ಹಾಂಗ್‌ಝೌ (ಪಿಟಿಐ): ಭಾರತದ ಪುರುಷರ ಸ್ಕ್ವಾಷ್ ತಂಡವು ಬದ್ಧ ಎದುರಾಳಿ ಪಾಕಿಸ್ತಾನದ ಎದುರು ರೋಚಕ ಜಯಸಾಧಿಸಿ, ಚಿನ್ನದ ಗೆದ್ದಿತು. ಎಂಟು ವರ್ಷಗಳ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವು ಈ ಸಾಧನೆ ಮಾಡಿತು.
ಶನಿವಾರ ನಡೆದ ಫೈನಲ್‌ನಲ್ಲಿ ಭಾರತವು 2-1ರಿಂದ ಪಾಕ್ ತಂಡವನ್ನು ಮಣಿಸಿತು. ಫೈನಲ್‌ನ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈನ ಅಭಯ್ ಸಿಂಗ್ ಮಾಡಿದ ಹೋರಾಟವು ಭಾರತದ ಗೆಲುವಿಗೆ ನೆರವಾಯಿತು.
ಫೈನಲ್ ಸುತ್ತಿನಲ್ಲಿ 1–1ರಿಂದ ಸಮಬಲವಾದ ಸಂದರ್ಭದಲ್ಲಿ ಅಭಯ್ ಮತ್ತು ಪಾಕಿಸ್ತಾನದ ನೂರ್ ಜಮಾನ್ ನಡುವಣ ಪಂದ್ಯವು ನಿರ್ಣಾಯಕವಾಯಿತು. ಜಿದ್ದಾಜಿದ್ದಿಯ ಹೋರಾಟದಲ್ಲಿ 69ನೇ ರ‍್ಯಾಂಕ್ ಆಟಗಾರ ಅಭಯ್ ಮೇಲುಗೈ ಸಾಧಿಸಿದರು. ಅಭಯ್ 11-7, 9-11, 8-11, 11-9, 12-10ರಿಂದ 113ನೇ ರ‍್ಯಾಂಕ್‌ನ ಜಮಾನ್ ಅವರನ್ನು ಮಣಿಸಿದರು. ಎರಡು ಮತ್ತು ಕೊನೆಯ ಗೇಮ್‌ನಲ್ಲಿ 18 ವರ್ಷದ ಜಮಾನ್ ದಿಟ್ಟ ಹೋರಾಟ ನಡೆಸಿದರು.
25 ವರ್ಷದ ಅಭಯ್ ಕೊನೆಯ ಗೇಮ್‌ನಲ್ಲಿ ಪ್ರಯಾಸದ ಜಯ ಸಾಧಿಸಿ, ತಮ್ಮ ರೆಕೆಟ್ ಅನ್ನು ಮೇಲೆಸೆದು ಸಂಭ್ರಮಿಸಿದರು.
ಈ ಸುತ್ತಿನ ಮೊದಲ ಪಂದ್ಯದಲ್ಲಿ ತಂಡದ ನಾಯಕ ಸೌರವ್ ಘೋಷಾಲ್ 11-5, 11-1, 11-3 ರಿಂದ ಮುಹಮ್ಮದ್ ಅಸೀಮ್ ಖಾನ್ ವಿರುದ್ಧ ಗೆದ್ದರು. ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಮಹೇಶ್ ಮನಗಾಂವ್ಕರ್ 8-11, 2-11. 3-11ರಿಂದ ಇಕ್ಬಾಲ್ ನಸೀರ್ ಎದುರು ಸೋತರು.
ಭಾರತ ತಂಡವು 2014ರಲ್ಲಿ ಇಂಚೇನ್‌ನಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿತ್ತು. ಪಾಕಿಸ್ತಾನ ತಂಡವು 2010ರ ಗುವಾಂಗ್‌ಝೌನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿತ್ತು.
ಸೌರವ್ ಘೋಷಾಲ್ ಅವರಿಗೆ ಇದು ಆರನೇ ಏಷ್ಯನ್ ಗೇಮ್ಸ್. ಅವರು ವೈಯಕ್ತಿಕ ವಿಭಾಗದಲ್ಲಿಯೂ ಪದಕ ಜಯದ ವಿಶ್ವಾಸದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.