ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್‌ ದೂರವಿಟ್ಟು ಅಭಿಪ್ರಾಯ ಸಂಗ್ರಹ

Last Updated 24 ಜನವರಿ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಿದ್ಧತೆ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಕ್ಷೇತ್ರಗಳ ಮುಖಂಡರಿಂದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಗುರುವಾರ ಅಭಿಪ್ರಾಯ ಸಂಗ್ರಹಿಸುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ದೂರ ಇಟ್ಟ ವಿಷಯ ಚರ್ಚೆಗೆ ಗ್ರಾಸವಾಯಿತು.

ಆದರೆ, ವೈಯಕ್ತಿಕವಾಗಿ ಅಭಿಪ್ರಾಯ ಪಡೆಯುವ ಉದ್ದೇಶದಿಂದ ಸ್ಥಳೀಯ ಮುಖಂಡರ ಜೊತೆ ವೇಣುಗೋಪಾಲ್‌ ಚರ್ಚೆ ನಡೆಸಿದರು.

ಈ ಸಭೆಯ ಮಾಹಿತಿಯನ್ನು ಆಧರಿಸಿ ಜೆಡಿಎಸ್ ಜತೆಗೆ ಸ್ಥಾನ ಹೊಂದಾಣಿಕೆ ಕುರಿತಂತೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ವೇಣುಗೋಪಾಲ್‌ ಜೊತೆ ಚರ್ಚೆ ನಡೆದ ಲೋಕಸಭೆ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಹಾಲಿ ಸಂಸದರಿದ್ದು, ಅವರೆಲ್ಲರೂ ತಮ್ಮನ್ನೇ ಮುಂದುವರೆಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ದಾವಣಗೆರೆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಥವಾ ಎಚ್‌.ಎಂ. ರೇವಣ್ಣ ಅವರನ್ನು ಕಣಕ್ಕಿಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಜಾತಿ ಲೆಕ್ಕಾಚಾರ ಪರಿಗಣಿಸಿ ಅವರಿಗೆ ಟಿಕೆಟ್ ನೀಡಿದರೆ ಕ್ಷೇತ್ರ ಉಳಿಸಿಕೊಳ್ಳಲು ಸುಲಭ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಚಿತ್ರದುರ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಬದಲಿಸಬೇಕು, ಹೊಸಬರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ತಾವು ಕೂಡ ಆಕಾಂಕ್ಷಿಯೆಂದು ಮಾಯಕೊಂಡ ಮಾಜಿ ಶಾಸಕ ಶಿವಮೂರ್ತಿ ನಾಯಕ್ ಹೇಳಿದರು.

ಕ್ಷಮೆ ಯಾಚಿಸಿದ ದಿನೇಶ್‌

ಟಿವಿ ವಾಹಿನಿಗಳ ಕ್ಯಾಮೆರಾಮನ್‌ಗಳನ್ನು ಉದ್ದೇಶಿಸಿ ‘ನಾನ್ಸೆನ್ಸ್’ ಎಂದು ಪದ ಪ್ರಯೋಗ ಮಾಡಿದ ದಿನೇಶ್ ಗುಂಡೂರಾವ್ ಬಳಿಕ ಕ್ಷಮೆ ಯಾಚಿಸಿದ ಪ್ರಸಂಗ ನಡೆಯಿತು.

ಪಕ್ಷದ ಕಚೇರಿಯಲ್ಲಿ ದಿನೇಶ್ ಅವರನ್ನು ಭೇಟಿಯಾಗಲು ಶಾಸಕ ಕಂಪ್ಲಿ ಗಣೇಶ್ ಬೆಂಬಲಿಗರು ಆಗಮಿಸಿದ್ದರು. ಈ ವೇಳೆ ಕ್ಯಾಮೆರಾಮನ್‌ಗಳು ಅಧ್ಯಕ್ಷರ ಅನುಮತಿ ಇಲ್ಲದೆ ಅವರ ಕೊಠಡಿ ಪ್ರವೇಶಿಸಿದ್ದರು.

ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್, ‘ಇದು ವೈಯಕ್ತಿಕ ವಿಚಾರ, ತಮ್ಮ ಕೊಠಡಿಯಿಂದ ಹೊರ ಹೋಗುವಂತೆ ಹೇಳಿದರು. ಅವರ ಕೋರಿಕೆಗೆ ಮಾನ್ಯತೆ ಸಿಗದಿದ್ದಾಗ ನಾನ್ಸೆನ್ಸ್ ಪದ ಪ್ರಯೋಗ ಮಾಡಿದರು.

ಬಳಿಕ ಮಾತನಾಡಿದ ದಿನೇಶ್‌, ‘ನನ್ನ ಮಾತಿನಿಂದ ಮಾಧ್ಯಮದವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಹೇಳಿ ಪ್ರಕರಣಕ್ಕೆ ತೆರೆ ಎಳೆದರು.

ವಿವಾದಕ್ಕೆ ಕಾರಣವಾದ ಪ್ರಿಯಾಂಕ್ ಹೇಳಿಕೆ

‘ಉಗ್ರಗಾಮಿಗಳು ಒಂದೇ ಗುಂಡಿನಿಂದ ಸಾಯಿಸಿದರೆ, ಕೆಲವು ಮಾಧ್ಯಮಗಳು ನಿತ್ಯ ಕಾಟ ಕೊಟ್ಟು ಸಾಯಿಸುತ್ತವೆ’ ಎಂಬುದಾಗಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಕೆಲವು ಮಾಧ್ಯಮಗಳು ಟಿಆರ್‌ಪಿಗಾಗಿ ಸತ್ಯವಲ್ಲದ ಸುದ್ದಿಗಳನ್ನು ಪ್ರಸಾರ ಮಾಡುತ್ತವೆ’ ಎಂದೂ ಟೀಕಿಸಿದ್ದರು.

ಬಳಿಕ ಟ್ವೀಟ್ ಮಾಡಿರುವ ಅವರು, ‘ಗುಂಡೇಟಿನಿಂದ ಮನುಷ್ಯ ಒಂದೇ ಬಾರಿಗೆ ಸಾಯುತ್ತಾನೆ. ಆದರೆ, ಮಾಧ್ಯಮಗಳಲ್ಲಿ ವ್ಯಕ್ತಿಗಳ ಬಗ್ಗೆ ಅಥವಾ ಘಟನೆಗಳ ಬಗ್ಗೆ ಅಪೂರ್ಣ ಮಾಹಿತಿ, ಅರ್ಧ ಸತ್ಯದ ಸುದ್ದಿಗಳು ಪ್ರಕಟವಾದಾಗ ವ್ಯಕ್ತಿಯ ತೇಜೋವಧೆ ಆಗುತ್ತದಲ್ಲದೆ, ದಿನ ನಿತ್ಯ ಸಾರ್ವಜನಿಕರ ಕಣ್ಣಲ್ಲಿ ಅಪರಾಧಿಗಳಾಗಿ ಸಾಯುತ್ತಲೇ ಇರುತ್ತಾನೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು. ಮಾಧ್ಯಮ ಸ್ವಾತಂತ್ರ್ಯ ಹಾಗೂ ಸತ್ಯದ ಪರವಾಗಿರುವ ಮಾಧ್ಯಮಗಳ ಬಗ್ಗೆ ಅಪಾರ ಗೌರವ ಇದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

* ವೇಣುಗೋಪಾಲ್‌ ಜೊತೆ ಸಂಸದರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲಿ ಎಂಬ ಕಾರಣಕ್ಕೆ ‌ನಾನೇ ಸಭೆಯಿಂದ ದೂರ ಉಳಿದೆ

-ದಿನೇಶ್ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT