ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ‘ವಾಚ್‌’ ಕರಗುವ ಸಮಯ...

Last Updated 10 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಚಿಕ್ಕಂದಿನಲ್ಲಿ ಟ್ರಾನ್ಸಿಸ್ಟರ್, ವಾಕ್ಮಾನ್, ಟೇಪ್‌ ರೆಕಾರ್ಡರ್‌ನ ಸೆಲ್ ಸಿಕ್ಕರೆ ಅದೇನೋ ಕುತೂಹಲ; ಅದನ್ನು ಆಟಿಕೆಯಾಗಿ ಉಪಯೋಗಿಸಿಯೇ ಕಸದಬುಟ್ಟಿ ಸೇರಿಸುತ್ತಿದ್ದದ್ದು. ಕೆಲವರಂತೂ ಕಲ್ಲಿನಲ್ಲಿ ಜಜ್ಜಿ ನಜ್ಜುಗುಜ್ಜಾಗಿಸದ ಹೊರತು ಎಸೆಯುತ್ತಿರಲಿಲ್ಲ. ಪಟಾಕಿಯೊಳಗಿನ ರಾಸಾಯನಿಕದಂತೆ ಬ್ಯಾಟರಿಗಳೊಳಗಿನ ವಸ್ತುವಿನ ಬಗ್ಗೆಯೂ ತಿಳಿದುಕೊಳ್ಳುವ ಯೋಜನೆ ಮಕ್ಕಳದ್ದು. ಆದರೆ ಹೆಚ್ಚಿನವರಿಗೆ ತಿಳಿಯದ ವಿಷಯವೆಂದರೆ ಅದರಿಂದಾಗುವ ಅಪಾಯ.

ಯಾವುದೇ ಬಗೆಯ ಸೆಲ್ ಆಗಿರಲಿ, ವಿದ್ಯುತ್–ವಿದ್ಯುನ್ಮಾನ ಉಪಕರಣಗಳ ಭಾಗವಾಗಿರಲಿ, ಅದು ಖಂಡಿತ ಆಟಿಕೆಯಲ್ಲ. ಅವುಗಳಲ್ಲಿ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಲು ಬಳಸಲಾಗಿರುವ ಕ್ಯಾಡ್ಮಿಯಂ, ಮರ್ಕ್ಯುರಿ, ಸೀಸದಂತಹ ಭಾರದ ಲೋಹಗಳಿರುತ್ತವೆ; ಜೊತೆಗೆ ಅನೇಕ ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಇವೆಲ್ಲಾ ನಮ್ಮ ಅವಿವೇಕತನದಿಂದ ಭೂಮಿಯ, ನೀರಿನ, ಗಾಳಿಯ ಪಾಲಾಗಿ ನಮ್ಮನ್ನೇ, ನಮ್ಮ ಮುಂದಿನ ಜನಾಂಗವನ್ನೇ ಕಾಡುತ್ತವೆ ಎಂಬುದು ಕಹಿಸತ್ಯ. ಇಂತಹದ್ದೇ ವಿಷಕಾರಿ ಅಂಶಗಳು ನಮ್ಮ ಲ್ಯಾಪ್‌ಟಾಪ್, ಫೋನುಗಳು, ಸ್ಮಾರ್ಟ್‌ವಾಚ್‌ಗಳ ಭಾಗ ಕೂಡ. ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ತಪ್ಪಿಸುವ ಸಲುವಾಗಿಯೇ ಹೊಸ ಬಗೆಯ ಸ್ಮಾರ್ಟ್‌ವಾಚ್‌ ಒಂದು ಬರಲಿದೆ. ಇದು ನೀರಿನಲ್ಲಿ ಕರಗುವ ಸ್ಮಾರ್ಟ್‌ವಾಚ್‌!

ವಾಟರ್‌ ಪ್ರೂಫ್ ವಸ್ತುಗಳು ಬೇಕೆನ್ನುವ ಕಾಲದಲ್ಲಿ ‘ನೀರಲ್ಲಿ ಕರಗೋದು ಯಾಕೆ’ ಎಂದು ಹುಬ್ಬೇರಿಸಬೇಡಿ. ತಕ್ಕಮಟ್ಟಿಗೆ ವಾಟರ್ ಪ್ರೂಫ್‌, ಜೊತೆಗೆ ಪರಿಸರಸ್ನೇಹಿ ಸ್ಮಾರ್ಟ್‌ವಾಚ್‌ ಅನ್ನು ತಯಾರಿಸಬಹುದು ಎಂದು ಸಾಬೀತು ಪಡಿಸಿದ್ದಾರೆ, ಚೀನಾದ ಟಿಯಾನ್ಜಿನ್ ವಿಶ್ವವಿದ್ಯಾಲಯದ ಸಂಶೋಧಕರು. ಅಭಿವೃದ್ಧಿಯ ಹೆಸರಿನಲ್ಲಿ ಬರುವ ತಂತ್ರಜ್ಞಾನಗಳು ಪರಿಸರಕ್ಕೆ ಹಾನಿಕಾರಕ ಎಂದೆನಿಸಿರುವ ಕಾಲದಲ್ಲಿ ಅದಕ್ಕೆ ವ್ಯತಿರಿಕ್ತವಾದ ಈ ಸಂಶೋಧನೆ ಒಂದು ಮೈಲಿಗಲ್ಲು ಎನ್ನಬಹುದು.

ಸಂಶೋಧಕರ ತಂಡವು ಝಿಂಕ್ ಲೋಹವನ್ನು ಆಧರಿಸಿ ಒಂದು ಸಂಕೀರ್ಣ ಪದಾರ್ಥ ಸೃಷ್ಟಿಸಿದ್ದರು. ಅದು ಸಂಪೂರ್ಣವಾಗಿ ಪರಿಸರಸ್ನೇಹಿಯಾಗಿದ್ದು, ಮಣ್ಣಿನಲ್ಲಿ ಮಣ್ಣಾಗುವ ಪದಾರ್ಥ. ಅದನ್ನು ಬಳಸಿ ಸ್ಮಾರ್ಟ್‌ವಾಚ್‌ ತಯಾರಿಸುವಾಗ ಅದರ ವಿದ್ಯುದ್ವಾಹಕತೆಯಲ್ಲಿ ಸಮಸ್ಯೆ ಕಂಡುಬಂತು. ಆಗ, ನ್ಯಾನೋ ತಂತ್ರಜ್ಞಾನದ ಮೊರೆ ಹೊಕ್ಕ ವಿಜ್ಞಾನಿಗಳು, ಬೆಳ್ಳಿಯ ನ್ಯಾನೋ–ತಂತಿಗಳನ್ನು ಬಳಸಿ ಸರ್ಕ್ಯೂಟ್ ತಯಾರಿಸಿ ಈ ಸಮಸ್ಯೆಗೆ ಉತ್ತರ ಕಂಡುಕೊಂಡು, ಒಂದು ಹಂತಕ್ಕೆ ಗೆದ್ದರು. ನಂತರದ ಹಂತವೇ ಇದಿಷ್ಟನ್ನೂ ಜೈವಿಕವಾಗಿ ವಿಘಟನೆಯಾಗಬಲ್ಲ ಹೊರಕವಚದೊಳಗೆ ಸೇರಿಸುವುದು. ಸಾಮಾನ್ಯವಾಗಿ ನಾವೆಲ್ಲಾ ಬಳಸುವ ಸ್ಮಾರ್ಟ್‌ವಾಚ್‌ಗಳು ಪ್ಲಾಸ್ಟಿಕ್ ಅಂಶಗಳನ್ನೇ ಪ್ರಮುಖವಾಗಿ ಹೊಂದಿರುತ್ತವೆ. ಅದರ ಬದಲಿಗೆ ಇಲ್ಲಿ ಬಳಸಲಾದ ಸಂಯುಕ್ತ ಪದಾರ್ಥವೇ ಪಾಲಿ-ವಿನೈಲ್ ಆಲ್ಕೋಹಾಲ್. ಇದು ಕೃತಕವಾಗಿ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ತಯಾರಿಸಲಾಗಿದ್ದರೂ, ನೈಸರ್ಗಿಕ ಸಂಯುಕ್ತ ಪದಾರ್ಥಗಳಂತೆ ನಿರುಪದ್ರವಿ. ಇಂಗಾಲ, ಜಲಜನಕ, ಆಮ್ಲಜನಕಗಳ ಮೊತ್ತವಾಗಿ ಇದು ತಯಾರಾಗಿದ್ದು, ಎಣ್ಣೆ, ಗ್ರೀಸ್‌ನಂತಹ ದ್ರವಗಳಲ್ಲಿ ಕರಗದು. ನೀರಿನಲ್ಲಿ ಮಾತ್ರ ಕರಗಬಲ್ಲ ಈ ಪಾಲಿ-ವಿನೈಲ್ ಆಲ್ಕೋಹಾಲ್ ನಮ್ಮ ಸಂಶೋಧಕರಿಗೆ ಪ್ಲಾಸ್ಟಿಕ್‌ನ ಬದಲಿಗೆ ಬಳಸಬಹುದಾದ ಪದಾರ್ಥವಾಗಿ ದೊರೆಯಿತು. ಅವರು ತಯಾರಿಸಿದ ಬೆಳ್ಳಿಯ ನ್ಯಾನೋ–ತಂತಿಗಳ ವಿದ್ಯುನ್ಮಾನ ಸರ್ಕ್ಯೂಟ್‌ ಅನ್ನು ಈ ಬಳಕುವ ಎಲಾಸ್ಟಿಕ್‌ನಂತಹ ವಸ್ತುವಿನಲ್ಲಿ ಅಳವಡಿಸಿ, ಸ್ಮಾರ್ಟ್ ವಾಚ್‌ನ ರೂಪ ನೀಡಿದರು.

ಹೀಗೆಸ್ಮಾರ್ಟ್‌ವಾಚ್‌ನ ಹೊರಕವಚವಾದ ಪಾಲಿ-ವಿನೈಲ್ ಆಲ್ಕೊಹಾಲ್, ನೀರಿನ ಹನಿ ಬಿದ್ದ ತಕ್ಷಣ ಕರಗಿಬಿಡದು. ನಾವೀಗ ಹೇಗೆ ಮಳೆಯಲ್ಲಿ ನೆನೆದಾಗಲೂ, ಗಿಡಕ್ಕೆ ನೀರುಣಿಸುವಾಗಲೂ, ಪಾತ್ರೆ ತೊಳೆವಾಗಲೂ, ಬೆವರು ಹರಿಸುತ್ತಾ ವ್ಯಾಯಾಮ ಮಾಡುವಾಗಲೂ ಸ್ಮಾರ್ಟ್‌ವಾಚ್‌ ಧರಿಸಿರುತ್ತೇವೆಯಲ್ಲ? ಹಾಗೆಯೇ ಈ ಹೊಸ ‘ನೀರಿನಲ್ಲಿ ಕರಗಬಲ್ಲ ಸ್ಮಾರ್ಟ್‌ವಾಚ್‌’ ಅನ್ನೂ ಧರಿಸಬಹುದು; ಏಕೆಂದರೆ ಕೆಲವೇ ಹನಿಗಳು ಇದರ ಮೇಲೆ ಬಿದ್ದಾಕ್ಷಣ, ಘಂಟೆ ಹೊಡೆದಾಗ ಸಿಂಡರೆಲ್ಲಾಳ ಚಪ್ಪಲಿ, ಚೆಂದದ ಗೌನು, ಅಲಂಕಾರ ಮಾಯವಾದಂತೆ ನಿಮ್ಮ ವಾಚೇನೂ ಮಾಯವಾಗಿಬಿಡದು. ನಲವತ್ತು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟಾಗ ಮಾತ್ರ ಈ ಕರಗಬಲ್ಲ ವಾಚ್‌ನ ಬಹುಪಾಲು ಭಾಗಗಳು ಕಾಣದಂತೆ ಮಾಯವಾಗಿಬಿಡುತ್ತವೆ. ಕೊನೆಗೆ ಉಳಿಯುವುದು ಕೇವಲ ಓಎಲ್ಇಡಿ ಫಲಕ ಮತ್ತು ಮೈಕ್ರೋನಿಯಂತ್ರಕಗಳು ಮಾತ್ರ. ಅವುಗಳನ್ನು ಮರುಬಳಕೆ ಮಾಡಬಹುದು ಕೂಡ.

ಹೀಗೆ ವಾಚ್‌ನ ಭಾಗಗಳು ಕರಗಿರುವ ನೀರು ಕೂಡ ವಿಷಕಾರಿಯಲ್ಲ ಮತ್ತು ನಂತರ ಭೂಮಿಗೆ ಸೇರಿದರೂ ಅಪಾಯಕಾರಿಯಲ್ಲ. ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಇತರ ಫಿಟ್ನೆಸ್ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳಂತೆ ಮೆಸೇಜ್‌ಗಳು, ಕರೆಗಳು ಬಂದಾಗ ನೋಟಿಫಿಕೇಶನ್ ನೀಡುವುದು, ಹೃದಯದ ಬಡಿತ, ನಡಿಗೆಯ ಹೆಜ್ಜೆಗಳಂತಹ ಮಾಹಿತಿಯನ್ನು ಕಂಡುಕೊಂಡು ಪ್ರದರ್ಶಿಸುವುದು – ಎಲ್ಲವುದನ್ನು ಸಮರ್ಥವಾಗಿ ಮಾಡುತ್ತದೆ ಈ ಹೊಸ ಪರಿಸರಸ್ನೇಹಿ ಸ್ಮಾರ್ಟ್‌ವಾಚ್‌.

ಇನ್ನೂ ಕೊಂಚ ಸಮಯದ ನಂತರ ಮಾರುಕಟ್ಟೆಯಲ್ಲಿ ಲಭ್ಯವಾಗುವ ಈ ನವನವೀನ ತಂತ್ರಜ್ಞಾನವು, ಈಗಾಗಲೇ ಅಂತರಿಕ್ಷದಲ್ಲಿ, ಮಣ್ಣಿನಲ್ಲಿ, ನೀರಿನಲ್ಲಿ, ಗಾಳಿಯಲ್ಲಿ ಸೇರಿರುವ ಇ-ತ್ಯಾಜ್ಯಕ್ಕೆ ನಮ್ಮ ಕೊಡುಗೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಮಾಡುವುದು ಎಂಬುದು ಪಸ್ತುತ ಸನ್ನಿವೇಶದಲ್ಲಿ ಅತ್ಯಂತ ಮಹತ್ವಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT