ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಅವ್ಯವಹಾರದ ಮತ್ತೊಂದು ಮುಖ ಅನಾವರಣಗೊಳಿಸಿದ ನೋಟಿಸ್‌ಗಳು

‘ಖಾತ್ರಿ’ ಸಾಮಗ್ರಿ ಪೂರೈಕೆದಾರರಿಗೆ ತೆರಿಗೆ ಬರೆ!
Last Updated 26 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ಶಿವಮೊಗ್ಗ:ಉದ್ಯೋಗ ಖಾತ್ರಿ ಯೋಜನೆ ಅಡಿ ಕೈಗೊಳ್ಳುವ ವಿವಿಧ ಕಾಮಗಾರಿಗಳಿಗೆ ಅಗತ್ಯವಿದ್ದ ಸಾಮಗ್ರಿಗಳನ್ನು ಪೂರೈಸುತ್ತಿದ್ದ ರಾಜ್ಯದ ವ್ಯಾಪಾರಿಗಳು, ಗುತ್ತಿಗೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ದೊಡ್ಡ ಬರೆ ಎಳೆದಿದೆ.

2010–11ರಿಂದ ಜಿಎಸ್‌ಟಿ ಜಾರಿಯಾಗುವವರೆಗೂ (2016–17) ತೆರಿಗೆ ಪಾವತಿಸದ ಕಾರಣ ನೀಡಿ ಪ್ರತಿಯೊಬ್ಬರಿಗೂ ₹ 50 ಲಕ್ಷದಿಂದ ₹ 1 ಕೋಟಿಯವರೆಗೂ ಬಡ್ಡಿ ಸಹಿತ ದಂಡ ವಿಧಿಸಲಾಗಿದೆ. ಹಲವು ಗುತ್ತಿಗೆದಾರರ ಆಸ್ತಿ ಜಪ್ತಿಗೂ ಕ್ರಮ ಕೈಗೊಂಡಿದೆ.

ಗುತ್ತಿಗೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡುತ್ತಿರುವ ನೋಟಿಸ್‌ಗಳು, ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯಿತಿಗಳು ನಡೆಸುತ್ತಿದ್ದ ಭಾರಿ ಅವ್ಯವಹಾರದ ಮತ್ತೊಂದು ಮುಖವನ್ನೂ ಅನಾವರಣಗೊಳಿಸಿವೆ.

ರಾಜ್ಯದ 6,024 ಗ್ರಾಮ ಪಂಚಾಯಿತಿಗಳಲ್ಲೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯೂ ಆಯಾ ಹಣಕಾಸಿನ ವರ್ಷಗಳಲ್ಲಿ ನಿಗದಿಯಾದ ಮೊತ್ತದಲ್ಲಿ ಶೇ 60ರಷ್ಟು ಮಾನವ ಕೆಲಸಕ್ಕೆ, ಶೇ 40ರಷ್ಟು ಯಂತ್ರ ಹಾಗೂ ಸಾಮಗ್ರಿಗಳಿಗೆ ವಿನಿಯೋಗಿಸಬೇಕು. ಬಾಕ್ಸ್ ಚರಂಡಿ, ರಸ್ತೆ, ಅಂಗನವಾಡಿ ಕಟ್ಟಡ, ಶಾಲಾ ಕಾಂಪೌಂಡ್, ಗೋದಾಮು ಸೇರಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಾದ ಸಿಮೆಂಟ್‌, ಮರಳು, ಗ್ರಾವೆಲ್‌, ಜಲ್ಲಿ, ಕಲ್ಲು, ಕಬ್ಬಿಣ, ಬಣ್ಣ ಮತ್ತಿತರ ಸಾಮಗ್ರಿಗಳನ್ನು ಬಳಕೆ ಮಾಡಲಾಗುತ್ತದೆ.

ಈ ಎಲ್ಲ ಸಾಮಗ್ರಿಗಳನ್ನು ಆರಂಭದಿಂದಲೂ ಸ್ಥಳೀಯ ಗುತ್ತಿಗೆದಾರರೇ ಪೂರೈಸುತ್ತಿದ್ದರು. ಅವರ ಖಾತೆಗೆ ನೇರವಾಗಿ ಸರ್ಕಾರವೇ ಹಣ ಜಮೆ ಮಾಡುತ್ತಿತ್ತು.ಕಾಮಗಾರಿ ಪೂರ್ಣಗೊಂಡ ಬಗ್ಗೆ ಎಂಜಿನಿಯರ್ ನೀಡುತ್ತಿದ್ದ ಪ್ರಮಾಣ ಪತ್ರದ ಆಧಾರದಲ್ಲೇ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಪಂಚಾಯಿತಿ ಅಧಿಕಾರಿಗಳು ಸಾಮಗ್ರಿ ಖರೀದಿಸಿದ ಬಗ್ಗೆ ಯಾವುದೇ ರಸೀದಿ, ದಾಖಲೆ ಇಡುತ್ತಿರಲಿಲ್ಲ. 2005ರಿಂದ 2012ರವರೆಗೂ ಇದೇ ಪ್ರವೃತ್ತಿ ಮುಂದುವರಿಸಿಕೊಂಡು ಬರಲಾಗಿತ್ತು. 2012–13ನೇ ಸಾಲಿನಿಂದ ಸಾಮಗ್ರಿ ಪೂರೈಸುವ ಗುತ್ತಿಗೆದಾರರ ಹೆಸರು, ತೆರಿಗೆ ಗುರುತು ಸಂಖ್ಯೆ (TIN) ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಯಿತು. ಹೀಗೆ ಅಪ್‌ಲೋಡ್‌ ಮಾಡಿದ ನಂತರ ‘ಖಾತ್ರಿ’ ಗುತ್ತಿಗೆದಾರರ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಹದ್ದಿನಕಣ್ಣು ಇಟ್ಟಿತ್ತು.

ತೆರಿಗೆ ಸಂಗ್ರಹಿಸಿದರೂ ಜಮೆ ಶೂನ್ಯ: ಪಂಚಾಯಿತಿಗಳ ಮಟ್ಟದಲ್ಲಿ ಉದ್ಯೋಗ ಖಾತ್ರಿ ಹಣ ಗುತ್ತಿಗೆದಾರರಿಗೆ ಜಮೆ ಮಾಡುವಾಗ ಶೇ 4ರಷ್ಟು ಮಾರಾಟ ತೆರಿಗೆ, ಶೇ 1.25 ಆದಾಯ ತೆರಿಗೆ, ಶೇ 1 ಕಾರ್ಮಿಕ ತೆರಿಗೆ ಹಾಗೂ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಶೇ 0.25ರಷ್ಟು ಹಣ ಕಡಿತ ಮಾಡಿಕೊಳ್ಳಲಾಗಿದೆ. ಈ ಹಣ ಸಂಬಂಧಿಸಿದ ಇಲಾಖೆಗಳ ಖಾತೆಗೆ ಜಮೆಯೇ ಆಗಿಲ್ಲ. ಇದು ಸಹ ಗುತ್ತಿಗೆದಾರರ ಕುತ್ತಿಗೆಗೆ ಸುತ್ತಿಕೊಂಡಿದೆ. ಲೆಕ್ಕಪರಿಶೋಧನಾ ವರದಿ ಪ್ರಕಾರ 2015ರಿಂದ 2017ರವರೆಗೆ ವಾಣಿಜ್ಯ ತೆರಿಗೆ ಇಲಾಖೆಗೆ ಜಮೆ ಆಗಬೇಕಾದ ಹಣವೇ ಸುಮಾರು ₹ 100 ಕೋಟಿ ಬಾಕಿ ಇದೆ.

‘ಪಂಚಾಯಿತಿಗಳ ಮಟ್ಟದಲ್ಲಿ ಯಾವುದೇ ನಗದು ವ್ಯವಹಾರ ಮಾಡುವುದಿಲ್ಲ. ಸರ್ಕಾರದಿಂದ ನೇರವಾಗಿ ಗುತ್ತಿಗೆದಾರರಿಗೆ ಜಮೆಯಾಗುತ್ತದೆ. ರಾಜ್ಯದ ಹಲವು ಪಂಚಾಯಿತಿಗಳಲ್ಲಿ 2015–16 ಹಾಗೂ 2016–17ನೇ ಸಾಲಿನ ತೆರಿಗೆ ಜಮೆ ಆಗಿಲ್ಲ. ಇದು ಸರ್ಕಾರದ ಲೋಪ’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.

‘ಉದ್ಯೋಗ ಖಾತ್ರಿ ಕಾಮಗಾರಿ ಹಣ ನೀಡುವಾಗಲೇ ಆಯಾ ಪಂಚಾಯಿತಿಗಳು ತೆರಿಗೆ ಮುರಿದುಕೊಂಡಿವೆ. ಈಗ ವಾಣಿಜ್ಯ ತೆರಿಗೆ ಇಲಾಖೆ ಸಾವಿರಾರು ಗುತ್ತಿಗೆದಾರರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಿದೆ.ಸಮಸ್ಯೆ ಬಗೆಹರಿಸುವಂತೆಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಆಸ್ತಿ ಜಪ್ತಿಗೆ ತಡೆ ನೀಡಲು ಕೋರಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಗುತ್ತಿಗೆದಾರರಾದ ಎಚ್‌.ಬಿ. ಶಿವಮೂರ್ತಿ, ಎಂ.ಎಸ್. ಬಸವರಾಜಪ್ಪ.

**

ವಾಣಿಜ್ಯ ತೆರಿಗೆ ಇಲಾಖೆ ನೀಡಿದ ನೋಟಿಸ್‌ ನಮ್ಮ ಗಮನಕ್ಕೆ ಬಂದಿಲ್ಲ. ಖಾತ್ರಿ ಕಾಮಗಾರಿಗಳ ತೆರಿಗೆ ಪಾವತಿ ಕುರಿತು ಆಂತರಿಕ ಪರಿಶೋಧನೆ ನಂತರ ಮಾಹಿತಿ ದೊರಕಲಿದೆ
- ಕೆ. ಶಿವರಾಮೇಗೌಡ, ಸಿಇಒ, ಜಿಲ್ಲಾ ಪಂಚಾಯಿತಿ, ಶಿವಮೊಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT