ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರನ್ನೇ ಹೆಚ್ಚು ಕಾಡುತ್ತಿದೆ ಕೋವಿಡ್

60 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಅಪಾಯ * ಕ್ಯಾನ್ಸರ್‌ ತಜ್ಞ ಡಾ. ವಿಶಾಲ್ ರಾವ್ ನೇತೃತ್ವದಲ್ಲಿ ಅಧ್ಯಯನ
Last Updated 23 ಮೇ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ನಮಗೆ ಏನು ಮಾಡಲಾರದು ಎಂದು ಯುವಜನರಲ್ಲಿರುವ ತಪ್ಪು ಕಲ್ಪನೆಯೇ ಈಗ ಕೋವಿಡ್‌ ಪೀಡಿತರಾಗಿ ಆಸ್ಪತ್ರೆ ಸೇರುವಂತೆ ಮಾಡಿದೆ. ಅದೃಷ್ಟವಶಾತ್ ಅವರು ಚೇತರಿಸಿಕೊಂಡು ಮನೆಗೆ ತೆರಳುತ್ತಿದ್ದರೂ ಅವರ ಸಂಪರ್ಕದಿಂದ ಮನೆಯಲ್ಲಿನ ವೃದ್ಧರು ಸೋಂಕಿತರಾಗಿ ಸಾವು ಬದುಕಿನ ನಡುವೆ ನರಳುತ್ತಿದ್ದಾರೆ.

ಕ್ಯಾನ್ಸರ್ ತಜ್ಞ ಡಾ.ಯು.ಎಸ್. ವಿಶಾಲ್ ರಾವ್ ಹಾಗೂ ಸುಬ್ರಮಣಿಯನ್ ಸಿರಿಲಾಲ್ ಅವರು ಕೋವಿಡ್ ಬಗ್ಗೆ ನಡೆಸಿದ ಸಂಶೋಧನಾ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅವರು ರಾಜ್ಯ ಹಾಗೂ ದೇಶದಲ್ಲಿ ವರದಿಯಾದ ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ 244 ಮಾದರಿಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 20ರಿಂದ 49 ವಯಸ್ಸಿನವರು ಸೋಂಕಿತರಾಗುತ್ತಿರುವುದು ತಿಳಿದುಬಂದಿದೆ. 60 ವರ್ಷ ಮೇಲ್ಪಟ್ಟವರು ಚೇತರಿಸಿಕೊಳ್ಳಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕೊರೊನಾ ಸೋಂಕಿತ ಮಕ್ಕಳು ಚೇತರಿಸಿಕೊಳ್ಳಲು ಸರಾಸರಿ 17.5 ದಿನಗಳನ್ನು ತೆಗೆದುಕೊಳ್ಳುತ್ತಿದ್ದರೇ, 70ರಿಂದ 80 ವರ್ಷದವರು 19.5 ದಿನಗಳಲ್ಲಿ ಗುಣಮುಖರಾಗುತ್ತಿದ್ದಾರೆ. ರಾಜ್ಯದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 60 ರಷ್ಟು ಮಂದಿ ಯುವಜನರೇ ಆಗಿದ್ದಾರೆ.

‘ಬಹುತೇಕ ಯುವಜನರಲ್ಲಿ ಕೊರೊನಾ ಸೋಂಕು ನಮಗೆ ಬಾಧಿಸುವುದಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಇದರಿಂದಾಗಿಯೇ ಅವರ ಜತೆಗೆ ಮನೆಯಲ್ಲಿರುವ ಕುಟುಂಬದ ಸದಸ್ಯರೂ ಸೋಂಕಿತರಾಗುತ್ತಿದ್ದಾರೆ. ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ತಪ್ಪಿಸಬೇಕು. ನಾವು ಸುರಕ್ಷಿತವಾಗಿದ್ದರೆ ಮಾತ್ರ ಮನೆಯಲ್ಲಿನ ತಂದೆ–ತಾಯಿ ಸೇರಿದಂತೆ ಕುಟುಂಬದ ಸದಸ್ಯರು ಆರೋಗ್ಯದಿಂದ ಇರಲು ಸಾಧ್ಯ ಎನ್ನುವುದನ್ನು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು’ ಎಂದು ಡಾ.ಯು.ಎಸ್.ವಿಶಾಲ್ ರಾವ್ ತಿಳಿಸಿದರು.

‘60 ವರ್ಷ ಮೇಲ್ಪಟ್ಟವರು ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ವರ್ಗದವರಿಗೆ ಸೋಂಕು ತಗುಲಿದಲ್ಲಿ ಅವರು ಚೇತರಿಸಿಕೊಳ್ಳಲು ಹಲವು ದಿನಗಳು ಬೇಕಾಗುತ್ತವೆ. ಕೇಲವು ವೇಳೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಕೂಡ ಇದೆ’ ಎಂದರು.

ವಯಸ್ಸಾದವರ ಜೀವನ ಉಳಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿ, ವೈಯಕ್ತಿಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದುಸಂಶೋಧಕ ಹಾಗೂ ಕ್ಯಾನ್ಸರ್ ತಜ್ಞ ಡಾ.ಯು.ಎಸ್. ವಿಶಾಲ್ ರಾವ್ ಪ್ರತಿಕ್ರಿಯಿಸಿದರು.

20ರಿಂದ 40 ವರ್ಷ

* ಒಟ್ಟು ಕೋವಿಡ್ ಪೀಡಿತರಲ್ಲಿ ಶೇ 60 ರಷ್ಟು ಮಂದಿ ಇದೇ ವಯೋಮಾನದವರು

*ಈ ವಯೋಮಾನದವರೇ ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿದ್ದಾರೆ

* ಸರಾಸರಿ 17.5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ

50ರಿಂದ 59 ವರ್ಷ

* ಒಟ್ಟು ಪ್ರಕರಣಗಳಲ್ಲಿ ಈ ವಯೋಮಾನದವರು ಶೇ 10 ರಷ್ಟು ಇದ್ದಾರೆ

* ಚೇತರಿಕೆ ಪ್ರಮಾಣ ಶೇ 23 ರಷ್ಟು ಇದೆ

* ಸರಾಸರಿ 19.6 ದಿನಗಳಲ್ಲಿ ಗುಣಮುಖರಾಗುತ್ತಿದ್ದಾರೆ

60ರಿಂದ 69 ವರ್ಷ

* ಈ ವಯೋಮಾನದವರಲ್ಲಿ ಗುಣಮುಖರಾದವರ ಪ್ರಮಾಣ ಅತ್ಯಂತ ಕಡಿಮೆಯಿದೆ

*ಸರಾಸರಿ 16.85 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ

70ರಿಂದ 80 ವರ್ಷ

* ಗುಣಮುಖರಾಗುವವರ ಪ್ರಮಾಣ ಶೇ 22.22 ರಷ್ಟು ಇದೆ

* ಮರಣ ಪ್ರಮಾಣ ಶೇ 30.76 ರಷ್ಟು ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT