ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧ ಮೇವು: ವಲಸೆ ನಿಲ್ಲಿಸಿದ ಕುರಿಗಾಹಿ

ಬಯಲು ಸೀಮೆಯಲ್ಲಿ ನೀರು, ಮೇವು ಲಭ್ಯ
Last Updated 12 ಜನವರಿ 2020, 20:00 IST
ಅಕ್ಷರ ಗಾತ್ರ

ಪರಶುರಾಂಪುರ: ನೀರು ಮತ್ತು ಮೇವು ಅರಸಿ ವರ್ಷದ ಆರು ತಿಂಗಳು ವಲಸೆ ಹೋಗುತ್ತಿದ್ದ ಕುರಿಗಾಹಿಗಳಲ್ಲಿ ಸಂತಸ ಮನೆ ಮಾಡಿದೆ. ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಊರು ತೊರೆಯುವ ಪ್ರಸಂಗ ಸೃಷ್ಟಿಯಾಗಿಲ್ಲ ಎಂಬುದೇ ಕುರಿಗಾಹಿಗಳ ನೆಮ್ಮದಿಗೆ ಕಾರಣವಾಗಿದೆ.

ಕೆರೆ, ಕುಂಟೆಗಳಲ್ಲಿ ನಿಂತಿರುವ ನೀರು ಕುರಿ, ಮೇಕೆಗಳ ದಾಹ ತಣಿಸುತ್ತಿದೆ. ವಾಡಿಕೆಗಿಂತ ಹೆಚ್ಚಾಗಿ ಸುರಿದ ಮಳೆಗೆ ಮೇವು ಹುಲುಸಾಗಿ ಬೆಳೆದಿದೆ.

ಸ್ವಗ್ರಾಮದಲ್ಲೇ ನೀರು ಮತ್ತು ಮೇವು ಲಭ್ಯವಾಗುತ್ತಿರುವುದರಿಂದ ಬಹುತೇಕರು ವಲಸೆ ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.

ಅತ್ಯಂತ ಕಡಿಮೆ ಮಳೆ ಬೀಳವ ಪ್ರದೇಶವಾದ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕುರಿ ಸಾಕಣೆ ಪ್ರಮುಖ ಕಸುಬು. ಹಿರಿಯೂರು, ಚಿತ್ರದುರ್ಗ ತಾಲ್ಲೂಕಿನಲ್ಲೂ ಕುರಿಗಾಹಿಗಳ ಸಂಖ್ಯೆ ಹೆಚ್ಚಾಗಿದೆ.ಬುಡಕಟ್ಟು ಜನಾಂಗಗಳಾದ ಕಾಡುಗೊಲ್ಲರು, ಮ್ಯಾಸಬೇಡರು ಹಾಗೂ ಕುರುಬರಿಗೆ ಇದು ಪಾರಂಪರಿಕ ವೃತ್ತಿ. ಬರದ ನಾಡಿನ ಜನರ ಪ್ರಮುಖ ಆದಾಯದ ಮೂಲವೂ ಹೌದು.

ನೂರಾರು ಕುರಿ ಸಾಕಣೆ ಮಾಡುವ ಅನೇಕರು ಪ್ರತಿ ಊರುಗಳಲ್ಲಿ ಸಿಗುತ್ತಾರೆ. ಪಾರಂಪರಿಕ ಶೈಲಿಯಲ್ಲೇ ಕುರಿ ಸಾಕಣೆ ಮಾಡಲಾಗುತ್ತಿದೆ. ಇದಕ್ಕೆ ಅನುಕೂಲಕರ ವಾತಾವರಣ ಕೂಡ ಜಿಲ್ಲೆಯಲ್ಲಿದೆ. ವಾರ್ಷಿಕ ಸರಿಸುಮಾರು 550 ಮಿ.ಮೀ ಮಳೆ ಬೀಳುತ್ತದೆ. ಮಳೆಗಾಲದಲ್ಲಿ ಮಾತ್ರ ಜಾನುವಾರಿಗೆ ಕುಡಿಯುವ ನೀರು ಸಿಗುತ್ತದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಕುರಿಗಾಹಿಗಳು ವಲಸೆ ಹೋಗುವುದು ವಾಡಿಕೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ಆಂಧ್ರಪ್ರದೇಶ ಸೇರಿ ಹಲವೆಡೆಗೆ ಕುರಿ ಹಿಂಡಿನೊಂದಿಗೆ ತೆರಳುತ್ತಾರೆ. ಕುರಿ ಗೊಬ್ಬರ ಹಾಗೂ ಗಂಜಲ ರೈತರ ಭೂಮಿಯ ಫಲವತ್ತತೆ ಹೆಚ್ಚಿಸುತ್ತವೆ. ಇದಕ್ಕೆ ಪ್ರತಿಯಾಗಿ ರೈತರು ಧಾನ್ಯ ಹಾಗೂ ಹಣ ನೀಡುತ್ತಾರೆ.

‘ಮುತ್ತಾತನ ಕಾಲದಿಂದಲೂ ಕುರಿ ಸಾಕಣಿಕೆಯೇ ಕುಲ ಕಸಬು. ಇದರಲ್ಲಿ ಉತ್ತಮ ಅದಾಯವಿದೆ. ಅದರೆ ಕುರಿ ಕಾಪಾಡುವುದು ಇತ್ತೀಚೆಗೆ ಕಷ್ಟವಾಗುತ್ತಿದೆ. ಆರು ತಿಂಗಳು ಮನೆ ಹಾಗೂ ಮಕ್ಕಳನ್ನು ಬಿಟ್ಟು ಬೇರೆಡೆಗೆ ವಲಸೆ ಹೋಗುವ ಸಂಕಷ್ಟ ಹೇಳಲಾಗದು. ಈ ವರ್ಷ ಮೇವು, ನೀರು ಇರುವುದರಿಂದ ವಲಸೆ ಹೋಗುವುದನ್ನು ಕೈಬಿಟ್ಟಿದ್ದೇನೆ’ ಎನ್ನುತ್ತಾರೆದೊಡ್ಡಚೆಲ್ಲೂರು ಗ್ರಾಮದ ಕುರಿಗಾಹಿ ಕರಿಯಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT