ಗುರುವಾರ , ಮಾರ್ಚ್ 30, 2023
24 °C

ಅಂತರ್ಜಾಲ ಆಟದ ಗೀಳು: ತಡೆ ಹೇಗೆ?

ಡಾ. ಸಚಿನ್ ಎನ್. Updated:

ಅಕ್ಷರ ಗಾತ್ರ : | |

Prajavani

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಫೋನ್‌ಗಳು ಕೈಗೆಟಕುವ ದರದಲ್ಲಿ ಲಭ್ಯವಿರು ವುದು ಹಾಗೂ ಅಂತರ್ಜಾಲ ಬಹು ಅಗ್ಗದ ದರದಲ್ಲಿ ದೊರಕುವ ಕಾರಣ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಈ ಅಂತರ್ಜಾಲದ ಮಾಯಾಜಾಲದಲ್ಲಿ ಸಿಲುಕಿದ್ದಾರೆ. ಸಂಶೋಧನೆಗಳ ಪ್ರಕಾರ 18– 26 ವರ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಂತರ್ಜಾಲದ ಆಟಗಳ ಗೀಳಿಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಭಾರತ ಸರ್ಕಾರವು ಪಬ್ಜಿ ಎನ್ನುವ (PUBG – Player Unknown’s Battlegrounds) ಒಂದು ಆಟದ ಅಪ್ಲಿಕೇಶನ್ ಅನ್ನು ನಿಷೇಧಿಸಿ, ಅದನ್ನು ಬಳಸದಂತೆ ಆದೇಶ ಹೊರಡಿಸಿದ್ದು ಗೊತ್ತೇ ಇದೆ.

ಏಕೆ ಈ ಅಂತರ್ಜಾಲದ ಆಟ ಇಷ್ಟು ಮಹತ್ವ ಪಡೆ ದಿತ್ತು ಎಂಬುದನ್ನು ಮತ್ತೆ ಹೇಳಬೇಕಾದ ಅವಶ್ಯಕತೆ ಇಲ್ಲ. ಈ ಆಟವನ್ನು ಸುಲಭವಾಗಿ ಅಪ್ಲಿಕೇಶನ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿತ್ತು. ಸ್ಪರ್ಧಾತ್ಮಕವಾದ ಈ ಆಟ ಹಾಗೂ ಕೆಲವೊಮ್ಮೆ ಎದುರಾಳಿಯ ಜೊತೆ ಗೆಲುವಿನ ಉನ್ಮಾದ ಈ ಆಟವನ್ನು ಮುಂದುವರಿಸಲು ಪ್ರೇರೇಪಿಸುವಂಥದ್ದು. ಹಲವಾರು ಬಾರಿ ಗೆಳೆಯರು ಆಟವಾಡಲು ಪ್ರಚೋದಿಸುತ್ತಿದ್ದರು. ಅತ್ಯುತ್ತಮ ಆಟಗಾರರು ತಮ್ಮ ಗುಂಪಿನಲ್ಲಿ ಸಿಗುವ ಗೌರವಕ್ಕಾಗಿ ಹಾತೊರೆಯುತ್ತಿದ್ದರು. ಖಿನ್ನತೆ ಹಾಗೂ ಆತಂಕದ ಕಾಯಿಲೆ ಇರುವವರು ಒತ್ತಡವನ್ನು ಈ ಆಟ ಆಡುವ ಮೂಲಕ ನಿವಾರಿಸಿಕೊಳ್ಳಲು ವಿಫಲ ಪ್ರಯತ್ನ ಪಡುತ್ತಿದ್ದರು.

ಇದೇ ತರಹದ ಅಂತರ್ಜಾಲದ ಕೆಲವು ಆಟಗಳು ಮಕ್ಕಳು, ಹದಿಹರೆಯದವರ ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುವಂಥವು.

ದುಷ್ಪರಿಣಾಮಗಳು

ಆಟದಲ್ಲಿ ಗೆಲ್ಲಲಾಗದವರು ಹತಾಶೆಗೆ ಒಳಗಾಗಬಹುದು. ಆಟ ಆಡುತ್ತ ಆಕ್ರಮಣಶೀಲ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಈ ಗೀಳಿಗೆ ಒಳಗಾದ ಸುಮಾರು ಮಂದಿ ಹದಿಹರೆಯದವರು ಆತ್ಮಹತ್ಯೆ ಮಾಡಿಕೊಂಡ ಅಥವಾ ಆಟ ಆಡದಂತೆ ಬುದ್ಧಿ ಹೇಳಿದ ಪೋಷಕರನ್ನು ಕೊಂದಂತಹ ಅಮಾನುಷ ಉದಾಹರಣೆಗಳನ್ನು ತಿಳಿದಿರಬಹುದು.

ಈ ರೀತಿಯ ಆಟ ಆಡುವ ಪ್ರತಿಯೊಬ್ಬರಲ್ಲಿಯೂ ಕೂಡ ಮೇಲೆ ತಿಳಿಸಿದಂತಹ ವರ್ತನೆಗಳು ಕಾಣಿಸಬಹುದೇ? ಇದಕ್ಕೆ ಸಮರ್ಪಕ ಉತ್ತರವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ವರ್ತನೆ ವಿಭಿನ್ನವಾಗಿರಬಹುದು. ನಿಮ್ಹಾನ್ಸ್ ಕ್ಲಿನಿಕಲ್‌ ಸೈಕಾಲಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಷಟ್‌ ಕ್ಲಿನಿಕ್‌ ಸಂಯೋಜಕ ಡಾ. ಮನೋಜ್ ಕುಮಾರ್ ಶರ್ಮ ಅವರು ಹೇಳುವ ಪ್ರಕಾರ, ಹೆಚ್ಚಿನ ಸಮಯ ಅಂತರ್ಜಾಲದಲ್ಲಿ ಕಳೆಯುವವರು ಎಲ್ಲರೂ ಗೀಳಿಗೆ ಒಳಗಾಗುವುದಿಲ್ಲ. ಕೆಲವರಲ್ಲಿ ಮಾತ್ರ ಕಡುಬಯಕೆ, ಕಡ್ಡಾಯವಾಗಿ ಆಡಬೇಕೆನ್ನುವ ಉತ್ಕಟತೆ ಹಾಗೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದ ಹಂತ ಹಾಗೂ ದುಷ್ಪರಿಣಾಮಗಳು– ಈ ನಾಲ್ಕರಲ್ಲಿ ಮೂರು ಅಥವಾ ಹೆಚ್ಚು ಅಂಶಗಳು ಹೌದಾದಲ್ಲಿ ಇದನ್ನು ಗೀಳು ಎಂದು ಪರಿಗಣಿಸಬಹುದು.

ತಡೆಗಟ್ಟಲು ಸರಳ ತಂತ್ರಗಳು

l ಪೋಷಕರು ತಮ್ಮ ಮಕ್ಕಳಿಗೆ ಅಂತರ್ಜಾಲ ಉಪಯೋಗಿಸಲು ಮತ್ತು ಆಟ ಆಡಲು ನಿಗದಿತ ಸಮಯ ಮೀಸಲಿಡಬಹುದು.

l ಕುಟುಂಬದವರೆಲ್ಲರೂ ಸೇರಿ ಪ್ರವಾಸ ಹೋಗಬಹುದು ಅಥವಾ ಮನೆಯಲ್ಲಿಯೇ ಗುಣಮಟ್ಟದ ಸಮಯ ಒಟ್ಟಾಗಿ ಕಳೆಯಬಹುದು.

l ತಮ್ಮ ಮಕ್ಕಳು ಈ ರೀತಿಯ ಆಟಗಳಲ್ಲಿ ಅತೀ ಹೆಚ್ಚು ಸಮಯ ಕಳೆಯುತ್ತಿದ್ದಾರೆಂದು ತಿಳಿದು ಬಂದಲ್ಲಿ ಬಯ್ಯುವುದು, ಹೊಡೆಯುವುದು ಮಾಡದೇ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬಹುದು.

l ತಮ್ಮ ಮಕ್ಕಳಿಗೆ ಬೇರೆ ಏನಾದರೂ ಮಾನಸಿಕವಾಗಿ ಒತ್ತಡವಿದೆಯೇ ಎಂದು ತಿಳಿದು ಮಾನಸಿಕ ಆರೋಗ್ಯ ವೃತ್ತಿಪರರರಿಂದ ಸಲಹೆ ಪಡೆಯಬಹುದಾಗಿದೆ.

l ಇಂತಹ ಆಟಗಳು ಒಂದು ಗೀಳಾಗಿ ದಿನನಿತ್ಯದ ಕಾರ್ಯಗಳಲ್ಲಿ ಅಥವಾ ವಿದ್ಯಾರ್ಥಿಯ ಅಭ್ಯಾಸಕ್ಕೆ ಅಡಚಣೆಯಾದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ಮಕ್ಕಳನ್ನು ಈ ಗೀಳಿನಿಂದ ತಪ್ಪಿಸಬಹುದು. ಷಟ್ ಕ್ಲಿನಿಕ್, ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು ಇಲ್ಲಿ ಕೂಡ ನೆರವು ಪಡೆಯಬಹುದು.

 (ಲೇಖಕ: ಸೀನಿಯರ್ ರೆಸಿಡೆಂಟ್ ವೈದ್ಯ, ಮನೋವೈದ್ಯಕೀಯ ವಿಭಾಗ, ನಿಮ್ಹಾನ್ಸ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು