ಬುಧವಾರ, ಜುಲೈ 28, 2021
29 °C
ಟಿಬೆಟ್ ಸೂಕ್ಷ್ಮ ಪ್ರದೇಶಗಳಿಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಚೀನಾ

ಚೀನಾದ ಹಿರಿಯ ಅಧಿಕಾರಿಗಳಿಗೆ ಹೊಸ ವೀಸಾ ನಿರ್ಬಂಧ ವಿಧಿಸಿದ ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

ಅಮೆರಿಕ–ಚೀನಾ ‌: ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್‌: ಟಿಬೆಟ್‌ನ ಸೂಕ್ಷ್ಮ ಪ್ರದೇಶಗಳಿಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಚೀನಾದ ಹಿರಿಯ ಅಧಿಕಾರಿಗಳಿಗೆ  ಹೊಸ ವೀಸಾ ನಿರ್ಬಂಧವನ್ನು ಅಮೆರಿಕ  ವಿಧಿಸಿದೆ. ಟಿಬೆಟನ್ನರ ‘ಅರ್ಥಪೂರ್ಣ ಸ್ವಾಯತ್ತತೆ’ಗೆ ಬೆಂಬಲವನ್ನೂ ಪುನರುಚ್ಚರಿಸಿದೆ.

ಅಮೆರಿಕ– ಚೀನಾ ಮಧ್ಯೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಘರ್ಷಣೆ ನಡೆಯುತ್ತಿದ್ದು, ಅಮೆರಿಕದ ಈ ಕ್ರಮದಿಂದಾಗಿ ಘರ್ಷಣೆಯ ಇನ್ನೊಂದು ಬಾಗಿಲು ತೆರೆದುಕೊಂಡಂತಾಗಿದೆ.

‘ಟಿಬೆಟ್‌ಗೆ ವಿದೇಶಿಯರ ಭೇಟಿಯನ್ನು ನಿರ್ಬಂಧಿಸಿದ ಚೀನಾ ಸರ್ಕಾರ ಹಾಗೂ ಕಮ್ಯುನಿಸ್ಟ್‌ ಪಕ್ಷದ ಅಧಿಕಾರಿಗಳಿಗೆ ನಾನು ಇಂದು ವೀಸಾ ನಿರ್ಬಂಧವನ್ನು ವಿಧಿಸಿದ್ದೇನೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಟ್ವೀಟ್‌ ಮಾಡಿದ್ದಾರೆ. ನಿರ್ಬಂಧಕ್ಕೆ ಒಳಗಾಗಲಿರುವ ಅಧಿಕಾರಿಗಳ ಸಂಖ್ಯೆ ಹಾಗೂ ಇತರ ವಿವರಗಳನ್ನು ಅವರು ನೀಡಿಲ್ಲ.

‘ಟಿಬೆಟ್‌ನ ಸ್ವಾಯತ್ತ ಹಾಗೂ ಇತರ ಪ್ರದೇಶಗಳಿಗೆ ಅಮೆರಿಕದ ರಾಜತಾಂತ್ರಿಕರು, ಇತರ ಅಧಿಕಾರಿಗಳು, ಮಾಧ್ಯಮದವರು ಹಾಗೂ ಪ್ರವಾಸಿಗರು ಭೇಟಿ ನೀಡುವುದನ್ನು ಚೀನಾ ವ್ಯವಸ್ಥಿತವಾಗಿ ತಡೆಯುತ್ತದೆ. ಆದರೆ ಚೀನಾದ ಅಧಿಕಾರಿಗಳು ಹಾಗೂ ಇತರ ನಾಗರಿಕರು ಅಮೆರಿಕದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಅನುಭವಿಸುತ್ತಾರೆ. ಸಂಬಂಧಗಳು ‘ಪರಸ್ಪರ’ ಇರಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.

‘ಟಿಬೆಟ್‌ನಲ್ಲಿ ಚೀನಾ ಸರ್ಕಾರವು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದರಿಂದ ಮತ್ತು ಪ್ರಾದೇಶಿಕ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿಗೆ ವಿದೇಶಿಯರ ಭೇಟಿಗೆ ಅನುಮತಿ ನೀಡುವುದು ಅತ್ಯಗತ್ಯವಾಗಿದೆ. ಟಿಬೆಟನ್ನರ ಅರ್ಥಪೂರ್ಣ ಸ್ವಾಯತ್ತತೆ, ಅವರ ಹಕ್ಕುಗಳ ರಕ್ಷಣೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಾ ಅಸ್ತಿತ್ವ ಕಾಪಾಡಲು ನಾವು ಬದ್ಧರಾಗಿದ್ದೇವೆ’ ಎಂದು ಪಾಂಪಿಯೊ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು