ಭಾನುವಾರ, ಆಗಸ್ಟ್ 1, 2021
27 °C

Covid-19 World Update| ವಿಶ್ವದಲ್ಲಿ ಈಗ ಹೇಗಿದೆ ‘ಕೋವಿಡ್‌’ ಪರಿಸ್ಥಿತಿ?

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದಲ್ಲಿ ಗುರುವಾರ 55,000 ಕ್ಕೂ ಹೆಚ್ಚು ಹೊಸ ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇದು, ಈ ವರೆಗೆ ರಾಷ್ಟ್ರವೊಂದರಲ್ಲಿ ಪತ್ತೆಯಾದ ದಿನವೊಂದರ ಅತ್ಯಧಿಕ ಸಂಖ್ಯೆಯ ಪ್ರಕರಣಗಳಾಗಿವೆ.

ಇದಕ್ಕೂ ಹಿಂದೆ ಬ್ರೆಜಿಲ್‌ನಲ್ಲಿ ಜೂನ್‌ 19ರಂದು 54,771  ಕೊರೊನಾ ವೈರಸ್‌ ಸೋಂಕು ಪ್ರಕರಣಗಳನ್ನು ವರದಿಯಾಗಿತ್ತು. ಈ ದಾಖಲೆಯನ್ನು ಅಮೆರಿಕ ಇಂದು ಮೀರಿದೆ. ಕೇವಲ 24 ಗಂಟೆಗಳಲ್ಲಿ ಅಮೆರಿಕದಲ್ಲಿ 55,274  ಸೋಂಕು ಪ್ರಕರಣಗಳು ವರದಿಯಾಗಿವೆ. ಸದ್ಯ ಅಲ್ಲಿ ಸೋಂಕಿತರ ಸಂಖ್ಯೆ 27,35,554ಕ್ಕೆ ಏರಿದೆ. 

ಗುರುವಾರ ಅಮೆರಿಕದಲ್ಲಿ 649 ಸಾವು ಸಂಭವಿಸಿದ್ದು, ಒಟ್ಟಾರೆ ಮೃತರ ಸಂಖ್ಯೆ 1,28,684 ಕ್ಕೆ ಏರಿದೆ. 

ಅಮೆರಿಕದ 50 ರಾಜ್ಯಗಳ ಪೈಕಿ ಈಗ 40 ರಾಜ್ಯಗಳಲ್ಲಿ ಸೋಂಕು ವ್ಯಾಪಿಸಿದೆ. 

ಕ್ವಾರಂಟೈನ್‌ ನಿಯಮ ಸಡಿಲಿಸಿದ ಇಂಗ್ಲೆಂಡ್‌ 

ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿಯಿಂದ ಆಗಮಿಸುವವರಿಗೆ ಜುಲೈ 10 ರಿಂದ ಕ್ವಾರಂಟೈನ್‌ ಅಗತ್ಯವಿಲ್ಲ ಎಂದು ಬ್ರಿಟಿಷ್ ಸರ್ಕಾರ ಶುಕ್ರವಾರ ಘೋಷಿಸಿದೆ. ಜಾನ್‌ ಹಾಪ್‌ಕಿನ್ಸ್‌ ವೆಬ್‌ಸೈಟ್‌ ಪ್ರಕಾರ ಬ್ರಿಟನ್‌ನಲ್ಲಿ 2,85,266 ಪ್ರಕರಣಗಳಿದ್ದು, 44,080 ಮಂದಿ ಮೃತಪಟ್ಟಿದ್ದಾರೆ. ಈ ಮೊದಲು ಬ್ರಿಟನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹರಡಿತ್ತು. ಆದರೆ, ಸೂಕ್ತ ಕ್ರಮಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಕೆಲ ದೇಶಗಳ ನಾಗರಿಕರಿಗೆ ಅದು ಕ್ವಾರಂಟೈನ್‌ ನಿಮಯ ಸಡಿಲಿಸಿದೆ. 

ಸೆಪ್ಟೆಂಬರ್‌ನಿಂದ ಶಾಲೆ 

ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಇದರ ಮಧ್ಯೆಯೇ ಸೆಪ್ಟೆಂಬರ್‌ನಿಂದ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ. ವಾದ ಚರ್ಚೆಗಳ ನಂತರ ಎಲ್ಲರಿಗೂ ಒಪ್ಪಿಗೆಯಾಗುವಂತೆ ಸೆಪ್ಟೆಂಬರ್‌ನಿಂದ ಶಾಲೆಗಳು ಆರಂಭವಾಗಲಿವೆ. 

ತನ್ನ ದೇಶವನ್ನು ಹೊಗಳಿಕೊಂಡ ಕಿಮ್‌ 

ಇಡೀ ವಿಶ್ವವೇ ಕೊರೊನಾ ವೈರಸ್‌ಗೆ ತುತ್ತಾಗಿದ್ದರೂ, ಉತ್ತರ ಕೊರಿಯಾ ಮಾತ್ರ ಕೋವಿಡ್‌ ಅನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಹೇಳಿಕೊಂಡಿದ್ದಾರೆ. ನಾವು ಕೈಗೊಂಡ ಕ್ರಮಗಳಿಂದಾಗಿ ಉತ್ತರ ಕೊರಿಯಾದಲ್ಲಿ ಕೊರೊನಾ ವೈರಸ್‌ ನಿಗ್ರಹಗೊಂಡಿದೆ ಎಂದು ಕಿಮ್‌ ಹೇಳಿರುವುದಾಗಿ ಅಲ್ಲಿನ ಸರ್ಕಾರಿ ಹಿಡಿತದ ಮಾಧ್ಯಮ ಕೆಸಿಎನ್‌ಎ ವರದಿ ಮಾಡಿದೆ. 

ಲಾಕ್‌ಡೌನ್‌ ನಿಯಮ ಜಾರಿಗೆ ಯೋಧರನ್ನು ನಿಯೋಜಿಸಿದ ದಕ್ಷಿಣ ಆಫ್ರಿಕ 

ಕೊರೊನಾ ವೈರಸ್‌ ನಿಯಂತ್ರಿಸಲು ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ನಿಯಮಗಳನ್ನು ಜಾರಿಗೊಳಿಸಲು ದಕ್ಷಿಣ ಆಫ್ರಿಕ 20 ಸಾವಿರ ಸೈನಿಕರನ್ನು ದೇಶದ ವಿವಿಧ ಭಾಗಗಳಲ್ಲಿ ನಿಯೋಜಿಸಿದೆ. ಈ ವಿಚಾರವನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಸಂಸತ್‌ನಲ್ಲಿ ಹೇಳಿದ್ದಾರೆ. ಸೆ. 30ರ ವರೆಗೆ ಇದು ಮಂದುವರಿಯಲಿದೆ ಎಂದೂ ಅವರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಗುರುವಾರ 8,728 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,68,061ಕ್ಕೆ ಏರಿದೆ. ಅಲ್ಲಿ 2,844 ಮಂದಿ ಮೃತಪಟ್ಟಿದ್ದಾರೆ. 

ವೈರಸ್‌ ತಾಂಡವವಾಡುತ್ತಿದ್ದರೂ ಬ್ರೆಜಿಲ್‌ನಲ್ಲಿ ಬಾರ್‌ಗಳು ಕಾರ್ಯಾರಂಭ

ಬ್ರೆಜಿಲ್‌ನಲ್ಲಿ ಈ ವರೆಗೆ 14,96,858 ಸೋಂಕು ಪ್ರಕರಣಗಳು ವರದಿಯಾಗಿದೆ. 61,884 ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಗುರುವಾರದಿಂದ ಅಲ್ಲಿ ಬಾರ್‌, ರೆಸ್ಟೊರೆಂಟ್‌ಗಳು ತೆರೆಯಲು ಆದೇಶಿಸಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದೆ. 

ಅತಿ ಹೆಚ್ಚು ಸೋಂಕು ಹೊಂದಿರುವ ರಾಷ್ಟ್ರಗಳು 

  1. ಅಮೆರಿಕ–27,35,554 
  2. ಬ್ರೆಜಿಲ್‌–14,96,858 
  3. ರಷ್ಯಾ–6,60,231 
  4. ಭಾರತ–6,04,641 
  5. ಪೆರು–2,92,004 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು