ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿರಣದ ಗಳಿಗೆಯ ಅಳೆಯುವ ಗುಳಿಗೆ

Published 3 ಮೇ 2023, 3:24 IST
Last Updated 3 ಮೇ 2023, 3:35 IST
ಅಕ್ಷರ ಗಾತ್ರ

ಕ್ಯಾನ್ಸರ್‌ ಎಂದರೇ ಭಯಂಕರ ರೋಗ. ಅದು ತರುವ ನೋವೇ ತಾಳಲಾಗದೆನ್ನಿಸುವಾಗ, ಮೂಗಿಗಿಂತ ಮೂಗುತಿಯೇ ಭಾರ ಎನ್ನುವಂತೆ ಕ್ಯಾನ್ಸರ್‌ ಗುಣಪಡಿಸಲು ಬಳಸುವ ಎಲ್ಲ ಚಿಕಿತ್ಸೆಗಳೂ ಒಂದಲ್ಲ ಒಂದು ಬಗೆಯ ನೋವನ್ನುಂಟುಮಾಡುವವೇ. ಅದರಲ್ಲಿಯೂ ‘ರೇಡಿಯೇಶನ್‌ ಥೆರಪಿ’ ಎಂದು ಕರೆಯುವ ವಿಕಿರಣಗಳನ್ನು ಬಳಸಿ ನೀಡುವ ಚಿಕಿತ್ಸೆ ಇನ್ನೂ ಭೀಕರ.

ವಿಕಿರಣಗಳು ಕ್ಯಾನ್ಸರ್‌ ಕೋಶಗಳನ್ನು ಕೊಲ್ಲುತ್ತವೇನೋ ಸರಿ. ಆದರೆ ಜೊತೆಗೆ ಬೇರೆ ಅಂಗಗಳಿಗೂ ಊನವನ್ನು ಉಂಟುಮಾಡುತ್ತವೆ. ಗುಳಿಗೆಯಾದರೆ ಇಷ್ಟು ಗುಳಿಗೆ ಕೊಟ್ಟೆವು ಎನ್ನಬಹುದು. ಆದರೆ ವಿಕಿರಣದ ವಿಷಯದಲ್ಲಿ ವೈದ್ಯರು ಇಂಥದ್ದೇ ‘ಡೋಸು’ ಅರ್ಥಾತ್‌ ಚಿಕಿತ್ಸಕ ಪ್ರಮಾಣ ನೀಡಬೇಕು ಎಂದು ನಿರ್ಧರಿಸಿದರೂ, ಅದನ್ನು ನೀಡಿದ್ದೇವೆಯೋ ಇಲ್ಲವೋ ಎನ್ನುವುದನ್ನು ಖಚಿತವಾಗಿ ಹೇಳಲಾಗದು. ಇದೀಗ ರೋಗಿಗೆ ಎಷ್ಟು ವಿಕಿರಣ ನೀಡಿದೆ ಎನ್ನುವದನ್ನು ನಿಖರವಾಗಿ ತಿಳಿಸುವಂತಹ ಇಲೆಕ್ಟ್ರಾನಿಕ್‌ ಗುಳಿಗೆಗಳು ಬರಲಿವೆಯಂತೆ. ಇವನ್ನು ಬಳಸಿದರೆ, ರೋಗಿಗೆ ನೀಡಿದ ರೇಡಿಯೊಥೆರಪಿಯ ನಿಜವಾದ ಪರಿಣಾಮವೇನು ಎಂಬುದು ಸ್ಪಷ್ಟವಾಗಬಹುದು. ಅಂತಹ ಪುಟ್ಟ ಗುಳಿಗೆಯಾಕಾರದ ಡೋಸಿಮೀಟರನ್ನು ಸಿಂಗಪೂರಿನ ನ್ಯಾಶನಲ್‌ ಯೂನಿವರ್ಸಿಟಿ ಆಫ್‌ ಸಿಂಗಪೂರಿನ ವೈದ್ಯವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ ಎಂದು ‘ನೇಚರ್‌ ಮೆಡಿಸಿನ್‌’ ಪತ್ರಿಕೆ ವರದಿ ಮಾಡಿದೆ.

ಡೋಸಿಮೀಟರು ಎಂದರೆ ಇನ್ನೇನಲ್ಲ. ವಿಕಿರಣವನ್ನು ಅಳೆಯುವ ಸಾಧನ ಅಷ್ಟೆ. ಎಕ್ಸ್‌ರೇಗೋ, ಸಿಟಿ ಸ್ಕ್ಯಾನಿಗೆಂದೋ ಅಥವಾ ಕ್ಯಾನ್ಸರ್‌ ರೋಗಿಗಳ ಜೊತೆಗೆ ರೇಡಿಯೊಥೆರಪಿಗೆಂದೋ ಹೋದಾಗ ನೀವು ಅಲ್ಲಿನ ಸಿಬ್ಬಂದಿಗಳು ಕೋಟಿನಲ್ಲಿ ಪುಟ್ಟ ಸಾಧನವೊಂದನ್ನು ಜೋಡಿಸಿಕೊಂಡಿರುವುದನ್ನು ಗಮನಿಸಿರಬಹುದು. ಪ್ರತಿದಿನವೂ ವಿಕಿರಣಗಳ ಜೊತೆಗೆ ಕೆಲಸ ಮಾಡುವ ಅವರ ಸುರಕ್ಷತೆಗೆಂದು ಈ ಡೋಸಿಮೀಟರನ್ನು ಬಳಸುತ್ತಾರೆ. ಹಿಂದೆ ಇವುಗಳಲ್ಲಿ ಪುಟ್ಟ ಎಕ್ಸ್‌ರೇ ಫಿಲ್ಮುಗಳಿರುತ್ತಿದ್ದುವು. ಕಾಲಕಾಲಕ್ಕೆ ಅವನ್ನು ತೆಗೆದು, ಅವು ಎಷ್ಟು ಕಪ್ಪಾಗಿವೆ ಎಂಬುದನ್ನು ಅಳೆದು, ವಿಕಿರಣಗಳೆಷ್ಟು ತಗುಲಿರಬಹುದು ಎಂದು ಗುರುತಿಸಲಾಗುತ್ತಿತ್ತು. ಇದೀಗ ಇಲೆಕ್ಟ್ರಾನಿಕ್‌ ಸಾಧನಗಳು ಬಂದಿವೆ. ಕ್ಷಣಮಾತ್ರದಲ್ಲಿ ಎಷ್ಟು ವಿಕಿರಣಗಳು ದೇಹವನ್ನು ತಾಕಿವೆ ಎಂದು ಗುರುತಿಸಿ, ಲೆಕ್ಕ ಹಾಕುತ್ತವೆ. ಮಿತಿ ಮೀರಿದರೆ ಎಚ್ಚರಿಸುತ್ತವೆ.

ಆದರೆ ಚಿಕಿತ್ಸೆಗೆಂದು ರೇಡಿಯೊಥೆರಪಿಗೊಳಗಾಗುವ ರೋಗಿಗಳಿಗೆ ಈ ಅನುಕೂಲವಿಲ್ಲ. ಜೊತೆಗೆ ಅವರಿಗೆ ನೀಡುವ ವಿಕಿರಣವೂ ಬಲು ಭಾರಿ. ತೀವ್ರ ಪ್ರಮಾಣದಲ್ಲಿ ವಿಕಿರಣವನ್ನು ನೀಡದಿದ್ದರೆ ಕ್ಯಾನ್ಸರ್‌ ಕೋಶಗಳನ್ನು ಕೊಲ್ಲಲು ಆಗದು. ಸಾಮಾನ್ಯವಾಗಿ ವಿಷ ಔಷಧಗಳು ತಲುಪಲಾರದಂತಹ ಸ್ಥಳಗಳಲ್ಲಿ ಇರುವ ಗೆಡ್ಡೆ ಕ್ಯಾನ್ಸರುಗಳನ್ನು ಗುಣಪಡಿಸಲು ರೇಡಿಯೊಥೆರಪಿ ಬಳಸುತ್ತಾರೆ. ನೇರವಾಗಿ ಕ್ಯಾನ್ಸರ್‌ ಗೆಡ್ಡೆಗೇ ಈ ಶಕ್ತಿಶಾಲಿ ಬೆಳಕನ್ನು – ಗ್ರಾಮಸ್ಥರು ಕರೆಂಟು ಎಂದು ಹೆಸರಿಸಿರುವ - ಅರ್ಥಾತ್‌ ವಿಕಿರಣವನ್ನು ತಾಕಿಸುತ್ತಾರೆ. ದೇಹದ ಹೊರಗೆ ಇರುವ ಗೆಡ್ಡೆಗಳ ಸಂದರ್ಭದಲ್ಲಿ ಇದು ಓಕೆ. ಎಷ್ಟು ವಿಕಿರಣವನ್ನು ಕೊಟ್ಟಿದ್ದೇವೆ ಎಂದು ತಾಕಿದ ಬೆಳಕಿನ ಪ್ರಖರತೆಯನ್ನು ಅಳೆದು ಗುರುತಿಸಬಹುದು.

ಆದರೆ ದೇಹದೊಳಗಿನ ಅಂಗಾಂಗಗಳಲ್ಲಿ ಇರುವ ಗೆಡ್ಡೆಗೆ ಎಷ್ಟು ಪ್ರಮಾಣದ ವಿಕಿರಣ ತಗುಲಿದೆ ಎಂಬುದನ್ನು ಕೇವಲ ಅಂದಾಜಿಸಬಹುದಷ್ಟೆ. ಏಕೆಂದರೆ ದೇಹದ ಹೊರಗೆ ನೀಡಿದ ವಿಕಿರಣದಲ್ಲಿ ಎಷ್ಟು ಪ್ರಮಾಣ ಒಳ ಹೊಕ್ಕಿದೆ, ಅದರಲ್ಲಿ ಎಷ್ಟನ್ನು ಕ್ಯಾನ್ಸರು ಹೀರಿಕೊಂಡಿದೆ ಎಂಬುದನ್ನು ನಿಖರವಾಗಿ ಅಳೆಯುವ ಡೋಸಿಮೀಟರುಗಳು ಇಲ್ಲ. ಇದೀಗ ಸಿಂಗಪೂರಿನ ವೈದ್ಯ ವಿಜ್ಞಾನಿ ಬೋ ಹೌ ಮತ್ತು ಸಂಗಡಿಗರು ಹೀಗೊಂದು ವೈಫೈ ಸಾಧನವನ್ನು ರೂಪಿಸಿದ್ದಾರೆ.

ವಿಕಿರಣವನ್ನು ಅಳೆಯಲು ಕೆಲವು ರಾಸಾಯನಿಕಗಳನ್ನು ಉಪಯೋಗಿಸುತ್ತಾರೆ. ಈ ರಾಸಾಯನಿಕಗಳ ಮೇಲೆ ವಿಕಿರಣ ಬಿದ್ದಾಗ, ತಾನು ಹೀರಿಕೊಂಡ ಶಕ್ತಿಗೆ ಅನುಗುಣವಾಗಿ ಅದು ಬೆಳಕನ್ನು ಹೊಮ್ಮಿಸುತ್ತದೆ. ಇಂತಹ ಮಿನುಗುವ ಅರ್ಥಾತ್‌ ಸಿಂಟಿಲೇಟರುಗಳನ್ನು ಬಳಸಿ ವಿಕಿರಣಗಳ ಪ್ರಮಾಣವನ್ನು ಅಳೆಯಬಹುದು. ಆದರೆ ದೇಹದೊಳಗೆ ಹೀಗೆ ಚಿಮ್ಮುವ ಬೆಳಕನ್ನು ಅಳೆಯುವುದು ಹೇಗೆ?

ಇದುವೇ ಬೋ ಹೌ ಅವರ ಸಾಧನೆ. ಒಂದೂವರೆ ಸೆಂಟಿಮೀಟರು ಉದ್ದ ಹಾಗೂ ಅರ್ಧ ಸೆಂಟಿಮೀಟರಿಗಿಂತಲೂ ತೆಳ್ಳಗಿರುವ ಗುಳಿಗೆಯಂತಹ ಸಾಧನವೊಂದನ್ನು ಇವರು ತಯಾರಿಸಿದ್ದಾರೆ. ಇದರಲ್ಲಿ ಇರುವ ಸಿಂಟಿಲೇಟರಿನ ಜೊತೆಗೆ ಬೆಳಕನ್ನು ಸಾಗಿಸುವ, ಆಪ್ಟಿಕ್‌ ಫೈಬರನ್ನು ಜೋಡಿಸಿದ್ದಾರೆ. ಬ್ರಾಡ್‌ ಬ್ಯಾಂಡ್‌ ಇಂಟರ್ನೆಟ್‌ ಸೇವೆಗಳು ಬಳಸುವ ಆಪ್ಟಿಕ್‌ ಫೈಬರಿನಂತೆಯೇ ಇವು ಬೆಳಕನ್ನು ಒಂದಿಷ್ಟೂ ನಷ್ಟವಾಗದೆ ಇನ್ನೊಂದು ತುದಿಗೆ ಕೊಂಡೊಯ್ಯುತ್ತವೆ. ಅಲ್ಲಿ ಈ ಬೆಳಕಿನ ಮಿನುಗುವಿಕೆ ಎಷ್ಟೆಂದು ಗಣಿಸುವ ಇಲೆಕ್ಟ್ರಾನಿಕ್‌ ಸಾಧನಗಳನ್ನು ಜೋಡಿಸಿದ್ದಾರೆ. ಈ ಸಂವೇದಕಗಳು ತಮ್ಮನ್ನು ತಾಕಿದ ಬೆಳಕಿಗೆ ಅನುಗುಣವಾಗಿ ವಿದ್ಯುತ್‌ ಸಂಕೇತ ಸೃಷ್ಟಿಸುತ್ತವೆ. ಇಲೆಕ್ಟ್ರಾನಿಕ್‌ ಸಂವೇದಕಗಳ ಜೊತೆಗೆ ಫೋನಿನಲ್ಲಿ ಅಥವಾ ಇಯರ್‌ಫೋನಿನಲ್ಲಿ ಬಳಸುವ ಬ್ಲೂಟೂಥಿನಂತಹ ಇಲೆಕ್ಟ್ರಾನಿಕ್‌ ಕೂಡ ಇದೆ. ಹೀಗೆ ಸಂವೇದಕಗಳು ಗಣಿಸಿದ ವಿಕಿರಣಗಳ ಪ್ರಮಾಣವನ್ನು ನೇರವಾಗಿ ದೇಹದ ಹೊರಗೆ ಇರುವ ಸಾಧನಗಳಿಗೆ ತಲುಪಿಸಬಹುದು. ಅಲ್ಲಿ ಅವನ್ನು ಲೆಕ್ಕ ಹಾಕಬಹುದು.

ಸಾಮಾನ್ಯವಾಗಿ ರೇಡಿಯೊಥೆರಪಿ ನೀಡಿದ ಅಂಗಗಳಲ್ಲಿರುವ ಕೋಶಗಳಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ಇದು ವಿಕಿರಣಗಳ ಪ್ರಭಾವವನ್ನು ಏರು ಪೇರು ಮಾಡಬಹುದು. ಹೀಗಾಗಿ ಚಿಕಿತ್ಸೆಯನ್ನೂ ಬಾಧಿಸಬಹುದು. ಆದ್ದರಿಂದ ಆ ಕೋಶಗಳಿಗೆ ಎಷ್ಟು ವಿಕಿರಣ ತಗುಲಿದೆ ಎಂದು ತಿಳಿಯುವುದು ಮುಖ್ಯವಾಗುತ್ತದೆ. ಅದರಲ್ಲಿಯೂ ಗಂಟಲು, ಅನ್ನನಾಳ, ಕರುಳಿನಂತಹ ಒಳ ಅಂಗಗಳಲ್ಲಿರುವ ಗೆಡ್ಡೆಗಳಿಗೆ ವಿಕಿರಣ ನೀಡುವಾಗ ಅಲ್ಲಿಗೆ ಎಷ್ಟು ವಿಕಿರಣ ತಗುಲಿದೆ ಎಂದು ಕೇವಲ ಅಂದಾಜಷ್ಟೆ ಸಾಧ್ಯ. ಆದರೆ ಈ ವಿಕಿರಣ ಅಳೆಯುವ ಗುಳಿಗೆ ಆ ಅಂಗಗಳಲ್ಲಿನ ಆಮ್ಲೀಯತೆಯನ್ನೂ ಉಷ್ಣತೆಯನ್ನೂ ಅಳೆಯಬಲ್ಲುದು. ಹೀಗೆ ಒಟ್ಟಾರೆ ಅಂಗಾಂಶ ಅಥವಾ ಗೆಡ್ಡೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವೈದ್ಯರಿಗೆ ತಿಳಿಸಬಲ್ಲುದು.

ಅನ್ನನಾಳದ ಕ್ಯಾನ್ಸರ್‌ ರೋಗಿಗಳಿಗೆ ಇದು ಬಹಳ ಅನುಕೂಲವೆನ್ನುವುದು ಬೋ ಹೌ ಅವರ ಮಾತು. ಏಕೆಂದರೆ ಅಂತಹವರಿಗೆ ಶಸ್ತ್ರಕ್ರಿಯೆ ಅಸಾಧ್ಯ. ಅನ್ನನಾಳದಲ್ಲಿ ಗೆಡ್ಡೆ ಇರುವುದರಿಂದ ಔಷಧವನ್ನು ನುಂಗುವುದೂ ಕಷ್ಟವೇ. ಹೀಗಾಗಿ ಇವರಿಗೆ ಬಹುತೇಕ ವಿಕಿರಣ ಚಿಕಿತ್ಸೆಯನ್ನೇ ನೀಡಬೇಕಾಗುತ್ತದೆ. ಹಾಗೆ ಮಾಡುವಾಗ ಒಳಾಂಗಗಳು ಹೆಚ್ಚು ಬಿಸಿಯಾದರೂ, ಅವು ಸುಟ್ಟು, ಗಟ್ಟಿಯಾಗಿ ಇಡೀ ಅನ್ನನಾಳವೇ ಮುಚ್ಚಿಕೊಂಡು ಬಿಡಬಹುದು. ಕಾಯಿಲೆಯ ಬದಲಿಗೆ ಚಿಕಿತ್ಸೆಯೇ ಮರಣವನ್ನು ತಂದೊಡ್ಡಬಹುದು. ಅಂತಹವರಲ್ಲಿ ವಿಕಿರಣ ಚಿಕಿತ್ಸೆ ನಡೆಯುವಾಗ ಅತಿಯಾಗದಂತೆ ಕಾಯ್ದುಕೊಳ್ಳಲು ಈ ಡೋಸಿಮೀಟರು ನೆರವಾಗಬಹುದು. ಹಾಗೆ ಮಾಡಲು ಸಾಧ್ಯವೇ ಎಂದು ಮೊಲಗಳಿಗೆ ಇವನ್ನು ನುಂಗಿಸಿ, ವಿಕಿರಣಗಳನ್ನು ನೀಡಿ, ದೇಹದೊಳಗಿನ ಅಂಗಾಂಶಗಳ ಆಮ್ಲೀಯತೆಯನ್ನು ಪರೀಕ್ಷಿಸಿ ನೋಡಿದ್ದಾರೆ. ಸಾಧನ ಯಶಸ್ವಿಯಾಗಿ ಫಲ ನೀಡಿತು ಎಂದು ‘ನೇಚರ್‌ ಮೆಡಿಸಿನ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT