ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಗುರವಾದ ವಿನೂತನ ಐಪ್ಯಾಡ್ ಪ್ರೊ ಬಿಡುಗಡೆ ಮಾಡಿದ ಆ್ಯಪಲ್

Published 10 ಮೇ 2024, 23:05 IST
Last Updated 10 ಮೇ 2024, 23:05 IST
ಅಕ್ಷರ ಗಾತ್ರ

ತೆಳು ಮತ್ತು ಹಗುರವಾದ ವಿನ್ಯಾಸವಿರುವ ವಿನೂತನ ಐಪ್ಯಾಡ್ ಪ್ರೊ ಹಾಗೂ ಇತರ ಕೆಲವು ಸಾಧನಗಳನ್ನು ಆ್ಯಪಲ್ ಈಚೆಗೆ ಅನಾವರಣಗೊಳಿಸಿದೆ.

ಸಿಲ್ವರ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರುವ ವಿನೂತನ ಐಪ್ಯಾಡ್ ಪ್ರೊ 13 ಇಂಚು ಮತ್ತು 11 ಇಂಚು ಮಾದರಿಗಳಲ್ಲಿ ಲಭ್ಯವಾಗಲಿದೆ. ಜಗತ್ತಿನ ಅತ್ಯಾಧುನಿಕವಾದ ಅಲ್ಟ್ರಾ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ (Ultra Retina XDR) ಯನ್ನು ಈ ಐಪ್ಯಾಡ್‌ಗಳು ಹೊಂದಿರುತ್ತವೆ.

ಹೊಸ ಐಪ್ಯಾಡ್‌ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಉನ್ನತ ಮಟ್ಟಕ್ಕೇರಿಸುವ ಹೊಚ್ಚ ಹೊಸ ಎಂ4 ಚಿಪ್‌ನೊಂದಿಗೆ ಹೊಸ ಐಪ್ಯಾಡ್ ಪ್ರೊ ಶಕ್ತಿಶಾಲಿ ಸಾಧನವಾಗಿರುತ್ತದೆ ಎಂದು ಆ್ಯಪಲ್ ಹೇಳಿದೆ.

ವರ್ಚುವಲ್ ಕಾರ್ಯಕ್ರಮದಲ್ಲಿ ಹೊಸ ಐಪ್ಯಾಡ್ ಪ್ರೊ, ಎಂ4 ಚಿಪ್ ಜೊತೆಗೆ, ಆ್ಯಪಲ್ ಪೆನ್ಸಿಲ್ ಪ್ರೊ, ತೆಳುವಾದ ಮತ್ತು ಹಗುರವಾದ ಮ್ಯಾಜಿಕ್ ಕೀಬೋರ್ಡ್ ಸಾಧನಗಳನ್ನೂ ಪರಿಚಯಿಸಲಾಗಿದ್ದು, ಇವುಗಳು ಮೇ 15ರಿಂದ ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ. ಮುಂಗಡ ಕಾಯ್ದಿರಿಸುವಿಕೆ ಈಗಾಗಲೇ ಆರಂಭವಾಗಿದೆ.

ಹೊಸ ಐಪ್ಯಾಡ್ ಪ್ರೊ ಇದುವರೆಗಿನ ಅತ್ಯಂತ ತೆಳುವಾದ ಆ್ಯಪಲ್ ಉತ್ಪನ್ನವಾಗಿದ್ದು, 11 ಇಂಚಿನ ಮಾದರಿಯು ಕೇವಲ 5.3 ಮಿ.ಮೀ. ಹಾಗೂ 13 ಇಂಚು ಮಾದರಿಯು ಕೇವಲ 5.1 ಮಿ.ಮೀ. ತೆಳು ಇದೆ. ಒಂದು ಪೌಂಡ್‌ಗಿಂತಲೂ (ಸುಮಾರು 450 ಗ್ರಾಂ) ಕಡಿಮೆ ತೂಕ ಹೊಂದಿದೆ.

ಅಲ್ಟ್ರಾ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ, ಎಂ4 ಚಿಪ್, ವಿನೂತನ ಕೃತಕ ಬುದ್ಧಿಮತ್ತೆ (ಎಐ) ಸಾಮರ್ಥ್ಯ, ಆ್ಯಪಲ್ ಪೆನ್ಸಿಲ್ ಪ್ರೊ ಹಾಗೂ ಮ್ಯಾಜಿಕ್ ಕೀಬೋರ್ಡ್‌ಗಳೊಂದಿಗೆ, ಹೊಸ ಐಪ್ಯಾಡ್ ಪ್ರೊಗೆ ಸರಿಸಾಟಿ ಯಾವುದೂ ಇಲ್ಲ ಎಂದು ಆ್ಯಪಲ್‌ನ ಹಿರಿಯ ಉಪಾಧ್ಯಕ್ಷ ಜಾನ್ ಟ್ರೆಮಸ್ ಹೇಳಿದ್ದಾರೆ.

ಈಗ ಹೊಸದಾಗಿ ಬರುತ್ತಿರುವ ಎಲ್ಲ ಸಾಧನಗಳೂ ಎಐ ಅಪ್ಪಿಕೊಂಡಿರುವುದರಿಂದ, ಹೊಸ ಐಪ್ಯಾಡ್ ಪ್ರೊದಲ್ಲಿ ಕೂಡ ಕೃತಕ ಬುದ್ಧಿಮತ್ತೆಯ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದ್ದು, ಇದಕ್ಕೆ ಪೂರಕವಾಗಿ ಐಪ್ಯಾಡ್ ಒಎಸ್ 17 ಅನ್ನೂ ಅಭಿವೃದ್ಧಿಪಡಿಸಲಾಗಿದೆ ಎಂದು ಆ್ಯಪಲ್ ತಿಳಿಸಿದೆ.

ಇದೇ ಸಂದರ್ಭದಲ್ಲಿ ಶಕ್ತಿಶಾಲಿ ಐಪ್ಯಾಡ್ ಒಎಸ್ 17ರ ವೈಶಿಷ್ಟ್ಯಗಳನ್ನೂ ವಿವರಿಸಲಾಯಿತು. ಇದಲ್ಲದೆ, ಲಾಜಿಕ್ ಪ್ರೊ ಎಂಬ ಸ್ಟುಡಿಯೋ ಅಸಿಸ್ಟೆಂಟ್ ವೈಶಿಷ್ಟ್ಯಗಳಿರುವ ಆಡಿಯೊ ಕಿರು ತಂತ್ರಾಂಶವನ್ನು ಘೋಷಿಸಲಾಯಿತು. ಜೊತೆಗೆ, ಫೈನಲ್ ಕಟ್ ಪ್ರೊ, ಲೈವ್ ಮಲ್ಟಿಕ್ಯಾಮ್ ವೈಶಿಷ್ಟ್ಯ ಸಹಿತವಾದ ವಿಡಿಯೊ ಪ್ರೊಡಕ್ಷನ್ ಕಿರು ತಂತ್ರಾಂಶವನ್ನೂ ಘೋಷಿಸಲಾಯಿತು.

ಐಪ್ಯಾಡ್ ಪ್ರೊ ಅನ್ನು ಆ್ಯಪಲ್ ಆನ್‌ಲೈನ್ ಸ್ಟೋರ್‌ನಲ್ಲಿ ಆರ್ಡರ್ ಮಾಡಬಹುದಾಗಿದ್ದು, ಮೇ 15ರಿಂದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ ಇರುತ್ತವೆ. 11 ಹಾಗೂ 13 ಇಂಚು ಡಿಸ್‌ಪ್ಲೇ ಇರುವ ಸಾಧನಗಳು 256ಜಿಬಿ, 512 ಜಿಬಿ, 1 ಟಿಬಿ ಹಾಗೂ 2 ಟಿಬಿ ಮಾದರಿಗಳಲ್ಲಿ ಲಭ್ಯ ಇರುತ್ತವೆ.

ಬೆಲೆ

11 ಇಂಚಿನ ವೈಫೈ ಮಾದರಿ ಐಪ್ಯಾಡ್ ಪ್ರೊ ಬೆಲೆ ₹99,900ರಿಂದ ಮತ್ತು ವೈಫೈ+ಸೆಲ್ಯುಲಾರ್ ಮಾದರಿಯ ಬೆಲೆ ₹1,19,900ರಿಂದ ಆರಂಭವಾಗುತ್ತದೆ. 13 ಇಂಚಿನ ವೈಫೈ ಮಾದರಿ ₹1,29,900ರಿಂದ ಮತ್ತು ವೈಫೈ+ಸೆಲ್ಯುಲಾರ್ ಮಾದರಿ ₹1,49,900ರಿಂದ ಆರಂಭವಾಗುತ್ತದೆ.

ಹೊಸ ಆ್ಯಪಲ್ ಪೆನ್ಸಿಲ್ ಪ್ರೊ ಬೆಲೆ ₹11,900, ಆ್ಯಪಲ್ ಪೆನ್ಸಿಲ್ (ಯುಎಸ್‌ಬಿ-ಸಿ) ಬೆಲೆ ₹7,900, ಮ್ಯಾಜಿಕ್ ಕೀಬೋರ್ಡ್ ಬೆಲೆ ₹29,900ರಿಂದ ಆರಂಭವಾಗುತ್ತದೆ. ಆ್ಯಪಲ್ ಲಾಜಿಕ್ ಪ್ರೊ ಕಿರು ತಂತ್ರಾಂಶವು ಹಾಲಿ ಬಳಕೆದಾರರಿಗೆ ಮೇ 13ರಿಂದ ಉಚಿತ ಅಪ್‌ಗ್ರೇಡ್ ಆಗಿ ದೊರೆಯಲಿದೆ. ಅದೇ ರೀತಿ, ಫೈನಲ್ ಕಟ್ ಪ್ರೊ ವಿಡಿಯೊ ಎಡಿಟಿಂಗ್ ಕಿರು ತಂತ್ರಾಂಶಕ್ಕೂ ಮಾಸಿಕ/ವಾರ್ಷಿಕ ಬಳಕೆ ಶುಲ್ಕ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT