ಶುಕ್ರವಾರ, ನವೆಂಬರ್ 22, 2019
26 °C
ಟಿಪ್ಪು ಪಠ್ಯ ತೆಗೆಯುವ ಸರ್ಕಾರದ ನಿರ್ಧಾರಕ್ಕೆ ಎಲ್ಲೆಡೆ ಪರ–ವಿರೋಧ ಪ್ರತಿಕ್ರಿಯೆ

ಟಿಪ್ಪು ವಿಚಾರ ಆತನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಬಿಸಿ ಬಿಸಿ ಚರ್ಚೆ

Published:
Updated:
Prajavani

ಶ್ರೀರಂಗಪಟ್ಟಣ: ಶಾಲಾ ಪಠ್ಯದಲ್ಲಿರುವ ಟಿಪ್ಪು ಪರಿಚಯಿಸುವ ಪಾಠವನ್ನು ತೆಗೆದು ಹಾಕುವುದಾಗಿ ಮುಖ್ಯಮಂತ್ರಿ ನೀಡಿದ ಹೇಳಿಕೆ ಟಿಪ್ಪು ಸುಲ್ತಾನ್‌ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ.

ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಪಕ್ಷದ ಮುಖಂಡರು ಮುಖ್ಯಮಂತ್ರಿ ಅವರ ಮಾತಿಗೆ ಜೈ ಎನ್ನುತ್ತಿವೆ. ಹಿರಿಯ ಸಾಹಿತಿಗಳು, ಪ್ರಗತಿಪರ ಚಿಂತಕರು ಟಿಪ್ಪು ಸುಲ್ತಾನ್‌ ಕುರಿತ ಪಠ್ಯವನ್ನು ತೆಗೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ಟಿಪ್ಪು ಬಗ್ಗೆ ಅರ್ಧ ಡಜನ್‌ ಜನ ರೀಸರ್ಚ್‌ ಮಾಡಿದ್ದು, ಒಬ್ಬರೂ ಆತನ ಕಾರ್ಯ ವೈಖರಿಗೆ ವಿರೋಧ ವ್ಯಕ್ತಪಡಿಸಿಲ್ಲ. ಇತಿಹಾಸಕಾರರಾದ ಫರ್ನಾಂಡಿಸ್‌, ತಲಕಾಡು ಚಿಕ್ಕರಂಗೇಗೌಡ ಟಿಪ್ಪು ಬಗ್ಗೆ ಆಳವಾದ ಅಧ್ಯಯನ ಮಾಡಿದ್ದು ಹೊಗಳಿಕೆ ಮಾತನ್ನಾಡಿದ್ದಾರೆ. ಟಿಪ್ಪು ಸುಲ್ತಾನ್‌ನನ್ನು ಈ ಪ್ರಪಂಚ ಮರೆಯುವುದಿಲ್ಲ ಎಂದು ಆತನ ವಿರುದ್ಧ ಹೋರಾಡಿದ ಬ್ರಿಟಿಷ್‌ ಸೇನೆಯ ನಾಯಕನಾಗಿದ್ದ ಕರ್ನಲ್‌ ವೆಲ್ಲೆಸ್ಲಿಯೇ ಹೇಳಿದ್ದಾನೆ. ಲೇಖನಗಳನ್ನು, ಪುಸ್ತಕಗಳನ್ನು ಓದದವರ ಮಾತಿಗೆ ಮನ್ನಣೆ ನೀಡಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲು ಹೊರಟಿದೆ. ಅಧಿಕಾರ ಇದ್ದಾಗ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸರ್ಕಾರ ಈ ನಡೆಯೇ ಸಾಕ್ಷಿ’ ಎಂದು ಹಿರಿಯ ಸಾಹಿತಿ ಪ್ರೊ.ಎಂ. ಕರಿಮುದ್ದೀನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌ ಸರ್ಕಾರದ ತೀರ್ಮಾನವನ್ನು ಖಚಿತ ಮಾತುಗಳಲ್ಲಿ ವಿರೋಧಿಸಿದ್ದಾರೆ. ‘ಟಿಪ್ಪು ಸುಲ್ತಾನ್‌ ಗಣನೀಯವಾಗಿ ಸಾಧನೆ ಮಾಡಿರುವ ರಾಜ. ‌ತಪ್ಪೋ ಒಪ್ಪೋ ಚರಿತ್ರೆಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಅವಶ್ಯತೆ ಇದೆ. ಟಿಪ್ಪು ಸುಲ್ತಾನ್‌ ವಿಷಯವನ್ನು ಚರಿತ್ರೆಯ ಪುಟದಿಂದ ತೆಗೆಯುವುದು ಒಳ್ಳೆಯದಲ್ಲ. ಪಠ್ಯ ಪುಸ್ತಕದಿಂದ ಟಿಪ್ಪು ಪಾಠವನ್ನು ತೆಗೆದಾಕ್ಷಣ ಟಿಪ್ಪು ಸುಲ್ತಾನ್‌ ಇಲ್ಲವಾಗುತ್ತಾನೆ ಎಂದು ಭಾವಿಸಿಕೊಂಡರೆ ಅದು ನಗೆಪಾಟಲಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಮನಜ್ದೂರ್‌ ಸಂಘ (ಬಿಎಂಎಸ್‌) ಮುಖಂಡ ಎಲ್‌ಐಸಿ ಮುಖಂಡ ವಾಸು ‘ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್‌ ಬಗ್ಗೆ ಅರ್ಧ ಸತ್ಯವನ್ನು ಹೇಳಲಾಗಿದೆ.ಆತ ಧರ್ಮ ಸಹಿಷ್ಣು, ಸೆಕ್ಯುಲರ್‌ ಎಂಬುದು ಒಪ್ಪುವಂತಹದ್ದಲ್ಲ. ಹಾಗಾಗಿ ಆತನ ಬಗ್ಗೆ ಇರುವ ಪಠ್ಯವನ್ನು ಸರಿಪಡಿಸಬೇಕು’ ಎಂದು ಹೇಳಿದ್ದಾರೆ.
ಆರೋಪ ನಿಜ, ಪಠ್ಯ ತೆಗೆಯುವುದು ತಪ್ಪು

‘ಟಿಪ್ಪು ಸುಲ್ತಾನ್‌ ಕುರಿತ ಪಠ್ಯವನ್ನು ತೆಗೆದು ಹಾಕುವುದು ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಅದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ. ಆದರೆ ಆತನ ಬಗೆಗಿನ ಆರೋಪಗಳು ನಿಜ. ಟಿಪ್ಪು ಬಗೆಗಿನ ಆರೋಪಗಳನ್ನು ಕೆಪಿಸಿಸಿ ಅಧ್ಯಕ್ಷರೂ ಒಪ್ಪಿಕೊಂಡಿದ್ದಾರೆ. ಹಾಗಾಗಿ ಸರ್ಕಾರ ಪಠ್ಯದ ಬಗ್ಗೆ ಕೈಗೊಂಡಿರುವ ನಿರ್ಧಾರವನ್ನು ಪುನರ್‌ ರಚನೆ ಮಾಡಬೇಕು’ ಎಂದು ಸಂವಿಧಾನ ವಿಶ್ಲೇಷಕ ಡಾ.ಸುಧಾಕರ್‌ ಹೊಸಹಳ್ಳಿ ಹೇಳಿದರು. 

ಪ್ರತಿಕ್ರಿಯಿಸಿ (+)