ಶುಕ್ರವಾರ, ಮಾರ್ಚ್ 31, 2023
22 °C

ಟಿಪ್ಪು ಜಯಂತಿ: ಈ ಮೈಸೂರು ಅರಸನ ಬಗ್ಗೆ ತಿಳಿದಿರಬೇಕಾದ 10 ಸಂಗತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಇತಿಹಾಸದಲ್ಲಿ ವಿವಾದ ಮತ್ತು ಚರ್ಚೆಗೆ ಗ್ರಾಸವಾದ ಕೆಲವೇ ಕೆಲವು ರಾಜರುಗಳಲ್ಲಿ ಟಿಪ್ಪು ಸುಲ್ತಾನ್‌ ಕೂಡ ಒಬ್ಬರು. ಟಿಪ್ಪು ಸುಲ್ತಾನ್‌ ಮರಣಹೊಂದಿದ ನಂತರವೂ ಅವನ ಸ್ಮಾರಕಗಳು, ಅವನ ಸಾಧನೆಗಳು, ಅವನ ದಾಳಿ–ದಾನಗಳ ಬಗ್ಗೆ ಇತಿಹಾಸಕಾರರು, ಸಂಶೋಧಕರು ಹಾಗೂ ರಾಜಕಾರಣಿಗಳು ಚರ್ಚೆ ನಡೆಸುತ್ತಲೇ ಇದ್ದಾರೆ. 

ಟಿಪ್ಪುವಿನ ಬಗ್ಗೆ ತಿಳಿದಿರಲೇ ಬೇಕಾದ ಹತ್ತು ಸಂಗತಿಗಳು ಇಲ್ಲಿವೆ..

1) ಟಿಪ್ಪು ಸುಲ್ತಾನ್ ತನ್ನ 15ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರುತ್ತಾನೆ. ಮಲಬಾರ್ ಯುದ್ಧದ ಸಂದರ್ಭದಲ್ಲಿ ತಂದೆ ಹೈದರಾಲಿಯ ಸಹಾಯಕನಾಗಿ ಟಿಪ್ಪು ಕೆಲಸ ಮಾಡುತ್ತಾನೆ.

2) 1785 ಮತ್ತು 1787ರ ನಡುವೆ ಟಿಪ್ಪು ಸುಲ್ತಾನ್‌ ಮರಾಠರ ವಿರುದ್ಧ 7 ಯುದ್ಧಗಳನ್ನು ಮಾಡುತ್ತಾನೆ. ಮರಾಠರ ಜೊತೆ ಒಪ್ಪಂದ ಮಾಡಿಕೊಂಡು ಸಂಕಷ್ಟದಿಂದ ಪಾರಾಗುತ್ತಾನೆ. ಏಳು ಯುದ್ಧಗಳಲ್ಲಿ ನಾಲ್ಕರಲ್ಲಿ ಟಿಪ್ಪು ಗೆಲುವು ಸಾಧಿಸಿರುತ್ತಾನೆ. ಕದನದ ಕಡೆಯಲ್ಲಿ ಒಪ್ಪಂದಂತೆ ಹೈದರಾಲಿ ವಶಪಡಿಸಿಕೊಂಡಿದ್ದ ಮರಾಠರ ಪ್ರಾಂತ್ಯಗಳನ್ನು ಟಿಪ್ಪು ಮರಳಿ ಅವರಿಗೆ ಕೊಡುತ್ತಾನೆ. 

3) ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಫ್ರೆಂಚ್‌ ದೊರೆ ನೆಪೋಲಿಯನ್‌ ಬೋನಾಪಾರ್ಟಿ ಟಿಪ್ಪುವಿನ ಸಹಾಯ ಯಾಚಿಸಿದ್ದನ್ನು, ಬೊನಾಪಾರ್ಟಿಯ ಈಜಿಪ್ಟ್‌ ಯುದ್ಧದ ಬಳಿಕ ಈ ಯೋಜನೆ ಯಶಸ್ವಿಯಾಗಬೇಕಿತ್ತು. ಆದರೆ ಅದು ಫಲಪ್ರದವಾಗಲಿಲ್ಲ..

4)  ತಂದೆ ಯುದ್ಧ ತಂತ್ರಗಳನ್ನು ಅನುಸರಿಸಿದ ಟಿಪ್ಪು ಹಲವಾರು ಯುದ್ಧನೌಕೆಗಳನ್ನು ನಿರ್ಮಿಸಿಕೊಂಡಿದ್ದನು. ದೀರ್ಘಕಾಲದ ಬಾಳಿಕೆಗಾಗಿ ನೌಕೆಗಳ ತಳಕ್ಕೆ ತಾಮ್ರ ಬಳಸಿ ನಿರ್ಮಾಣ ಮಾಡಲಾಗಿತ್ತು.

5) ಮೈಸೂರು ಸಂಸ್ಥಾನವನ್ನು ಆರ್ಥಿಕತೆ ಪ್ರಾಂತ್ಯವನ್ನಾಗಿ ಅಭಿವೃದ್ಧಿ ಪಡಿಸಿದ್ದನು. ಇದು ಮೊಘಲರ ಬೆಂಗಾಲ್‌ ಸುಬಾವನ್ನೂ ಮೀರಿಸುವಂತಿತ್ತು. 

6) ಮೈಸೂರು ರೇಷ್ಮೆ ಅಭಿವೃದ್ಧಿ ಮತ್ತು ವ್ಯಾಪಾರಕ್ಕೆ ಒತ್ತು ನೀಡಿದನು. ರೇಷ್ಮೆ ಬೆಳೆ ಮತ್ತು ಭೂ ಸುಧಾರಣೆ ಅಧ್ಯಯನಕ್ಕಾಗಿ ತಜ್ಞರನ್ನು ದೂರದೂರಿಗೆ ಕಳುಹಿಸಿಕೊಟ್ಟಿದ್ದ. 

7) ಟಿಪ್ಪು ಸುಲ್ತಾನ್‌ ಮುಸ್ಲಿಂ ಧರ್ಮನಿಷ್ಠನಾಗಿದ್ದರೂ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯಕ್ಕೆ ನಿಯಮಿತವಾಗಿ ಉಂಬಳಿಯನ್ನು ನೀಡುತ್ತಿದ್ದನು. ಮರಾಠರಿಂದ ವಶಪಡಿಸಿಕೊಟ್ಟಿದ್ದ ಶೃಂಗೇರಿ ಮಠವನ್ನು ಟಿಪ್ಪು ಸುಲ್ತಾನ್‌ ಪೋಷಣೆ ಮಾಡುತ್ತಿದ್ದ.  

8) ಟಿಪ್ಪುವಿನ ಧಾರ್ಮಿಕ ನೀತಿಗಳು ವಿವಾದಾಸ್ಪದವಾಗಿದ್ದವು ಎಂದು ಕೆಲ ಇತಿಹಾಸಕಾರರು ಮತ್ತು ರಾಜಕಾರಣಿಗಳು ಹೇಳುತ್ತಾರೆ. ಟಿಪ್ಪು ಕ್ರೈಸ್ತರು ಮತ್ತ ಹಿಂದೂಗಳನ್ನು ಕಗ್ಗೊಲೆ ಮಾಡಿದ್ದ ಎಂಬ ಆರೋಪವು ಇದೆ.

9) ಯುದ್ಧ ಕೌಶಲದಲ್ಲಿ ತನ್ನ ತಂದೆಯನ್ನು ಮೀರಿಸಿದವನು ಟಿಪ್ಪು. ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಬಳಕೆಯನ್ನು ಯುದ್ಧ ಭೂಮಿಯಲ್ಲಿ ಪ್ರಯೋಗಿಸುತ್ತಿದ್ದ. ಈತನ ಕಾಲದಲ್ಲಿ ತಯಾರಿಸಲಾದ ಕ್ಷಿಪಣಿಗಳು 2 ಕಿ.ಮೀ ದೂರ ಕ್ರಮಿಸಬಲ್ಲವಾಗಿದ್ದವು. ಈ ಕ್ಷಿಪಣಿಗಳು ಈಸ್ಟ್‌ ಇಂಡಿಯಾ ಕಂಪನಿಯನ್ನು ದಂಗುಬಡಿಸಿದ್ದವು. ಇಂತಹ ಕ್ಷಿಪಣಿಗಳನ್ನು ಫ್ರೆಂಚ್‌ ನೆಪೋಲಿಯನ್‌ ಬೋನಾಪಾರ್ಟಿ 1812ರ ಯುದ್ಧದಲ್ಲಿ ಬಳಕೆ ಮಾಡಿದ್ದ.

10) 1799ರಲ್ಲಿ ನಡೆದ ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ ಸಾವಿಗೀಡಾಗುತ್ತಾನೆ. ನಂತರ ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುತ್ತಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು