ಸೋಮವಾರ, ಜುಲೈ 26, 2021
24 °C

ಅನಕ್ಷರ ಪರಂಪರೆಯ ಅಪ್ರತಿಮ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌

ಡಾ. ಎಂ.ಪ್ರಭಾಕರ ಜೋಶಿ Updated:

ಅಕ್ಷರ ಗಾತ್ರ : | |

ಮಂಗಳೂರು: ಔಪಚಾರಿಕ ಶಿಕ್ಷಣದ ಹಂಗನ್ನು ಮೀರಿ ಜ್ಞಾನ, ಕಲೆಯನ್ನು ವಶಮಾಡಿಕೊಂಡ ಜೀವನಪ್ರೀತಿಯ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌. ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಚಿಟ್ಟಾಣಿ, ಕೆರೆಮನೆ ಪರಂಪರೆಗಳು ರಾರಾಜಿಸುತ್ತಿದ್ದ ಕಾಲದಲ್ಲಿ ಅವರ ಪ್ರಭಾವದಿಂದಲೇ ಕಲಿಯುತ್ತ ಮುಂದುವರಿದರೂ ಅನುಕರಣಶೀಲರಾಗದೇ ತಮ್ಮದೇ ಶೈಲಿಯನ್ನು ರೂಪಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌ ನಿಧನ

ಅವರು ಅನಕ್ಷರಸ್ಥ ಪರಂಪರೆಯ ಕಲಾವಿದರು ಎಂದರೆ ಹಗುರವಾದೀತು. ಆದರೆ, ಅಕ್ಷರದ ಮಿತಿಯನ್ನು ಮೀರಿ ಜ್ಞಾನಮುಖಿಯಾಗಿ ಬೆಳೆದು ನಿಂತವರು. ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೂ ಇದೇ ಪರಂಪರೆಯವರಾದ್ದರಿಂದ ಇಬ್ಬರ ಜೋಡಿ ರಂಗಸ್ಥಳದಲ್ಲಿ ಬಹುಕಾಲ ಜನಪ್ರಿಯವಾಗಿ ಗುರುತಿಸಿಕೊಂಡಿತ್ತು. ಇಬ್ಬರೂ ರಂಗದ ಮೇಲೆ ರಾರಾಜಿಸಲು ಪ್ರೇರಣಾ ಶಕ್ತಿಯಾದವರು ಕಡತೋಕ ಮಂಜುನಾಥ ಭಾಗವತರು.

ಬಡಗಿನಲ್ಲಿ ಅರಳಿದ ಅವರ ಪ್ರತಿಭೆ ತೆಂಕುತಿಟ್ಟಿನ ಸುರತ್ಕಲ್‌ ಮೇಳಕ್ಕೆ ಸೇರಿದಾಗ ಮಹತ್ತರ ತಿರುವು ಪಡೆಯಿತು. ಈ ಮೇಳದ ಜನಪ್ರಿಯ ಪ್ರಸಂಗ ಶನೀಶ್ವರ ಮಹಾತ್ಮೆಯಲ್ಲಿ ‘ಶನಿ’ ಪಾತ್ರಕ್ಕೆ ತಮ್ಮದೇ ಆದ ಶೈಲಿಯಲ್ಲಿ ಜೀವ ತುಂಬಿದರು. ಶೇಣಿ ಗೋಪಾಲಕೃಷ್ಣ ಭಟ್ಟರು, ತೆಕ್ಕಟ್ಟೆ ಆನಂದ ಮಾಷ್ಟ್ರು, ಶಿವರಾಮ ಜೋಗಿ ಅವರಂತಹ ಪ್ರಮುಖ ಕಲಾವಿದರು ಸುರತ್ಕಲ್‌ ಮೇಳದಲ್ಲಿ ಇದ್ದ ಆ ಕಾಲದಲ್ಲಿ ಜಲವಳ್ಳಿ ವರ್ಚಸ್ವಿ ಕಲಾವಿದರಾಗಿ ಗುರುತಿಸಿಕೊಂಡರು. ಅಂತಹ ವಿಶೇಷ ಸಾಮರ್ಥ್ಯ ಅವರಲ್ಲಿತ್ತು.

ಅಗಲವಾದ ಮುಖವಾದ್ದರಿಂದ ಅವರ ಅಭಿನಯ ತೀವ್ರರೂಪದಲ್ಲಿ ವ್ಯಕ್ತವಾಗುತ್ತಿತ್ತು. ರಂಗ ಪ್ರವೇಶಿಸುವಾಗಲೇ ಹಾಸುಬೀಸಿನ ಕೈಕರಣದೊಂದಿಗೆ ರಂಗಸ್ಥಳವನ್ನು ತುಂಬುವ ಚತುರ. ವಜನಿನ ಸ್ವರ. ಪಾತ್ರಗಳ ಇತಿಮಿತಿಯನ್ನು ಮೀರದ ನಿಜಕಲಾವಿದ. ಸುಂದರವಾದ ಬಣ್ಣಗಾರಿಕೆ ಮಾಡಬಲ್ಲ ಕೌಶಲ ಅವರ ಬೆರಳುಗಳಲ್ಲಿದ್ದವು. ಪುಟ್ಟಪುಟ್ಟ ವಾಕ್ಯಗಳಲ್ಲಿ ಪರಿಣಾಮಕಾರೀ ಮಾತುಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಷಯ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಗುತ್ತಿದ್ದರು. ಗದಾ ಪರ್ವದ ಭೀಮ, ಕೀಚಕ ವಧೆಯ ವಲಲ, ಭಸ್ಮಾಸುರ ಮೋಹಿನಿಯಲ್ಲಿ ಈಶ್ವರ, ಭೃಗು ಲಾಂಛನದ ಕತೆಯಲ್ಲಿ ಭೃಗುಮುನಿಯ ಪಾತ್ರಗಳ ಮೂಲಕ ಅವರು ಜನಪ್ರಿಯರು. ಕಾರ್ತವೀರ್ಯಾರ್ಜುನ, ರಾವಣ, ಕೌರವ ಮುಂತಾಗಿ ಪ್ರತಿನಾಯಕನ ಪಾತ್ರಗಳಲ್ಲಿಯೂ ಅವಿಕಾರವಾದ ಪ್ರಸ್ತುತಿಯನ್ನು ಮಾಡುವ ಕಲೆಗಾರಿಕೆ ಅವರದಾಗಿತ್ತು.

ಪಾಪಣ್ಣ ವಿಜಯ ಗುಣಸುಂದರಿ ಪ್ರಸಂಗದಲ್ಲಿ ಅವರು ಗುಣಸುಂದರಿಯ ತಂದೆ ಶೂರಸೇನನ ಪಾತ್ರವನ್ನು ವಾತ್ಸಲ್ಯಮಯೀ ತಂದೆಯಾಗಿ ನಿರ್ವಹಿಸುತ್ತಿದ್ದರು. ಅವರ ಜನಪದ ಜ್ಞಾನವನ್ನು ಅನ್ವಯಿಸಿ ಮೂವರು ಮಕ್ಕಳ ಪಾತ್ರವನ್ನು ವ್ಯಾಖ್ಯಾನಿಸಬಲ್ಲವರಾಗಿದ್ದರು. ಉತ್ತರ ಕನ್ನಡದ ಶೈಲಿಯಲ್ಲಿ ಗಾದೆಗಳ ಮೇಲೆ ಗಾದೆ ಹೇಳುತ್ತ ಆ ಸನ್ನಿವೇಶವನ್ನು ಬಹಳ ರಸಮಯವನ್ನಾಗಿ ಮಾಡಿಬಿಡುತ್ತಿದ್ದರು.  

ಕಾಲ ಬದಲಾದಂತೆ ಹೊಸ ಶೈಲಿಯ ಪ್ರಸಂಗಗಳು ಯಕ್ಷಗಾನವನ್ನು ಪ್ರವೇಶಿಸಿದವು. ಓದುವುದು ಅವರಿಗೆ ಸವಾಲಾಗಿದ್ದರೂ, ಹೊಸ ರೀತಿಯ ಪಾತ್ರಗಳನ್ನು ಮಾಡುವ ಸವಾಲನ್ನು ಅವರು ಯಶಸ್ವಿಯಾಗಿ ಎದುರಿಸಿದರು. ಆ ಮಟ್ಟಿಗೆ ಅವರು ಬಹುಶ್ರುತರು. ಹೊಸತನವನ್ನು ಗ್ರಹಿಸಬಲ್ಲ ಜಾಣ್ಮೆ ಅವರಿಗಿತ್ತು.

ತೆಂಕುತಿಟ್ಟಿನಲ್ಲಿ ಸುಮಾರು ಎಂಟು ವರ್ಷ ಕಾಲ ತಿರುಗಾಟ ಮಾಡಿದ ಬಳಿಕ ಮತ್ತೆ ಬಡಗುತಿಟ್ಟಿನತ್ತ ಮುಖ ಮಾಡಿದರು. ಆಗ ಅವರಿಗೆ ಕೆರೆಮನೆ ಮಹಾಬಲ ಹೆಗಡೆ ಅವರ ಸಖ್ಯ ದೊರೆಯಿತು. ಜೀವನಾನುಭವ, ಕಲಾಜ್ಞಾನದ ಜೊತೆಗೆ ಹೊಸದೊಂದು ಸಂಸ್ಕಾರದ ಒಡನಾಟ ಅವರೊಳಗಿನ ಕಲಾವಿದನನ್ನು ಮತ್ತಷ್ಟು ಪಕ್ವಗೊಳಿಸಿತು. ಅವರೊಡನೆ ಹಲವು ಬಾರಿ ಪಾತ್ರ ಮಾಡಿದ್ದೇನೆ. ಸ್ನೇಹವನ್ನು ಮನದುಂಬಿ ಆನಂದಿಸುವ ನಿಷ್ಕಲ್ಮಶ ಹೃದಯಿ ವ್ಯಕ್ತಿತ್ವ ಅವರದು. ಸದಾ ಹುಮ್ಮಸ್ಸಿನಲ್ಲಿರುವ ತನ್ನ ಸುತ್ತಮುತ್ತ ಪ್ರಫುಲ್ಲ ವಾತಾವರಣವನ್ನು ನಿರ್ಮಿಸಬಲ್ಲ ಆಹ್ಲಾದಕಾರೀ ವ್ಯಕ್ತಿ ಅವರು. 

ಲೇಖಕ ಯಕ್ಷಗಾನ ವಿದ್ವಾಂಸ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು