ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ: ಸಚಿವ ಪ್ರಭು ಚವ್ಹಾಣ

Last Updated 18 ಜೂನ್ 2020, 14:46 IST
ಅಕ್ಷರ ಗಾತ್ರ

ಬೆಂಗಳೂರು:ರೈತ ಒಕ್ಕುವುದು ಬಿಟ್ಟರೆ ಬಿಕ್ಕುವುದು ಜಗವೆಲ್ಲ, ಜಾನುವಾರುಗಳು ರೈತನ ಬೆನ್ನೆಲುಬು ಅವುಗಳ ಆರೈಕೆ ಹಾಗೂ ಆರೋಗ್ಯ ಕಾಪಾಡುವುದು ರೈತನ ಮುಂದಿರುವ ಬಹುದೊಡ್ಡ ಸವಾಲು. ಇದನ್ನು ನೀಗಿಸಲು ಹಾಗೂ ರೈತರ ಶ್ರಮಕ್ಕೆ ಮತ್ತಷ್ಟು ಬಲ ತುಂಬಲು ಸುಸಜ್ಜಿತವಾದ ಪಶು ಚಿಕಿತ್ಸಾ ವಾಹನ (ಆಂಬ್ಯುಲೆನ್ಸ್) ಲೋಕಾರ್ಪಣೆ ಮಾಡಲು ಪಶುಸಂಗೋಪನೆ ಇಲಾಖೆಯನ್ನು ಸಜ್ಜುಗೊಳಿಸಲಾಗಿದೆ. ಪಶುಗಳ ಆರೈಕೆಯಲ್ಲಿ ನಮ್ಮ ರಾಜ್ಯ ದೇಶಕ್ಕೆ ಮಾದರಿ ಆಗಿರಬೇಕು ಎನ್ನುವ ಪರಿಕಲ್ಪನೆಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವರಿಕೆ ಮಾಡಿದ್ದೇ. ಜಾನುವಾರುಗಳ ಆರೈಕೆಯ ಕಾಳಜಿ ಇರುವ ಈ ವಿಶಿಷ್ಟವಾದ ಯೋಜನೆಗೆ ಸಂತೋಷಪಟ್ಟು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವ ಪ್ರಭು ಚವ್ಹಾಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪಶುವೈದ್ಯರ ಕೊರತೆಯಿದ್ದು ಅದೆಷ್ಟೋ ಬಾರಿ ಸಕಾಲದಲ್ಲಿ ವೈದ್ಯರು ನಿಗದಿತ ಸ್ಥಳಗಳಿಗೆ ತೆರಳಿ ಚಿಕಿತ್ಸೆ ನೀಡಲು ಹೆಚ್ಚಿನ ಶ್ರಮ ಹಾಗೂ ವೆಚ್ಚ ಭರಿಸಬೇಕಾಗುತ್ತದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ತುರ್ತು ಚಿಕಿತ್ಸೆಯನ್ನು ರೈತರ, ಪಶುಪಾಲಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಇಲಾಖೆಯ ಮಹಾತ್ವಾಕಾಂಕ್ಷಿ ಯೋಜನೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೆ ತರುತ್ತಿದ್ದು ಸಧ್ಯದಲ್ಲೇ ರೈತ ಬಂಧು ಹಾಗೂ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪನವರು ಸುಸಜ್ಜಿತ ಪಶು ಚಿಕಿತ್ಸಾ ವಾಹನ ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಇದನ್ನು ಜಾರಿಗೆ ತರಲಾಗುತ್ತಿದ್ದು ಜಾನುವಾರಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಸಜ್ಜಾಗಿದ್ದು ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ. ಈ ಸೇವೆಗಳನ್ನು ಇಲಾಖೆಯ ಹೆಲ್ಪಲೈನ್ ಸೇವೆಗಳಿಗೆ ಲಿಂಕ್ ಮಾಡಿ 24 X 7 ಜಾನುವಾರುಗಳ ರಕ್ಷಣೆಗೆ ಉದ್ದೇಶಿಸಲಾಗಿರುತ್ತದೆ.

ಪಶು ಚಿಕಿತ್ಸಾ ವಾಹನದ ವಿಶೇಷತೆಗಳು (ಆಂಬ್ಯುಲೆನ್ಸ್)

· ಅತ್ಯಧ್ಯುನಿಕ, ಸುಸಜ್ಜಿತವಾದ ಈ ವಾಹನದಲ್ಲಿ ವಿಶೇಷವಾದ ಪಶು ಸೇವಾ ಸೌಲಭ್ಯಗಳಿವೆ.

· ಶತ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ಇರುವುದು ವಿಶೇಷ

· ತುರ್ತು ಚಿಕಿತ್ಸಾ ಘಟಕ

· ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳು.

ರೈತನ ಮನೆ ಬಾಗಿಲಿಗೆ ಪಶು ಆಸ್ಪತ್ರೆ

· ಸಾಮಾನ್ಯವಾಗಿ ಜಾನುವಾರುಗಳಲ್ಲಿ ಎದುರಾಗುವ ಅರೋಗ್ಯ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕಾದ ಅನಿವಾರ್ಯತೆ ಇರುತ್ತದೆ.

· ವಿಷಪ್ರಾಶನ, ಪ್ರಸವಕ್ಕೆ ಸಂಭಂಧಿಸಿದ ತೊಂದರೆಗಳು, ಹೊಟ್ಟೆ ಉಬ್ಬರ, ಉಸಿರುಗಟ್ಟುವುದು.

· ಅಪಘಾತ, ಮೂಳೆಮುರಿತ, ಬೆಬೇಸಿಯೋಸಿನ್, ಆಂಥ್ರಾಕ್ಸ್, ಚಪ್ಪೆರೋಗ, ಗಳಲೇ ರೋಗ, ಹಾಲುಜ್ವರ, ಕೆಚ್ಚಲು ಬಾವು, ವಿವಿಧ ರೋಗೊದ್ರೇಕಗಳು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಜಾನುವರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯುವ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

· ಮೂಕ ರೋಧನೆ ತಪ್ಪಿಸಲು ರೈತರ ಮನೆ ಬಾಗಿಲಿಗೆ ತೆರಳಿ ತಜ್ಞ ಪಶುವೈದ್ಯರು ಹಾಗೂ ಸುಸಜ್ಜಿತ ಪಶು ಚಿಕಿತ್ಸಾ ವಾಹನ ದನ, ಎಮ್ಮೆ, ಕುರಿ, ಮೇಕೆ, ಹಾಗೂ ಇನ್ನಿತರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸಲಿವೆ.


ಜಿಲ್ಲಾದ್ಯಂತ ವಾರದಲ್ಲಿ ೧ ದಿನ ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ತಜ್ಞರು ಚಿಕಿತ್ಸಾ ಶಿಬಿರ ಮತ್ತು ಅನುಪಾಲನಾ ಶಿಬಿರಗಳಲ್ಲಿ ಭಾಗವಹಿಸಿ ಪಶುವೈದ್ಯಕೀಯ ಸೇವೆಯನ್ನು ನೀಡಲಿದ್ದಾರೆ. ಸುಮಾರು ೧೫ ಸುಸಜ್ಜಿತ ಸಂಚಾರಿ ಪಶು ಚಿಕಿತ್ಸಾ ವಾಹನ (ಆಂಬ್ಯುಲೆನ್ಸ್) ಗಳನ್ನು ಸಧ್ಯದಲ್ಲೇ ಲೋಕಾರ್ಪಣೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT