ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಯುಮಿನಿಯಂ ಏಣಿ ಬಳಕೆ: ಇಬ್ಬರು ಕಾರ್ಮಿಕರ ಸಾವು

ಮಾಲೀಕರ ಚೆಲ್ಲಾಟ; ಕಾರ್ಮಿಕರ ಪ್ರಾಣಕ್ಕೆ ಕುತ್ತು
Last Updated 5 ಮಾರ್ಚ್ 2020, 14:56 IST
ಅಕ್ಷರ ಗಾತ್ರ

ಪೊನ್ನಂಪೇಟೆ (ಕೊಡಗು ಜಿಲ್ಲೆ): ಕುಂದಾ ಗ್ರಾಮದ ಈಚೂರಿನ ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಲು ಮಾಡುವಾಗ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಹಿಳಾ ಕಾರ್ಮಿಕರು ಗುರುವಾರ ಮೃತಪಟ್ಟಿದ್ದಾರೆ.

ಅಸ್ಸಾಂನ ಸರೂಪ್ ಕತೂನ್ (45) ಹಾಗೂ ಅಸನಾರ್ ಬೇಗಂ (25) ಮೃತರು.

ರಮೇಶ್‌ ಎಂಬುವವರ ತೋಟದಲ್ಲಿ ಈ ದುರ್ಘಟನೆ ನಡೆದಿದೆ. ಮಹಿಳಾ ಕಾರ್ಮಿಕರು, ಕರಿಮೆಣಸು ಕೊಯ್ಲು ಮಾಡಲು ಅಲ್ಯುಮಿನಿಯಂ ಏಣಿ ಬಳಕೆ ಮಾಡುತ್ತಿದ್ದರು. ಅದೇ ಪ್ರಾಣಕ್ಕೆ ಕುತ್ತು ತಂದಿದೆ. ತೋಟದ ನಡುವೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.ಸಿ ಆದೇಶಕ್ಕೂ ಬೆಲೆ ಇಲ್ಲ:

ಕಳೆದ ವರ್ಷದ ಏ.1ರಂದು ವಿರಾಜಪೇಟೆ ತಾಲ್ಲೂಕಿನ ಅರ್ವತೊಕ್ಲು ಗ್ರಾಮದಲ್ಲಿ ಮರದಿಂದ ತೆಂಗಿನಕಾಯಿ ಕೀಳುವಾಗ ವಿದ್ಯುತ್ ತಂತಿ ಮೇಲೆಯೇ ಅಲ್ಯುಮಿನಿಯಂಏಣಿ ಬಿದ್ದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಅದಾದ ಮೇಲೆ ಮೇ 18ರಂದು ದೊಡ್ಡಪುಲಿಕೋಟು ಎಂಬಲ್ಲಿ ಅಲ್ಯುಮಿನಿಯಂಏಣಿಸಹಾಯದಿಂದ ಮರದ ರೆಂಬೆ ಕತ್ತರಿಸುವಾಗ ವಿದ್ಯುತ್ ಪ್ರವಹಿಸಿ, ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು.

ಈ ದುರ್ಘಟನೆಯಿಂದ ಎಚ್ಚೆತ್ತಕೊಂಡ ಜಿಲ್ಲಾಡಳಿತವು ಅಲ್ಯುಮಿನಿಯಂ ಏಣಿ ಬಳಕೆ ಮಾಡದಂತೆ ಆದೇಶ ಮಾಡಿತ್ತು. ಆದರೂ ಅಲ್ಯುಮಿನಿಯಂ ಏಣಿಯ ಬಳಕೆ ನಿಂತಿಲ್ಲ.

ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ವಿದ್ಯುತ್‌ ವಾಹಕ ಲೋಹದ ಏಣಿಗಳಿಗೆ ಪರ್ಯಾಯವಾಗಿ ವಿದ್ಯುತ್‌ ನಿರೋಧಕ ವಸ್ತುಗಳನ್ನೇ ಬಳಸಬೇಕು. ಅಲ್ಯುಮಿನಿಯಂ ಏಣಿಗಳಿಂದ ವಿದ್ಯುತ್‌ ಅವಘಡಗಳು ಸಂಭವಿಸುತ್ತಿವೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT