ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಭದ್ರತಾ ಕಾನೂನಿಗೆ ಚೀನಾ ಅನುಮೋದನೆ

ಹಾಂಗ್‌ಕಾಂಗ್‌ನ ಪ್ರತಿಭಟನಕಾರರನ್ನು ನಿಗ್ರಹಿಸುವ ಗುರಿ
Last Updated 30 ಜೂನ್ 2020, 8:05 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ವಿಧ್ವಂಸಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಿಗ್ರಹಿಸಲು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವಂಥ ವಿವಾದಾತ್ಮಕ ಕಾನೂನಿಗೆ ಚೀನಾ ಅನುಮೋದನೆ ನೀಡಿದೆ ಎಂದು ಹಾಂಗ್‌ಕಾಂಗ್‌ನ ಮಾಧ್ಯಮಗಳು ವರದಿ ಮಾಡಿವೆ.

ಇದರಿಂದ, ಅರೆಸ್ವಾಯತ್ತ ನಗರವಾಗಿರುವ ಹಾಂಗ್‌ಕಾಂಗ್‌ನಲ್ಲಿ ವಿರೋಧದ ಧ್ವನಿಯನ್ನು ಅಡಗಿಸಲು ಈ ಕಾನೂನನ್ನು ಚೀನಾ ಬಳಸಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

‘ಹಾಂಗ್‌ಕಾಂಗ್‌ ಗಾಗಿ ರೂಪಿಸಿರುವ ರಾಷ್ಟ್ರೀಯ ಭದ್ರತಾ ಕಾನೂನನ್ನು ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯು ಅವಿರೋಧವಾಗಿ ಅಂಗೀಕರಿಸಿದೆ’ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ದಿ ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್‌ ಪತ್ರಿಕೆ ಹಾಗೂ ಸಾರ್ವಜನಿಕ ವಾರ್ತಾ ಪ್ರಚಾರ ಸಂಸ್ಥೆ ಆರ್‌ಟಿಎಚ್‌ಕೆ ಹೇಳಿವೆ. ಚೀನಾ ಸರ್ಕಾರವಾಗಲಿ, ಹಾಂಗ್‌ಕಾಂಗ್‌ ಸರ್ಕಾರವಾಗಲಿ ಇದನ್ನು ಖಚಿತಪಡಿಸಿಲ್ಲ.

ರಾಷ್ಟ್ರೀಯ ಭದ್ರತಾ ಕಾನೂನಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ಹಾಂಗ್‌ಕಾಂಗ್‌ ನಾಯಕಿ ಕೆರ್ರಿ ಲ್ಯಾಮ್‌, ‘ಸ್ಥಾಯಿ ಸಮಿತಿ ಸಭೆಯು ಇನ್ನೂ ಮುಗಿಯದಿರುವುದರಿಂದ ಈಗಲೇ ಹೇಳಿಕೆ ನೀಡುವುದು ಸೂಕ್ತವಲ್ಲ’ ಎಂದಿದ್ದಾರೆ.

ವಿಧ್ವಂಸಕ, ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಿಗ್ರಹಿಸುವುದು ಮತ್ತು ನಗರದ ಆಗುಹೋಗುಗಳಲ್ಲಿ ವಿದೇಶಿಯರ ಹಸ್ತಕ್ಷೇಪವನ್ನು ತಡೆಯುವುದು ಈ ಶಾಸನದ ಉದ್ದೇಶವಾಗಿದೆ. ಹಾಂಗ್‌ಕಾಂಗ್‌ನಲ್ಲಿ ಕಳೆದ ವರ್ಷ ಹಲವು ತಿಂಗಳ ಕಾಲ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಗಳನ್ನು ಹಿನ್ನೆಲೆಯಲ್ಲಿಟ್ಟು ಈ ಕಾನೂನನ್ನು ರೂಪಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT