ಕುಲಪತಿ ಮಲ್ಲಿಕಾ ಘಂಟಿ ಅವಧಿ ಅಂತ್ಯ?

7

ಕುಲಪತಿ ಮಲ್ಲಿಕಾ ಘಂಟಿ ಅವಧಿ ಅಂತ್ಯ?

Published:
Updated:

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಅಧಿಕಾರದ ಅವಧಿ ಫೆ. 8ರಂದು ಕೊನೆಗೊಂಡಿದೆ. ಆದರೆ, ಅವರಿಂದ ತೆರವಾದ ಸ್ಥಾನವನ್ನು ಇದುವರೆಗೆ ಯಾರೊಬ್ಬರೂ ಅಲಂಕರಿಸಿಲ್ಲ.

ನೂತನ ಕುಲಪತಿ ನೇಮಕಗೊಳ್ಳುವವರೆಗೆ ವಿ.ವಿ. ಹಿರಿಯ ಪ್ರಾಧ್ಯಾಪಕರು ಆ ಸ್ಥಾನವನ್ನು ಅಲಂಕರಿಸಬೇಕಿತ್ತು. ಆದರೆ, ಹಾಲಿ ಕುಲಪತಿ ಬೇರೆಯವರಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ ಎಂದು ತಿಳಿದು ಬಂದಿದೆ.

ಈ ಕುರಿತು ವಿ.ವಿ. ಕುಲಸಚಿವ ಅಶೋಕಕುಮಾರ ರಂಜೇರೆ ಅವರನ್ನು ಸಂಪರ್ಕಿಸಿದಾಗ, ‘ಕುಲಪತಿ ಮಲ್ಲಿಕಾ ಘಂಟಿಯವರ ಸೇವಾವಧಿ ವಿಸ್ತರಣೆಯಾಗಿದೆ ಎಂದು ಅವರ ಆಪ್ತಶಾಖೆ ತಿಳಿಸಿದೆ. ಆದರೆ, ನನಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಫೆ. 11ರಂದು ನಿಖರ ಮಾಹಿತಿ ಸಿಗಲಿದೆ’ ಎಂದು ತಿಳಿಸಿದರು. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಎಚ್‌.ಇ. ಅನಿಲ್‌ ಅವರನ್ನು ಕೇಳಿದಾಗ, ‘ಫೆ.11ರಂದು ಗೊತ್ತಾಗಲಿದೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

’ಹಾಲಿ ಕುಲಪತಿ ಅವಧಿ ಫೆ.8ರಂದು ಕೊನೆಗೊಂಡಿದೆ. ಅಂದು ಸಂಜೆ 5.30ರ ವರೆಗೆ ರಾಜ್ಯಪಾಲರ ಕಚೇರಿಯಿಂದ ಯಾವುದೇ ಆದೇಶ ಬರದಿದ್ದಲ್ಲಿ ಹಿರಿಯ ಪ್ರಾಧ್ಯಾಪಕರಿಗೆ ಅಧಿಕಾರ ವಹಿಸಿಕೊಡಬೇಕು. ಹೀಗೆಂದು ವಿ.ವಿ. ಅಧಿನಿಯಮ 13ರಲ್ಲಿ ಸ್ಪಷ್ಟಪಡಿಸಲಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ವಿ.ವಿ. ಹಿರಿಯ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

2018ರ ಸೆ.8ರಂದು ಘಂಟಿ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ರಾಜ್ಯಪಾಲರು ನಾಲ್ಕು ತಿಂಗಳವರೆಗೆ ವಿಸ್ತರಣೆ ಮಾಡಿದ್ದರು. ಆ ಅವಧಿ ಜ.7ರಂದು ಕೊನೆಗೊಂಡಿತ್ತು. ಜ.9ರಿಂದ ಅನ್ವಯವಾಗುವಂತೆ ಒಂದು ತಿಂಗಳ ಕಾಲ ಸೇವಾ ಅವಧಿ ಪುನಃ ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದರು. ಅದು ಫೆ. 8ಕ್ಕೆ ಕೊನೆಗೊಂಡಿದೆ. 

ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜ.7ರಂದು ನಡೆದ ಸಭೆಯಲ್ಲಿ ಶೋಧನಾ ಸಮಿತಿಯು ಮೂವರ ಹೆಸರನ್ನು ಅಂತಿಮಗೊಳಿಸಿ, ರಾಜ್ಯಪಾಲರಿಗೆ ಸಲ್ಲಿಸಿದೆ. ಅದರಲ್ಲಿ ಮಲ್ಲಿಕಾ ಘಂಟಿಯವರ ಹೆಸರಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !