ಗುರುವಾರ , ಜುಲೈ 29, 2021
23 °C
ಕೆಆರ್‌ಡಿಸಿಎಲ್‌ಗೆ ಅನುಮತಿ ನೀಡಿದ ಅರಣ್ಯ ಇಲಾಖೆ

ರಸ್ತೆ ವಿಸ್ತರಣೆಗೆ 1,676 ಮರಗಳ ಹನನಕ್ಕೆ ಹಸಿರು ನಿಶಾನೆ

ಚಿರಂಜೀವಿ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆ ವಿಸ್ತರಣೆಗೆ ಮತ್ತೆ 1,676 ಮರಗಳನ್ನು ಕಡಿಯಲು ಅರಣ್ಯ ಇಲಾಖೆಯು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ಅನುಮತಿ ನೀಡಿದೆ. ಈ ಹಿಂದೆ, ಇಡೀ ರಾಜ್ಯದಲ್ಲಿ ಲಾಕ್‌ಡೌನ್‌ ಇದ್ದಾಗಲೂ 1,406 ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದ್ದು, ಈ ‘ಅಭಿವೃದ್ಧಿ’ಗೆ ಬಲಿಯಾಗುವ ಒಟ್ಟು ಮರಗಳ ಸಂಖ್ಯೆ 3,082ಕ್ಕೆ ಏರಿದೆ ! 

ಕಂಚಗಾರನಹಳ್ಳಿಯಿಂದ ಜಿಗಣಿವರೆಗೆ, ಆನೇಕಲ್‌ನಿಂದ ಅತ್ತಿಬೆಲೆ–ಸರ್ಜಾಪುರ ಮಾರ್ಗವಾಗಿ ಹೊಸಕೋಟೆಯವರೆಗೆ ಮತ್ತು ಹೊಸಕೋಟೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ರಸ್ತೆ ವಿಸ್ತರಿಸಲು ಮುಂದಾಗಿರುವ ಕೆಆರ್‌ಡಿಸಿಎಲ್‌ ಇದಕ್ಕಾಗಿ ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆಯ ಅನುಮತಿ ಕೋರಿತ್ತು. 

ಕಳೆದ ಮಾರ್ಚ್‌ನಲ್ಲಿ 1,406 ಮರಗಳನ್ನು ಕಡಿಯಲು ಇಲಾಖೆ ಹಸಿರು ನಿಶಾನೆ ನೀಡಿತ್ತು. ಬೆಂಗಳೂರು ನಗರ ಉಪಅರಣ್ಯ ಸಂರಕ್ಷಣಾಧಿಕಾರಿ  (ಡಿಸಿಎಫ್‌) ಮೇ 6ರಂದು ಹೊರಡಿಸಿದ ಮೂರು ಆದೇಶಗಳು ಈಗ ಬೆಳಕಿಗೆ ಬಂದಿವೆ. 1,676 ಮರಗಳ ಪೈಕಿ, 94 ಮರಗಳನ್ನು ಸ್ಥಳಾಂತರಿಸಲೂ ಸೂಚಿಸಲಾಗಿದೆ.

ಆದೇಶಕ್ಕೆ ಸಹಿ ಮಾಡಿರುವ ಹಿಂದಿನ ಡಿಸಿಎಫ್‌ ಎಂ.ಸಿ. ಸಿದ್ರಾಮಪ್ಪ, ‘ಈಗ ಕಡಿಯಲು ಅನುಮತಿ ನೀಡಿರುವ ಮರಗಳು ರಸ್ತೆಬದಿಯಲ್ಲಿವೆ. ಇವುಗಳು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಲವು ಮರಗಳ ಸ್ಥಳಾಂತರಕ್ಕೂ ಸೂಚನೆ ನೀಡಿದ್ದೇವೆ. ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸದೆ ಯಾವುದೇ ಮರಗಳನ್ನು ಕತ್ತರಿಸುವಂತಿಲ್ಲ ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ’ ಎಂದರು. 

ಮಾಹಿತಿಯೇ ಇಲ್ಲ !

ಮಾರ್ಚ್‌ನಲ್ಲಿ 1,406 ಮರಗಳನ್ನು ಕಡಿಯಲು ಆದೇಶ ನೀಡಿದ್ದಾಗಲೂ, ಜನರಿಗೆ ಯಾವುದೇ ಮಾಹಿತಿ ಇಲ್ಲ. ‘ಎಷ್ಟು ಮರಗಳನ್ನು ಕಡಿಯಲಾಗುತ್ತದೆ ಎಂಬ ಸಂಖ್ಯೆ ಬಿಟ್ಟರೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವ ಉದ್ದೇಶಕ್ಕೆ, ಎಲ್ಲಿ ಮರಗಳನ್ನು ಕಡಿಯಲಾಗುತ್ತದೆಯೇ, ನಿಜಕ್ಕೂ ಮರ ಕತ್ತರಿಸುವ ಅವಶ್ಯವಿದೆಯೇ ಎಂದು ಪ್ರಶ್ನಿಸಿದರೆ, ವೃಕ್ಷ ಸಮಿತಿ ಅದನ್ನೆಲ್ಲ ಪರಿಶೀಲಿಸಲಿದೆ ಎಂದಷ್ಟೇ ಹೇಳುತ್ತಾರೆ. ಕಡಿಯಬೇಕಾದ ಮರಗಳ ವಿವರವನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಹಾಕಬೇಕು. ಆ ಕೆಲಸವನ್ನೂ ಮಾಡಿಲ್ಲ’ ಎಂದು ’ವಾಯ್ಸ್‌ ಆಫ್‌ ಸರ್ಜಾಪುರ’ ಸಂಘಟನೆಯ ದೀಪಾಂಜಲಿ ನಾಯಕ್ ದೂರಿದರು. 

‘ಹೈಕೋರ್ಟ್‌ ನೇಮಕ ಮಾಡಿರುವ ವೃಕ್ಷ ಸಮಿತಿಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಮಾತ್ರ ಪರಿಶೀಲನೆ ನಡೆಸಲಿದೆ. ಆದರೆ, ಬಿಬಿಎಂಪಿ ವ್ಯಾಪ್ತಿ ಆಚೆಗೆ ಮರ ಕಡಿಯುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯೇ ಪರಿಶೀಲಿಸಿ ಅನುಮತಿ ನೀಡಲಿದೆ. ಈಗ ತೆರವಿಗೆ ಆದೇಶಿಸಿರುವ ಮರಗಳು ಬಿಬಿಎಂಪಿ ವ್ಯಾಪ್ತಿಯೊಳಗೆ ಬರುವುದಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬಿಬಿಎಂಪಿ ವೃಕ್ಷ ಸಮಿತಿಯು ಅನುಮೋದನೆ ನೀಡಿದ ನಂತರ ಮರಗಳನ್ನು ಕಡಿಯುವುದಕ್ಕೆ ಮುಂದಾಗಿದ್ದ ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ತಡೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು