ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜಾಗತಿಕ ಮಟ್ಟದ ಜವಾಬ್ದಾರಿಯುತ ರಾಷ್ಟ್ರ: ವಿಶ್ವಸಂಸ್ಥೆ

Last Updated 6 ಜುಲೈ 2020, 7:10 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಭಾರತ ಜವಾಬ್ದಾರಿಯುತ ರಾಷ್ಟ್ರವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯನಾಗಿ ವಿವಿಧ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲದು’ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಮಹಮ್ಮದ್‌ ಬಂದೆ ಹೇಳಿದ್ದಾರೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ಚತವಲ್ಲದ ಸದಸ್ಯ ಸ್ಥಾನಕ್ಕೆ ಭಾರತವು ಕಳೆದ ತಿಂಗಳು ಆಯ್ಕೆಯಾಗಿತ್ತು. ಈ ಸದಸ್ಯತ್ವವು ಎರಡು ವರ್ಷ ಅವಧಿಯದ್ದಾಗಿದ್ದು, 2021ರ ಜನವರಿಯಿಂದ ಆರಂಭವಾಗಲಿದೆ. ಸಾಮಾನ್ಯ ಸಭೆಯ 192 ಸದಸ್ಯ ರಾಷ್ಟ್ರಗಳ 184 ಮತಗಳನ್ನು ಪಡೆಯುವ ಮೂಲಕ ಭಾರತವು ಆಯ್ಕೆಯಾಗಿತ್ತು.

‘ತಂತ್ರಜ್ಞಾನ, ಜನಸಂಖ್ಯೆ, ಚಿಂತನೆ ಮುಂತಾದ ದೃಷ್ಟಿಯಿಂದ ಭಾರತವು ಜಗತ್ತಿನ ಅತ್ಯಂತ ಪ್ರಮುಖ ರಾಷ್ಟ್ರವಾಗಿದೆ. ಅಂತರರಾಷ್ಟ್ರೀಯ ಮಟ್ಟದ ಹಲವು ವೇದಿಕೆಗಳ ಸದಸ್ಯತ್ವ ಹೊಂದಿರುವ ಭಾರತವು, ತನ್ನ ಚಿಂತನೆಗಳ ಮೂಲಕ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೂ ಮಹತ್ವದ ಕಾಣಿಕೆ ನಿಡಬಲ್ಲದು. ಭಾರತವು ತನ್ನ ಪ್ರದೇಶದ ರಾಷ್ಟ್ರಗಳಷ್ಟೇ ಅಲ್ಲ, ಇತರ ರಾಷ್ಟ್ರಗಳ ಅಭಿವೃದ್ಧಿಗೂ ಮಹತ್ವದ ಕಾಣಿಕೆಯನ್ನು ನೀಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

‘ಕಾಮನ್‌ವೆಲ್ತ್‌, ಅಲಿಪ್ತ ರಾಷ್ಟ್ರಗಳ ಒಕ್ಕೂಟ, ಜಿ77 ಮುಂತಾದ ಸಂಘಟನೆಗಳಲ್ಲಿ ಭಾರತವು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಆ ಸಂಘಟನೆಗಳಿಗೆ ಪ್ರಾಮುಖ್ಯತೆ ಇರುವ ಪ್ರದೇಶದಲ್ಲಿ ಭಾರತವು ಪರಿಣಾಮ ಉಂಟುಮಾಡಬಲ್ಲದು ಎಂದು’ ಬಂದೆ ಅಭಿಪ್ರಾಯಪಟ್ಟರು.

ಕೋವಿಡ್‌–19ಗೆ ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಭಾರತವು ಯಾವರೀತಿ ವಿಶ್ವಸಂಸ್ಥೆಗೆ ನೆರವು ಒದಗಿಸಬಲ್ಲದು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ‘ಭಾರತವು ತನ್ನ ನೆರೆರಾಷ್ಟ್ರಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಈ ದಿಕ್ಕಿನಲ್ಲಿ ನೆರವಾಗಬಲ್ಲದು. ತನ್ನ ಪ್ರದೇಶದ ರಾಷ್ಟ್ರಗಳ ಜತೆಗೆ ಮತ್ತು ಕಾಮನ್‌ವೆಲ್ತ್‌ ರಾಷ್ಟ್ರಗಳಲ್ಲಿ ಭಾರತ ಪ್ರಭಾವಿಯಾಗಿದೆ. ಈಗ ವಿಶ್ವಸಂಸ್ಥೆಯಲ್ಲೂ ಸದಸ್ಯನಾಗಿರುವುದರಿಂದ ಜಾಗತಿಕ ಸಮುದಾಯಕ್ಕೆ ಸೇವೆ ಸಲ್ಲಿಸಲು ಭಾರತಕ್ಕೆ ಅವಕಾಶ ಲಭಿಸಿದೆ. ಲಸಿಕೆಗಳು ಇತರರಾಷ್ಟ್ರಗಳಿಗೂ ಲಭ್ಯವಾಗುವಂತೆ ಮಾಡಬೇಕು ಎಂಬ ನಿರ್ಣಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT