ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ: ನೀರಿನಂತೆ ಹರಿಯುವ ಗಾಲಿ ಇದು..!

ಬೆಂಗಳೂರಿನ ಗುಂಡಿ ತುಂಬಿದ ರಸ್ತೆಗಳಲ್ಲಿ ಧಬಕ್ಕನೆ ಇಳಿದ ಸ್ಕೂಟರು, ಮರಳಿ ಗುಂಡಿಯನ್ನು ಏರಲಾರದೆ ಕುಳಿತ ಅನುಭವ ಆಗಿರಬೇಕಲ್ಲ?!
Published 27 ಆಗಸ್ಟ್ 2024, 21:09 IST
Last Updated 27 ಆಗಸ್ಟ್ 2024, 21:09 IST
ಅಕ್ಷರ ಗಾತ್ರ

ಬೆಂಗಳೂರಿನ ಗುಂಡಿ ತುಂಬಿದ ರಸ್ತೆಗಳಲ್ಲಿ ಧಬಕ್ಕನೆ ಇಳಿದ ಸ್ಕೂಟರು, ಮರಳಿ ಗುಂಡಿಯನ್ನು ಏರಲಾರದೆ ಕುಳಿತ ಅನುಭವ ಆಗಿರಬೇಕಲ್ಲ?! ಹಿಂದಿನಿಂದ ಯಾವುದೋ ಟ್ರಕ್ಕು ಅವಸರದಲ್ಲಿ ಬಂದು ಗುದ್ದಿರದಿದ್ದರೆ, ಅಕ್ಕಪಕ್ಕದ ವಾಹನಸವಾರರ ನೆರವಿನಿಂದ ಗಾಡಿಯನ್ನು ಮೇಲೆತ್ತಿರುತ್ತೀರಿ. ಬಿಬಿಎಂಪಿಯನ್ನೂ ಸ್ಕೂಟರು ತಯಾರಿಸಿದವರನ್ನೂ ಗುಂಡಿ ಕಾಣದಂತೆ ನೀರು ತುಂಬಿದ ಮಳೆಯನ್ನೂ ಒಟ್ಟೊಟ್ಟಿಗೇ ಬೈದಿರುತ್ತೀರಿ. ಇದೋ. ದಕ್ಷಿಣ ಕೊರಿಯಾದ ‘ಕೊರಿಯಾ ಇನ್ಸ್‌ಟಿಟ್ಯೂಟ್‌ ಆಫ್‌ ಮೆಶಿನರಿ ಅ್ಯಂಡ್ ಮೆಟೀರಿಯಲ್ಸ್‌ ಟೆಕ್ನಾಲಜಿ ಸಂಸ್ಥೆ’ಯ ಇಂಜಿನಿಯರುಗಳ ಕನಸು ನನಸಾದರೆ ನಿಮಗೆ ಈ ಬೈಯುವ ಕಷ್ಟ ಕಡಿಮೆಯಾದೀತು! ಈ ಸಂಸ್ಥೆಯ ಇಂಜಿನಿಯರ್‌ ಸುಂಗ್ಯುಕ್‌ ಸಾಂಗ್‌ ಮತ್ತು ಸಂಗಡಿಗರು, ಉರುಳಲಾಗದ ಅಡ್ಡಿ ಎದುರಾದಾಗ ಮೃದುವಾಗಿ ಆಕಾರ ಕಳೆದುಕೊಳ್ಳುವ ಹಾಗೂ ಅನಂತರ ತಕ್ಷಣವೇ ಮರಳಿ ಗಟ್ಟಿಯಾಗಿ, ಉರುಳುವ ಚಕ್ರವಾಗುವಂತೆ ಮಾಡುವ ವಸ್ತುವನ್ನು ರೂಪಿಸಿದ್ದಾರೆ. ಇದರಿಂದ ರೂಪಿಸಿದ ಗಾಲಿಗಳು ವಾಹನವನ್ನು ರಸ್ತೆ ಗುಂಡಿಗಳಷ್ಟೆ ಏಕೆ, ಮೆಟ್ಟಿಲುಗಳ ಮೇಲೂ ಸರಾಗವಾಗಿ ಉರುಳಿ ಹತ್ತುವಂತೆ ಮಾಡಿವೆ – ಎಂದು ‘ಸೈನ್ಸ್‌ ರೊಬಾಟಿಕ್ಸ್‌’ ಪತ್ರಿಕೆ ಮೊನ್ನೆ ವರದಿಯನ್ನು ಮಾಡಿದೆ.

ಚಕ್ರಗಳು ಮಾನವನು ಮಾಡಿದ ಆವಿಷ್ಕಾರಗಳಲ್ಲಿ ಬೆಂಕಿಯ ನಂತರದ ಅತ್ಯಂತ ಪುರಾತನ ಆವಿಷ್ಕಾರ. ಅತಿ ಪುರಾತನ ಯಂತ್ರ ಎಂದರೂ ತಪ್ಪಲ್ಲ. ಭಾರವನ್ನು ಸರಾಗವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಚಕ್ರದಷ್ಟು ಅನುಕೂಲಿಯಾದ ಸಾಧನ ಇನ್ನೊಂದಿಲ್ಲ. ಕಡಿಮೆ ಬಲವನ್ನು ಬಳಸಿ ಹೆಚ್ಚು ಭಾರವನ್ನು ಕದಲಿಸುವ ಸಾಧನ ಇದು. ಉರುಳುವಂತಹ ವೃತ್ತಾಕಾರದ ಆಕಾರವೇ ಚಕ್ರದ ಈ ಸಾಮರ್ಥ್ಯಕ್ಕೆ ಮೂಲ. ಆ ಆಕಾರವಿಲ್ಲದಾಗ ಉರುಳುವುದು ಎಷ್ಟು ಕಷ್ಟ ಎನ್ನವುದು ಟೈರು ಪಂಕ್ಚರ್‌ ಆಗಿ ಆಕಾರ ಕಳೆದುಕೊಂಡ ಸೈಕಲನ್ನೋ ಬೈಕನ್ನೋ ದೂಡುವಾಗ ಅನುಭವವಾಗಿರುತ್ತದೆ. ಚಕ್ರಗಳ ಆಕಾರ ಹೀಗೆ ವೃತ್ತಾಕಾರವಾಗಿ, ಧೃಢವಾಗಿ ಇಲ್ಲದಿದ್ದರೆ ಉರುಳುವುದು ಅಸಾಧ್ಯ; ಚಪ್ಪಟೆ ಚಕ್ರಗಳು ಇಲ್ಲದಿರುವುದು ಇದೇ ಕಾರಣಕ್ಕೆ.

ಚಕ್ರಕ್ಕೆ ಸಾಮರ್ಥ್ಯವನ್ನು ಒದಗಿಸುವ ಅದರ ಆಕಾರವೇ ಕೆಲವೊಮ್ಮೆ ಕಷ್ಟವನ್ನೂ ತಂದಿಡುತ್ತದೆ. ಉದಾಹರಣೆಗೆ, ಚಕ್ರದ ಉದ್ದಗಲದ ಅರ್ಧದಷ್ಟು ಎತ್ತರದ ಯಾವ ವಸ್ತುವೂ ಚಕ್ರವು ಮುಂದೆ ಉರುಳದಂತೆ ತಡೆದುಬಿಡುತ್ತದೆ. ದೊಡ್ಡ ದೊಡ್ಡ ತಡೆಗಳು ಅಥವಾ ಚಪ್ಪಟೆಯ ಅಡ್ಡಿಗಳನ್ನು ದೊಡ್ಡ ಚಕ್ರಗಳು ದಾಟುವುದು ಸುಲಭ. ಹೀಗಾಗಿಯೇ ಬಿಎಂಟಿಸಿ ಬಸ್ಸು, ಟ್ರಕ್ಕುಗಳು ಸರಾಗವಾಗಿ ಓಡಾಡುವ ಹಳ್ಳಗಳು ತುಂಬಿದ ರಸ್ತೆಗಳು ಸ್ಕೂಟರು ಚಾಲಕರಿಗೆ ದೊಡ್ಡ ಎವರೆಸ್ಟಿನಂತೆ ಅನಿಸುತ್ತವೆ.

ಚಕ್ರ ಉರುಳದಂತೆ ಅಡ್ಡಿಯಾಗುವ ಇಂತಹ ತಡೆಗಳನ್ನು ದಾಟುವುದಕ್ಕೆ ಇಂಜಿನಿಯರುಗಳು ಹಲವಾರು ಉಪಾಯಗಳನ್ನು ಮಾಡಿದ್ದಾರೇನೋ ನಿಜ. ಚಕ್ರಗಳನ್ನೇ ದೊಡ್ಡದಾಗಿಸುವುದು, ಚಕ್ರವನ್ನು ಆಧರಿಸಿರುವ ಆ್ಯಕ್ಸಲ್ಲೇ ಬಾಗುವಂತೆ ಮಾಡುವುದು, ಅಥವಾ ಚಕ್ರದ ಸುತ್ತಲೂ ಚಪ್ಪಟೆಯಾದಂತಹ ಬೆಲ್ಟು ಹಾಕುವುದು ಮುಂತಾದ ಉಪಾಯಗಳನ್ನು ಗುರುತಿಸಿದ್ದಾರೆ. ಮಿಲಿಟರಿ ಟ್ಯಾಂಕುಗಳ ಚಕ್ರಗಳ ಸುತ್ತಲೂ ಚಪ್ಪಟೆಪಟ್ಟಿ ಇರುವುದನ್ನು ಕಂಡಿದ್ದೀರಷ್ಟೆ. ಮೂಲ ಆಕಾರ ವೃತ್ತವೇ ಇದ್ದರೂ ಇಂತಹ ಉಪಾಯಗಳಿಂದ ಚಕ್ರವು ಚಪ್ಪಟೆಯ ಅಡ್ಡಿಗಳನ್ನು ನಿರಾತಂಕವಾಗಿ ದಾಟಬಹುದು. ಚಕ್ರದ ಆಕಾರವೇ ಬದಲಾಗುವಂತೆ ಮಾಡಿದರೆ ಹೇಗೆ? ಇದು ಸುಂಗ್ಯುಕ್‌ ಸಾಂಗ್‌ ತಂಡದ ಆಲೋಚನೆ.

ದೃಢವಾದ ವೃತ್ತಾಕಾರದ ಚಕ್ರ ಅಡ್ಡಿ ಎದುರಾದಾಗ ನೀರಿನಂತೆ ಆಕಾರವನ್ನು ಕಳೆದುಕೊಂಡು, ಅಡ್ಡಿ ದಾಟಿದ ನಂತರ ಮರಳಿ ವೃತ್ತಾಕಾರಕ್ಕೆ ಬರುವಂತೆ ಮಾಡಬಹುದಲ್ಲ – ಎನ್ನುವುದು ಇವರ ಆಲೋಚನೆ. ಈ ಆಲೋಚನೆಗೆ ಪ್ರೇರಣೆ ನೀರಿನ ಹನಿ. ಗಾಜಿನ ತಟ್ಟೆಯ ಮೇಲೆ ಉರುಳುವ ಹನಿಗಳನ್ನು ನೀವು ನೋಡಿರಬೇಕು. ಮರಳಿನ ಕಣವೇನಾದರೂ ಅಡ್ಡಿಯಾದರೆ ಅದರ ಮೇಲೆ ಸಾಗುವಾಗ ಆಕಾರ ಬದಲಿಸಿಕೊಳ್ಳುತ್ತದೆ. ನಂತರ ಮತ್ತೆ ದುಂಡಗಾಗುತ್ತದೆ. ಮೊದಲಿನಂತೆಯೇ ಉರುಳುತ್ತದೆ. ಚಕ್ರವನ್ನೂ ಹೀಗೆಯೇ ಅಡ್ಡಿಯನ್ನು ದಾಟುವಾಗಷ್ಟೆ ಮೃದುವಾಗುವಂತೆ, ಹಾಗೂ ನಂತರ ಗಟ್ಟಿಯಾಗಿ, ಧೃಢವಾಗುವಂತೆ ಮಾಡಿದರೆ ಹೇಗೆ?

ಈ ಆಲೋಚನೆಯಿಂದ ಸಾಂಗ್‌ ತಂಡ ವಿಶಿಷ್ಟವಾದೊಂದು ಚಕ್ರವನ್ನು ವಿನ್ಯಾಸ ಮಾಡಿ ಪರೀಕ್ಷಿಸಿದೆ. ಚಕ್ರದ ಅಂಚಿನಲ್ಲಿ ಬೈಸಿಕಲ್ಲಿನ ಸರಪಳಿಯಂತಹ ಸರಪಳಿಯಿದೆ. ಇದು ಬೈಸಿಕಲ್ಲಿನ ಸರಪಳಿಯಂತೆಯೇ ಆಕಾರ ಬದಲಿಸಬಲ್ಲುದು. ಆದರೆ ಸಾಧಾರಣ ಸ್ಥಿತಿಯಲ್ಲಿ ಈ ಸರಪಳಿಯ ಕೊಂಡಿಗಳು ಎದುರು ಬದಿಯಲ್ಲಿರುವ ಕೊಂಡಿಯ ಜೊತೆಗೆ ಗಟ್ಟಿಯಾದ ತಂತಿಯಿಂದ ಬಂಧಿಸಲ್ಪಟ್ಟಿರುತ್ತವೆ. ಈ ತಂತಿ ಚಕ್ರದ ನಡುವೆ ಇರುವ ‘ಹಬ್’ ಅಥವಾ ಅಕ್ಷಚಕ್ರದ ಒಳಗಿನಿಂದ ತೂರಿ ಹೋಗುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಚಕ್ರ ಸಂಪೂರ್ಣ ದುಂಡಗಿನ ಆಕಾರ ತಳೆಯುತ್ತದೆ. ಆದರೆ ಕಲ್ಲೋ ಮೆಟ್ಟಿಲೋ ಎದುರಾದಾಗ, ಅವುಗಳ ಒತ್ತಡದಿಂದಾಗಿ, ಆ ಭಾಗದಲ್ಲಿನ ತಂತಿಗಳು ಮಡಚಿಕೊಳ್ಳುತ್ತವೆ. ಅಂಚು ಒಳಗೆ ಬಾಗುತ್ತದೆ. ಇದೊಂದು ರೀತಿಯಲ್ಲಿ ನೀರು ಮರಳಿನ ಕಣದ ಮೇಲೆ ಹರಿದ ಹಾಗೆ. ಅನಂತರ ಅಡ್ಡಿ ಬದಲಾದಾಗ ತಂತಿ ಮತ್ತೆ ಮೊದಲಿನಂತೆ ಸೆಟೆದುಕೊಳ್ಳುತ್ತದೆ, ದೃಢವಾಗುತ್ತದೆ.

ಜಾಣತನದಿಂದ ಹೀಗೆ ಚಕ್ರದ ವಿನ್ಯಾಸವನ್ನು ಬದಲಿಸಿ, ಅದು ಧೃಢವಾಗಿಯೂ ಮೃದುವಾಗಿಯೂ ಇರುವಂತೆ ಸಾಂಗ್‌ ತಂಡ ಮಾಡಿದೆ. ಇದು ನಿಜಕ್ಕೂ ಕೆಲಸ ಮಾಡಬಲ್ಲುದೇ ಎನ್ನುವುದನ್ನೂ ಪರೀಕ್ಷಿಸಿದೆ. ನೂರಿಪ್ಪತ್ತು ಕಿಲೋಗ್ರಾಂ ತೂಕದ ವಾಹನವೊಂದಕ್ಕೆ ಇಂತಹ ನಾಲ್ಕು ಚಕ್ರಗಳನ್ನು ಜೋಡಿಸಿ ವಿವಿಧ ಆಕಾರದ ಅಡ್ಡಿಗಳನ್ನು ದಾಟಲು ನೀಡಿದೆ. ಚಕ್ರದ ತ್ರಿಜ್ಯಕ್ಕಿಂತ ಎತ್ತರದ ಮೆಟ್ಟಿಲುಗಳನ್ನು ಹತ್ತುವಂತೆಯೂ ಮಾಡಿದೆ. ಈ ಎಲ್ಲ ಪರೀಕ್ಷೆಗಳಲ್ಲಿಯೂ ಚಕ್ರ ಯಶಸ್ವಿಯಾಗಿದೆಯಂತೆ. ಅಡ್ಡಿ ಎದುರಾದಾಗ ಸಾಧಾರಣವಾಗಿ ಇರುವ ಸೆಟೆತಕ್ಕಿಂತ ಅರವತ್ತರಷ್ಟು ಸೆಟೆತಕ್ಕೆ ಕುಸಿದು, ಈ ಅಡ್ಡಿಗಳನ್ನು ಚಕ್ರ ದಾಟಿತಂತೆ. ಒಂದಡಿ ಅಗಲದ ಚಕ್ರ ಒಂದೂವರೆ ಅಡಿ ಎತ್ತರದ ಮೆಟ್ಟಿಲನ್ನು ಸರಾಗವಾಗಿ ಹತ್ತಿತು ಎಂದು ಸಾಂಗ್‌ ವರದಿ ಮಾಡಿದ್ದಾರೆ.

ಹಾಗಿದ್ದರೆ ಇನ್ನೇನು ಈ ಚಕ್ರಗಳನ್ನೇ ತರಿಸಿಕೊಂಡು ಬಿಡೋಣ! ಬೆಂಗಳೂರಿನಲ್ಲಿ ಸುಗಮವಾಗಿ ಸ್ಕೂಟರು ಓಡಿಸಬಹುದು ಎಂದಿರಾ? ತಾಳಿ. ಇದನ್ನು ಬೆಂಗಳೂರಿನ ಸ್ಕೂಟರಿಗೆಂದು ಸಾಂಗ್‌ ಮಾಡಲಿಲ್ಲ. ರೋಗಿಗಳನ್ನು ಕೊಂಡೊಯ್ಯುವ ಗಾಲಿಕುರ್ಚಿಗಳ ಗಾಲಿಗಳಿಗಾಗಿ ಮಾಡಿದ್ದಾರೆ. ಚಕ್ರಗಳಿಗೆ ಇನ್ನಷ್ಟು ಮೃದುವಾದ ಹೊದಿಕೆ, ಸರಪಳಿಗೆ ದೂಳು ಕೂರದಂತಹ ವ್ಯವಸ್ಥೆಯನ್ನೂ, ತುಸು ದೊಡ್ಡದಾದ ಚಕ್ರಗಳನ್ನೂ ರೂಪಿಸಿ ಪರೀಕ್ಷಿಸಬೇಕಂತೆ. ಅನಂತರ ಬಳಕೆಗೆ ಇದು ಸಿದ್ಧವಾಗಬಹುದು ಎನ್ನುತ್ತಾರೆ. ಸಾಂಗ್‌. ಇರಲಿ. ಕಾಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT