ಗುರುವಾರ , ಮೇ 26, 2022
23 °C

ಗೋಡಂಬಿ ಕೃಷಿಯ ಗೆಲುವಿನ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕರ್ನಾಟಕದ ಹವಾಮಾನ ಗೋಡಂಬಿ ಕೃಷಿಗೆ ಸೂಕ್ತವಾಗಿದೆಯೇ? ಹೀಗೆ ಮನದಲ್ಲೇ ಪ್ರಶ್ನೆ ಹಾಕಿಕೊಳ್ಳುವವರು ಒಮ್ಮೆ ನಾಗನಾಥರಾವ ನಿಡೋದೆ ಅವರ ಬೀದರ್‌ ತಾಲ್ಲೂಕಿನ ಕಮಠಾಣಾ ಗ್ರಾಮದ ಐದು ಎಕರೆಯ ಗೋಡಂಬಿ ತೋಟ ನೋಡಿಬರಬೇಕು. ಆ ತೋಟದಲ್ಲಿನ ಐದುನೂರ ನಲ್ವತ್ತು ಗೋಡಂಬಿ ಗಿಡಗಳಲ್ಲಿ ಬಿಟ್ಟಿರುವ ಫಸಲು ಈ ಪ್ರಶ್ನೆಗೆ ಉತ್ತರ ನೀಡಬಹುದು.

ನಿಡೋದೆ ಅವರು ಒಂದಲ್ಲ, ಎರಡಲ್ಲ ಒಂಭತ್ತು ವರ್ಷಗಳಿಂದ ಗೋಡಂಬಿ ಕೃಷಿ ಮಾಡುತ್ತಿದ್ದಾರೆ. ಈಗ ಐದು ವರ್ಷಗಳಿಂದ ನಿರಂತರವಾಗಿ ಫಸಲು ಪಡೆದು, ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. 5 ಕ್ವಿಂಟಲ್‌ ಇಳುವರಿಯಿಂದ ಆರಂಭವಾದ ಗೋಡಂಬಿ ಕೃಷಿ ಈಗ 20 ಕ್ವಿಂಟಲ್‌ಗೆ ತಲುಪಿದೆ. ಸಾವಿರದಲ್ಲಿದ್ದ ಆದಾಯ, ಲಕ್ಷ ರೂಪಾಯಿ ದಾಟಿದೆ !

ಒಂಭತ್ತು ವರ್ಷಗಳಿಂದ...

ನಿವೃತ್ತ ಬ್ಯಾಂಕ್ ನೌಕರರಾಗಿರುವ ನಾಗನಾಥರಾವ, ಮೂಲತಃ ಬೀದರ್‌ ಜಿಲ್ಲೆ ಔರಾದ್ ತಾಲ್ಲೂಕಿನ ನಿಡೋದೆ ಗ್ರಾಮದವರು. 1973ರ ನಂತರ ಬೀದರ್‌ ಕಡೆಗೆ ವಲಸೆ ಬಂದರು. ಈಗ ಕಮಠಾಣಾ ಮತ್ತು ಯಾಕತಪುರದಲ್ಲಿ ಹನ್ನೆರಡು ಎಕರೆ ಜಮೀನು ಹೊಂದಿದ್ದಾರೆ. ಎರಡೂ ಗ್ರಾಮದ ಜಮೀನುಗಳಲ್ಲಿ ನೀರಾವರಿಗಾಗಿ ತಲಾ ಒಂದೊಂದು ಕೊಳವೆ ಬಾವಿ ತೋಡಿಸಿದ್ದಾರೆ. ಇತ್ತೀಚೆಗೆ ತೋಟಗಾರಿಕಾ ಇಲಾಖೆಯ ಸಹಾಯಧನದೊದಿಗೆ ಮಳೆ ನೀರು ಸಂಗ್ರಹಕ್ಕಾಗಿ ಕೃಷಿ ಹೊಂಡಗಳನ್ನೂ ಮಾಡಿಸಿದ್ದಾರೆ.

2010ರಲ್ಲಿ ಕಮಠಾಣಾದ ಐದು ಎಕರೆಯಲ್ಲಿ ಗೋಡಂಬಿ ಕೃಷಿ ಆರಂಭಿಸಿದರು. ಗೋವಾದಿಂದ ವಿ–4, ವಿ–7 ಎಂಬ ಎರಡು ಗೋಡಂಬಿ ತಳಿಗಳ ಸಸಿಗಳನ್ನು ತಂದು ಎಕರೆಗೆ 108 ಸಸಿಗಳಂತೆ (ಸಾಲಿಂದ ಸಾಲಿಗೆ 20 ಅಡಿ, ಗಿಡದಿಂದ ಗಿಡಕ್ಕೆ 20 ಅಡಿ) ಒಟ್ಟು 540 ಸಸಿಗಳನ್ನು ನಾಟಿ ಮಾಡಿಸಿದರು. ಸಸಿಯೊಂದಕ್ಕೆ ₹50ರಂತೆ ಒಟ್ಟು ₹27 ಸಾವಿರ ಕೊಟ್ಟು, ಸಸಿ ಖರೀದಿಸಿದರು. ಸಸಿ ನಾಟಿಗೆ ಕಾರ್ಮಿಕರ ಖರ್ಚು ₹10 ಸಾವಿರ ಖರ್ಚಾಯಿತು.

ಪ್ರತಿ ವರ್ಷ ಐದು ಎಕರೆಗೆ ನಾಲ್ಕು ಟ್ಯಾಕ್ಟರ್‌ ತಿಪ್ಪೆಗೊಬ್ಬರ ಪೂರೈಸಿದರು. ಕೊಳವೆಬಾವಿ ಹಾಗೂ ಕೃಷಿ ಹೊಂಡದ ನೀರನ್ನು ಬಳಸಿಕೊಂಡು ಎರಡು ದಿನಕ್ಕೆ ಒಮ್ಮೆ ಪ್ರತಿ ಗಿಡಕ್ಕೂ ಹನಿ ನೀರಾವರಿ ಮೂಲಕ ನೀರು ಕೊಟ್ಟರು.

ಹೀಗೆ ನಾಲ್ಕು ವರ್ಷ ನೀರು – ಗೊಬ್ಬರ ಪೂರೈಕೆ – ಆರೈಕೆ ಮುಂದುವರಿಯಿತು. ಗಿಡಗಳು ಸೊಂಪಾಗಿ ಬೆಳೆದವು. ಆರಂಭದಲ್ಲಿ ಗಿಡಗಳಲ್ಲಿ ಹೂವಾಗುವ ವೇಳೆ ಕೀಟಬಾಧೆ ಕಾಣಿಸಿಕೊಂಡಿತು. ತಜ್ಞರ ಸಲಹೆಯಂತೆ ಗಿಡಗಳಿಗೆ ಔಷಧ ಸಿಂಪಡಿಸಿದರು.

ಫಸಲು ಕೊಯ್ಲು ಆರಂಭ

ಗಿಡಗಳನ್ನು ನಾಟಿ ಮಾಡಿದ ನಾಲ್ಕು ವರ್ಷಕ್ಕೆ (2014ರಲ್ಲಿ) ಫಸಲು ಕೊಯ್ಲು ಆರಂಭವಾಯಿತು. ಮೊದಲ ಹಂತದಲ್ಲಿ ಐದು ಎಕರೆಯಿಂದ 5 ಕ್ವಿಂಟಲ್ ಗೋಡಂಬಿ ಇಳುವರಿ ಸಿಕ್ಕಿತು. ಹುಬ್ಬಳಿಯ ಮಾರಾಟಗಾರರು ಇವರ ತೋಟಕ್ಕೆ ಬಂದು ಖರೀದಿಸಿದರು. ‘ಮೊದಲ ವರ್ಷ ಕ್ವಿಂಟಲ್‌ಗೆ ₹10 ಸಾವಿರ ದರ ಸಿಕ್ಕಿತು. ವರ್ಷ ಕಳೆದಂತೆ ಇಳುವರಿಯಲ್ಲೂ ಏರಿಕೆಯಿತು. ಕಳೆದ ವರ್ಷ 20 ಕ್ವಿಂಟಲ್ ಇಳುವರಿ ಬಂತು. ಸುಮಾರು ₹3 ಲಕ್ಷದಿಂದ 4 ಲಕ್ಷದವರೆಗೂ ಆದಾಯ ಬಂತು’ ಎಂದು ವಿವರಿಸುತ್ತಾರೆ ನಾಗನಾಥರಾವ. ಇತ್ತೀಚೆಗೆ ಬೀದರ್‌ನಲ್ಲೂ ಗೋಡಂಬಿ ಮಾರುಕಟ್ಟೆ ಆರಂಭವಾಗಿದೆ. ಗುಣಮಟ್ಟದ ಗೋಡಂಬಿಗೆ ಹೆಚ್ಚಿನ ಬೇಡಿಕೆಯಿದೆ. ಕ್ವಿಂಟಲ್‌ ಗೋಡಂಬಿ ಅಂದಾಜು ₹15 ಸಾವಿರದರದವರೆಗೂ ಮಾರಾಟವಾಗಿದೆ.

ಪ್ರತಿ ವರ್ಷ ಗೋಡಂಬಿ ತೋಟ ನಿರ್ವಹಣೆಗೆ ₹15 ಸಾವಿರದವರೆಗೂ ಖರ್ಚು ಬರುತ್ತದೆ. ಬರುವ ಆದಾಯದಲ್ಲಿ ನಿರ್ವಹಣಾ ವೆಚ್ಚವನ್ನು ತೆಗೆದಿಡುತ್ತಾರೆ. ಒಮ್ಮೆ ಗಿಡ ನಾಟಿ ಮಾಡಿದ ಮೇಲೆ 20 ವರ್ಷಗಳವರೆಗೆ ಫಲ ನೀಡುತ್ತವೆ. ವರ್ಷ ಕಳೆದಂತೆ ಇಳುವರಿಯೂ ಹೆಚ್ಚುತ್ತದೆ. ‘ಈ ವರ್ಷ ಮಾತ್ರ ಮಳೆ ಕೊರತೆಯಾಗಿರುವ ಕಾರಣ ಇಳುವರಿಯಲ್ಲಿ ಕುಂಠಿತವಾಗಬಹುದು. ಆದರೆ ನಷ್ಟವಂತೂ ಆಗುವುದಿಲ್ಲ’ ಎಂಬ ವಿಶ್ವಾಸ ಅವರದ್ದು. ಗೋಡಂಬಿ ಕೃಷಿ ಕುರಿತ ಹೆಚ್ಚಿ ಮಾಹಿತಿಗೆ ಸಂಪರ್ಕ ಸಂಖ್ಯೆ: 9901040501.

ಬೀದರ್‌ನಲ್ಲಿ ಗೋಡಂಬಿ ಕೃಷಿ ವಿಸ್ತರಣೆ

ಬೀದರ್‌ ಜಿಲ್ಲೆಯಲ್ಲಿ ದಶಕದಿಂದೀಚೆಗೆ ಗೋಡಂಬಿ ಬೆಳೆಯುವ ಕೃಷಿಕರ ಸಂಖ್ಯೆ ಹೆಚ್ಚಾಗಿದೆ. ಬೀದರ್‌ ತಾಲ್ಲೂಕಿನ ಕಮಠಾಣಾ, ಅತಿವಾಳ, ಚಿಟ್ಟಾ, ಕಂಗನಕೋಟ ಮತ್ತು ಹೊನ್ನಿಕೇರಿ, ಹುಮನಾಬಾದ ತಾಲೂಕಿನ ಚಿಟಗುಪ್ಪ, ನಿರ್ಣಾ, ಮುತ್ತಂಗಿ, ಗಡವಂತಿ ಗ್ರಾಮಗಳಲ್ಲಿ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಗ್ರಾಮ ಸೇರಿದಂತೆ ಸುಮಾರು 500 ಎಕರೆ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತಿದೆ. ಭಾಲ್ಕಿ ತಾಲ್ಲೂಕಿನ ಮಾಳಚಾಪುರ ಗ್ರಾಮವೊಂದರಲ್ಲೇ 100 ಎಕರೆಯಲ್ಲಿ ರೈತರು ಗೋಡಂಬಿ ಕೃಷಿ ಮಾಡುತ್ತಿದ್ದಾರೆ ಎಂದು ತೋಟಗಾರಿಕೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಗೋಡಂಬಿ ಕೃಷಿ ವಿಸ್ತರಣೆ ಕುರಿತು ವಿವರ ನೀಡುತ್ತಾರೆ.

ಬಾಳೆ, ಮಾವು ತರಕಾರಿ

ನಾಗನಾಥರಾವ ಅವರು ಕಮಠಾಣಾ ಭಾಗದಲ್ಲಿ ಗೋಡಂಬಿ ಕೃಷಿ ಮಾಡಿದರೆ, ಯಾಕತಪುರದಲ್ಲಿ ಎರಡೂವರೆ ಎಕರೆಯಲ್ಲಿ ಜಿ–9 ತಳಿಯ ಬಾಳೆ ಬೆಳೆ ಇದೆ. ಉಳಿದ ಜಮೀನಿನಲ್ಲಿ ಮಾವು, ತರಕಾರಿ ಬೆಳೆ ಬೆಳೆಯುತ್ತಾರೆ. ಕಾರ್ಮಿಕರ ಸಮಸ್ಯೆಗೆ ಯಂತ್ರಗಳ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ತೋಟಗಾರಿಕಾ ಇಲಾಖೆಯ ಆರ್ಥಿಕ ನೆರವಿನಿಂದ ಹಣ್ಣು, ತರಕಾರಿ ಬೆಳೆಗಳ ಪ್ಯಾಕಿಂಗ್‌ ಮಾಡಲು ತೋಟದಲ್ಲೇ ಪ್ಯಾಕ್‌ಹೌಸ್ ಮಾಡಿಕೊಂಡಿದ್ದಾರೆ. ‘ಸಮಗ್ರ ಕೃಷಿ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಬೆಳೆದವರೇ ಮಾರಾಟ ಮಾಡುವುದರಿಂದ ಉತ್ತಮ ಆದಾಯ ಗಳಿಸಬಹುದು’ ಎನ್ನುತ್ತಾರೆ ನಾಗನಾಥರಾವ ನಿಡೋದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು