ಶನಿವಾರ, ಸೆಪ್ಟೆಂಬರ್ 18, 2021
21 °C
ಶಿಕ್ಷಕರಿಗೆ ತಜ್ಞರಿಂದ ತರಬೇತಿ

ಮಕ್ಕಳಿಗೆ ವಾರಾಂತ್ಯದಲ್ಲಿ ಆರೋಗ್ಯ ತರಗತಿ: ರೋಗಗಳು, ಸ್ವಚ್ಛತೆ ಬಗ್ಗೆ ಅರಿವು

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆರೋಗ್ಯ ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ಈ ಸಂಬಂಧ ಶಿಕ್ಷಕರನ್ನು ಜುಲೈ ಅಂತ್ಯದೊಳಗೆ ಆರೋಗ್ಯ ರಾಯಭಾರಿಗಳನ್ನಾಗಿ ರೂಪಿಸಲಾಗುತ್ತದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಬಿಎಸ್‌ಕೆ) ಆರೋಗ್ಯ ಮತ್ತು ಕುಟುಂಬ ಇಲಾಖೆ ಈ ಯೋಜನೆ ರೂಪಿಸಿದೆ. ಮಕ್ಕಳಲ್ಲಿ ಆಗಾಗ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳನ್ನು ದೂರ ಮಾಡುವುದು ಇದರ ಮುಖ್ಯ ಉದ್ದೇಶ. ಆರೋಗ್ಯ ತಜ್ಞರಿಂದ ಆಯ್ದ ಶಿಕ್ಷಕರಿಗೆ ಮಲೇರಿಯಾ, ಡೆಂಗಿ ಸೇರಿದಂತೆ 30 ಸಾಮಾನ್ಯ ಕಾಯಿಲೆಗಳನ್ನು ಪತ್ತೆ ಮಾಡುವ ಸಂಬಂಧ ಅಗತ್ಯ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಪ್ರತ್ಯೇಕ ಪ್ರಾಯೋಗಿಕ ತರಗತಿ ನಡೆಸಲಾಗುತ್ತದೆ.

ಶಾಲಾ ಆರೋಗ್ಯ ಕಾರ್ಯಕ್ರಮದಡಿ ಈಗಾಗಲೇ ಅಲ್ಬೆಂಡಜಾಲ್‌, ಕ್ಯಾಲ್ಸಿಯಂ, ಫೋಲಿಕ್‌ ಆಸಿಡ್‌ ಮತ್ತು ಕಬ್ಬಿಣಾಂಶದಂತಹ ಮಾತ್ರೆಗಳನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ. ಇಷ್ಟಾಗಿಯೂ ಸಾವಿರಾರು ಮಕ್ಕಳು ಅಪೌಷ್ಟಿಕತೆ ಮತ್ತು ವಿವಿಧ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದಾರೆ. ಇದನ್ನು ತಪ್ಪಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಸಹಯೋಗದಲ್ಲಿ ಶಿಕ್ಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜವಾಬ್ದಾರಿಯನ್ನೂ ನೀಡಲಾಗುತ್ತಿದೆ. 

ಪ್ರಾಯೋಗಿಕವಾಗಿ ಜಾರಿ: ‘ಈ ಕಾರ್ಯಕ್ರಮವನ್ನು ಒಮ್ಮೆಲೇ ಎಲ್ಲ ಶಾಲೆಗಳಲ್ಲಿ ಅನುಷ್ಠಾನ ಮಾಡುವುದು ಕಷ್ಟ. ಹಾಗಾಗಿ ಕೆಲ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರ ಫಲಿತಾಂಶದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ಶಾಲೆಯಿಂದ ಇಬ್ಬರು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ’ ಎಂದು ಆರ್‌ಬಿಎಸ್‌ಕೆ ಉಪ ನಿರ್ದೇಶಕಿ ಡಾ.ವೀಣಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆಹಾರದ ಕ್ರಮ, ಕೈ ತೊಳೆದುಕೊಳ್ಳುವುದು, ಯೋಗ, ಧ್ಯಾನದ ವಿಧಾನ ಹಾಗೂ ವಿವಿಧ ಕಾಯಿಲೆಗಳ ಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡುತ್ತಾರೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು