ಮಂಗಳವಾರ, ಜುಲೈ 27, 2021
28 °C

ಪಾಕಿಸ್ತಾನದಲ್ಲಿರುವ‌ ‘ಕಪೂರ್ ಹವೇಲಿ’ಗೆ ಮತ್ತೆ ಆಪತ್ತು!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೆಶಾವರ (ಪಾಕಿಸ್ತಾನ): ಹಿಂದಿ ಚಿತ್ರರಂಗದ ‘ಗ್ರೇಟ್‌ ಶೋಮ್ಯಾನ್‌’ ದಿ.ರಾಜ್‌ ಕಪೂರ್‌ ಪೂರ್ವಿಕರು ವಾಸವಿದ್ದ ಪಾಕಿಸ್ತಾನದ ಪೆಶಾವರದಲ್ಲಿರುವ  ‘ಕಪೂರ್‌ ಹವೇಲಿ’ಗೆ ಮತ್ತೆ ಆಪತ್ತು ಎದುರಾಗಿದೆ.

ಕಪೂರ್ ಕುಟುಂಬದ ಮೂಲತಃ ಇಂದಿನ ಪಾಕಿಸ್ತಾನದ ಪೆಶಾವರದವರು. ದೇಶ ವಿಭಜನೆಯ ಬಳಿಕ 1948ರಲ್ಲಿ ಕಪೂರ್‌ ಕುಟುಂಬ ಭಾರತಕ್ಕೆ ವಲಸೆ ಬಂದಿತ್ತು. ರಾಜ್‌ ಕಪೂರ್‌ ಅವರ ಅಜ್ಜ ದಿವಾನ್‌ ಬಶೇಶ್ವರನಾಥ್ ಈ ಹವೇಲಿಯನ್ನುನಿರ್ಮಿಸಿದ್ದರು. ರಾಜ್‌ ಕಪೂರ್ ತಂದೆ ಪೃಥ್ವಿರಾಜ್‌ ಕಪೂರ್‌ 1924ರಲ್ಲಿ ಇದೇ ಮನೆಯಲ್ಲಿ ಜನಿಸಿದ್ದರು.

ಪೆಶಾವರದಲ್ಲಿದ್ದ ಕಪೂರ್‌ ಕುಟುಂಬದ ಈ ಸುಂದರವಾದ ಬಂಗಲೆಯನ್ನು ರಾಜ್‌ ಕಪೂರ್‌ ಸ್ಮರಣಾರ್ಥ ವಸ್ತುಸಂಗ್ರಹಾಲಯ ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿತ್ತು. ಕಾರಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ. ಇದು ದಶಕಗಳ ಹಿಂದಿನ ಮಾತು.

ಪೆಶಾವರದ ಹೃದಯಭಾಗ ಕಿಸ್ಸಾ ಖ್ವಾನಿ ಬಜಾರ್‌ನಲ್ಲಿರುವ ಈ ಐತಿಹಾಸಿಕ ಕಟ್ಟಡದ ನಿವೇಶನ ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತದೆ. ಸದ್ಯ ಈ ಹವೇಲಿ ಚಿನ್ನಾಭರಣ ವರ್ತಕ ಹಾಜಿ ಮಹಮ್ಮದ್ ಇಸ್ರಾರ್ ಒಡೆತನದಲ್ಲಿದೆ. ಶತಮಾನದಷ್ಟು ಹಳೆಯದಾದ ಈ ಪುರಾತನ ಹವೇಲಿ ಮಳೆ, ಗಾಳಿ ಮತ್ತು ಭೂಕಂಪನದಿಂದ ಶಿಥಿಲ ಸ್ಥಿತಿಯಲ್ಲಿದೆ. ಕಟ್ಟಡವನ್ನು ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಇಸ್ರಾರ್‌ ಇರಾದೆ.  

2018ರಲ್ಲಿ ಪಾಕಿಸ್ತಾನ ಸರ್ಕಾರವು ಈ ಪಾರಂಪರಿಕ ಕಟ್ಟಡ ಖರೀದಿಸಿ, ರಾಜ್‌ ಕಪೂರ್‌ ಸ್ಮರಣಾರ್ಥ ಸಂಗ್ರಹಾಲಯ ಮಾಡಲು ನಿರ್ಧರಿಸಿತ್ತು.ಈ ಕುರಿತು ರಾಜ್ ಕಪೂರ್‌ ಪುತ್ರ, ನಟ ರಿಷಿ ಕಪೂರ್ ಕೂಡ ಅಂದಿನ‌ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಜತೆ ಮಾತನಾಡಿದ್ದರು. ಆದರೆ, ಹವೇಲಿ ಮಾಲೀಕ ಅತಿ ದುಬಾರಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಸರ್ಕಾರ ಕಟ್ಟಡ ಖರೀದಿಸುವ ನಿರ್ಧಾರದಿಂದ ಹಿಂದೆ ಸರಿಯಿತು. 

ಈ ಹಿಂದೆ ನಾಲ್ಕು ಬಾರಿ ಈ ಕಟ್ಟಡ ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಪ್ರಯತ್ನ ನಡೆದಿದ್ದವು. ಪುರಾತತ್ವ ಇಲಾಖೆ ಅಧಿಕಾರಿಗಳು ಕಟ್ಟಡದ ಮಾಲೀಕ ಇಸ್ರಾರ್‌ ವಿರುದ್ಧ  ದೂರು ದಾಖಲಿಸಿದ್ದರು. ಇದರಿಂದ ಕಟ್ಟಡ ಉಳಿದುಕೊಂಡಿತ್ತು.

ಪೆಶಾವರದ ಪ್ರಮುಖ ವಾಣಿಜ್ಯ ಕೇಂದ್ರದಲ್ಲಿರುವ ಕಾರಣದಿಂದಲೇ ‘ಕಪೂರ್‌ ಹವೇಲಿ’ಗೆ ಪದೇ ಪದೇ ಆಪತ್ತು ಬರುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದ ಕಾರಣ ಶಿಥಿಲ ಸ್ಥಿತಿಯಲ್ಲಿರುವ ಈ ಹವೇಲಿ ಯಾವಾಗ ಕುಸಿಯುತ್ತದೆಯೋ ಎಂಬ ಆತಂಕ ಇದೆ. 

ಹವೇಲಿಯನ್ನು ಸರ್ಕಾರಕ್ಕೆ ಬಿಟ್ಟು ಕೊಡಲು ಇಸ್ರಾರ್‌ ಐದು ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಇದನ್ನು ನಿರಾಕರಿಸಿರುವ ಅವರು‌, ’ನನ್ನ ಬಳಿ ಬೇಕಾದಷ್ಟು ಹಣವಿದೆ. ವಾರಕ್ಕೆ ಕನಿಷ್ಟ 120 ಕೆ.ಜಿಯಿಂದ 160 ಕೆ.ಜಿ ವರೆಗೆ ಚಿನ್ನ ಮಾರಾಟ ಮಾಡುತ್ತೇನೆ. ಇಲ್ಲಿ ಭವ್ಯವಾದ ವಾಣಿಜ್ಯ ಸಂಕಿರ್ಣ ಕಟ್ಟಿಸುವುದು ನನ್ನ ಆಸೆ‘ ಎಂದು‌ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು