೊನಿಯಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ಆರು ಕುಟುಂಬಗಳು ಬರೋಬ್ಬರಿ ಮೂರು ತಿಂಗಳುಗಳಿಂದಲೂ ಅಂಬೇಡ್ಕರ್‌ ಭವನದಲ್ಲಿ ಸೌಲಭ್ಯಗಳ ಕೊರತೆಗಳ ನಡುವೆ ಜೀವನ ನಡೆಸುತ್ತಿವೆ. ಅವರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ಸಿಗದಿರುವುದು ಇದಕ್ಕೆ ಕಾರಣ.

ಜುಲೈ ಅಂತ್ಯದಲ್ಲಿ ಬಂದ ಪ್ರವಾಹದಿಂದಾಗಿ ಹಲವು ದಿನಗಳವರೆಗೆ ಇಲ್ಲಿನ ಮನೆಗಳು ಮುಳುಗಡೆಯಾಗಿದ್ದವು. ನಂತರ ಅವು ಕುಸಿದು ಬಿದ್ದಿರುವುದರಿಂದ ಬಹುತೇಕ ಕುಟುಂಬಗಳು ‘ನೆಲೆ’ ಕಳೆದುಕೊಂಡಿವೆ.

ಅವರಿಗೆ ಅಂಬೇಡ್ಕರ್‌ ಭವನದಲ್ಲಿ ಜಾಗ ನೀಡಲಾಗಿದೆ. ಇಲ್ಲಿವರೆಗೆ ‘ತೆರೆದ ಸಭಾಂಗಣ’ದಲ್ಲೇ ಅವರು ಜೀವನ ನಡೆಸುತ್ತಿದ್ದರು. ಸೋಮವಾರ ವಸತಿ ಸಚಿವ ವಿ. ಸೋಮಣ್ಣ ಗ್ರಾಮಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇದ್ದುದ್ದರಿಂದ ತರಾತುರಿಯಲ್ಲಿ ‘ತಗಡಿಗನಿಂದ ಗೋಡೆ’ಗಳನ್ನು ಹಾಕಿಕೊಡುವ (ಪ್ರತಿ ಕುಟುಂಬಕ್ಕೂ ಪಾರ್ಟಿಷನ್‌ ಮಾಡಿಕೊಡಲು) ಕೆಲಸ ನಡೆಯುತ್ತಿತ್ತು. ಅಲ್ಲದೇ, ಗ್ರಾಮದ ರಸ್ತೆಗಳನ್ನ ಸ್ವಚ್ಛಗೊಳಿಸಿ ಡಿಡಿಟಿ ಪೌಡರ್‌ ಹಾಕಲಾಗಿತ್ತು.

ಬಹಳ ಚಳಿಯಾಗುತ್ತಿತ್ತು: ‘ಆರು ಮಂದಿ ಇಲ್ಲಿದ್ದೇವೆ. ಇಟ್ಟಿಗೆ ತಯಾರಿಕೆ ಕೆಲಸ ಮಾಡುತ್ತೇನೆ. ಪ್ರವಾಹದಿಂದಾಗಿ ಮನೆ ಬಿದ್ದು ಹೋದ ಮೇಲೆ ನಮಗೆ ಅಂಬೇಡ್ಕರ್‌ ಭವನದಲ್ಲಿ ಜಾಗ ಕೊಡಲಾಗಿದೆ. ಯಾವುದೇ ಸೌಲಭ್ಯ ಇರಲಿಲ್ಲ. ಪ್ಲಾಸ್ಟಿಕ್‌ ಚೀಲ, ಜಮ್ಖಾನಾವನ್ನು ಸುತ್ತಲೂ ಕಟ್ಟಿಕೊಂಡಿದ್ದೆವು. ನೆಲದ ಮೇಲೆಯೇ ಮಲಗುವುದರಿಂದ ಹಾಗೂ ಗೋಡೆ ಇಲ್ಲದಿರುವುದರಿಂದ ಶೀತಗಾಳಿಯಿಂದಾಗಿ ರಾತ್ರಿ ಬಹಳ ಚಳಿಯಾಗುತ್ತಿತ್ತು. ಈಗಷ್ಟೇ ತಾಲ್ಲೂಕು ಆಡಳಿತದವರು ತಗಡು ಹಾಕಿಕೊಡುತ್ತಿದ್ದಾರೆ’ ಎಂದು ತಮ್ಮಣ್ಣ ಮಾಯಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಆಸ್ತಿಗೆ ಸಂಬಂಧಿಸಿದಂತೆ ಜಂಟಿ ಖಾತೆ ಇದೆ. ಸೋದರನೊಬ್ಬನಿಗೆ ಪರಿಹಾರ ಬಂದಿದೆ. ನನಗೆ ಹಣ ಬಂದಿಲ್ಲ. ಹೀಗಾಗಿ, ನಾವು ಬೀದಿಗೆ ಬಿದ್ದಿದ್ದೇವೆ. ತಾತ್ಕಾಲಿಕ ಪರಿಹಾರವಾಗಿ ನೀಡಿದ ₹ 10ಸಾವಿರವಷ್ಟೇ ಸಿಕ್ಕಿದೆ. ಅದರಲ್ಲಿ ಜೀವನ ಮಾಡಲಾಗುವುದೇ?. ಇನ್ನೂ ಅದೆಷ್ಟು ದಿನಗಳು ನಾವು ಇಲ್ಲಿರಬೇಕೋ ತಿಳಿಯದಾಗಿದೆ’ ಎಂದು ಅಳಲು ತೋಡಿಕೊಂಡರು.

ಶೌಚಾಲಯವಿಲ್ಲದೇ ಪರದಾಟ: ‘ಶೌಚಕ್ಕೆ ಬಯಲನ್ನೇ ಆಶ್ರಯಿಸುವಂತಾಗಿದೆ. ಹೆಣ್ಣು ಮಕ್ಕಳಿಗೆ ಸಮುದಾಯ ಶೌಚಾಲಯವಿದೆ. ಸ್ನಾನಕ್ಕೆ ಸಮೀಪದಲ್ಲಿರುವ ಸಂಬಂಧಿಕರ ಮನೆಯನ್ನೇ ಅವಲಂಬಿಸಿದ್ದೇವೆ. ಸರ್ಕಾರ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಿ, ಶಾಶ್ವತ ಪರಿಹಾರ ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂದು ಅವರು ಕೋರಿದರು.

‘ವಸತಿ ಸಚಿವರು ಬಂದದ್ದು ಹಾಗೂ ಈಗ ತಗಡಿನ ಗೋಡೆ ಹಾಕಿ ಕೊಟ್ಟಿದ್ದು ಕಾಕತಾಳೀಯವಷ್ಟೆ. ಸಂತ್ರಸ್ತರಿಗೆ ಹಂತ ಹಂತವಾಗಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾಂತ್ರಿಕ ಕಾರಣದಿಂದ ಯಾರಾದರೂ ಹೆಸರು ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ, ಸೇರಿಸಿ ಅವರಿಗೂ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರತಿಕ್ರಿಯಿಸಿದರು.

ಗ್ರಾಮದಲ್ಲಿ ಶೌಚಾಲಯಗಳೂ ಬಿದ್ದಿರುವುದರಿಂದ ಬಯಲಲ್ಲೇ ಮಲ–ಮೂತ್ರ ವಿಸರ್ಜನೆ ನಡೆಯುತ್ತಿದೆ. ಇದರಿಂದ ಅಲ್ಲಿನ ವಾತಾವರಣ ಹಾಳಾಗಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ. ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆದಿಲ್ಲದಿರುವುದು ಇದಕ್ಕೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT