ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lifedown ಕಥೆಗಳು: ಕಲಬುರ್ಗಿ ಜಿಲ್ಲೆಯ ಕಾಡು ಕೂಸುಗಳ ಕೂಗು

Last Updated 15 ಜೂನ್ 2020, 13:00 IST
ಅಕ್ಷರ ಗಾತ್ರ

ಶೇರಿಭಿಕನಳ್ಳಿ ತಾಂಡಾ (ಕಲಬುರ್ಗಿ): ಕೇವಲ ಮೂರು ತಿಂಗಳ ಲಾಕ್‌ಡೌನ್‌ಗೆ ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳೆಲ್ಲ ನಲುಗಿಹೋದರೆ, ನೂರಾರು ವರ್ಷಗಳಿಂದ ಲೈಫ್‌ಡೌನ್‌ ಆಗಿದ್ದರೂ ‘ಕಮಕ್‌ ಕಿಮಕ್‌’ ಎನ್ನದೆ ಸಮಸ್ಯೆಗಳ ಜತೆಯಲ್ಲೇ ಜೀವನವನ್ನು ನಡೆಸಿದೆ ಕಾಡೊಳಗಿನ ಈ ಹಳ್ಳಿ.

ಶೇರಿಭಿಕನಳ್ಳಿ ತಾಂಡಾ ಎಂಬ ನಾಮಧೇಯದ ಈ ಪುಟ್ಟ ಊರನ್ನು ನೋಡಲು ನೀವು ಕಲಬುರ್ಗಿಯಿಂದ 125 ಕಿ.ಮೀ. ದೂರ ಕ್ರಮಿಸಬೇಕು. ಅದರಲ್ಲೂ ಕಾಡೊಳಗಿನ ಕಚ್ಚಾ ದಾರಿಯಲ್ಲಿ ಸುಮಾರು ಎಂಟು ಕಿ.ಮೀ. ಸಾಗಬೇಕು. ನಡೆದು ಹೋಗುವುದೇ ದುಸ್ತರವಾಗಿರುವ ಈ ಹಾದಿಯ ಕಡೆಗೆ ಬಸ್‌ಗಳು ಮುಖ ಮಾಡಿದ್ದಿಲ್ಲ. ಆರೋಗ್ಯ ಕೈಕೊಟ್ಟರೆ ಆಂಬುಲೆನ್ಸ್‌ಗಳೂ ಬರುವುದಿಲ್ಲ.

ಚಿಂಚೋಳಿಯಿಂದ ಬೈಕ್‌ ಏರಿ ತಾಂಡಾದತ್ತ ಹೊರಟ ನಮ್ಮನ್ನು ಅರಣ್ಯ ರಕ್ಷಕ ಸಿದ್ಧಾರೂಢ ಹೊಕ್ಕುಂಡಿ ಸೋಜಿಗದಿಂದ ನೋಡಿದರು. ‘ಅಪಾಯಕಾರಿಯಾದ ಆ ದಾರಿಯಲ್ಲಿ ಹೋಗಲು ನಿಮಗೇನು ಹುಚ್ಚಾ? ಬಳಸಿಕೊಂಡು ಹೋಗಲು ಇನ್ನೊಂದು ದಾರಿಯಿದೆ ಬನ್ನಿ’ ಎಂದು ಇಲಾಖೆಯ ಜೀಪ್‌ನಲ್ಲಿಯೇ ಕರೆದುಕೊಂಡು ಹೋದರು.

ಕಾಡಿನಲ್ಲಿ ವ್ಯರ್ಥವಾಗಿ ಬಿದ್ದ ಮರಮುಟ್ಟು, ತೆಂಗಿನ ಗರಿ, ಸೆಣಬಿನ ಎಳೆ, ಗೋಣಿಚೀಲಗಳಿಂದ ಕಟ್ಟಿಕೊಂಡ ಚಪ್ಪರಗಳೇ ಇಲ್ಲಿನವರ ಮನೆ. ಬಯಲಲ್ಲೇ ಬಿದಿರಿನ ನಾಲ್ಕು ಗಳ ನೆಟ್ಟು ಸುತ್ತಲೂ ಸೀರೆ ಕಟ್ಟಿದರೆ ಮುಗಿಯಿತು, ಅದೇ ಮಹಿಳೆಯರ ‘ಬಾತ್‌ರೂಮ್‌’.

ಪಕ್ಕದ ಗುಡ್ಡದಲ್ಲಿ ಸಿಗುವ ಕೆಂಪು ಕಲ್ಲಿನಿಂದ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಕುಳಿತುಕೊಂಡು ಹರಟುವುದಕ್ಕೆ, ಲಂಬಾಣಿ ಸಾಂಪ್ರಾಯಿಕ ನೃತ್ಯಕ್ಕೆ, ಮದುವೆ ಕಾರ್ಯಕ್ಕೆ, ಕಾಳು ಒಣಗಿಸುವುದಕ್ಕೆ ಕೆಲವರು ಕಟ್ಟೆಗಳನ್ನೂ ಕಟ್ಟಿಕೊಂಡಿದ್ದು, ಇಲ್ಲಿನ ನಿರ್ಮಾಣ ಶೈಲಿ ಗಮನ ಸೆಳೆಯುತ್ತದೆ.

ಕಾಯ್ದೆಗಳ ಕಾಲಡಿಯಲ್ಲಿ: ಹೇಳಿ–ಕೇಳಿ ಕಾಡಿನಲ್ಲಿ ಈ ಗ್ರಾಮ ಇರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಹೀಗಾಗಿ ರಸ್ತೆ ನಿರ್ಮಾಣ ಕನಸಿನ ಮಾತು. ವಿದ್ಯುತ್‌ ಮಾರ್ಗಗಳನ್ನೂ ಹಾಕುವಂತಿಲ್ಲ. ಪ್ರತಿದಿನ ಸಂಜೆ ಆಯಿತೆಂದರೆ ಕತ್ತಲನ್ನೇ ಹಾಸಿ, ಹೊದ್ದು ಮಲಗುತ್ತದೆ ಈ ಊರು. ಕೊಳವೆ ಬಾವಿಗಳನ್ನೂ ಕೊರೆಯುವಂತಿಲ್ಲ. ಅರಣ್ಯ ಇಲಾಖೆಯೇ ಈ ಊರಿಗೆ ನೀರು ಪೂರೈಕೆ ಮಾಡುತ್ತದೆ.

ತಾಂಡಾವಾಸಿಗಳೇ ಮಾಡಿಕೊಂಡ ನಾಲ್ಕು ಚಿಕ್ಕ ಓಣಿಗಳಿವೆ. ಆ ಓಣಿಗಳಲ್ಲಿ ಕೊಚ್ಚೆಯ ಮಧ್ಯದಲ್ಲೇ ಓಡಾಡಬೇಕು. ಮನೆ ಕಟ್ಟಲು ಪಾಯಾ ಅಗೆಯುವಂತಿಲ್ಲ. ಮೊಣಕೈನಷ್ಟು ಮಣ್ಣು ಅಗೆದು ಗೋಡೆ ನಿಲ್ಲಿಸಬೇಕು.

ಮಳೆಗಾಲದಲ್ಲಿ ನಡೆದಾಡಲು ಪರದಾಟ, ಬೇಸಿಗೆಯಲ್ಲಿ ನೀರಿಗೆ ಗೋಳಾಟ, ಚಳಿಗಾಲವೂ ಸೇರಿದಂತೆ ವರ್ಷದುದ್ದಕ್ಕೂ ಕಾಯಿಲೆಗಳಿಂದ ನರಳಾಟ. ಒಂದೆಡೆ ಕಾಲದ ಕಷ್ಟ, ಇನ್ನೊಂದೆಡೆ ಕಾಯ್ದೆಗಳ ಕಾಟಕ್ಕೆ ಇವರ ಬದುಕು ತಲ್ಲಣಿಸಿಹೋ
ಗಿದೆ. ಆದರೆ, ಜೀವನೋತ್ಸಾಹವೇನೂ ಬತ್ತಿಲ್ಲ.

‘ಅರಣ್ಯ ರಕ್ಷಣೆ ಕಾಯ್ದೆ ಜಾರಿ ಆಗುವ ಮುಂಚಿನಿಂದಲೂ ನಾವು ಇಲ್ಲೇ ಜೀವನ ಕಟ್ಟಿಕೊಂಡಿದ್ದೇವೆ. ಈಗ ಹೊಸ ಕಾಯ್ದೆ ತಂದರೆ ಅದಕ್ಕೂ ನಮಗೂ ಏನು ಸಂಬಂಧ? ಕಾಡುಪ್ರಾಣಿಗಳಿಗೆ ಇರುವಷ್ಟೂ ಕಿಮ್ಮತ್ತು ಮನುಷ್ಯರಿಗಿಲ್ಲ. ಕಾಯ್ದೆಗಳು ನಮ್ಮನ್ನು ಹಿಂಡಿಬಿಬಿಟ್ಟಿವೆ. ಸ್ಥಳಾಂತರಿಸುವುದಕ್ಕೂ ಸಿದ್ಧರಿಲ್ಲ; ಕನಿಷ್ಠ ಸೌಕರ್ಯಗಳನ್ನೂ ಕೊಡುತ್ತಿಲ್ಲ’ ಎಂಬ ಆಕ್ರೋಶ ರೈತ ವಿಠಲ ಬಣ್ಣೋತ ಅವರದು.

ಗ್ರಾಮಸ್ಥರ ನಿರಂತರ ಪ್ರಯತ್ನದ ಬಳಿಕ ಮೂರು ವರ್ಷಗಳ ಹಿಂದೆ ಚಿಕ್ಕ ಸೌರವಿದ್ಯುತ್‌ ಘಟಕವೊಂದು ಇಲ್ಲಿ ನಿರ್ಮಾಣವಾಗಿದೆ. ಅಲ್ಲಿಂದ ಮನೆಗಳಿಗೆ ವಿದ್ಯುತ್‌ ಸರಬರಾಜು ಆಗುತ್ತದೆ.

ಸ್ಥಳಾಂತರ ಮಾಡಿ ಎಂದಿದ್ದ ಅನಿಲ್ ಕುಂಬ್ಳೆ

ಶೇರಿಭಿಕನಳ್ಳಿ ತಾಂಡಾ ಸ್ಥಳಾಂತರಿಸುವ ಮಾತಿಗೆ ದಶಕ ಕಳೆದಿದೆ. ಯಾವಾಗಲೋ ಒಮ್ಮೆ ಅಧಿಕಾರಿಗಳು, ಜನಪ್ರಯಿನಿಧಿಗಳು ಬಂದು ಮುಖ ತೋರಿಸಿ ಹೋಗಿದ್ದಾರೆ. ಸ್ಥಳಾಂತರ ವಿಷಯ ಎಲ್ಲಿಗೆ ಬಂತು ಎಂಬುದು ಇಲ್ಲಿನ ಜನ, ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳಲ್ಲಿ ಇಲ್ಲ.

ಕರ್ನಾಟಕ ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದ, ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರು, 2011ರಲ್ಲಿ ಈ ತಾಂಡಾಗೆ ಭೇಟಿ ನೀಡಿ ವಸತಿ ಮಾಡಿದ್ದರು. ಜನರ ಅನಿಸಿಕೆ ಸಂಗ್ರಹಿಸಿ ತಾಂಡಾ ಸ್ಥಳಾಂತರಕ್ಕೆ ವರದಿ ನೀಡಿದ್ದರು. ಹಿಂದೆ ಚಿಂಚೋಳಿ ಶಾಸಕರಾಗಿದ್ದ ಡಾ.ಉಮೇಶ ಜಾಧವ, ಈಗಿನ ಶಾಸಕ ಡಾ.ಅವಿನಾಶ ಜಾಧವ ಅವರೂ ಆಗಾಗ ಸಭೆಗಳಲ್ಲಿ ಇದರ ಬಗ್ಗೆ ಮಾತಾಡಿದ್ದಾರೆ. ಅದರಾಚೆಗೆ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ ಎಂಬುದು ತಾಂಡಾವಾಸಿಗಳ ಅಳಲು.

ಸ್ವಾವಲಂಬಿ ಅಜ್ಜಿ

75 ವರ್ಷ ವಯಸ್ಸಿನ ದುರ್ಗಿಬಾಯಿ ಅವರದು ಸ್ವಾವಲಂಬಿ ಬದುಕು. ಲಂಬಾಣಿ ಸಾಂಪ್ರದಾಯಿಕ ಶೈಲಿಯನ್ನೇ ಬಳಸಿಕೊಂಡು ಕಲರ್‌ಫುಲ್‌ ಆದ ಚೀಳಗಳನ್ನು ಹೆಣೆಯುತ್ತಾರೆ ಅವರು. ಮದುವೆಯಲ್ಲಿ ಮದುಮಕ್ಕಳಿಗೆ ಉಡಿ ತುಂಬಲು ಈ ಚೀಲಗಳನ್ನು ಕೊಡುವುದು ಸಂಪ್ರದಾಯ.

ಅದೇ ಚೀಲಗಳನ್ನು ತುಸು ಮಾರ್ಪಾಡು ಮಾಡಿ ವ್ಯಾನಿಟಿ ಬ್ಯಾಗ್‌, ಕೈಚೀಲ, ಚೊಂಚಿ, ಪರ್ಸ್‌ ಮುಂತಾದ ರೂಪ ಕೊಟ್ಟಿದ್ದಾರೆ. ಮುಂಬೈ, ಹೈದರಾಬಾದ್, ಬೆಂಗಳೂರಿನಂಥ ನಗರದಗಳಲ್ಲಿ ಇವುಗಳಿಗೆ ಹೆಚ್ಚು ಬೇಡಿಕೆ ಇದೆ. ಸಣ್ಣ ಚೀಲಕ್ಕೆ ₹ 300, ವ್ಯಾನಿಟಿ ಬ್ಯಾಗ್‌ಗೆ ₹ 600. ಹಗುರವಾದ, ಪರಿಸರ ಸ್ನೇಹಿ ಚೀಲಗಳನ್ನು ಕಸೂತಿ ಮಾಡುವ ದುರ್ಗಿಬಾಯಿ; ತಾಂಡಾಗಳಲ್ಲಿದ್ದೂ ಸ್ವಾವಲಂಬಿ ಆಗುವುದು ಹೇಗೆ ಸಾಧ್ಯ ಎಂಬುದಕ್ಕೆ ಸಾಕ್ಷಿ.

ಹಿಪ್ಪೆಬೀಜವೇ ಆಸರೆ

ಕುಂಚಾವರಂ ಕಾಡಿನಲ್ಲಿ ಹಿಪ್ಪೆ ಮರಗಳು ಯಥೇಚ್ಚವಾಗಿವೆ. ಹಲವು ಮಹಿಳೆಯರು ಇದರ ಬೀಜಗಳನ್ನು ಆರಿಸಿತಂದು, ಸುಲಿದು ನಗರಗಳಿಗೆ ಹೋಗಿ ಮಾರುತ್ತಾರೆ. ಆಯುರ್ವೇದ ಔಷಧಿ, ಬಯೊಡಿಸೇಲ್‌ ಮಾಡುವುದಕ್ಕೂ ಇವು ಬಳಕೆ ಆಗುತ್ತವೆ. ಕಾಡಿನಲ್ಲಿ ವ್ಯರ್ಥವಾಗಿ ಬಿದ್ದುಹೋಗುವ ಈ ಬೀಜಗಳನ್ನು ಸಂಸ್ಕರಿಸಿ ಕೊಡಲು ಅನುಕೂಲ ಮಾಡಿದರೂ ಸಾಕಷ್ಟು ಜನ ಉದ್ಯೋಗ ಪಡೆಯಬುಹುದು ಎನ್ನುತ್ತಾರೆ ಅವರು.

ಎಸ್ಸೆಸ್ಸೆಲ್ಲಿ ಓದುತ್ತಿದ್ದಾಳೆ ಮಮತಾ

ಚಂದಾಪುರದ ಹಾಸ್ಟೆಲ್‌ನಲ್ಲಿ ಇದ್ದು ಸರ್ಕಾರಿ ಶಾಲೆಯಲ್ಲಿ ಒದುತ್ತಿದ್ದೇನೆ. ಈ ಬಾರಿ ಎಸ್ಸೆಸ್ಸೆಲ್ಸಿ. ತಂದೆ– ತಾಯಿ ಮುಂಬೈಗೆ ದುಡಿಯಲು ಹೋಗಿದ್ದಾರೆ. ತಾಂಡಾದಲ್ಲಿ ಒಬ್ಬಳೇ ಇದ್ದೇನೆ. ಎಷ್ಟೋ ಸಾರಿ ಕಾಡಿನಲ್ಲಿ ನಡೆದುಕೊಂಡು ಒಬ್ಬಳೇ ಮನೆಗೆ ಬರಬೇಕು, ಒಬ್ಬಳೇ ಶಾಲೆಗೆ ಹೋಗಬೇಕು. ತುಂಬ ಭಯವಾಗುತ್ತದೆ...’

16 ವರ್ಷದ ಮಮತಾಗೆ ಕಲಿಯುವ ಹಂಬಲವಿದೆ. ಆದರೆ, ಜೀವ ಕೈಯಲ್ಲಿ ಹಿಡಿದುಕೊಂಡೇ ಶಾಲೆಗೆ ಹೋಗಬೇಕು. ಇದೇ ಕಾರಣಕ್ಕೆ ತನ್ನ ನಾಲ್ವರು ಗೆಳತಿಯರು ಶಾಲೆ ಬಿಟ್ಟು ದುಡಿಯಲು ಹೋಗಿದ್ದಾರೆ ಎಂದೂ ಆಕೆ ನೊಂದು ನುಡಿದಳು.

ತಾಂಡಾದಲ್ಲಿ 70ಕ್ಕೂ ಹೆಚ್ಚು ಮಕ್ಕಳಿದ್ದಾರೆ. 5ನೇ ತರಗತಿಯವರೆಗೆ ಏಕೋಪಾಧ್ಯಾಯ ಶಾಲೆ ಇದೆ. ದಾರಿ ಇಲ್ಲದ ಕಾರಣ ಶಾಲೆಗೆ ಶಿಕ್ಷಕರು ನಿರಂತರವಾಗಿ ಬರುವುದಿಲ್ಲ. ಅಂಗನವಾಡಿ ಬಾಗಿಲು ತೆರೆದೇ ಇಲ್ಲ. ಬಿಸಿಯೂಟ ಮಾಡಿದ ಉದಾಹರಣೆಯೂ ಇಲ್ಲಿಲ್ಲ.

ಪಿಯುಸಿ ಮುಗಿಸಿದವರು ಐವರು, ಪದವಿ ಪಡೆದವರು ಇಬ್ಬರು, ಎಸ್ಸೆಸ್ಸೆಲ್ಸಿ ಓದಿದವರು ಆರು ಜನ. ಉಳಿದ ಬಹುಪಾಲು ಜನರಿಗೆ ಅಕ್ಷರಜ್ಞಾನವಿಲ್ಲ.

ಶೇಕಡ 25ರಷ್ಟು ಬೆಳೆ ಮಾತ್ರ ಕೈಸೇರುತ್ತದೆ !

ದಟ್ಟ ಕಾಡಿನ ಮಧ್ಯೆ ಎಲ್ಲರಿಗೂ ಸೇರಿ 65 ಎಕರೆ ಜಮೀನು ಇದೆ. ಜೋಳ, ಸೋಯಾ, ಉದ್ದು, ತೊಗರಿ ಬೆಳೆಯುತ್ತಾರೆ. ವನ್ಯಜೀವಿಗಳ ಹಾವಳಿಯಿಂದ ಬೆಳೆ ರಕ್ಷಿಸಲು ಹೊಲದಲ್ಲೇ ಮಲಗುವುದು ಅನಿವಾರ್ಯ. ನಾಯಿ ಸಾಕುವುದಕ್ಕೆ ಇಲಾಖೆ ಅನುಮತಿ ಇಲ್ಲ. ಇದರಿಂದ ಹಂದಿ, ಜಿಂಕೆ, ಹೆಗ್ಗಣ ದಾಳಿ ಹೆಚ್ಚಾಗಿ ಶೇಕಡ 25ರಷ್ಟು ಫಸಲು ಮಾತ್ರ ಇವರ ಕೈ ಸೇರುತ್ತದೆ.

ನಾನೀಗ ಒಂಟಿ ಹೆಂಗಸು ಗುಡಿಸಲಲ್ಲೇ ಬದುಕಿದ್ದೇನೆ: ಗೋಮ್ಲಿಬಾಯಿ ಬದುಕಿದ್ದೇನೆ

ದಶಕದ ಹಿಂದೆ ಮಕ್ಕಳನ್ನು ಬಿಟ್ಟು ಮುಂಬೈಗೆ ದುಡಿಯಲು ಹೋಗಿದ್ದೆವು. ವಾಂತಿ–ಭೇದಿಗೆ ಚಿಕಿತ್ಸೆ ಸಿಗದೇ 12 ವರ್ಷದ ಮಗ ಸತ್ತುಹೋದ. ಮೂರು ವರ್ಷದ ಹಿಂದೆ ಗಂಡನಿಗೆ ಧಮ್ಮು ಹೆಚ್ಚಾಯಿತು. ಆಸ್ಪತ್ರೆ ಹೊತ್ತುಕೊಂಡು ಹೋಗುವಷ್ಟರಲ್ಲಿ ಇಲ್ಲವಾದ. ನಾನೀಗ ಒಂಟಿ ಹೆಂಗಸು. ಗುಡಿಸಲಲ್ಲೇ ಬದುಕಿದ್ದೇನೆ ಎಂದು ಗ್ರಾಮದ ನಿವಾಸಿ ಗೋಮ್ಲಿಬಾಯಿ ರಾಠೋಡ ಹೇಳುತ್ತಾರೆ.

ಕೈಯಲ್ಲಿ ಕೆಲಸವಿಲ್ಲ, ಮನೆಯಲ್ಲಿ ಕಾಳು ಇಲ್ಲ: ಉಮೇಶ ರಾಠೋಡ

ಏಳು ಎಕರೆ ತಾಂಡಾ ಜಾಗವಿದೆ. ಸುತ್ತಲೂ ಅರಣ್ಯ ಇಲಾಖೆಯವರು ತಗ್ಗು ತೋಡಿ ಆಚೀಚೆ ಸುಳಿಯದಂತೆ ಮಾಡಿದ್ದಾರೆ. ಯಾವಾಗಲೋ ಒಮ್ಮೆ ಉದ್ಯೋಗ ಖಾತ್ರಿ ಕೆಲಸ ಶುರು ಮಾಡಿದರು. ಒಂದು ವಾರದಲ್ಲೇ ಬಂದ್‌ ಮಾಡಿದರು. ಮುಕ್ಕಾಲು ಭಾಗದಷ್ಟು ಜನರಿಗೆ ಜಾಬ್‌ಕಾರ್ಡ್‌ ಇಲ್ಲ. ಕೈಯಲ್ಲಿ ಕೆಲಸವಿಲ್ಲ, ಮನೆಯಲ್ಲಿ ಕಾಳು ಇಲ್ಲ ಎಂದು ಗ್ರಾಮಸ್ಥರಾದ ಉಮೇಶ ರಾಠೋಡ ಹೇಳುತ್ತಾರೆ.

ಕನಿಷ್ಠ ಸೌಕರ್ಯಗಳನ್ನೂ ಕೊಡುತ್ತಿಲ್ಲ: ವಿಠಲ ಬನ್ನೋತ

ಅರಣ್ಯ ರಕ್ಷಣೆ ಕಾಯ್ದೆ ಜಾರಿ ಆಗುವ ಮುಂಚಿನಿಂದಲೂ ನಾವು ಇಲ್ಲೇ ಜೀವನ ಕಟ್ಟಿಕೊಂಡಿದ್ದೇವೆ. ಈಗ ಹೊಸ ಕಾಯ್ದೆ ತಂದರೆ ಅದಕ್ಕೂ ನಮಗೂ ಏನು ಸಂಬಂಧ? ಕಾಡುಪ್ರಾಣಿಗಳಿಗೆ ಇರುವಷ್ಟೂ ಕಿಮ್ಮತ್ತು ಮನುಷ್ಯರಿಗೆ ಇಲ್ಲ. ಇಲಾಖೆಯ ಕಾಯ್ದೆಗಳು ಹಿಂಡಿಬಿಬಿಟ್ಟಿವೆ. ಸ್ಥಳಾಂತರಿಸುವುದಕ್ಕೂ ಸಿದ್ಧರಿಲ್ಲ; ಕನಿಷ್ಠ ಸೌಕರ್ಯಗಳನ್ನೂ ಕೊಡುತ್ತಿಲ್ಲ ಎಂದು ರೈತ ವಿಠಲ ಬನ್ನೋತ ಹೇಳುತ್ತಾರೆ.

ಸ್ಥಳಾಂತರಕ್ಕೆ ಕೆಲವರು ವಿರೋಧಿಸುತ್ತಾರೆ: ಶಾಸಕ
ಕಂದಾಯ ಇಲಾಖೆ, ಕೃಷಿ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಿವೆ. ಸ್ಥಳಾಂತರಿಸುವ ಚಟುವಟಿಕೆಗಳು ಹಿಂದೆಯೇ ನಡೆದಿವೆ. ಆದರೆ, ಸರ್ಕಾರದ ಹಂತದಲ್ಲಿ ಏನಾಗಿದೆ ಎಂದು ಸ್ಪಷ್ಟವಾಗಿಲ್ಲ. ಕೆಲವರು ಸ್ಥಳಾಂತರಕ್ಕೆ ಒಪ್ಪಿದರೆ ಮತ್ತೆ ಕೆಲವರು ವಿರೋಧಿಸುತ್ತಾರೆ. ಹೀಗಾಗಿ, ಸ್ಥಗಿತಗೊಂಡಿದೆ ಎಂದು ಚಿಂಚೋಳಿ ಶಾಸಕ ಡಾ.ವಿನಾಶ ಜಾಧವ ಹೇಳುತ್ತಾರೆ.

ದಿನಸಿ ಪದಾರ್ಥಗಳು ಸಿಗುವುದೇ ಇಲ್ಲ: ಕೂಲಿ ಕಾರ್ಮಿಕ

180 ಮತದಾರರು ಇದ್ದೇವೆ. ಮತ ಹಾಕುವುದಕ್ಕೂ ಪಕ್ಕದೂರಿಗೆ ಹೋಗಬೇಕು. ಸರ್ಕಾರ ಉಚಿತ ಪಡಿತರ ಧಾನ್ಯ ನೀಡುತ್ತದೆ. ಅದನ್ನು ತರಲು ಬೈಕಿಗೆ ₹ 50 ಖರ್ಚು ಮಾಡಬೇಕು ಅಥವಾ ನಡೆದುಕೊಂಡು ಹೋಗಬೇಕು. ದಿನಸಿ ಪದಾರ್ಥಗಳು ಸಿಗುವುದೇ ಇಲ್ಲ. ಹಸು, ಆಡು ಸಾಕಿದವರಿಗೆ ಹಾಲು ಸಿಗುತ್ತದೆ. ಉಳಿದವರಿಗೆ ಏನೂ ಇಲ್ಲ ಕೂಲಿಕಾರ್ಮಿಕರಾದ ರಮೇಶ ರಾಠೋಡ ಹೇಳುತ್ತಾರೆ.

ತೀರ ಕಾಡು ಪ್ರಾಣಿಗಳಂತೆ ಬದುಕುವುದು ಬೇಕಿಲ್ಲ

ಇನ್ನು ಮುಂದೆ ಮತ್ತೆ ಮುಂಬೈಗೆ ದುಡಿಯಲು ಹೋಗಲು ಸಾಧ್ಯವಿಲ್ಲ. ನಾವು ಖಾಲಿ ಕುಳಿತು ನಿಮ್ಮ ಪುಕ್ಕಟೆ ರೇಷನ್‌ ತಿನ್ನುವುದಿಲ್ಲ. ಊರಲ್ಲಿ ಉದ್ಯೋಗ ಖಾತ್ರಿ ಕೆಲಸ ಕೊಡಿ. ಮಕ್ಕಳಿಗೆ ಒಳ್ಳೆಯ ಭವಿಷ್ಯ ಸಿಗಬೇಕೆಂದರೆ ಸ್ಥಳಾಂತರ ಮಾಡಿ. ತೀರ ಕಾಡುಪ್ರಾಣಿಗಳಂತೆ ಬದುಕುವುದು ಬೇಕಿಲ್ಲ ಎಂದು ಅನುಷಾಬಾಯಿ ಶಂಕರಸಿಂಗ್‌ ರಾಠೋಡ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT