ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸರ್ ಐ-ಸಿರೀಸ್ ಗೂಗಲ್ ಟಿವಿ: ಬಜೆಟ್ ಬೆಲೆಯ ಸ್ಮಾರ್ಟ್ ಆಯ್ಕೆ

Published 12 ಜನವರಿ 2024, 14:20 IST
Last Updated 12 ಜನವರಿ 2024, 14:20 IST
ಅಕ್ಷರ ಗಾತ್ರ

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಬ್ರ್ಯಾಂಡ್‌ಗಳಿಗೇನೂ ಬರವಿಲ್ಲ. ಈಗಾಗಲೇ ಲ್ಯಾಪ್‌ಟಾಪ್, ಮಾನಿಟರ್ ಮುಂತಾದವುಗಳಿಂದ ಹೆಸರು ಗಳಿಸಿರುವ ಏಸರ್, ಎರಡು ವರ್ಷಗಳಿಂದ ಸ್ಮಾರ್ಟ್ ಟಿವಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಇಂಡ್‌ಕಲ್ ಟೆಕ್ನಾಲಜೀಸ್ ಮೂಲಕ ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾದ ಏಸರ್ ಅಡ್ವಾನ್ಸ್‌ಡ್ ಐ-ಸಿರೀಸ್‌ನ 32 ಇಂಚು ಪರದೆಯ ಟಿವಿಯನ್ನು (Acer 32 inch Advanced I series) ಎರಡು ವಾರ ಬಳಸಿ ನೋಡಿದ ಬಳಿಕ, ಈ ಬಜೆಟ್ ಶ್ರೇಣಿಯ ಸ್ಮಾರ್ಟ್ ಟಿವಿಯ ಕಾರ್ಯನಿರ್ವಹಣೆ ಹೇಗಿದೆ? ಇಲ್ಲಿದೆ ಮಾಹಿತಿ

ವಿನ್ಯಾಸ ಮತ್ತು ಬಿಲ್ಡ್ ಗುಣಮಟ್ಟ

ನೋಡಲು ಆಕರ್ಷಕವೂ, ತೆಳು (ಸ್ಲಿಮ್) ಆಗಿಯೂ ಮತ್ತು ಹಗುರವಾಗಿಯೂ ಗಮನ ಸೆಳೆಯುವ ಈ 32 ಇಂಚು ಗಾತ್ರದ ಪರದೆಯುಳ್ಳ ಏಸರ್ ಐ-ಸಿರೀಸ್ ಟಿವಿಯ ಪ್ಯಾಕೇಜ್‌ನಲ್ಲಿ ಟಿವಿ ಜೊತೆಗೆ, ಆಕರ್ಷಕವಾದ ರಿಮೋಟ್ ಕಂಟ್ರೋಲರ್ ಮತ್ತು ಎರಡು ಬ್ಯಾಟರಿಗಳನ್ನು ನೀಡಲಾಗಿದೆ. ಟೇಬಲ್‌ನಲ್ಲಿ ಕೂರಿಸುವಂತೆ ಅನುಕೂಲ ಒದಗಿಸುವ ಪ್ಲಾಸ್ಟಿಕ್ ಸ್ಟ್ಯಾಂಡ್ ಕೂಡ ಜೊತೆಗಿದೆ. ಗೋಡೆಯಲ್ಲಿ ತಗುಲಿಸಬೇಕಿದ್ದರೆ ನಾವೇ ವಾಲ್‌ಮೌಂಟ್ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ತೆಳುವಾದ ಸ್ಕ್ರೀನ್ ಸುತ್ತ ಲೋಹದ ಚೌಕಟ್ಟು ಆಕರ್ಷಕವಾಗಿದೆ. ಹಿಂಭಾಗದಲ್ಲಿ ಸಂಪರ್ಕದ ಎಲ್ಲ ವ್ಯವಸ್ಥೆಗಳಿವೆ ಮತ್ತು ಪವರ್ ಪೋರ್ಟ್ ಕೂಡ ಇದೆ.

1.5 ಜಿಬಿ RAM, 16 GB ಆಂತರಿಕ ಸ್ಟೋರೇಜ್, 30 ವ್ಯಾಟ್ಸ್ ಡಾಲ್ಬಿ ಆಡಿಯೊ ಸ್ಪೀಕರ್ ಸಿಸ್ಟಂ ಇದ್ದು, ಡ್ಯುಯಲ್ ಬ್ಯಾಂಡ್ ವೈಫೈ (2.5GHz & 5GHz) ಬೆಂಬಲ, ಬ್ಲೂಟೂತ್ ಸಂಪರ್ಕಕ್ಕೆ ಅವಕಾಶ, 2 HDMI ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್, ಎವಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಇವೆ. 64ಬಿಟ್ ಕ್ವಾಡ್‌ಕೋರ್ ಪ್ರೊಸೆಸರ್ ಇದೆ. ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ಸೆಟ್ ಟಾಪ್ ಬಾಕ್ಸ್‌ಗೆ ಹಾಗೂ ಬಾಹ್ಯ ಸ್ಪೀಕರ್‌ಗಳಿಗೆ ಸಂಪರ್ಕಿಸಲು ಇವು ನೆರವಾಗುತ್ತವೆ. ಹೆಚ್‌ಡಿ ರೆಡಿ 1366x768 ರೆಸೊಲ್ಯುಶನ್ ಇರುವ ಸ್ಕ್ರೀನ್ 60 Hz ರಿಫ್ರೆಶ್ ರೇಟ್ ಹೊಂದಿದೆ. ಇದಲ್ಲದೆ 178 ಡಿಗ್ರಿ ಕೋನದಿಂದ ಚಿತ್ರಗಳನ್ನು ಸಮಸ್ಯೆಯಿಲ್ಲದೆ ವೀಕ್ಷಿಸಬಹುದು.

ರಿಮೋಟ್ ಕಂಟ್ರೋಲರ್

ರಿಮೋಟ್ ಮೂಲಕ ನೇರವಾಗಿ ಸಂಪರ್ಕಿಸಲು ನೆಟ್‌ಫ್ಲಿಕ್ಸ್, ಗೂಗಲ್ ಟಿವಿ, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್ ಬಟನ್‌ಗಳಿವೆ. ವೈಫೈ ಮೂಲಕ ಇಂಟರ್ನೆಟ್ ಸಂಪರ್ಕಿಸಿ, ರಿಮೋಟ್‌ನಿಂದಲೇ ನೇರವಾಗಿ ಈ ಅಂತರ್ಜಾಲ ಅಧಾರಿತ ಮನರಂಜನಾ ಸೇವೆಗಳ ತಾಣಗಳಿಗೆ ಹೋಗಬಹುದು. ಜೊತೆಗೆ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬಟನ್ ಕೂಡ ಇದೆ. ಇದನ್ನು ಮೊದಲೇ ಹೊಂದಿಸಿಟ್ಟರೆ (ಟಿವಿ ಜೊತೆಗೆ ಪೇರ್ ಮಾಡಿದರೆ) ರಿಮೋಟ್‌ನಲ್ಲಿರುವ ಬಟನ್ ಒತ್ತಿ, ಆದೇಶ ನೀಡಿದರೆ, ಅದು ಟಿವಿಯಲ್ಲಿ ಪಾಲನೆಯಾಗುತ್ತದೆ. ಉದಾಹರಣೆಗೆ, ಪ್ಲೇ ಎ ಸಾಂಗ್ ಅಥವಾ ಪ್ಲೇ ಸಿನಿಮಾ ಸಾಂಗ್ ಅಂತ ಆದೇಶ ಕೊಟ್ಟರೆ, ಅದು ಗೂಗಲ್‌ನಲ್ಲಿ ಸರ್ಚ್ ಮಾಡಿ, ಯಾವುದನ್ನು ಪ್ಲೇ ಮಾಡಬೇಕೆಂದು ಮುಂದಿನ ಆದೇಶಕ್ಕಾಗಿ ಕಾಯುತ್ತದೆ. ನಿರ್ದಿಷ್ಟವಾಗಿ ಹೇಳಿದರೆ, ಉದಾಹರಣೆಗೆ, ಪ್ಲೇ ಹರಿವರಾಸನಂ ಸಾಂಗ್ ಬೈ ಜೇಸುದಾಸ್ ಅಂತ ಹೇಳಿದರೆ, ನೇರವಾಗಿ ಆ ಹಾಡನ್ನು ಯೂಟ್ಯೂಬ್‌ನಿಂದ ಪ್ಲೇ ಮಾಡುತ್ತದೆ.

ಕಾರ್ಯಾಚರಣೆ

ಟಿವಿಯನ್ನು ಸ್ಟ್ಯಾಂಡ್‌ನಲ್ಲಿ ಕೂರಿಸುವುದು ತೀರಾ ಸುಲಭ. ಟೆಕ್ನಿಷಿಯನ್ ನೆರವು ಬೇಕಾಗಿರುವುದಿಲ್ಲ. ನಾವೇ ಅದನ್ನು ಟೇಬಲ್ ಮೇಲೆ ಅನುಸ್ಥಾಪಿಸಿಕೊಳ್ಳಬಹುದು. ಟಿವಿ ಆನ್ ಮಾಡಿದ ಮೇಲೆ ರಿಮೋಟ್ ಅನ್ನು 'ಪೇರ್' ಮಾಡಬೇಕಾಗುತ್ತದೆ. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಪಾಲಿಸುತ್ತಾ ಹೋದರಾಯಿತು. ನಂತರ, ವೈಫೈ ಸಂಪರ್ಕಿಸಿ ಗೂಗಲ್ (ಜಿಮೇಲ್) ಖಾತೆಯಿಂದ ಲಾಗಿನ್ ಆದ ಬಳಿಕ ಯೂಟ್ಯೂಬ್ ಸಹಿತ ಅಂತರ್ಜಾಲದ ವಿಡಿಯೊಗಳನ್ನು ವೀಕ್ಷಿಸಬಹುದು. ವಿವಿಧ ಒಟಿಟಿಗಳ ಸೇವೆಗಳನ್ನು ಪಡೆದುಕೊಳ್ಳಬಹುದು. ಅವುಗಳಿಗೆ ಅನುಗುಣವಾದ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.

ಡ್ಯುಯಲ್ ಬ್ಯಾಂಡ್ ವೈಫೈ ಬೆಂಬಲಿಸುವುದರಿಂದ ಅತ್ಯಾಧುನಿಕ ಸಂಪರ್ಕ ಸುಲಭವಾಗುತ್ತದೆ. ನಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರನ್ನು ಕೂಡ ಇದಕ್ಕೆ ಹೆಚ್‌ಡಿಎಂಐ ಪೋರ್ಟ್ ಮೂಲಕ ಸಂಪರ್ಕಿಸಿ ಕೆಲಸ ಮಾಡಬಹುದಾಗಿದೆ. ಬ್ಲೂಟೂತ್ ಹಾಗೂ ಆಂತರ್-ನಿರ್ಮಿತ ಕ್ರೋಮ್‌ಕಾಸ್ಟ್ ಇರುವುದರಿಂದ, ಮೊಬೈಲ್ ಅಥವಾ ಬೇರಾವುದೇ ಸಾಧನದಲ್ಲಿರುವ ಚಿತ್ರ, ವಿಡಿಯೊಗಳನ್ನು ಈ ಟಿವಿಯಲ್ಲೇ ಪ್ಲೇ ಮಾಡಿ ನೋಡಬಹುದು, ಬಾಹ್ಯ ಸ್ಪೀಕರ್‌ಗಳನ್ನು ಸಂಪರ್ಕಿಸಬಹುದು. ಅದಲ್ಲದೆ, ಬೇರೆ ಹಾರ್ಡ್ ಡ್ರೈವ್ ಅಥವಾ ಯುಎಸ್‌ಬಿ ಸಾಧನಗಳನ್ನು ಸಂಪರ್ಕಿಸಲು 2 ಯುಎಸ್‌ಬಿ 2.0 ಪೋರ್ಟ್‌ಗಳಿವೆ. ಗೇಮ್ ಆಡುವುದಕ್ಕೂ ಟಿವಿ ಪರದೆ ಅನುಕೂಲ ಒದಗಿಸುತ್ತದೆ.

30 ವ್ಯಾಟ್ಸ್ ಧ್ವನಿ ಔಟ್‌ಪುಟ್ ಚೆನ್ನಾಗಿದೆ. ಇದರಲ್ಲಿ ಅಡಕವಾಗಿರುವ ಹೈಫೈ (ಹೈ ಫಿಡೆಲಿಟಿ) ಸ್ಪೀಕರ್‌ಗಳು ಡಾಲ್ಬಿ ಆಡಿಯೋ ಧ್ವನಿ ಹೊಮ್ಮಿಸುವುದರಿಂದ ಸಾಮಾನ್ಯ ಅಳತೆಯ ಕೊಠಡಿಯಲ್ಲಿ ಧ್ವನಿಯ ಸ್ಪಷ್ಟತೆ ಹಿತವಾಗಿದೆ. ರಿಮೋಟ್ ಕಂಟ್ರೋಲರ್ ಮೂಲಕ 5 ಮಾದರಿಯ ಪೂರ್ವನಿಗದಿತ ಧ್ವನಿ ಮೋಡ್‌ಗಳನ್ನು (ಮೂವೀ, ಮ್ಯೂಸಿಕ್, ಸ್ಟ್ಯಾಂಡರ್ಡ್, ನ್ಯೂಸ್, ಸ್ಪೋರ್ಟ್ಸ್) ಬಳಸಿ, ನಮಗೆ ಬೇಕಾದುದನ್ನು ಹೊಂದಿಸಿಕೊಳ್ಳಬಹುದಾಗಿದೆ.

ಸ್ಮಾರ್ಟ್ ವೈಶಿಷ್ಟ್ಯಗಳು

ಗೂಗಲ್ ಪ್ರಮಾಣೀಕೃತ ಆಂಡ್ರಾಯ್ಡ್ ಟಿವಿ 11 ಕಾರ್ಯಾಚರಣಾ ವ್ಯವಸ್ಥೆಯ ಮೂಲಕ 'ಗೂಗಲ್ ಅಸಿಸ್ಟೆಂಟ್' ಧ್ವನಿ ಸಹಾಯಕವನ್ನು ಸುಲಲಿತವಾಗಿ ಬಳಸಬಹುದಾಗಿದೆ. ರಿಮೋಟ್ ಕಂಟ್ರೋಲರ್‌ನಲ್ಲಿರುವ ಗೂಗಲ್ ಅಸಿಸ್ಟೆಂಟ್ ಬಟನ್ ಒತ್ತಿ, ನಮಗೆ ಬೇಕಾದ ಚಾನೆಲ್ ಹಾಕುವಂತೆ ನಾವು ಧ್ವನಿ ಆದೇಶದ ಮೂಲಕ ಹೇಳಿದರೆ ಸಾಕಾಗುತ್ತದೆ. ಈಗಿನ ಜಮಾನದ ಅಗತ್ಯಗಳಾದ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೊ, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್ ಎಂಬ ಒಟಿಟಿ ಆ್ಯಪ್‌ಗಳನ್ನು ನೇರವಾಗಿ ರಿಮೋಟ್ ಕಂಟ್ರೋಲರ್ ಮೂಲಕವೇ ಪ್ರವೇಶಿಸುವುದಕ್ಕೆ ಹಾಟ್ ಕೀಗಳಿವೆ.

ಗೋಡೆಗೆ ತಗುಲಿ ಹಾಕುವ ವಾಲ್ ಮೌಂಟ್ ವ್ಯವಸ್ಥೆ ಬೇಕಿದ್ದರೆ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಒಂದು ವರ್ಷದ ವಾರಂಟಿಯೊಂದಿಗೆ ಬರುವ, ಕೈಗೆಟಕುವ ಬಜೆಟ್ ಶ್ರೇಣಿಯ ಈ ಸ್ಮಾರ್ಟ್ ಟಿವಿಯ ಈಗಿನ ಮಾರಾಟ ಬೆಲೆ ₹10,099.

ಪ್ರಮುಖ ವೈಶಿಷ್ಟ್ಯಗಳು:

 • ಮಾಡೆಲ್: Acer AR32GR2841HDFL

 • ಸ್ಕ್ರೀನ್ ಗಾತ್ರ: 32 inches

 • ರೆಸೊಲ್ಯುಶನ್: HD ರೆಡಿ (1366x768)

 • ರಿಫ್ರೆಶ್ ರೇಟ್: 60 Hz

 • ನೋಡುವ ಕೋನ: 178 ಡಿಗ್ರಿ

 • ಸಂಪರ್ಕ: ಡ್ಯುಯಲ್ ಬ್ಯಾಂಡ್ Wi-Fi, 2-ವೇ ಬ್ಲೂಟೂತ್

 • HDMI ಪೋರ್ಟ್‌ಗಳು: 2.0 x 2

 • USB ಪೋರ್ಟ್‌ಗಳು: 2.0 x 2

 • ಧ್ವನಿ: 30 ವ್ಯಾಟ್ ಔಟ್‌ಪುಟ್, ಡಾಲ್ಬಿ ಆಡಿಯೋ, 5 ಮೋಡ್‌ಗಳು

 • ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು: ಗೂಗಲ್ ಟಿವಿ, ಗೂಗಲ್ ಅಸಿಸ್ಟೆಂಟ್, ಅಂತರ್-ನಿರ್ಮಿತ ಕ್ರೋಮ್‌ಕಾಸ್ಟ್, ಧ್ವನಿ ಬೆಂಬಲಿತ ಸ್ಮಾರ್ಟ್ ರಿಮೋಟ್, ಹಾಟ್ ಕೀಗಳು

 • ಪ್ರೊಸೆಸರ್: ಕ್ವಾಡ್ ಕೋರ್, 1.5 GB RAM

 • ಸ್ಟೋರೇಜ್ ಸಾಮರ್ಥ್ಯ: 16 GB

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT