ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮಾ ಭಾರತಿಗೆ ದೀಕ್ಷೆ ಕೊಟ್ಟಿದ್ದ ಪೇಜಾವರ ಶ್ರೀಗಳು

1992ರಲ್ಲಿ ದೀಕ್ಷೆ, ಗುರುಪೂರ್ಣಿಮೆ ದಿನ ತಪ್ಪದೆ ಗುರುವಂದನೆ
Last Updated 29 ಡಿಸೆಂಬರ್ 2019, 6:55 IST
ಅಕ್ಷರ ಗಾತ್ರ

ಉಡುಪಿ: ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರಿಗೆ ನ.17, 1992ರಲ್ಲಿ ಸ್ವತಃ ಪೇಜಾವರ ಶ್ರೀಗಳೇ ಸನ್ಯಾಸ ದೀಕ್ಷೆ ನೀಡಿದ್ದರು. ಅಂದಿನಿಂದ ಗುರು ಹಾಗೂ ಶಿಷ್ಯೆಯರ ಬಾಂಧವ್ಯ ಗಟ್ಟಿಯಾಗಿತ್ತು.

ಉಮಾ ಭಾರತಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದರೂ ಗುರು ಹಾಕಿದ ಗೆರೆಯನ್ನು ಕೊನೆಯವರೆಗೂ ದಾಟಲಿಲ್ಲ. ಗುರುಪೂರ್ಣಿಯಮೆ ದಿನ ಗುರುವಂದನೆ ಸಲ್ಲಿಸುವುದನ್ನೂ ಮರೆತಿರಲಿಲ್ಲ.

1992ರಲ್ಲಿ ಸನ್ಯಾಸ ದೀಕ್ಷೆ ನಿರ್ಧಾರ ಮಾಡಿದ ಉಮಾ ಭಾರತಿ ನೇರವಾಗಿ ಬಂದಿದ್ದು ಉಡುಪಿಗೆ. ಪೇಜಾವರ ಶ್ರೀಗಳ ಮುಂದೆ ನಿಂತು, ಎಲ್ಲ ಬಂಧನಗಳಿಂದ ಮುಕ್ತವಾಗಬೇಕಿದೆ, ಸನ್ಯಾಸ ದೀಕ್ಷೆ ಕೊಡಿ ಎಂದು ದೈನ್ಯದಿಂದ ಬೇಡಿಕೊಂಡಿದ್ದರು.

ಗಂಡಸು ಮಾತ್ರ ಸನ್ಯಾಸ ದೀಕ್ಷೆಗೆ ಅರ್ಹನಲ್ಲ; ಮಹಿಳೆಗೂ ದೀಕ್ಷೆ ಪಡೆಯಲು ಅಧಿಕಾರವಿದೆ ಎಂದು ಸಂಪ್ರದಾಯಗಳನ್ನು ಬದಿಗಿಟ್ಟ ಪೇಜಾವರ ಯತಿಗಳು ಕೃಷ್ಣನಾಮ ಮಂತ್ರ ಜಪಿಸಿ ವೈಷ್ಣವ ದೀಕ್ಷೆ ನೀಡಿದ್ದರು. ದೀಕ್ಷೆ ನಂತರ ಗುರು ಶಿಷ್ಯೆಯ ಬಾಂಧವ್ಯ ಚೆನ್ನಾಗಿತ್ತು.

2003ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿಯ ಹುದ್ದೆ ಒಲಿದಾಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪೇಜಾವರ ಶ್ರೀಗಳಿಗೆ ಆಹ್ವಾನವಿತ್ತರು. ವಿಶೇಷ ವಿಮಾನವನ್ನೇ ಕಳುಹಿಸಿ ಶ್ರೀಗಳನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದರು. ಶ್ರೀಗಳಿಗೆ ಕೆಂಪು ಹಾಸಿನ ಭವ್ಯ ಸ್ವಾಗತ ಕೋರಿ, ವಿಶೇಷವಾಗಿ ಸತ್ಕರಿಸಿದ್ದರು.

ಪೇಜಾವರ ಶ್ರೀಗಳ ಆರೋಗ್ಯ ಹದಗೆಟ್ಟ ವಿಚಾರ ತಿಳಿಯುತ್ತಿದ್ದಂತೆ ಉಮಾ ಭಾರತಿ ಉಡುಪಿಗೆ ದೌಡಾಯಿಸಿದರು. ಎಡಗಾಲಿನ ಮೂಳೆ ಮುರಿದಿದ್ದರೂ ಗಾಲಿ ಖುರ್ಚಿಯಲ್ಲಿಯೇ ಆಸ್ಪತ್ರೆಗೆ ಬಂದು, ಶ್ರೀಗಳ ಆರೋಗ್ಯ ವಿಚಾರಿಸಿದ್ದರು. ಉಡುಪಿಯಲ್ಲಿ ತಂಗಿದ್ದ 7 ದಿನವೂ ಪ್ರತಿದಿನ ತಪ್ಪದೆ ಆಸ್ಪತ್ರೆಗೆ ಬಂದು ವೈದ್ಯರ ಬಳಿ ಮಾಹಿತಿ ಪಡೆಯುತ್ತಿದ್ದರು.

ಶ್ರೀಗಳು ಗುರುಮಾತ್ರವಲ್ಲ; ತಂದೆಯ ಸಮಾನರು. ಅವರು ಗುಣಮುಖರಾಗುವವರೆಗೂ ತೆರೆಳುವುದಿಲ್ಲ ಎಂದು ಸಂಕಲ್ಪ ಮಾಡಿದ್ದರು. ಕೊನೆಗೂ ಅವರ ಸಂಕಲ್ಪ ಈಡೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT