ಶನಿವಾರ, ಮಾರ್ಚ್ 6, 2021
18 °C

ಯುಎಇ ಕನ್ನಡಿಗರ ಏರ್‌ಲಿಫ್ಟ್‌; ಕೇಂದ್ರದ ಜತೆ ಚರ್ಚೆ: ಡಿಸಿಎಂ ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ತವರಿಗೆ ವಾಪಸಾಗಲು ವಿಮಾನಯಾನ ಸೌಕರ್ಯ ಕಲ್ಪಿಸುವ ಸಂಬಂಧ ಕೇಂದ್ರಕ್ಕೆ ಮನವಿ ಮಾಡುವುದರ ಜತೆಗೆ, ಬಂದವರಿಗೆ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಭರವಸೆ ನೀಡಿದರು.

ದುಬೈ ಕನ್ನಡಿಗರ ಜತೆ ಭಾನುವಾರ ವಿಡಿಯೊ ಸಂವಾದ ನಡೆಸಿದ ಅವರು, ದುಬೈ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಕಡೆಯಿಂದ ಎಲ್ಲ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು.

ಕೋವಿಡ್‌-19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದುಬೈ ಕನ್ನಡಿಗರಿಗೆ ಆಹಾರ, ಆರೋಗ್ಯ ಹಾಗೂ ಕಾನೂನು ಸೇವೆ ಒದಗಿಸಲು ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳು, ವೃತ್ತಿಪರರು ವೆಬ್‌ಸೈಟ್‌ ಆರಂಭಿಸಿ ನೆರವು ಒದಗಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ, "ವಿದೇಶಗಳಿಂದ ಬರುವ 10-12 ಸಾವಿರ ಜನರಿಗೆ ಕ್ವಾರಂಟೈನ್‌ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರದ ಕಡೆಯಿಂದ ಮಾಡಲಾಗುತ್ತದೆ" ಎಂದರು.

ವಿದೇಶದಲ್ಲಿ ಉದ್ಯೋಗ ಕಳೆದುಕೊಂಡು ಭಾರತಕ್ಕೆ ವಾಪಸಾದವರ ಪೈಕಿ ಅಗತ್ಯ ಇರುವವರಿಗೆ ವೃತ್ತಿಪರ ಕೌಶಲ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತದೆ. ಮುದ್ರಾ ಯೋಜನೆಯಡಿ ಉದ್ದಿಮೆ ಆರಂಭಿಸಲು ಅಗತ್ಯ ಹಣಕಾಸು ನೆರವು ಪಡೆಯಬಹುದು. ಜತೆಗೆ, ಕೋರಿಕೆ ಮೇರೆಗೆ ನಿರ್ದಿಷ್ಟ ಸಿಬಿಎಸ್‌ಸಿ ಶಾಲೆಗಳಲ್ಲಿ ಅನಿವಾಸಿ ಭಾರತೀಯರ ಮಕ್ಕಳ ಪ್ರವೇಶಕ್ಕೆ ಸಹಕರಿಸುವುದಾಗಿ ಹೇಳಿದರು.

ದುಬೈನಲ್ಲಿ 10-15 ಕಾರ್ಮಿಕರು ಒಂದೇ ಕೊಠಡಿಯಲ್ಲಿ ಇರುತ್ತಾರೆ. ಈ ಪೈಕಿ ಒಬ್ಬರಿಗೂ ಸೋಂಕಿದ್ದರೂ ಉಳಿದವರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಅಂಥವರಿಗೆ ಕ್ವಾರಂಟೈನ್‌ ವ್ಯವಸ್ಥೆಗೆ ನೆರವಾಗಬೇಕು ಎಂಬ ಮನವಿಗೆ ಸ್ಪಂದಿಸಿದ ಅವರು, " ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಅಗತ್ಯ ನೆರವು ಒದಗಿಸಲು ಒತ್ತಾಯಿಸಲಾಗುತ್ತದೆ. ಅಂಥವರು ಭಾರತಕ್ಕೆ ವಾಪಸಾಗಲು ಬಯಸಿದರೆ ಅವರಿಗೆ ಸರ್ಕಾರವೇ ಇಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸುತ್ತದೆ. ವಿದೇಶಗಳಿಂದ ಬರುವವರನ್ನು ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಇರಿಸಿ, ಅಗತ್ಯ ಸೌಕರ್ಯ ಒದಗಿಸಲಾಗುತ್ತದೆ," ಎಂದು ವಿವರಿಸಿದರು.

ದುಬೈನಲ್ಲಿ ಕನ್ನಡಿಗರಿಗೆ ಹೆಲ್ಪ್‌ಲೈನ್‌

ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ನೆರವಿಗೆ ಅನಿವಾಸಿ ಭಾರತೀಯ ಉದ್ಯಮಿಗಳು ಹಾಗೂ ವೃತ್ತಿಪರರನ್ನೊಳಗೊಂಡ 20 ಜನರ ಸಮಾನ ಮನಸ್ಕರ ತಂಡ 'ಕನ್ನಡಿಗ ಹೆಲ್ಪ್‌ ಲೈನ್‌- ವೆಬ್‌ಸೈಟ್‌' ಆರಂಭಿಸಿದೆ. ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಸಹಾಯ ಕೋರಿದವರಿಗೆ ಆಹಾರ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ಆರೋಗ್ಯ ಸಮಸ್ಯೆ ಇರುವವರಿಗೆ ಔಷಧ ಹಾಗೂ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜತೆಗೆ ಕಾನೂನಿನ ಸಮಸ್ಯೆ ಇದ್ದವರ ಪರವಾಗಿಯೂ ಈ ಹೆಲ್ಪ್‌ ಲೈನ್‌ ನೆರವಾಗುತ್ತಿದೆ.

‘ದುಬೈನಲ್ಲಿ ಒಂದು ಲಕ್ಷ ಕನ್ನಡಿಗರು ಇದ್ದು, ಸುಮಾರು 20 ಸಾವಿರ ಮಂದಿಗೆ ತೊಂದರೆ ಆಗಿದೆ. ಕನ್ನಡಿಗ ಹೆಲ್ಪ್‌ಲೈನ್‌ ಮೂಲಕ ಕಳೆದ 20 ದಿನಗಳಿಂದ ಅಸಹಾಯಕರಿಗೆ ನೆರವು ಒದಗಿಸಲಾಗುತ್ತಿದೆ. ಕೊರೊನಾ ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ. 15 ದಿನಕ್ಕೆ ಆಗುವಷ್ಟು ದಿನಸಿ ಪದಾರ್ಥಗಳ ಕಿಟ್‌ ಒದಗಿಸಲಾಗುತ್ತಿದೆ. ಆಹಾರ, ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ, ಭಾರತಕ್ಕೆ ವಾಪಸಾಗಲು ಬಯಸುವವರಿಗೆ ಸರ್ಕಾರದ ನೆರವು ಬೇಕು. ಪ್ರವಾಸಿ ವೀಸಾದಲ್ಲಿ ಬಂದಿರುವ 270 ಮಂದಿಗೆ ಉದ್ಯೋಗ, ಆಶ್ರಯ ಇಲ್ಲ ಅವರ ಕಷ್ಟಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು,"ಎಂದು ಉದ್ಯಮಿ ಪ್ರವೀಣ್‌ ಶೆಟ್ಟಿ ಮನವಿ ಮಾಡಿದರು.

ಪೇ ಕ್ವಾರಂಟೈನ್‌

ಕೇರಳದ ಮಾದರಿಯಲ್ಲಿ ಎನ್‌ಆರ್‌ಐಗಳಿಗೆ ಹಣ ಪಡೆದು ಕ್ವಾರಂಟೈನ್‌ ವ್ಯವಸ್ಥೆ ಮಾಡಬಹುದು. ವೃದ್ಧರು, ಗರ್ಭಿಣಿಯರು ಹಾಗೂ ಆಸ್ಪತ್ರೆಯಲ್ಲಿ ಎಲ್ಲರ ಜತೆ ಇರಲು ಬಯಸದವರು ಪ್ರತ್ಯೇಕ ವ್ಯವಸ್ಥೆ ಪಡೆಯಲು ಇಚ್ಛಿಸಿದರೆ ಅಂಥವರ ಬಳಿ ಹಣ ಪಡೆದು ಸೂಕ್ತ ಸೌಕರ್ಯ ಒದಗಿಸಬಹುದು ಎಂದು ಅನಿವಾಸಿ ಕನ್ನಡಿಗರು ಸಲಹೆ ನೀಡಿದರು.

ವೀಡಿಯೋ ಸಂವಾದದಲ್ಲಿ ಕೆಎನ್‌ಆರ್‌ಐ ಅಧ್ಯಕ್ಷರೂ ಆಗಿರುವ ಉದ್ಯಮಿ ಪ್ರವೀಣ್‌ ಶೆಟ್ಟಿ, ಅನಿವಾಸಿ ಕನ್ನಡಿಗರು ದುಬೈನ ಅಧ್ಯಕ್ಷ ಮೊಹಮ್ಮದ್‌ ನವೀದ್‌, ದುಬೈನಲ್ಲಿ ಉದ್ಯಮ ನಡೆಸುತ್ತಿರುವ ಕನ್ನಡ ಸಿನಿಮಾ ನಿರ್ಮಾಪಕ ಹರೀಶ್‌ ಶೇರಿಗಾರ್‌, ತುಳು ರಕ್ಷಣಾ ವೇದಿಕೆಯ ಹಿದಾಯತ್ ಅಡ್ಡೂರು, ಕಾನೂನು ಸಲಹೆಗಾರ ಸುನೀಲ್‌ ಅಂಬಳತರೆ, ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಲಿಂಗದಹಳ್ಳಿ, ಮೀಡಿಯಾ ಫೋರಂನ ಇಮ್ರಾನ್‌ ಖಾನ್‌, ಕನ್ನಡ ಶಿಕ್ಷಕ ಶಶಿಧರ್‌ ನಾಗರಾಜಪ್ಪ, ಉದ್ಯಮಿ ರೊನಾಲ್ಡ್‌ ಮಾರ್ಟಿಸ್‌, ದುಬೈ ಕರ್ನಾಟಕ ಸಂಘದ ದಯಾ ಕಿರೋಡಿಯನ್‌, ಉದ್ಯಮಿಗಳಾದ ನೊಯಲ್‌ ಅಲ್ಮೇಡಾ, ಯಶ್ವಂತ್‌ ಕರ್ಕೇರ, ಅಶ್ಫಕ್‌ ಸದ, ಯೂಸುಫ್‌ ಬೆರ್ಮವೆರ್‌, ಅಫ್ಜಲ್‌ ಎಸ್‌.ಎಂ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು