ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ: ಬಾಣಂತಿಸ್ರಾವ– ಅಪಾಯ ಸೂಚಿಸಬಲ್ಲ ಸಾಧನ

(ಚಿತ್ರಕೃಪೆ: ಕ್ರಿಸ್ಟೀನ್ ಓ ಬ್ರಿಯೆನ್)
Published 5 ಡಿಸೆಂಬರ್ 2023, 22:56 IST
Last Updated 5 ಡಿಸೆಂಬರ್ 2023, 22:56 IST
ಅಕ್ಷರ ಗಾತ್ರ

ಮೊನ್ನೆ ಸುಪ್ರಸಿದ್ಧ ಲೇಖಕಿಯೊಬ್ಬರು ‘ಬಳೆ ಆಕ್ಯುಪಂಕ್ಚರಿನಂತೆ; ಅದನ್ನು ಧರಿಸುವುದರಿಂದ ಆರೋಗ್ಯಕ್ಕೆ ಒಳಿತು’ ಎಂದು ಹೇಳಿದ್ದು ಸುದ್ದಿಯಾಗಿತ್ತು. ಗಾಜಿನ ಬಳೆಯೋ, ಚಿನ್ನದ ಬಳೆಯೋ ಎಂಬುದನ್ನು ಅವರು ಸ್ಪಷ್ಟ ಪಡಿಸಿರಲಿಲ್ಲವೆನ್ನಿ. ಬಳೆ ನಿಜವಾಗಿಯೂ ಆರೋಗ್ಯವನ್ನು ಕಾಪಾಡುತ್ತದೆಯೋ ಇಲ್ಲವೋ, ಬಾಣಂತಿಯರ ಆರೋಗ್ಯದ ಮೇಲೆ ಕಣ್ಣಿಡುವ ಬ್ಯಾಂಡೇಜೊಂದನ್ನು ಅಮೆರಿಕೆಯ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಬಯೋಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಕ್ರಿಸ್ಟೀನ್ ಎಂ. ಓಬ್ರಿಯೆನ್ ಮತ್ತು ಸಂಗಡಿಗರು ಸಿದ್ಧಪಡಿಸಿದ್ದಾರಂತೆ. ಇದನ್ನು ಧರಿಸಿದರೆ ಬಾಣಂತಿಯರಲ್ಲಿ ಅತಿ ಸ್ರಾವ ಆಗುವುದನ್ನು ಮುಂದಾಗಿಯೇ ಊಹಿಸಬಹುದು ಎಂದು ‘ಬಯೋಮೆಡಿಕಲ್ ಆಪ್ಟಿಕಲ್ ಎಕ್ಸ್ಪ್ರೆಸ್’ ಪತ್ರಿಕೆ ವರದಿ ಮಾಡಿದೆ.

ಹೆರಿಗೆ ಎನ್ನುವುದು ಹೆಣ್ಣಿಗೆ ಸಿಹಿ ಹಾಗೂ ಸಂಕಟ – ಎರಡನ್ನೂ ತರುತ್ತದಷ್ಟೆ. ಹೊಸ ಜೀವದ ಆಗಮನ ಖುಷಿ ತರುವ ಹಾಗೆಯೇ, ಹೆರಿಗೆಯ ನೋವು, ಅದಕ್ಕೂ ಮುನ್ನ ಹಾಗೂ ಅನಂತರ ಅನುಭವಿಸಬೇಕಾದ ಆರೋಗ್ಯದ ಸಮಸ್ಯೆಗಳು ಸಂಕಟವನ್ನು ತರುವಂಥವು. ಹೆರಿಗೆಯ ನಂತರ ಬಾಣಂತಿಯರು ಅನುಭವಿಸುವ ಸಂಕಟಗಳಲ್ಲಿ ಪ್ರಮುಖವಾದದ್ದು ಅತಿ ರಕ್ತಸ್ರಾವ ಹಾಗೂ ಸೋಂಕು. ಇವುಗಳಲ್ಲಿ ಅತಿ ರಕ್ತಸ್ರಾವ ಜೀವಕ್ಕೆ ಅಪಾಯವನ್ನೊಡ್ಡುವಂಥದ್ದು. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಏನಿಲ್ಲವೆಂದರೂ 45 ಸಾವಿರದಿಂದ 60 ಸಾವಿರ ಬಾಣಂತಿಯರು ಹೆರಿಗೆಯ ನಂತರ ಸಾವನ್ನಪ್ಪುತ್ತಾರೆ. ಇವರಲ್ಲಿ ಬಹುತೇಕ ಅಂದರೆ ಶೇ. 25ರಿಂದ 60ರಷ್ಟು ಮಹಿಳೆಯರು ಸಾಯುವುದಕ್ಕೆ ಹೆರಿಗೆಯ ನಂತರ ಆಗುವ ಅತಿ ರಕ್ತಸ್ರಾವ ಕಾರಣ.

ಹೆರಿಗೆಯ ನಂತರ ಅಲ್ಪ ಸಮಯ ಕಳೆದಮೇಲೆ ರಕ್ತಸ್ರಾವ ತಾನಾಗಿಯೇ ನಿಲ್ಲುತ್ತದೆ. ನಿಲ್ಲಬೇಕು. ಆದರೆ ಕೆಲವರಲ್ಲಿ ಇದು ಆಗದೇ ಹೋಗಬಹುದು. ಹೆರಿಗೆಯ ನಂತರ ಅರ್ಧ ಲೀಟರಿನಷ್ಟು ರಕ್ತಸ್ರಾವ ಆಗುವುದು ಸಾಮಾನ್ಯ. ಇದನ್ನೂ ಮೀರಿದರೆ ಆಗ ಅದನ್ನು ಹೆರಿಗೆಯ ನಂತರದ ಅತಿರಕ್ತಸ್ರಾವ ಅಥವಾ ‘ಪೋಸ್ಟ್ ಪಾರ್ಟಲ್ ಹಿಮರೇಜ್’ (ಪಿಪಿಎಚ್) ಎಂದು ವೈದ್ಯರು ಗುರುತಿಸುತ್ತಾರೆ. ಸಿಸೇರಿಯನ್ ಶಸ್ತ್ರಕ್ರಿಯೆಗೊಳಗಾದವರಲ್ಲಿ ಒಂದು ಲೀಟರಿಗಿಂತಲೂ ಹೆಚ್ಚು ರಕ್ತ ನಷ್ಟವಾದಾಗ ‘ಪಿಪಿಎಚ್’ ಎಂದು ಹೇಳಲಾಗುತ್ತದೆ.

ಬಾಣಂತಿಯರಲ್ಲಿ ರಕ್ತಸ್ರಾವ ಯಾವಾಗ ಬೇಕಿದ್ದರೂ ಅತಿಯಾಗಬಹುದು. ಹೆರಿಗೆಯ ನಂತರ ಒಂದೇ ದಿನದೊಳಗೆ ರಕ್ತ ಅತಿಯಾಗಿ ನಷ್ಟವಾಗಬಹುದು. ಇದು ಆಸ್ಪತ್ರೆಯಲ್ಲಿ ಇರುವಾಗಲೇ ತಿಳಿಯುವುದರಿಂದ, ಅದಕ್ಕೆ ತಕ್ಕ ಚಿಕಿತ್ಸೆ ನೀಡಬಹುದು. ಆದರೆ ಕೆಲವರಲ್ಲಿ ಆರೇಳು ವಾರದವರೆಗೂ ರಕ್ತಸ್ರಾವ ಆಗುತ್ತಲೇ ಇರಬಹುದು. ಇದು ಸ್ವಲ್ಪ ಸಮಸ್ಯೆಯ ವಿಷಯ. ಹೆರಿಗೆಯಾಗಿ ಮನೆಗೆ ಮರಳಿದ ನಂತರ ಈ ರಕ್ತಸ್ರಾವ ಆಗುತ್ತದೆ. ಒಮ್ಮೆಲೇ ಇದು ಆಗದಿರುವುದರಿಂದ ಯಾವಾಗ ಅಪಾಯ ಬಂದೆರಗುತ್ತದೆ ಎಂದು ಊಹಿಸುವುದೂ ಕಷ್ಟೆ. ಬಾಣಂತಿಯರ ಸಾವಿಗೆ ಇದುವೇ ಕಾರಣ.

ಹೇಗೇ ಇರಲಿ, ಅತಿ ರಕ್ತಸ್ರಾವ ತಾಯಿಯ ಆರೋಗ್ಯಕ್ಕೆ ಹಾನಿಕರವೇ. ರಕ್ತಸ್ರಾವ ಅತಿಯಾಗಬಹುದು ಎಂಬುದನ್ನು ಊಹಿಸುವುದು ಸಾಧ್ಯವಾದರೆ, ಅಥವಾ ಅಗುವ ರಕ್ತಸ್ರಾವವನ್ನು ಕುಗಿಸುವುದು ಸಾಧ್ಯವಾದರೆ ಹುಟ್ಟಿದ ಮಕ್ಕಳು ಅನಾಥರಾಗುವುದನ್ನು ತಡೆಯಬಹುದು. ತಂತ್ರಜ್ಞಾನ ಇದಕ್ಕೆ ನೆರವಾಗಬಹುದು. ಅಂತಹ ತಂತ್ರಜ್ಞಾನದಲ್ಲಿ ಒಬ್ರಿಯೆನ್ ತಂಡ ಸಿದ್ಧಪಡಿಸಿರುವ ಈ ಸಾಧನವೂ ಒಂದು.

ಪಿಪಿಎಚ್ ಸಂಕಟವನ್ನು ಕಡಿಮೆ ಮಾಡಲು ಹಲವು ಉಪಾಯಗಳಿವೆ. ರಕ್ತಸ್ರಾವ ಏಕೆ ಹೆಚ್ಚಾಗಿದೆ ಎನ್ನುವುದನ್ನು ಅವಲಂಬಿಸಿ ಈ ಚಿಕಿತ್ಸೆಗಳು ಇರುತ್ತವೆ. ಉದಾಹರಣೆಗೆ, ಗರ್ಭಕೋಶಕ್ಕೆ ರಕ್ತವನ್ನು ಪೂರೈಸುವ ನಾಳ ಒಡೆದಿರಬಹುದು. ಗರ್ಭದ್ವಾರ ಹೆರಿಗೆಯ ವೇಳೆ ಹರಿದು ರಕ್ತಸ್ರಾವ ಆಗುತ್ತಿರಬಹುದು. ಶಿಶುವಿಗೆ ಆಹಾರ ಪೂರೈಸುವ ಹೊಕ್ಕಳ ಬಳ್ಳಿಯ ಸ್ಥಾನ, ಹಾಗೂ ಅದು ಹರಿದು ಬೀಳುವ ಸಮಯ, ಹರಿಯುವ ರೀತಿಯೂ ರಕ್ತಸ್ರಾವವವನ್ನು ಹೆಚ್ಚಿಸಬಹುದು.

ಕಾರಣಗಳೇನು ಎಂಬುದಕ್ಕೆ ತಕ್ಕಂತೆ ಪರಿಹಾರಗಳೂ ಇರುತ್ತವೆ. ಗರ್ಭಾಶಯದ ಗೋಡೆಯ ಒತ್ತಡ ಹೆಚ್ಚಾಗಿ ರಕ್ತಸ್ರಾವ ಆಗುವುದುಂಟು. ಅಂತಹ ಸಂದರ್ಭಗಳಲ್ಲಿ ಗರ್ಭಕೋಶದೊಳಗೆ ಬಲೂನನ್ನು ಇಟ್ಟು, ಗಾಳಿ ತುಂಬಿ, ಗರ್ಭಕೋಶದ ಗೋಡೆ ಜರಿಯದಂತೆ ಮಾಡುವ ಉಪಾಯವಿದೆ. ರಕ್ತಸ್ರಾವಕ್ಕೆ ಕಾರಣವಾದ ಹಾರ್ಮೋನುಗಳನ್ನು ನಿಯಂತ್ರಿಸಲು ಬೇರೆ ಔಷಧಗಳನ್ನೂ, ಹಾರ್ಮೋನನ್ನೂ ನೀಡುವುದುಂಟು. ಶಸ್ತ್ರಕ್ರಿಯೆಯನ್ನೂ ಮಾಡುವುದುಂಟು. ಎರಡು ವರ್ಷಗಳ ಹಿಂದೆ ಗರ್ಭಕೋಶದೊಳಗೆ ನಿರ್ವಾತವನ್ನು ಉಂಟು ಮಾಡುವ ಜಾಡಾ ಎನ್ನುವ ಸಾಧನವೊಂದನ್ನು ಯಶಸ್ವಿಯಾಗಿ ಬಳಸಲಾಗಿತ್ತು. ರೋಗಿಗಳಲ್ಲಿ ಬಳಸಲು ಅದಕ್ಕೆ ಅಮೆರಿಕೆಯ ಆಹಾರ ಮತ್ತು ಔಷಧ ನಿಕಾಯ (ಎಫ್‌ಡಿಎ) ಅನುಮತಿಯೂ ದೊರೆತಿತ್ತು. ‘ಭಾರತದಲ್ಲಿ ಬಕ್ರಿ ಬಲೂನು ಎನ್ನುವ ಬಲೂನು ವ್ಯವಸ್ಥೆಯೇ ಸದ್ಯಕ್ಕೆ ಇರುವ ಉಪಾಯ’ ಎನ್ನುತ್ತಾರೆ, ಬೆಂಗಳೂರಿನ ಪ್ರಸೂತಿ ತಜ್ಞೆ ಡಾ. ಶಾಂತಲ.

ಆದರೂ ತಕ್ಷಣ ಕಾಣದ ರಕ್ತಸ್ರಾವ ಅನಂತರ ಹೆಚ್ಚುವ ಸಾಧ್ಯತೆಗಳಿವೆ. ಹೀಗಾದಾಗ ಆಸ್ಪತ್ರೆಯಿಂದ ಮನೆಗೆ ಮರಳಿದ ಬಾಣಂತಿ ಇದ್ದಕ್ಕಿದ್ದ ಹಾಗೆ ಅಸ್ವಸ್ಥವಾಗಬಹುದು. ರಕ್ತಹೀನಳಾಗಬಹುದು. ಈ ಸಾಧ್ಯತೆಗಳನ್ನು ಮುಂದಾಗಿಯೇ ಗುರುತಿಸಲು ಈಗ ತಕ್ಕ ಸಾಧನಗಳಿಲ್ಲ. ಮನೆಯಲ್ಲಿ ಎಷ್ಟು ಪ್ಯಾಡುಗಳನ್ನು ಬಳಸಿದೆವು ಎಂದೋ, ಆಸ್ಪತ್ರೆಯಲ್ಲಿ ರಕ್ತದೊತ್ತಡ, ಹೃದಯದ ಬಡಿತ ಮೊದಲಾವನ್ನು ಅಗಾಗ್ಗೆ ಪರಿಶೀಲಿಸಿ ತೀರ್ಮಾನಿಸಬೇಕಾಗುತ್ತದೆ. ರಕ್ತಸ್ರಾವದ ಪ್ರಮಾಣವನ್ನು ತಿಳಿಸುವ ಸಾಧನವಿದ್ದರೆ ಹೇಗೆ ಎಂಬ ಐಡಿಯಾವೇ ಒಬ್ರಿಯೆನ್ ತಂಡದ ಸಾಧನೆಗೆ ಮೂಲ.

ಮುಂಗೈ ಮೇಲೆ ಧರಿಸುವ ಈ ಸಾಧನ, ಲೇಸರು ಬೆಳಕನ್ನು ಚೆಲ್ಲಿ ರಕ್ತನಾಳದಲ್ಲಿ ರಕ್ತದ ಹರಿವು ಹೇಗಿದೆ ಎಂಬುದನ್ನೂ, ರಕ್ತದ ಒತ್ತಡವನ್ನೂ ಗಮನಿಸುತ್ತದೆ. ಅದರಲ್ಲಾಗುತ್ತಿರುವ ಏರುಪೇರಿಗೂ ರಕ್ತಸ್ರಾವಕ್ಕೂ ಸಂಬಂಧವಿರುವುದರಿಂದ, ಜೊತೆಗಿರುವ ಇಲೆಕ್ಟ್ರಾನಿಕ್ ಸಾಧನ ಅದನ್ನು ಗುರುತಿಸಿ, ತಿಳಿಸಬಲ್ಲುದು. ಈ ಸಾಧನವನ್ನು ಸದ್ಯಕ್ಕೆ ಕೃತಕ ರಕ್ತನಾಳದಲ್ಲಿ ಹಾಲಿನಂತಹ ದ್ರವವನ್ನು ವಿವಿಧ ಒತ್ತಡದಲ್ಲಿ ಹರಿಸಿ ಪರೀಕ್ಷಿಸಲಾಗಿದೆ. ತದನಂತರ ಹಂದಿಗಳಲ್ಲಿ ಕೃತಕವಾಗಿ ರಕ್ತಸ್ರಾವವನ್ನು ಉಂಟುಮಾಡಿ, ಪರೀಕ್ಷಿಸಲಾಗಿದೆ. ರಕ್ತನಾಳದಲ್ಲಿ ಆಗುವ ಒತ್ತಡ ಹಾಗೂ ರಕ್ತದ ಹರಿವಿನ ಪ್ರಮಾಣವನ್ನೇ ಗುರುತಿಸಿ, ರಕ್ತಸ್ರಾವ ಎಷ್ಟಾಗುತ್ತದೆಂದು ಇದು ಊಹಿಸಬಲ್ಲುದು.

ಮುಂಗೈಯಲ್ಲಿ ಧರಿಸುವ ಸ್ಮಾರ್ಟ್ ವಾಚುಗಳು ಸದ್ಯಕ್ಕೆ ಹೃದಯದ ಬಡಿತ ಹಾಗೂ ರಕ್ತದ ಆಕ್ಸಿಜನ್ ಪ್ರಮಾಣವನ್ನಷ್ಟೆ ಅಳೆಯುತ್ತವೆ. ರಕ್ತದ ಹರಿವು ಹಾಗೂ ಒತ್ತಡದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅದಾಗುತ್ತಿರುವಂತೆಯೇ ಪತ್ತೆ ಮಾಡಿ ಸೂಚಿಸುವ ಈ ಸಾಧನ ಬಾಣಂತಿಯರ ಆರೋಗ್ಯದ ಮೇಲೆ ಕಣ್ಗಾವಲಿಡಲು ಅನುಕೂಲಿ. ಬಾಣಂತಿಯರಿಗೆ ಚಿನ್ನದ ಬಳೆ ತೊಡಿಸುವೆವೋ ಇಲ್ಲವೋ, ಈ ಸಾಧನವನ್ನು ತೊಡಿಸುವ ದಿನಗಳು ಶೀಘ್ರದಲ್ಲಿಯೇ ಬರಬಹುದು. ‘ನಮ್ಮ ಸ್ಟಾರ್ಟಪ್ ಆರ್ಮರ್ ಮೆಡಿಕಲ್ ಈ ಸಾಧನವನ್ನು ಇನ್ನೊಂದೆರಡು ವರ್ಷಗಳಲ್ಲಿ ಮಾರಾಟ ಮಾಡಲಿದೆ’ ಎನ್ನುತ್ತಾರೆ, ಕ್ರಿಸ್ಟೀನ್ ಓಬ್ರಿಯೆನ್. ‘ಕೇವಲ ಬಾಣಂತಿಯರಿಗಷ್ಟೆ ಅಲ್ಲ. ಹೃದಯ ರೋಗಿಗಳಿಗೂ, ರಕ್ತದೊತ್ತಡ ಅತಿ ಹೆಚ್ಚಿರುವವರಿಗೂ ಇದು ಆರೋಗ್ಯದ ಮೇಲೆ ಕಣ್ಣಿಡಲು ನೆರವಾಗುತ್ತದೆ’ ಎನ್ನುವುದು ಅವರ ವಿಶ್ವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT