ಮಂಗಳವಾರ, ಆಗಸ್ಟ್ 3, 2021
23 °C
ಚೀನಾದೊಂದಿಗಿನ ಭಾರತ ಸಂಘರ್ಷ ಕುರಿತು ಅಮೆರಿಕದ ಮಾಜಿ ಎನ್‌ಎಸ್‌ಎ ಬಾಲ್ಟನ್‌ ಅಭಿಮತ

ಭಾರತ–ಚೀನಾ ಗಡಿ ವಿಚಾರದಲ್ಲಿ ಟ್ರಂಪ್‌ ಭಾರತ ಬೆಂಬಲಿಸುವ ಖಾತ್ರಿ ಇಲ್ಲ: ಬಾಲ್ಟನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಾರತ– ಚೀನಾ ಗಡಿ ಸಂಘರ್ಷ ಉದ್ವಿಗ್ನಗೊಂಡರೆ ಟ್ರಂಪ್‌ ಅವರು ಭಾರತವನ್ನು ಬೆಂಬಲಿಸುತ್ತಾರೆ ಎಂಬುದಕ್ಕೆ ಖಾತರಿ ಇಲ್ಲ’ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜಾನ್‌ ಬಾಲ್ಟನ್‌ ಹೇಳಿದ್ದಾರೆ.

‘ಚೀನಾ ತನ್ನ ನೆರೆರಾಷ್ಟ್ರಗಳೊಂದಿಗೆ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದೆ. ಭಾರತ, ಜಪಾನ್‌ ಹಾಗೂ ಇತರ ರಾಷ್ಟ್ರಗಳ ಜತೆಗೆ ಅದರ ಸಂಬಂಧಗಳು ಚೆನ್ನಾಗಿಲ್ಲ’ ಎಂದು ಟಿ.ವಿ. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಭಾರತವನ್ನು ಬೆಂಬಲಿಸುವ ವಿಚಾರದಲ್ಲಿ ಟ್ರಂಪ್‌ ಅವರು ಎಷ್ಟರ ಮಟ್ಟಿಗೆ ಸಿದ್ಧತೆ ಮಾಡಿದ್ದಾರೆ ಎಂಬ ಪ್ರಶ್ನೆಗೆ, ‘ಅವರು ಯಾವ ಹಾದಿಯಲ್ಲಿ ಹೋಗುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಅವರಿಗೂ ಆ ಬಗ್ಗೆ ಸ್ಪಷ್ಟತೆ ಇದೆ ಎಂದು ನನಗನ್ನಿಸುತ್ತಿಲ್ಲ. ವ್ಯಾಪಾರವನ್ನು ಗಮನದಲ್ಲಿಟ್ಟುಕೊಂಡು, ಚೀನಾದ ಜತೆಗೆ ಭೌಗೋಳಿಕ ಕಾರ್ಯತಂತ್ರ ಸಂಬಂಧ ಹೊಂದುವುದನ್ನು ಅವರು ನೋಡುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ’ ಎಂದು ಉತ್ತರಿಸಿದರು.

‘ಭಾರತ– ಚೀನಾ ನಡುವಿನ ದಶಕಗಳ ಸಂಘರ್ಷದ ಇತಿಹಾಸದ ಬಗ್ಗೆ ಟ್ರಂಪ್‌ ಯಾವುದೇ ಮಾಹಿತಿಯನ್ನು ಹೊಂದಿದ್ದಾರೆ ಎಂದು ನನಗನಿಸುವುದಿಲ್ಲ. ಆ ಬಗ್ಗೆ ಅವರಿಗೆ ತಿಳಿವಳಿಕೆ ಹೇಳಿರಬಹುದು. ಆದರೆ, ಇತಿಹಾಸಕ್ಕೆ ಅವರು ಅಷ್ಟೊಂದು ಮಹತ್ವ ನೀಡುವುದಿಲ್ಲ’ ಎಂದು ಬಾಲ್ಟನ್‌ ಹೇಳಿದರು.

‘ಮುಂಬರುವ ಚುನಾವಣೆ ಅವರಿಗೆ ಈಗಾಗಲೇ ದೊಡ್ಡ ಸವಾಲಾಗಿದೆ. ಚುನಾವಣೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಯಾವ ವಿಚಾರವನ್ನೂ ಮುನ್ನೆಲೆಗೆ ತರಲು ಅವರು ಇಚ್ಛಿಸಲಾರರು. ಆದ್ದರಿಂದ ಯಾರಿಗಾದರೂ ಲಾಭ ಆಗಲಿ, ಆಗದಿರಲಿ, ಗಡಿಯಲ್ಲಿ ಶಾಂತಿ ಇರಲಿ ಎಂಬುದನ್ನು ಅವರು ಬಯಸುತ್ತಾರೆ. ಯಾವುದೇ ಸುದ್ದಿ ಇಲ್ಲ ಎಂಬುದೇ ಒಳ್ಳೆಯ ಸುದ್ದಿ ಎಂಬುದು ಟ್ರಂಪ್‌ ಅವರ ನಿಲುವು’ ಎಂದರು.

ಬಾಲ್ಟನ್‌ ಅವರು 2018ರ ಏಪ್ರಿಲ್‌ನಿಂದ 2019ರ ಸೆಪ್ಟೆಂಬರ್‌ವರೆಗೆ ಅಮೆರಿಕದ ರಾಷ್ಟ್ರೀಯ ರಕ್ಷಣಾ ಸಲಹೆಗಾರರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು