ಬುಧವಾರ, ಆಗಸ್ಟ್ 4, 2021
24 °C

ಕೋವಿಡ್‌ ವಿರುದ್ಧ ನ್ಯೂಜಿಲೆಂಡ್‌ ಗೆದ್ದರೂ ಆರೋಗ್ಯ ಸಚಿವ ರಾಜೀನಾಮೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್‌: ವಿಶ್ವದ ಪ್ರಥಮ ಕೊರೊನಾ ಸೋಂಕು ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಕೋವಿಡ್‌–19 ನಿಯಂತ್ರಣಾ ಕ್ರಮಗಳಿಗಾಗಿ ಜಗತ್ತಿನೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿರುವ ನ್ಯೂಜಿಲೆಂಡ್‌ನ ಅರೋಗ್ಯ ಸಚಿವ ಡೇವಿಡ್‌ ಕ್ಲಾರ್ಕ್‌ ಗುರುವಾರ ರಾಜೀನಾಮೆ ನೀಡಿದ್ದಾರೆ.

ತಿಂಗಳ ಹಿಂದೆ ನ್ಯೂಜಿಲೆಂಡ್‌ನಲ್ಲಿ ಕೊರೊನಾ ವೈರಸ್‌ ಸಂಪೂರ್ಣ ನಿಗ್ರಹಗೊಂಡಿತ್ತು. ಈ ಮೂಲಕ ನ್ಯೂಜಿಲೆಂಡ್‌ ವಿಶ್ವದ ಪ್ರಥಮ ಕೋವಿಡ್‌ ಮುಕ್ತ ರಾಷ್ಟ್ರ ಎನಿಸಿಕೊಂಡಿತ್ತು. ಆ ನಂತರ ಅಲ್ಲಿ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿವೆಯಾದರೂ, ಅದು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಈ ಮಧ್ಯೆ, ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ, ನಿಯಮಾವಳಿಗಳಲ್ಲಿ ಎಸಗಿದ ಪ್ರಮಾದಗಳ ಕಾರಣಕ್ಕೆ ಕ್ಲಾರ್ಕ್‌ ರಾಜೀನಾಮೆ ಸಲ್ಲಿಸಿದ್ದಾರೆ.

ಕ್ಲಾರ್ಕ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಗುರುವಾರ ತಿಳಿಸಿದ್ದಾರೆ.

ರಾಷ್ಟ್ರದ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ಡೇವಿಡ್‌ ಕ್ಲಾರ್ಕ್‌ ತಮ್ಮ ಕುಟುಂಬವನ್ನು ಸಮುದ್ರ ತೀರಕ್ಕೆ ಪ್ರವಾಸಕ್ಕೆ ಕರೆದೊಯ್ದಿದ್ದರು. ಅಲ್ಲದೆ, ಮೌಂಟೇನ್‌ ಬೈಕಿಂಗ್‌ ಕೂಡ ಮಾಡಿದ್ದರು. ಲಾಕ್‌ಡೌನ್‌ ನಿಯಮಗಳನ್ನು ಮುರಿಯುತ್ತಿರುವ ತಮ್ಮ ನಡೆಗೆ ಸ್ವತಃ ಬೇಸರ ವ್ಯಕ್ತಪಡಿಸಿದ್ದ ಕ್ಲಾರ್ಕ್‌ ತಮ್ಮನ್ನು ‘ಮೂರ್ಖ (ಈಡಿಯಟ್‌)’ ಎಂದು ಕರೆದುಕೊಂಡಿದ್ದರು.

ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಾಕ್‌ಡೌನ್‌ ಮತ್ತು ಗಡಿ ನಿಯಮಗಳನ್ನು ಗಾಳಿಗೆ ತೂರಿ ನ್ಯೂಜಿಲೆಂಡ್‌ನ ಆರೋಗ್ಯ ಅಧಿಕಾರಿಗಳು ಇಬ್ಬರು ನಾಗರಿಕರಿಗೆ ತಮ್ಮ ಪೋಷಕರನ್ನು ನೋಡಲು ಅವಕಾಶ ನೀಡಿದ್ದರು. ನಂತರ ಆ ಇಬ್ಬರಲ್ಲೂ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿತ್ತು. ಇದು ದೇಶದಾದ್ಯಂತ ಭಾರಿ ಟೀಕೆಗೆ ಗುರಿಯಾಗಿತ್ತು.

ತಮ್ಮ ವೈಯಕ್ತಿಕ ಪ್ರಮಾದಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಪ್ಪುಗಳ ಹಿನ್ನೆಲೆಯಲ್ಲಿ ಡೇವಿಡ್‌ ಕ್ಲಾರ್ಕ್‌ ಅವರನ್ನು ಸರ್ಕಾರ ಹಿನ್ನೆಲೆಗೆ ಸರಿಸಿತ್ತು. ಈ ಮಧ್ಯೆ ಅವರು ತಮ್ಮ ಸ್ಥಾನ ತೊರೆದಿದ್ದಾರೆ.

‘ಕೋವಿಡ್‌ ವಿರುದ್ಧದ ದೇಶದ ಒಟ್ಟಾರೆ ಪ್ರಕ್ರಿಯೆಗೆ ನನ್ನ ಪಾತ್ರದಲ್ಲಿ ವ್ಯತಿರಿಕ್ತವಾಗುತ್ತಿದೆ ಎಂದು ನನಗೆ ಅನಿಸಿದೆ. ಈ ವರೆಗೆ ನನ್ನ ಕೆಲಸವನ್ನು ಸರಿಯಾಗಿ ಮಾಡಿದ್ದೇನೆ. ಇನ್ನು ಮುಂದೆ ನಾನು ಸಂಸತ್‌ ಸದಸ್ಯನಾಗಿ ಮುಂದುವರಿಲಿದ್ದೇನೆ,’ ಎಂದು ಕ್ಲಾರ್ಕ್‌ ಹೇಳಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಒಟ್ಟು 1,530  ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 22 ಮಂದಿ ಮೃತಪಟ್ಟಿದ್ದಾರೆ. 1,490 ಮಂದಿ ಮೃತಪಟ್ಟಿದ್ಧಾರೆ. ಗುರುವಾರ ಅಲ್ಲಿ ಪತ್ತೆಯಾಗಿರುವ ಕೇವಲ 2 ಸೋಂಕು ಪ್ರಕರಣಗಳು ಮಾತ್ರ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು