7

ಲ್ಯಾಪ್‌ಟಾಪ್‌ ಸ್ವಚ್ಛವಾಗಿಡುವುದು ಹೇಗೆ?

Published:
Updated:

ಕೀಬೋರ್ಡ್‌ ಮೇಲೆ ಗಲೀಜು, ಕೈಬೆರಳಿನ ಗುರುತುಗಳು, ಸ್ಕ್ರೀನ್‌ ಮೇಲಿನ ಎಣ್ಣೆಜಿಡ್ಡಿನಂತಹ ಕಲೆಗಳು... ಲ್ಯಾಪ್‌ಟಾಪ್‌ ಮೇಲೆ ಈ ರೀತಿಯ ಗಲೀಜು ಇದ್ದರೆ ಅದನ್ನು ಮುಟ್ಟಲೂ ಮನಸು ಬರುವುದಿಲ್ಲ. ಅದನ್ನು ಸ್ವಚ್ಛಗೊಳಿಸುವುದು ಕೆಲವರಿಗೆ ಸವಾಲು ಎನಿಸಿದರೆ ಮತ್ತೆ ಕೆಲವರಿಗೆ ಸಮಯದ ಅಭಾವ ಕಾಡುತ್ತಿರುತ್ತದೆ. ಲ್ಯಾಪ್‌ಟಾಪ್‌ ಅನ್ನು ಕಡಿಮೆ ಅವಧಿಯಲ್ಲಿ, ಸುಲಭವಾಗಿ ಸ್ವಚ್ಛಗೊಳಿಸುವ ಬಗ್ಗೆ ತಜ್ಞರು ಕೆಲವು ಸಲಹೆ ನೀಡಿದ್ದಾರೆ. 

ಲ್ಯಾಪ್‌ಟಾಪ್‌ ಸಂಪೂರ್ಣ ಸ್ವಚ್ಛವಾಗಿದ್ದರೆ, ಅದು ಹೊಸದೇನೋ ಎನ್ನುವ ತೃಪ್ತಿ ನಿಮಗೆ ಕೊಡುತ್ತದೆ. ಲ್ಯಾಪ್‌ಟಾಪ್‌ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕೌಶಲ ನಿಮಗಿದ್ದರೆ, ಅದನ್ನು  ಮಾರಾಟ ಮಾಡಲು ನಿಮಗೆ ಹೆಚ್ಚು ಸಹಾಯವಾಗುತ್ತದೆ. ಗಲೀಜಾಗಿರುವ ಲ್ಯಾಪ್‌ಟಾಪ್‌ ಅನ್ನು ನಿಮಗೆ ಮಾರಾಟ ಮಾಡುವುದೂ ಕಷ್ಟ, ಬೇರೆಯವರಿಗೆ ಖರೀದಿಸಲೂ ಕಷ್ಟ. 

ನಿಮ್ಮ ಕಂಪ್ಯೂಟರ್‌ ಅನ್ನು ಸ್ವಚ್ಛವಾಗಿಟ್ಟುಕೊಳ್ಳಲು ನೀವು ಹೆಚ್ಚು ವ್ಯಯಿಸಬೇಕಿಲ್ಲ, ಕಷ್ಟಪಡಬೇಕಾಗಿಯೂ ಇಲ್ಲ ಎನ್ನುತ್ತಾರೆ ಕ್ಲೀನಿಂಗ್‌ ಎಕ್ಸ್‌ಪರ್ಟ್‌ ಜಾಲಿ ಕೇರ್‌. ಲ್ಯಾಪ್‌ಟಾಪ್‌ ಸ್ವಚ್ಛಗೊಳಿಸಲು ಕೇವಲ ನಾಲ್ಕು ವಸ್ತುಗಳಿದ್ದರೆ ಸಾಕು. ಕಂಪ್ಯೂಟರ್‌ನ ಹೊರಭಾಗಕ್ಕೆ ಲೇಪಿಸಿ, ಉಜ್ಜುವಷ್ಟು ಆಲ್ಕೊಹಾಲ್, ಮೆತ್ತನೆಯ ಬಟ್ಟೆ, ಹತ್ತಿ ಕಡ್ಡಿಗಳು (ಬಡ್ಸ್‌) ಹಾಗೂ  ಕ್ಯಾನ್ಡ್‌ ಏರ್‌ – ಇಷ್ಟಿದ್ದರೆ ಎಷ್ಟೇ ಕೊಳೆಯಾಗಿರುವ ಲ್ಯಾಪ್‌ಟಾಪ್‌ ಅನ್ನೂ ಫಳಫಳ ಹೊಳೆಯುವಂತೆ ಮಾಡಬಹುದು ಎನ್ನುತ್ತಾರೆ ಜಾಲಿ. 

ಅದರಲ್ಲಿಯೂ, ಹೆಚ್ಚು ಐಸೊಪ್ರೊಪಿಲ್‌ ಆಲ್ಕೊಹಾಲ್‌ ಅನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸುವುದು ಸೂಕ್ತ. ಇದರಿಂದ ಕಂಪ್ಯೂಟರ್‌ನ ಒಳಭಾಗಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಎಣ್ಣೆಯ ಜಿಡ್ಡು ಹೆಚ್ಚಾಗಿದ್ದರೆ, ಮೆಲಮೈನ್‌ ಸ್ಪಂಜಿನಿಂದ ಉಜ್ಜುವುದು ಹೆಚ್ಚು ಉಪಯೋಗಕ್ಕೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. 

ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ಸ್‌ ಸ್ಟೋರ್‌ಗಳಲ್ಲಿ ಇದಕ್ಕೆಂದೇ ಕೆಲಸಗಾರರು ಇರುತ್ತಾರೆ. ಆದರೆ, ಅವರು ದುಬಾರಿ ಶುಲ್ಕ ಕೇಳಬಹುದು. ಅದರ ಬದಲು, ನೀವೇ ನಿಮ್ಮ ಲ್ಯಾಪ್‌ಟಾಪ್‌ ಸ್ವಚ್ಛಗೊಳಿಸಲು ಯೋಚಿಸುವುದು ಉತ್ತಮ ಎಂದು ಅವರು ಹೇಳುತ್ತಾರೆ.

ಮೊದಲು, ಲ್ಯಾಪ್‌ಟಾಪ್‌ ಸ್ಥಗಿತಗೊಳಿಸಿ, ಪವರ್‌ ಕೇಬಲ್‌ಗಳ ಸಂಪರ್ಕ ಕಡಿತಗೊಳಿಸಬೇಕು. ಬ್ಯಾಟರಿಯನ್ನು ತೆಗೆಯಬೇಕು (ಸುಲಭವಾಗಿ ಬರುವಂತಿದ್ದರೆ ಮಾತ್ರ). ಕಂಪ್ಯೂಟರ್‌ನ ಒಳಭಾಗಗಳನ್ನು ಮೊದಲು ಸ್ವಚ್ಛಗೊಳಿಸಿಕೊಳ್ಳಬೇಕು. ಗಾಳಿಯನ್ನು ಈ ಬಿಡಿಭಾಗಗಳ ಮೇಲೆ ಊದಬೇಕು. ಆಗ ಅದರ ಮೇಲೆ ಕುಳಿತಿದ್ದ ದೂಳು ಮಾಯವಾಗುತ್ತದೆ.  ಹತ್ತಿ ಕಡ್ಡಿಗಳಿಂದಲೂ (ಬಡ್ಸ್‌)  ಸ್ವಚ್ಛಗೊಳಿಸಬಹುದು. 

ಕಂಪ್ಯೂಟರ್‌ ಒಳಗಿನ ಭಾಗವನ್ನು ಸ್ವಚ್ಛಗೊಳಿಸಿ ಜೋಡಿಸಿದ ನಂತರ, ಅದರ ಮೇಲ್ಮೈಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಮೆತ್ತನೆಯ ಬಟ್ಟೆಯ (ಮೈಕ್ರೋಫೈಬಲ್‌ ಕ್ಲಾಥ್‌) ಮೇಲೆ ಕೆಲವು ಹನಿ ಅಲ್ಕೋಹಾಲ್‌ ಹಾಕಬೇಕು. ಆದರೆ, ಬಟ್ಟೆಯನ್ನು ಸಂಪೂರ್ಣ ಒದ್ದೆಯನ್ನಾಗಿ ಮಾಡಬಾರದು. ಕೀಬೋರ್ಡ್‌ನ ಕೀಗಳ ನಡುವಣ ಸಣ್ಣ ಜಾಗವನ್ನು ಹತ್ತಿಕಡ್ಡಿಗಳಿಂದ ಸ್ವಚ್ಛಗೊಳಿಸಬಹುದು. 

ಸ್ಕ್ರೀನ್‌ ಸ್ವಚ್ಛಗೊಳಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನೇ ನೀಡಬೇಕಾಗುತ್ತದೆ. ಸ್ವಚ್ಛವಾಗಿರುವ ಮೆತ್ತನೆಯ ಬಟ್ಟೆಯ ಮೇಲೆ ಮೊದಲು ಸ್ವಲ್ಪ ನೀರಿನ ಹನಿಗಳನ್ನು ಹಾಕಿಕೊಂಡು ಒರೆಸಬೇಕು. ಡೆಲ್‌ ಮತ್ತು ಲೆನೊವೊದಂತಹ ಕಂಪನಿಗಳು ಐಸೊಪ್ರೊಪಿಲ್‌ ಅಲ್ಕೊಹಾಲ್‌ ಮತ್ತು ನೀರಿನ ಸಮಪ್ರಮಾಣದ ಮಿಶ್ರಣವಿರುವ ಸ್ಪ್ರೇ ಬಾಟಲ್‌ಗಳನ್ನು ತಯಾರಿಸಿದ್ದಾರೆ. ಇದನ್ನು ಉಪಯೋಗಿಸಿಕೊಂಡೂ ಸ್ಕ್ರೀನ್‌ ಸ್ವಚ್ಛಗೊಳಿಸಬಹುದು. ಮನೆಯ ನೆಲವನ್ನು ಸ್ವಚ್ಛಗೊಳಿಸಲು ಉಪಯೋಗಿಸುವಂತಹ ರಾಸಾಯನಿಕಗಳನ್ನು ಲ್ಯಾ‍ಪ್‌ಟಾಪ್‌ ಶುದ್ಧಗೊಳಿಸಲು ಬಳಸಬಾರದು. 

ಸ್ವಚ್ಛಗೊಳಿಸಿದ ನಂತರವೂ, ಕೆಲವು ಲ್ಯಾಪ್‌ಟಾಪ್‌ಗಳಲ್ಲಿ ಸಿಗರೇಟ್‌ ಹೊಗೆಯ ವಾಸನೆ ಬರುತ್ತಿರುತ್ತದೆ. ಇದನ್ನು ಹೋಗಲಾಡಿಸುವುದು ದೊಡ್ಡ ಸವಾಲು. ಕಂಪ್ಯೂಟರ್‌ನ ಒಳಗಿನಿಂದ ಈ ರೀತಿಯ ವಾಸನೆ ಬರುವುದನ್ನು ಪತ್ತೆ ಹೆಚ್ಚುವುದೂ ಕಷ್ಟವಾಗುತ್ತದೆ. ಇದಕ್ಕಾಗಿ, ವಿಶ್ವದ ಅತ್ಯುತ್ತಮ ನೈಸರ್ಗಿಕ ಡಿಯೊಡೈಜರ್‌ (ವಾಸನೆ ನಿವಾರಿಸುವ) ಎನಿಸಿರುವ ಇದ್ದಿಲನ್ನು (ಚಾರ್‌ಕೋಲ್‌) ಬಳಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ನ್ಯೂಯಾರ್ಕ್‌ ಟೈಮ್ಸ್‌

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !