ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಪ್ಲಾಸ್ಟಿಕ್‌? ಏಕೆ ಅಪಾಯಕಾರಿ?

Last Updated 18 ಮೇ 2019, 20:03 IST
ಅಕ್ಷರ ಗಾತ್ರ

ಏನಿದು ಪ್ಲಾಸ್ಟಿಕ್‌?

ಪ್ಲಾಸ್ಟಿಕ್‌ ಬಗ್ಗೆ ಸರಳ ವಿವರಣೆ ಇಷ್ಟೇ– ಇದೊಂದು ಆಕಾರವನ್ನು ಬದಲಿಸುವ ವಸ್ತು. ಬೇಕಾದ ಆಕಾರವನ್ನು ಒಲಿಸಿಕೊಳ್ಳಬಹುದಾದ ಪ್ಲಾಸ್ಟಿಕ್‌ ಬಳಸಿ ನಾನಾ ವಿಧಗಳ ಪರಿಕರಗಳನ್ನು ತಯಾರಿಸುವುದು ಬಲು ಸುಲಭ.

ಒಂದಕ್ಕೊಂದು ಬೆಸೆದುಕೊಂಡ ಅಣುಗಳ ಉದ್ದನೆಯ ಸರಪಣಿಯನ್ನು ಹೊಂದಿರುವ ಪಾಲಿಮರ್‌ಗಳಿಂದ ಪ್ಲಾಸ್ಟಿಕ್‌ ತಯಾರಿಸುತ್ತಾರೆ. ಬಹುತೇಕ ಪಾಲಿಮರ್‌ಗಳಲ್ಲಿ ಈ ಅಣುವಿನ ಸರಪಣಿ ಇಂಗಾಲದ್ದಾಗಿರುತ್ತದೆ. ಪ್ಲಾಸ್ಟಿಕ್‌ನ ವರ್ತನೆ, ಗುಣಲಕ್ಷಣಗಳನ್ನು ನಿರ್ಧರಿಸುವುದು ಈ ಅಣುಗಳ ರಚನೆ ಮತ್ತು ವಿನ್ಯಾಸ. ಅಲೆಕ್ಸಾಂಡರ್‌ ಪಾರ್ಕಸ್‌ ಎಂಬ ಇಂಗ್ಲಿಷ್‌ ವಿಜ್ಞಾನಿ 1855ರಲ್ಲಿ ಪ್ಲಾಸ್ಟಿಕ್‌ನ ಮೂಲರೂಪವನ್ನು ಕಂಡುಹಿಡಿದಿದ್ದ. 20ನೇ ಶತಮಾನದಲ್ಲಿ ಇದರ ಬಳಕೆ ವ್ಯಾಪಕವಾಯಿತು.

ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ತೈಲದಿಂದ ಪಡೆಯುವಪೆಟ್ರೊರಾಸಾಯನಿಕಗಳನ್ನು ಬಳಸಿ ಪ್ಲಾಸ್ಟಿಕ್‌ ತಯಾರಿಸಲಾಗುತ್ತದೆ. ಪೆಟ್ರೋಲಿಯಂ ತೈಲವನ್ನು ಸಂಸ್ಕರಿಸಿ ಅದರಿಂದ ಇಥಿಲೀನ್‌ ಮತ್ತು ಪ್ರೊಪಿಲೀನ್‌ಗಳನ್ನು ರೂಪಿಸಲಾಗುತ್ತದೆ. ಪ್ಲಾಸ್ಟಿಕ್‌ನ ಮೂಲವಸ್ತುಗಳು ಇವೇ. ಈ ಎರಡು ರಾಸಾಯನಿಕಗಳನ್ನು ಇತರ ರಾಸಾಯನಿಕಗಳ ಜೊತೆ ಬೆರೆಸಿ ಪಾಲಿಮರ್‌ಗಳನ್ನು ತಯಾರಿಸಲಾಗುತ್ತದೆ. ಈ ವಿಧಾನವನ್ನು ಪಾಲಿಮರೈಸೇಷನ್‌ ಅಥವಾ ಪಾಲಿಕಂಡೆನ್ಸೇಷನ್‌ ಎಂದು ಕರೆಯಲಾಗುತ್ತದೆ.

ಪ್ಲಾಸ್ಟಿಕ್‌ಗಳಲ್ಲಿ ಪ್ರಮುಖವಾಗಿ ಎರಡು ವಿಧ– ಬಿಸಿ ಮಾಡಿದಾಗ ಮೃದುವಾಗಿ ತಂಪು ಮಾಡಿದಾಗ ಗಟ್ಟಿಯಾಗುವ ಗುಣ ಹೊಂದಿರುವ ‘ಥರ್ಮೋ ಪ್ಲಾಸ್ಟಿಕ್‌ಗಳು’ ಹಾಗೂ ಒಮ್ಮೆ ಗಟ್ಟಿಗೊಂಡ ಬಳಿಕ ಮತ್ತೆ ಮೃದುವಾಗದ ‘ಥರ್ಮೊಸೆಟ್‌’ಗಳು.

ಏಕೆ ಅಪಾಯಕಾರಿ?

ಪ್ಲಾಸ್ಟಿಕ್‌ ವಸ್ತುಗಳ ಜೈವಿಕ ವಿಘಟನೆ ಆಗುವುದಿಲ್ಲ. ಅವು ಕರಗಿ ಮಣ್ಣಿನಲ್ಲಿ ಸೇರಲು 800ರಿಂದ 1ಸಾವಿರ ವರ್ಷಗಳು ಬೇಕು. ಮರು ಬಳಕೆ ಸಮರ್ಪಕವಾಗಿ ಆಗದ ಕಾರಣ ಬಹುತೇಕ ಪ್ಲಾಸ್ಟಿಕ್‌ ವಸ್ತುಗಳು ಕಸದ ರೂಪದಲ್ಲಿ ಭೂಭರ್ತಿ ಕೇಂದ್ರಗಳನ್ನು ಸೇರುತ್ತಿವೆ.

ಸರಿಯಾಗಿ ವಿಲೇವಾರಿ ಆಗದ ಪ್ಲಾಸ್ಟಿಕ್‌ ನದಿ, ಸಮುದ್ರಗಳನ್ನು ಸೇರುತ್ತಿದ್ದು, ಸಾಗರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಪ್ಲಾಸ್ಟಿಕ್‌ ಪರಿಕರಗಳ ಅತಿಬಳಕೆಯಿಂದ ಕ್ಯಾನ್ಸರ್‌ನಂತಹ ರೋಗಗಳಿಗೂ ಕಾರಣವಾಗುತ್ತಿದೆ. ಆಹಾರ ಪದಾರ್ಥಗಳು ಬೆರೆತ ಪ್ಲಾಸ್ಟಿಕ್‌ ಸೇವಿಸುವ ದನಕರುಗಳು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿವೆ.

ಡಯಾಕ್ಸಿನ್‌: ಪ್ಲಾಸ್ಟಿಕ್‌ಗಳನ್ನು ಸುಟ್ಟರೆ ಡಯಾಕ್ಸಿನ್ ಎಂಬ ಹೊಗೆ ಹೊಮ್ಮುತ್ತದೆ. ಇದು ಬಲು ಅಪಾಯಕಾರಿ. ಕ್ಯಾನ್ಸರ್‌, ಶ್ವಾಸಕೋಶ ಹಾಗೂ ಹಾರ್ಮೋನ್‌ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಬಂಜೆತನ, ವೀರ್ಯಾಣು ಸಂಖ್ಯೆ ಕಡಿಮೆ ಆಗುವಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಬಯೋ ಪ್ಲಾಸ್ಟಿಕ್‌ ಪರ್ಯಾಯ?

ಪೆಟ್ರೋಲಿಯಂ ತೈಲ ಬಳಸದೆಯೂ ಪ್ಲಾಸ್ಟಿಕ್‌ ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಸಸ್ಯಜನ್ಯ ಪದಾರ್ಥ ಗಳು, ಪಿಷ್ಟ (ಸ್ಟಾರ್ಚ್‌), ಬ್ಯಾಕ್ಟೀರಿಯಾಗಳನ್ನು ಬಳಸಿ ಜೈವಿಕ ಪ್ಲಾಸ್ಟಿಕ್‌ ತಯಾರಿಸುವ ವಿಧಾನಗಳು ಜನಪ್ರಿಯಗೊಳ್ಳುತ್ತಿವೆ. ಇವುಗಳನ್ನು ಬಯೋಪ್ಲಾಸ್ಟಿಕ್‌ ಎನ್ನುತ್ತಾರೆ. ಇವು ನೂರಾರು ವರ್ಷ ಪರಿಸರದಲ್ಲಿ ಉಳಿಯುವುದಿಲ್ಲ. ಕೆಲವು ವಿಧದ ಜೈವಿಕ ಪ್ಲಾಸ್ಟಿಕ್‌ಗಳು ನೀರಿನಲ್ಲಿ ಕರಗುತ್ತವೆ. ಇನ್ನು ಕೆಲವು ಬ್ಯಾಕ್ಟೀರಿಯಾಗಳನ್ನು ತಿನ್ನಬಲ್ಲವು. ಇನ್ನು ಕೆಲವು ಡೈಕ್ಲೋರೊ ಮಿಥೇನ್‌ನಂತಹ ದ್ರಾವಕಗಳಲ್ಲಿ ಕರಗುತ್ತವೆ.

ಪ್ಲಾಸ್ಟಿಕ್‌ ಕೈಚೀಲಗಳಿಗೆ ಹೋಲಿಸಿದರೆ ಬಯೋಪ್ಲಾಸ್ಟಿಕ್‌ ಉತ್ಪನ್ನ ತುಸು ದುಬಾರಿ. ‘ಒಂದು ಕೆ.ಜಿ. ಬಯೋಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗೆ ಮಾರುಕಟ್ಟೆಯಲ್ಲಿ ₹ 370ರಿಂದ ₹ 400ರವರೆಗೆ ದರ ಇದೆ. ಆದರೆ, ನಿಷೇಧಿತ ಪ್ಲಾಸ್ಟಿಕ್‌ ಚೀಲಗಳು ಕಾಳಸಂತೆಯಲ್ಲಿ
₹ 100ಕ್ಕೆ ಸಿಗುತ್ತದೆ. ದುಬಾರಿ ಬೆಲೆ ತೆರುವ ಬದಲು ವ್ಯಾಪಾರಿ ಗಳು ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ಆಸಕ್ತಿ ತೋರುತ್ತಾರೆ’ ಎನ್ನು ತ್ತಾರೆ ಕೆಂಗೇರಿಯ ಪ್ಲಾಸ್ಟೊ ಮ್ಯಾನುಫ್ಯಾಕ್ಚರರ್ಸ್‌ ಕಂಪನಿಯ ಮಾಲೀಕ ಅಷ್ಪಾಕ್‌ ಅಹಮದ್‌. ‘ಬಯೋ ಪ್ಲಾಸ್ಟಿಕ್‌ ಬಳಕೆ ಹೆಚ್ಚಿದರೆ ಅವುಗಳ ಬೆಲೆಯೂ ಕಡಿಮೆ ಆಗಲಿದೆ. ಅದರ ಕಚ್ಚಾ ವಸ್ತುವನ್ನು ಆಮದು ಮಾಡಿಕೊಳ್ಳಬೇಕಿದೆ. ಈಗಿರುವ ಪ್ಲಾಸ್ಟಿಕ್‌ ತಯಾರಿ ಘಟಕಗಳನ್ನೇ ಬಯೋಪ್ಲಾಸ್ಟಿಕ್‌ ಘಟಕಗಳನ್ನಾಗಿ ಪರಿವರ್ತಿಸಬಹುದು. ಇದಕ್ಕೆ ಸರ್ಕಾರ ಉತ್ತೇಜನ ನೀಡಬೇಕು’ ಎಂದರು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT