ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಚೀಲ: ಹೊರಲಾರದ ಹೊರೆ

Last Updated 16 ಜನವರಿ 2020, 2:52 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ಶಾಲಾ ಚೀಲದ ತೂಕ ಇಳಿಸುವುದಕ್ಕೆ ಸಂಬಂಧಿಸಿ ಪರಿಣತರ ಜತೆ ಸಂವಾದ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಹೇಳಿದ್ದಾರೆ. ಶಾಲಾ ಚೀಲದ ತೂಕ ಇಳಿಸುವ ಉದ್ದೇಶದ ಹಲವು ಪ್ರಯತ್ನಗಳು ನಡೆದಿವೆ. ಆದರೆ, ಅನುಷ್ಠಾನ ಮಾತ್ರ ಆಗಿಲ್ಲ.

ಹೊರೆ ಬೇಡ: ಶಿಕ್ಷಣ ನೀತಿ

ನಮ್ಮ ಪಠ್ಯ ವಿಷಯಗಳು ಮಕ್ಕಳ ಮೇಲೆ ಅತಿಯಾದ ಹೊರೆ ಹೇರುತ್ತಿವೆ. ಈ ಹೊರೆಯನ್ನು ಹಗುರಗೊಳಿಸಲೇಬೇಕು ಎಂಬ ನಿಲುವನ್ನು 2019ರ ರಾಷ್ಟ್ರೀಯ ಶಿಕ್ಷಣ ನೀತಿ (ಕರಡು) ಪುನರುಚ್ಚರಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನೇಮಿಸಿದ್ದ ಯಶ್‌ಪಾಲ್‌ ಸಮಿತಿಯು 1993ರಲ್ಲಿ ಕೊಟ್ಟ ವರದಿಯಲ್ಲಿ ಇದೇ ಅಂಶ ಇತ್ತು. ‘ಹೊರೆ ಇಲ್ಲದ ಕಲಿಕೆ’ ಎಂಬುದೇ ಆ ವರದಿಯ ಹೆಸರಾಗಿತ್ತು. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌)– 2005 ಕೂಡ ಪಠ್ಯ ವಿಷಯಗಳ ಹೊರೆ ತಗ್ಗಿಸಬೇಕು ಎಂಬುದಕ್ಕೆ ಒತ್ತು ನೀಡಿತ್ತು. ವಿದ್ಯಾರ್ಥಿಗಳು ಸಕ್ರಿ ಯವಾಗಿ ಭಾಗಿಯಾಗುವ, ಸಮಗ್ರ, ಅನುಭವ ಆಧರಿತ ಮತ್ತು ವಿಶ್ಲೇಷಣಾತ್ಮಕವಾದ ಕಲಿಕೆ ಇರಬೇಕು ಎಂದು ಎನ್‌ಸಿಎಫ್‌ ಪ್ರತಿಪಾದಿಸಿತ್ತು. ಇಂತಹ ಸಂಶೋಧನೆ ಆಧರಿತ ಶಿಫಾರಸುಗಳನ್ನು ಪಾಲಿಸುವುದು ಈಗ ಎಂದಿಗಿಂತಲೂ ಹೆಚ್ಚು ಪ್ರಸ್ತುತ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ.

‘ಅತಿಯಾದ ಪಠ್ಯ ವಿಷಯಗಳನ್ನು ಕಲಿಸುವುದು ಮತ್ತು ಬಾಯಿಪಾಠ ಮಾಡಿಸುವುದೇ ಕಲಿಕೆ ಎಂಬಂತಾಗಿದೆ. ಆವಿಷ್ಕಾರ, ಚರ್ಚೆ, ವಿಶ್ಲೇಷಣೆ ಆಧರಿ ತವಾದ ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಸುವ ಕಲಿಕೆಗೆ ಇದುವೇ ದೊಡ್ಡ ತೊಡಕಾಗಿದೆ. ಪ್ರತಿ ಪಠ್ಯಕ್ರಮದಲ್ಲಿ ಅಗತ್ಯ ಮೂಲ ವಿಷಯವನ್ನು ಮಾತ್ರ ಇರಿಸಿ ಕೊಂಡು ಪಠ್ಯ ವಿಷಯಗಳನ್ನು ಕಡಿಮೆ ಮಾಡಬೇಕು. ಪ್ರಧಾನ ಪರಿಕಲ್ಪನೆಗಳು ಮತ್ತು ಚಿಂತನೆ ಗಳು ಮಾತ್ರ ಪಠ್ಯಕ್ರಮದಲ್ಲಿ ಇರುವಂತೆ ನೋಡಿ ಕೊಳ್ಳಬೇಕು. ಹೀಗಾದರೆ, ಚರ್ಚೆ, ಸರಿಯಾದ ಗ್ರಹಿಕೆ, ವಿಶ್ಲೇಷಣೆ, ಅನ್ವಯಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಸಂವಹನದ ಮೂಲ ಕವೇ ಹೆಚ್ಚಿನ ಬೋಧನೆ ಮತ್ತು ಕಲಿಕೆ ನಡೆಯಬೇಕು, ವಿದ್ಯಾರ್ಥಿಗಳು ಪ್ರಶ್ನೆ ಕೇಳಲು ಉತ್ತೇಜನವಿರಬೇಕು, ತರಗತಿಯಲ್ಲಿ ಸೃಜನಶೀಲತೆ, ಸಹಭಾಗಿತ್ವ, ಸಂತಸಕ್ಕೆ ಅವಕಾಶ ದೊರೆಯಬೇಕು. ಆವಿಷ್ಕಾರ ಮತ್ತು ಅನುಭವಗಳ ಆಧಾರದಲ್ಲಿ ವಿದ್ಯಾರ್ಥಿಗಳು ಕಲಿಯುವಂತಾಗಬೇಕು’ ಎಂದು ಶಿಕ್ಷಣ ನೀತಿ ಹೇಳಿದೆ.

ಹೊರೆ ಇಳಿಕೆ ಯತ್ನಗಳು

ಶಾಲಾ ಚೀಲದ ಭಾರ ಇಳಿಸುವುದಕ್ಕೆ ಸಂಬಂಧಿಸಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು 2018ರಲ್ಲಿ ರೂಪಿಸಲಾಗಿತ್ತು. ಡಿಜಿಟಲ್‌ ಟ್ಯಾಬ್ಲೆಟ್‌ ಮೂಲಕ ಪಠ್ಯ ಪುಸ್ತಕಗಳು ಲಭ್ಯವಾಗುವಂತೆ ಮಾಡಲಾಗಿತ್ತು

ಶಾಲಾ ಚೀಲದ ತೂಕ ಇಳಿಸುವಂತೆ ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಸಿಬಿಎಸ್‌ಇ 2016ರಲ್ಲಿ ಸುತ್ತೋಲೆ ಕಳುಹಿಸಿತ್ತು

ಇಂಟರ್‌ನೆಟ್‌ ಮತ್ತು ಮೊಬೈಲ್‌ ಮೂಲಕ ಪಠ್ಯ ಪುಸ್ತಕಗಳ ವಿದ್ಯಾರ್ಥಿಗಳಿಗೆ ಲಭ್ಯ ಆಗುವಂತೆ ಮಾಡಬೇಕು ಎಂದು ಎನ್‌ಸಿಇಆರ್‌ಟಿ ಶಿಫಾರಸು ಮಾಡಿತ್ತು.

‘ಸುತ್ತೋಲೆಯೇ ಅವೈಜ್ಞಾನಿಕ’

* ಎನ್‌ಸಿಇಆರ್‌ಟಿ ಮೊದಲಿಗೆ ಎನ್‌ಸಿಎಫ್‌ (ನ್ಯಾಷನಲ್‌ ಕರಿಕ್ಯುಲಮ್ ಫ್ರೇಮ್‌ವರ್ಕ್‌) ಶಿಫಾರಸಿನ ಅನ್ವಯ ಪಠ್ಯಪುಸ್ತಕಗಳ ಗಾತ್ರವನ್ನು ಮರು ವಿನ್ಯಾಸಗೊಳಿಸಬೇಕು

*ಸರ್ಕಾರ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕವಾಗಿರುವುದರಿಂದ ಸುತ್ತೋಲೆ ಮರು ಪರಿಶೀಲಿಸಬೇಕು

* ಮಾರುಕಟ್ಟೆಯಲ್ಲಿ ಲಭ್ಯವಿರುವ ಶಾಲಾ ಚೀಲಗಳ ವಿನ್ಯಾಸ ಬದಲಿಸಬೇಕು. ವಿಶೇಷವಾಗಿ ‘ಬ್ಯಾಕ್‌ ಪ್ಯಾಕ್‌’ ಮಾದರಿಯನ್ನು ಬಿಟ್ಟು 25 ವರ್ಷಗಳ ಹಿಂದೆ ಇದ್ದಂತೆ ಅಡ್ಡಡ್ಡ ಮಾದರಿ ಚೀಲದ ವಿನ್ಯಾಸವನ್ನು ಮತ್ತೆ ಜಾರಿಗೆ ಮಾಡಬೇಕು

* ಚೀಲದ ಹೊರೆ ಕಡಿಮೆ ಮಾಡಬೇಕು ಎಂದು ರಾಜ್ಯದಲ್ಲಿ ಈ ಹಿಂದೆ ನೇಮಿಸಿದ್ದ ಸಮಿತಿ ಮಾಡಿರುವ ಶಿಫಾರಸುಗಳು ಅವೈಜ್ಞಾನಿಕವಾಗಿವೆ. ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ ಮಗುವಿನ ದೇಹದ ತೂಕದ ಶೇ 10 ರಿಂದ ಶೇ 20 ರಷ್ಟು ಇರಬಹುದು ಎಂದು ಹೇಳಿದೆ. ನಮ್ಮಲ್ಲಿ ದೇಹದ ತೂಕಕ್ಕಿಂತ ಶೇ 6 ರಿಂದ ಶೇ 7 ಕ್ಕಿಂತಲೂ ಕಡಿಮೆ ಇರಬೇಕು ಎಂದು ಹೇಳಿರುವುದು ಪ್ರಾಯೋಗಿಕವಲ್ಲ

* ಯಾವುದೇ ಒಂದು ತರಗತಿಯಲ್ಲಿ ಪ್ರತಿ ದಿನ ಮೂರು ಅಥವಾ ನಾಲ್ಕು ವಿಷಯಗಳ ಅಧ್ಯಾಪನ ಇರುತ್ತದೆ. ಅವುಗಳ ಪಠ್ಯ ಪುಸ್ತಕಗಳು ಮತ್ತು ಅದಕ್ಕೆ ಸಂಬಂಧಿಸಿದ ನೋಟ್‌ ಪುಸ್ತಕಗಳ ತೂಕವೇ ಹೆಚ್ಚು. ಚೀಲದ ತೂಕವೇ 800 ಗ್ರಾಂಗಳಿಗೂ ಹೆಚ್ಚು ಇರುತ್ತದೆ. ಪ್ರತಿ ಪುಸ್ತಕದ ತೂಕ 400 ರಿಂದ 500 ಗ್ರಾಂಗಳಿರುತ್ತದೆ

-ಶಶಿಕುಮಾರ್‌ ಡಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ

‘ವಿರೋಧದ ಹಿಂದೆ ಪುಸ್ತಕ ಲಾಬಿ’

*ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಚೀಲಗಳ ತೂಕವನ್ನು ಕಡಿಮೆ ಮಾಡಲು ಒಪ್ಪುತ್ತಿಲ್ಲ ಮತ್ತು ಸರ್ಕಾರದ ಆದೇಶವನ್ನು ವಿರೋಧಿಸುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಈ ಸಮಸ್ಯೆ ಇಲ್ಲ.

*ಪಠ್ಯ ಪುಸ್ತಕ ಮತ್ತು ನೋಟ್‌ ಪುಸ್ತಕಗಳ ಮುದ್ರಣ ಲಾಬಿಯೂ ಈ ವಿರೋಧದ ಹಿಂದೆ ಇದೆ. ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕ ಮತ್ತು ನೋಟ್‌ ಪುಸ್ತಕಗಳ ಮಾರಾಟದಿಂದ ಶೇ 30 ರಿಂದ ಶೇ 40 ರಷ್ಟು ಲಾಭ ಸಿಗುತ್ತದೆ. ಈ ಕಾರಣಕ್ಕಾಗಿ ಖಾಸಗಿ ಶಾಲೆಗಳು ವಿರೋಧಿಸುತ್ತವೆ.

*ಶಾಲಾ ಮಕ್ಕಳು ಅಧಿಕ ಭಾರ ಹೊರುವುದರಿಂದ ಬೆನ್ನು ಮೂಳೆ ಮೇಲೆ ಒತ್ತಡ ಬೀಳುತ್ತದೆ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನಿಮ್ಹಾನ್ಸ್‌ನ ಮೂಳೆ ತಜ್ಞ ವೈದ್ಯರೇ ತಜ್ಞರ ಸಮಿತಿಗೆ ತಿಳಿಸಿದ್ದರು.

*ಶಾಲಾ ಬ್ಯಾಗ್‌ ಹೊರೆಯನ್ನು ಕಡಿಮೆ ಮಾಡಲು ತಜ್ಞರ ಸಮಿತಿ ನೀಡಿರುವ ಪಾಲನೆ ಮಾಡಿದರೆ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಅನುಕೂಲ

-ವಿ.ಪಿ. ನಿರಂಜನಾರಾಧ್ಯ,ಶಿಕ್ಷಣ ತಜ್ಞ

ಕೈಗೂಡದ ಕಾಯ್ದೆ ಯತ್ನ

ವಿಜಯ್‌ ಜೆ. ದರ್ದಾ ಅವರು ರಾಜ್ಯಸಭೆಯಲ್ಲಿ 2006ರಲ್ಲಿ ‘ಮಕ್ಕಳ ಶಾಲಾ ಚೀಲ (ಭಾರದ ಮೇಲೆ ಮಿತಿ)’ ಎಂಬ ಮಸೂದೆಯನ್ನು ಮಂಡಿಸಿದ್ದರು.

‘ಭಾರಿ ತೂಕದ ಶಾಲಾ ಚೀಲದಿಂದಾಗಿ ಸಣ್ಣಮಕ್ಕಳು ಒದ್ದಾಡುತ್ತಾರೆ. ಚೀಲದ ಭಾರದಿಂದಾಗಿ ಬೆನ್ನು ಬಾಗುವ ಸಮಸ್ಯೆ ಕಾಯಂ ಆಗಿ ಉಳಿದುಕೊಳ್ಳುತ್ತದೆ. ಬೆನ್ನುಹುರಿಯ ಮೇಲೆ ತೀವ್ರ ಒತ್ತಡ ಬಿದ್ದು ದೈಹಿಕ ಸ್ವರೂಪ ಮತ್ತು ಬೆನ್ನಿನ ಸ್ನಾಯುಗಳಿಗೆ ಶಾಶ್ವತ ಹಾನಿ ಉಂಟಾಗುತ್ತದೆ. ಭಾರದ ಶಾಲಾ ಚೀಲಗಳು ಬೆನ್ನು ಮತ್ತು ಭುಜದ ಮೇಲೆ ಒತ್ತಡ ಹಾಕುತ್ತದೆ. ಚೀಲದ ಭಾರದಿಂದಾಗಿ ಮಕ್ಕಳು ಮುಂದಕ್ಕೆ ಬಾಗುವುದರಿಂದ ಸರಾಗ ಉಸಿರಾಟಕ್ಕೂ ಸಮಸ್ಯೆ ಆಗುತ್ತದೆ’ ಎಂದು ಈ ಮಸೂದೆಯಲ್ಲಿ ಹೇಳಲಾಗಿತ್ತು.

‘ಶಾಲಾ ಚೀಲವು ಮಗುವಿನ ಭಾರದ ಶೇ 10ಕ್ಕಿಂತ ಹೆಚ್ಚು ಇರ ಬಾರದು ಎಂಬ ನಿಯಮ ರೂಪಿಸಬೇಕು’ ಎಂಬುದು ಮಸೂದೆಯ ಉದ್ದೇಶವಾಗಿತ್ತು. ಇದು ಜಾಗತಿಕ ಮಟ್ಟದಲ್ಲಿ ಅನುಸರಿಸುತ್ತಿರುವ ಮಾನದಂಡವೂ ಹೌದು. ಆದರೆ,ಈ ಮಸೂದೆ ಅಂಗೀಕಾರ ಆಗಲಿಲ್ಲ.

ಜಾರಿ ಆಗದ ಕೇಂದ್ರದ ಸುತ್ತೋಲೆ

ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2018ರಲ್ಲಿ ಸುತ್ತೋಲೆ ಕಳುಹಿಸಿ ಬೋಧನಾ ವಿಷಯಗಳನ್ನು ಕಡಿತ ಮಾಡಲು ಮತ್ತು ಶಾಲಾ ಚೀಲದ ತೂಕ ಕಡಿಮೆ ಮಾಡಲು ಮಾರ್ಗದರ್ಶಿಸೂತ್ರಗಳನ್ನು ರೂಪಿಸುವಂತೆ ಸೂಚಿಸಿತ್ತು. ಮಕ್ಕಳ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿತ್ತು.

ಮಾರ್ಗಸೂಚಿಯಲ್ಲಿ ಏನಿತ್ತು?

1. 1, 2ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ ಮತ್ತು ಗಣಿತ ಬಿಟ್ಟು ಬೇರೆ ವಿಷಯಗಳನ್ನು ನಿಗದಿ ಮಾಡುವಂತಿಲ್ಲ. 3–5ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳು ಮಾತ್ರ ಇರಬೇಕು

2. 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್‌ ಕೊಡುವಂತಿಲ್ಲ

3. ನಿಗದಿತ ಪಠ್ಯ ಪುಸ್ತಕವನ್ನು ಬಿಟ್ಟು ಬೇರೆ ಪುಸ್ತಕಗಳು ಮತ್ತು ಇತರ ಪರಿಕರಗಳನ್ನು ತರುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಸೂಚಿಸುವಂತಿಲ್ಲ

4. ವೇಳಾಪಟ್ಟಿಗೆ ಅನುಗುಣವಾಗಿ, ಅಗತ್ಯ ಪುಸ್ತಕಗಳನ್ನು ಮಾತ್ರ ವಿದ್ಯಾರ್ಥಿಗಳು ತರುವಂತೆ ಶಿಕ್ಷಕರು ನೋಡಿಕೊಳ್ಳಬೇಕು

ಶಾಲಾ ಚೀಲದ ತೂಕ

1,2: 1.5 ಕೆ.ಜಿ. ಒಳಗೆ

3–5: 2-3 ಕೆ.ಜಿ

6,7: 4 ಕೆ.ಜಿ.

8,9: 4.5 ಕೆ.ಜಿ.

10: 5 ಕೆ.ಜಿ.

ಗಮನ ಸೆಳೆದ ಯತ್ನ

ಅಹಮದಾಬಾದ್‌ನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಆನಂದಕುಮಾರ್‌ ಖಲಸ್‌ ಅವರು ಜಾರಿಗೆ ತಂದ ಯೋಚನೆಯಿಂದ ಶಾಲಾ ಚೀಲದ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲು ಸಾಧ್ಯವಾಗಿದೆ.

ಒಂದೊಂದು ತಿಂಗಳಲ್ಲಿ ಕಲಿಯಬೇಕಿರುವ ಪಠ್ಯ ಪುಸ್ತಕದ ಭಾಗಗಳನ್ನು ವಿಭಜಿಸಿ ಹತ್ತು ಪುಸ್ತಕಗಳಾಗಿಖಲಸ್‌ ಅವರು ರೂಪಿಸಿದ್ದರು. ಆಯಾ ತಿಂಗಳಿಗೆ ನಿಗದಿಯಾದ ಪುಸ್ತಕವನ್ನು ಮಾತ್ರ ವಿದ್ಯಾರ್ಥಿಗಳು ತಂದರೆ ಸಾಕಾಗುತ್ತಿತ್ತು. ಇಡೀ ವರ್ಷದ ಪುಸ್ತಕವನ್ನು ಪ್ರತಿ ದಿನವೂ ಹೊತ್ತು ತಿರುಗುವ ಸಂಕಷ್ಟ ವಿದ್ಯಾರ್ಥಿಗಳಿಗೆ ತಪ್ಪಿತು.

‘ನನ್ನ ಮಗಳು ದಿನವೂ ಒಯ್ಯುತ್ತಿದ್ದ ಪುಸ್ತಕದ ಭಾರವು ನನ್ನನ್ನು ಚಿಂತನೆಗೆ ಹಚ್ಚಿತು. ಸಹ ಶಿಕ್ಷಕರ ಜತೆಗೆ ಈ ಬಗ್ಗೆ ಚರ್ಚೆ ನಡೆಸಿದೆ. ಪ್ರತಿ ಪಠ್ಯ ಪುಸ್ತಕದಿಂದಲೂ ಆಯಾ ತಿಂಗಳು ಕಲಿಸುವ ಭಾಗವನ್ನು ಬೇರ್ಪಡಿಸಿ ಹತ್ತು ಪುಸ್ತಕವಾಗಿಸುವ ಯೋಚನೆ ಬಂತು’ ಎಂದು ಖಲಸ್‌ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT