ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪೊ ಇಂಡಿಯಾ: 5ಜಿ ತಂತ್ರಜ್ಞಾನದ 'ಎಫ್‌19 ಪ್ರೊ' ಫೋನ್‌ ಬಿಡುಗಡೆ

Last Updated 9 ಮಾರ್ಚ್ 2021, 12:21 IST
ಅಕ್ಷರ ಗಾತ್ರ

ನವದೆಹಲಿ: ಒಪ್ಪೊ ಇಂಡಿಯಾ, 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಎಫ್‌19 ಪ್ರೊ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಐ ಆಧಾರಿತ ವಿಡಿಯೊ ವ್ಯವಸ್ಥೆ ಇರುವುದರಿಂದ ವಿಡಿಯೊಗ್ರಫಿಯಲ್ಲಿ ಆಸಕ್ತಿಯಿರುವವರಿಗೆ ಇದು, ಹೇಳಿ ಮಾಡಿಸಿದ ಫೋನ್‌ ಎಂದೇ ಕಂಪನಿ ಹೇಳಿಕೊಂಡಿದೆ.

48ಎಂಪಿ ಕ್ವಾಡ್‌ ಕ್ಯಾಮೆರಾ ನೀಡಲಾಗಿದೆ. 8ಎಂಪಿ ವೈಡ್‌ ಆ್ಯಂಗಲ್ ಕ್ಯಾಮೆರಾ, 2ಎಂಪಿ ಮೊನೊ ಕ್ಯಾಮೆರಾ ಹಾಗೂ 2ಎಂಪಿ ಮ್ಯಾಕ್ರೊ ಮೊನೊ ಕ್ಯಾಮೆರಾ ಒಳಗೊಂಡಿದ್ದು, ಉತ್ಕೃಷ್ಟದ ವಿಡಿಯೊ ಸೆರೆಹಿಡಿಯಲು ಸಾಧ್ಯವಾಗಲಿದೆ. ವಿಡಿಯೊ ಅಥವಾ ಫೋಟೊ ತೆಗೆಯುವಾಗ ಬೆಳಕು ಹೆಚ್ಚು ಅಥವಾ ಕಡಿಮೆ ಇದ್ದರೆ, ಎಐ ತಾನಾಗಿಯೇ ಸರಿಪಡಿಸಿಕೊಂಡು ಉತ್ತಮ ಚಿತ್ರವನ್ನು ಪಡೆಯಲು ಸಹಕಾರಿಯಾಗಲಿದೆ.

ಒಪ್ಪೊ ಎಫ್‌19 ಪ್ರೊ ಮತ್ತು ಎಫ್‌19 ಪ್ರೊ+5ಜಿ, ಈ ಎರಡು ಮಾದರಿಗಳ ಫೋನ್‌ಗಳು ಬಿಡುಗಡೆಯಾಗಿದ್ದು, ಬೆಲೆ ಕ್ರಮವಾಗಿ ₹21,490 (256ಜಿಬಿ ಸಂಗ್ರಹ ಸಾಮರ್ಥ್ಯಕ್ಕೆ ₹23,490) ಮತ್ತು ₹25,990 ನಿಗದಿಯಾಗಿದೆ. ಸ್ಪೇಸ್‌ ಸಿಲ್ವರ್‌ ಮತ್ತು ಫ್ಲೂಯಿಡ್‌ ಬ್ಲ್ಯಾಕ್‌ ಎರಡು ಬಣ್ಣಗಳಲ್ಲಿ ಫೋನ್‌ ಸಿಗಲಿದೆ. ಅಮೆಜಾನ್‌ ಸೇರಿದಂತೆ ಇಕಾಮರ್ಸ್‌ ವೇದಿಕೆಗಳಲ್ಲಿ ಮಾರ್ಚ್‌ 17ರಿಂದ ಹೊಸ ಫೋನ್‌ಗಳನ್ನು ಖರೀದಿಸಬಹುದಾಗಿದೆ. ಆದರೆ, ಈಗಿನಿಂದಲೇ ಪ್ರೀಬುಕ್‌ ಮಾಡಲು ಅವಕಾಶವಿದೆ.

ಫೋನ್‌ನ ಮುಂದಿನ ಮತ್ತು ಹಿಂದಿನ ಕ್ಯಾಮೆರಾಗಳನ್ನು ಒಟ್ಟಿಗೆ ತೆರೆದು ರೆಕಾರ್ಡ್ ಮಾಡಬಹುದಾಗಿದೆ. ವ್ಲಾಗಿಂಗ್‌ ಮಾಡುವವರಿಗೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ತುಣುಕು ಹಂಚಿಕೊಳ್ಳುವವರಿಗೆ ಈ ಆಯ್ಕೆಯು ಉಪಯುಕ್ತವಾಗಿದೆ. ರಾತ್ರಿ ಸಮಯದಲ್ಲಿ ಹಾಗೂ ಹೆಚ್ಚು ಅಲುಗಾಟವಿರುವ ಸಂದರ್ಭದಲ್ಲೂ ಅತ್ಯುತ್ತಮ ಗುಣಮಟ್ಟದ ವಿಡಿಯೊ ಚಿತ್ರೀಕರಿಸುವ ವ್ಯವಸ್ಥೆ ಇದೆ.

2.4 ಗಿಗಾ ಹರ್ಟ್ಸ್‌ ಸಾಮರ್ಥ್ಯದ ಮೀಡಿಯಾಟೆಕ್‌ 5ಜಿ 800ಯು ಚಿಪ್‌ ಅಳವಡಿಸಲಾಗಿದ್ದು, ಸ್ಮಾರ್ಟ್‌ 5ಜಿ ತಂತ್ರಜ್ಞಾನದಿಂದ ವೇಗವಾಗಿ ದತ್ತಾಂಶವನ್ನು ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. 4ಜಿ/5ಜಿ ಡಾಟಾ ಸ್ವಿಚ್‌, 50ವ್ಯಾಟ್‌ ಫ್ಲ್ಯಾಷ್‌ ಚಾರ್ಚ್‌ ನೀಡಲಾಗಿದೆ. 5 ನಿಮಿಷ ಚಾರ್ಜ್‌ ಮಾಡಿ ಸುಮಾರು 3.5 ಗಂಟೆಗಳಷ್ಟು ವಿಡಿಯೊ ವೀಕ್ಷಿಸಬಹುದಾಗಿದೆ. ಎಫ್‌19 ಪ್ರೊ ಫೋನ್‌ನಲ್ಲಿ 30ವ್ಯಾಟ್‌ಫ್ಲ್ಯಾಷ್‌ ಚಾರ್ಜ್‌ ವ್ಯವಸ್ಥೆ ಇದೆ.

6.43 ಇಂಚು ಪಂಚ್‌–ಹೋಲ್‌, ಎಫ್‌ಎಚ್‌ಡಿ+ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಇದೆ. ಡಿಸ್‌ಪ್ಲೇ ಮೇಲೆ ಫಿಂಗರ್‌ಪ್ರಿಂಟ್‌ ಸೆನ್ಸರ್‌ ನೀಡಲಾಗಿದೆ. ಸುಲಲಿತ ಕಾರ್ಯಾಚರಣೆಗಾಗಿ ಕಲರ್‌ಒಎಸ್‌ 11 ಅಳವಡಿಸಲಾಗಿದೆ. ಫ್ಲೆಕ್ಸ್‌ ಡ್ರಾಪ್‌, 3 ಫಿಂಗರ್‌ ಟ್ರಾನ್ಸ್‌ಲೇಟ್‌, ಗೂಗಲ್‌ ಕಾಸ್ಟ್‌ ಸೇರಿದಂತೆ ಹಲವು ಇನ್‌ಬಿಲ್ಟ್‌ ಆಯ್ಕೆಗಳಿವೆ.

ಎಫ್‌19–5ಜಿ ಫೋನ್‌ನಲ್ಲಿ 8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯವಿದೆ. ಎಫ್‌19 ಪ್ರೋ 8ಜಿಬಿ ರ್‍ಯಾಮ್‌ ಜೊತೆಗೆ 128ಜಿಬಿ ಮತ್ತು 256ಜಿಬಿ ಸಂಗ್ರಹ ಎರಡು ಮಾದರಿಗಳಲ್ಲಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT