ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲಕ್ಕೆ ಸಿಗದ ಪೌಷ್ಟಿಕ ಆಹಾರ ಕಿಟ್: ಅಕ್ರಮವೂ ನಿರಾತಂಕ

Last Updated 4 ಜುಲೈ 2020, 20:28 IST
ಅಕ್ಷರ ಗಾತ್ರ

ಮೈಸೂರು: ಆದಿವಾಸಿಗಳಿಗಾಗಿಯೇ ರೂಪುಗೊಂಡ ಯೋಜನೆಯೊಂದು ಜಿಲ್ಲೆಯಲ್ಲಿ ನೆಪಮಾತ್ರಕ್ಕೆ ಅನುಷ್ಠಾನಗೊಂಡಿದೆ ಎಂಬ ದೂರು ಕೇಳಿಬಂದಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಆದಿವಾಸಿಗಳ ಚಟುವಟಿಕೆ ಸ್ಥಗಿತಗೊಳ್ಳುತ್ತದೆ. ಕೂಲಿಗೂ ಹೋಗದಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ 12 ಸಾವಿರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿಗೆ ನೆರವಾಗಲು ರಾಜ್ಯ ಸರ್ಕಾರ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಜೂನ್‌ನಿಂದ ಆರು ತಿಂಗಳು ಪೌಷ್ಟಿಕ ಆಹಾರ ಪೂರೈಸುವ ವ್ಯವಸ್ಥೆ ಮಾಡಿದೆ.

ಆದರೆ, ಈ ಯೋಜನೆಯ ಲಾಭ ಸಕಾಲಕ್ಕೆ ಸಿಗುತ್ತಿಲ್ಲ. ಜೂನ್‌ನಲ್ಲೇ ಕೊಡಬೇಕಾಗಿದ್ದ ಆಹಾರ ಸಾಮಗ್ರಿಗಳನ್ನು ಕಳೆದ ವರ್ಷ ನವೆಂಬರ್‌ನಿಂದ ಕೊಡಲಾಗಿದೆ. ಇದಲ್ಲದೇ ಕಿಟ್‌ನಲ್ಲಿರುವ ಕೆಲವು ಆಹಾರ ಪದಾರ್ಥ ಕಳಪೆಯಾಗಿರುತ್ತವೆ. ಕೆಲವು ಕುಟುಂಬಕ್ಕೆ ಅದೂ ಸಿಗುವುದಿಲ್ಲ ಎಂಬ ಆರೋಪವಿದೆ.

‘ಈ ವರ್ಷವು ಜುಲೈ ಬಂದರೂ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್‌ಗಳು ನಮ್ಮ ಹಾಡಿಗಳಿಗೆ ಬಂದಿಲ್ಲ’ ಎನ್ನುತ್ತಾರೆ ಪಿರಿಯಾಪಟ್ಟಣ ತಾಲ್ಲೂಕಿನ ಲಿಂಗಾಪುರ ಹಾಡಿಯ ಬಸಪ್ಪ.

‘ಕಳೆದ ವರ್ಷ ಕೊಟ್ಟಿದ್ದ ಕಿಟ್‌ನಲ್ಲಿದ್ದ ಬೆಲ್ಲ ಇಟ್ಟಲ್ಲೇ ಜಿನುಗುತ್ತಿತ್ತು. ರಾಗಿಯೂ ಕಳಪೆಯಾಗಿತ್ತು. ಮೊಟ್ಟೆಗಳನ್ನು ಒಮ್ಮೆಲೇ ಕೊಡುವುದರಿಂದಅವುಗಳು ಬೇಗನೇ ಹಾಳಾಗುತ್ತವೆ. ನಮ್ಮಲ್ಲಿ ಆಶ್ರಮ ಶಾಲೆ ಮೂಲಕ ಆಹಾರ ಕಿಟ್‌ ವಿತರಿಸುತ್ತಾರೆ. ಆದರೆ, ಸಮರ್ಪಕವಾಗಿ ನಡೆಯುವುದಿಲ್ಲ. ಈ ಲೋಪಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕಿವಿಗೊಡುತ್ತಿಲ್ಲ’ ಎಂದು ದೂರಿದರು.

‘ಕೇರಳ, ಕೊಡಗಿಗೆ ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದವರು ಕೋವಿಡ್ ಸಂಕಷ್ಟದಿಂದಾಗಿ ಈಗ ಹಾಡಿಗಳಲ್ಲೇ ಉಳಿದಿದ್ದಾರೆ. ನಯಾಪೈಸೆ ದುಡಿಮೆಯಿಲ್ಲ. ಈ ಸಂದರ್ಭದಲ್ಲಿ ಸರ್ಕಾರ ಕೊಡುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಬಸವನಗಿರಿ ಹಾಡಿಯ ವಿಜಯ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅಂಗನವಾಡಿ ಮೂಲಕ ವಿತರಿಸಬೇಕಿದ್ದ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಆಶ್ರಮ ಶಾಲೆಯ ಮೂಲಕ ನೀಡಿದ್ದಾರೆ. ಏಪ್ರಿಲ್‌ ಅಂತ್ಯದಲ್ಲಿ ರಾಣಿಗೇಟ್‌ ಆಶ್ರಮ ಶಾಲೆಯ ಪ್ರಭಾರ ಮುಖ್ಯಶಿಕ್ಷಕರೊಬ್ಬರ ಅಕ್ರಮವನ್ನು ಆದಿವಾಸಿಗಳೇ ಬಹಿರಂಗಗೊಳಿಸಿದ್ದರು. ಆದರೆ, ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗದಿರುವುದು ಅಕ್ರಮದ ಅನುಮಾನ ಹೆಚ್ಚಿಸಿದೆ’ ಎನ್ನುತ್ತಾರೆ ರಾವಂದೂರು ಎಸ್‌.ಕೊಪ್ಪಲಿನ ಆರ್‌.ಎಸ್.ದೊಡ್ಡಣ್ಣ.

ಆದಿವಾಸಿಗಳು ಸದ್ಯ ಈ ಆಹಾರ ಕಿಟ್‌ ಅನ್ನೇ ನೆಚ್ಚಿಕೊಂಡಿದ್ದು, ಸಕಾಲಕ್ಕೆ ಹಾಗೂ ನಿಯಮಾನುಸಾರ ವಿತರಣೆಯಾಗಬೇಕು. ಯೋಜನೆಯ ಲಾಭ ಅರ್ಹರಿಗೆ ಸಿಗಬೇಕು; ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂಬುದು ಅವರ ಒತ್ತಾಯ.

*
ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದ್ದು, ಜುಲೈ 17ಕ್ಕೆ ಮುಗಿಯಲಿದೆ. ಆಗಸ್ಟ್‌ನಿಂದ ಕಿಟ್ ಕೊಡುತ್ತೇವೆ. ಪರೀಕ್ಷಿಸಲಾದ ಆಹಾರ ಪದಾರ್ಥಗಳನ್ನೇ ವಿತರಿಸುತ್ತೇವೆ.
-ಪ್ರಕಾಶ್‌, ಯೋಜನಾ ಸಮನ್ವಯಾಧಿಕಾರಿ

*
ಕಾಡಿನೊಳಗೂ ಹಾಡಿಗಳಿವೆ. ಸಿಡಿಪಿಒ ಜೊತೆ ಚರ್ಚಿಸಿ, ಈ ಬಾರಿ ಅಂಗನವಾಡಿ ಮೂಲಕವೇ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತೇವೆ.
-ಸಿದ್ದೇಗೌಡ, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT