ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಪ್ರಥಮಗಳ ಸ್ಮಾರ್ಟ್‌ಫೋನ್‌ ಒನ್‌ ಪ್ಲಸ್‌ 7 ಪ್ರೊ

Last Updated 3 ಜುಲೈ 2019, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಗ್ರಾಹಕರಿಗೆ ಮತ್ತಷ್ಟು ‘ಸ್ಮಾರ್ಟ್‌’ ಅನುಭವ ನೀಡಲು ಬದ್ಧವಾಗಿರುವ ಚೀನಾದ ‘ಒನ್‌ ಪ್ಲಸ್‌’ ಕಂಪನಿ ‘ಒನ್‌ ಪ್ಲಸ್‌ 7 ‍ಪ್ರೊ’ ಫೋನ್‌ ಅನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ.

ದುಬಾರಿ ಫೋನ್‌ಗಳ ಸಾಲಿಗೆ ಸೇರುವ ಈ ಫೋನ್‌ನಲ್ಲಿ ಹಲವು ವಿಶೇಷತೆಗಳಿದ್ದು, ಇದು ಗ್ರಾಹಕ ಮೆಚ್ಚುಗೆಗೂ ಪಾತ್ರವಾಗಿದೆ.

ನಮಗೆ ವಿಮರ್ಶೆಗೆ ಬಂದಿದ್ದ ಈ ಫೋನ್‌ ಬಳಸಿದಾಗ ಇದರ ಅನೇಕ ವೈಶಿಷ್ಟ್ಯಗಳು ಅನುಭವಕ್ಕೆ ಬಂದವು. ಆಕರ್ಷಕ ವಿನ್ಯಾಸ, ಗರಿಷ್ಠ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಕಾರಣಕ್ಕೆ ಇದು ಗ್ರಾಹಕರ ಮೆಚ್ಚುಗೆಗೆ ‍ಪಾತ್ರವಾಗಿದೆ. ಈ ಫೋನ್ ಬಳಸಿದವರಿಗಷ್ಟೇ ಅಲ್ಲ, ಮೇಲ್ನೋಟಕ್ಕೆ ಫೋನ್ ನೋಡಿದವರನ್ನೂ ಆಕರ್ಷಿಸಿದೆ. ಅದೇ ಈ ಫೋನ್‌ನ ಹೆಗ್ಗಳಿಕೆ.

ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಸ್ಕ್ರೀನ್‌ ವಿನ್ಯಾಸ ಹೊಂದಿರುವುದರಿಂದ ಇದಕ್ಕೆ ವಿಶೇಷ ಮೆರುಗು ಪ್ರಾಪ್ತವಾಗಿದೆ. ಹೊರ ಭಾಗವು ಸಂಪೂರ್ಣ ಗಾಜಿನಿಂದ ಕೂಡಿದ್ದು, ಕೈಯಿಂದ ಜಾರುವ ಸಾಧ್ಯತೆ ಹೆಚ್ಚು. ಹೀಗಾಗಿ ಸಂಸ್ಥೆಯೇ ಮೊಬೈಲ್‌ ಜತೆಗೆ ಒದಗಿಸಿರುವ ಬ್ಯಾಕ್‌ ಕವರ್‌ ಬಳಸುವುದನ್ನು ಮರೆಯಬಾರದು.

ಅಗಲ ಪರದೆಯ 6.67 ಇಂಚಿನ ಅಮೊಲೆಡ್‌ ಡಿಸ್‌ಪ್ಲೆ, ಪ್ರತಿ ಸೆಕೆಂಡ್‌ಗೆ 90 ಬಾರಿ ರಿಫ್ರೆಷ್‌ ಆಗುವ ‍ಸ್ಕ್ರೀನ್‌ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಸ್ಕ್ರೀನ್‌ ಗುಣಮಟ್ಟವೂ ಅತ್ಯುತ್ತಮವಾಗಿದೆ. ಫಿಂಗರ್‌ಪ್ರಿಂಟ್‌ ಮತ್ತು ಮುಖ ಗುರುತಿಸುವ(ಫೇಸ್‌ ರೆಕಗ್ನೀಷನ್‌) ಫೀಚರ್‌ಗಳು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತವೆ.

ಮೊಬೈಲ್‌ ಫೋನ್‌ನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಡಾಲ್ಬಿ ಪ್ರಮಾಣೀಕೃತ ಸ್ಪೀಕರ್‌ಗಳಿವೆ. ಇವು ಹೊರ ಹೊಮ್ಮಿಸುವ ಸ್ಟಿರಿಯೊ ಸೌಂಡ್‌ ಸುಸ್ಪಷ್ಟವಾಗಿದೆ. ಹೆಡ್‌ಫೋನ್‌ ಪೋರ್ಟ್‌ ಇಲ್ಲದಿರುವುದು ಮಾತ್ರ ಇದರಲ್ಲಿ ಕೊರತೆಯಾಗಿದೆ.

ಇದರಲ್ಲಿ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ 855 ಪ್ರೊಸೆಸರ್‌ ಇದೆ. ಗರಿಷ್ಠ 12 ಜಿಬಿ ರ‍್ಯಾಮ್‌ ಸಾಮರ್ಥ್ಯದ ಜತೆಗೆ ಈ ವಿಷಯದಲ್ಲಿ ಹೊಸ ಮಾನದಂಡವಾಗಿರುವ ಯೂನಿವರ್ಸಲ್‌ ಫ್ಲ್ಯಾಷ್ ಸ್ಟೋರೇಜ್‌ (ಯುಎಫ್‌ಎಸ್) 3.0 ಅನ್ನು ಒಳಗೊಂಡಿದೆ. ಇದರಿಂದಾಗಿ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇರುವ ಅತ್ಯಂತ ವೇಗ ವಾಗಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಇದೂ ಒಂದು. ಈ ಮೊಬೈಲ್‌ಗೆ ಯಾವುದೇ ಕಿರುತಂತ್ರಾಂಶ (ಆ್ಯಪ್‌) ಅಥವಾ ಗೇಮ್‌ ಅನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.

ಪಾಪ್‌ ಅಪ್‌ ಕ್ಯಾಮೆರಾ

16 ಮೆಗಾ ಪಿಕ್ಸಲ್‌ನ ಪಾಪ್‌ ಅಪ್‌ ಸೆಲ್ಫಿ ಕ್ಯಾಮೆರಾ ದಿನಕ್ಕೆ 150 ಬಾರಿಯಂತೆ 5 ವರ್ಷಗಳವರೆಗೆ (2.73 ಲಕ್ಷ) ಸೆಲ್ಫಿ ತೆಗೆಯುವವರೆಗೆ ಬಾಳಿಕೆ ಬರಲಿದೆ. ಸೆಲ್ಫಿ ತೆಗೆಯುವಾಗ ಆಕಸ್ಮಾತ್ತಾಗಿ ಕೈಯಿಂದ ಫೋನ್‌ ಜಾರಿದರೂ ಪಾಪ್‌ ಅಪ್‌ ಕ್ಯಾಮೆರಾ ತನ್ನಷ್ಟಕ್ಕೆ ಒಳ ಸೇರುವ ಸೌಲಭ್ಯ ಇದೆ!

ಹಿಂಭಾಗದಲ್ಲಿ ಮೂರು ಲೆನ್ಸ್‌ಗಳ ಕ್ಯಾಮೆರಾಗಳಿವೆ. (48 ಎಂಪಿ+16 ಎಂಪಿ ಮತ್ತು 8ಎಂಪಿ) ವೈಡ್‌ ಆ್ಯಂಗಲ್‌ ಲೆನ್ಸ್‌ ಕೂಡ ಒಳಗೊಂಡಿದೆ. ಇದರಿಂದ ಸಾಕಷ್ಟು ದೂರದಲ್ಲಿನ ದೃಶ್ಯಗಳನ್ನೂ ಸ್ಪಷ್ಟವಾಗಿ ಸೆರೆ ಹಿಡಿಯಬಹುದು.

ಹೆಚ್ಚಿನ ಸಮಯದವರೆಗೆ ಗೇಮ್‌ ಆಡುವಾಗ ಮೊಬೈಲ್‌ನ ಕಾರ್ಯಕ್ಷಮತೆ ನಿಧಾನವಾಗುವುದನ್ನು ತಡೆಯಲು ಲಿಕ್ವಿಡ್‌ ಕೂಲಿಂಗ್‌ ಸೌಲಭ್ಯ ಹೊಂದಿದೆ. ಫನಾಟಿಕ್‌ ಮೋಡ್‌ (Fnatic mode) ಆಯ್ಕೆ ಮಾಡಿಕೊಂಡರೆ ಎಲ್ಲ ನೋಟಿಫಿಕೇಷನ್‌ ಮತ್ತು ಕರೆಗಳಿಗೆ ತಡೆ ಬಿದ್ದು ಗೇಮಿಂಗ್‌ ಅನುಭವ ವಿಶಿಷ್ಟವಾಗಿರಲಿದೆ.

ಫೋನ್‌ನಲ್ಲಿರುವ ಸ್ಕ್ರೀನ್‌ ರೆಕಾರ್ಡರ್, ಜೆನ್‌ ಮೋಡ್‌ ಮತ್ತು ನೈಟ್‌ ಮೋಡ್ ಸೌಲಭ್ಯಗಳು ಇದರ ಇತರ ವಿಶಿಷ್ಟ ಸೌಲಭ್ಯಗಳಾಗಿವೆ.

ಸ್ಕ್ರೀನ್‌ ರೆಕಾರ್ಡರ್‌: ಇದು ಫೋನ್‌ನಲ್ಲಿನ ವಿಡಿಯೊ ಮತ್ತು ಆಡಿಯೊಗಳನ್ನು ದಾಖಲಿಸಿಕೊಳ್ಳುತ್ತದೆ.

ಜೆನ್‌ ಮೋಡ್‌: ಇದು 20 ನಿಮಿಷಗಳವರೆಗೆ ಆ್ಯಪ್‌ ವ್ಯಸನದಿಂದ ವಿಮುಖಗೊಳಿಸುತ್ತದೆ. ಈ ಸಂದರ್ಭದಲ್ಲಿ ತುರ್ತು ಕರೆಗಳನ್ನಷ್ಟೇ ನಿರ್ವಹಿಸಬಹುದು.

ನೈಟ್‌ ಮೋಡ್‌: ರಾತ್ರಿ ವೇಳೆ ಸ್ಕ್ರೀನ್‌ ಹೊರ ಸೂಸುವ ಬೆಳಕಿನ ಪ್ರಖರತೆ ತಗ್ಗಿಸಿ ದೃಷ್ಟಿಗೆ ಹಾನಿ ಆಗುವುದನ್ನು ತಪ್ಪಿಸಲಿದೆ.

ವಾರ್ಪ್‌ ಚಾರ್ಜ್‌ ತಂತ್ರಜ್ಞಾನದ 4000 ಎಂಎಚ್‌ ಬ್ಯಾಟರಿಯಿಂದಾಗಿ ಫೋನ್‌ ಅತ್ಯಂತ ತ್ವರಿತವಾಗಿ ಚಾರ್ಜ್‌ ಆಗುತ್ತದೆ. ಅನೇಕ ಆ್ಯಪ್‌ಗಳನ್ನು ಬಳಸುವ ಬಳಕೆದಾರರು ಎರಡು ದಿನಗಳವರೆಗೂ ಬ್ಯಾಟರಿ ರೀಚಾರ್ಜ್‌ ಮಾಡುವ ಅಗತ್ಯ ಬರುವುದಿಲ್ಲ.

6.7 ಇಂಚಿನ ಸ್ಕ್ರೀನ್‌ನಲ್ಲಿ ವಿಡಿಯೊ ವೀಕ್ಷಣೆ ಮತ್ತು ಗೇಮಿಂಗ್‌ ಅನುಭವ ವಿಶಿಷ್ಟವಾಗಿದೆ. ತುಂಬ ದುಬಾರಿ ಫೋನ್‌ ಎನ್ನುವ ಭಾವನೆ ಮೂಡಿಸುತ್ತದೆ. ವೇಗ ಮತ್ತು ಕಾರ್ಯನಿರ್ವಹಣೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಇದಾಗಿದೆ ಎಂದು ಹೇಳಬಹುದು. ವಿನ್ಯಾಸ, ಡಿಸ್‌ಪ್ಲೇ, ಸಾಫ್ಟ್‌ವೇರ್‌, ಕಾರ್ಯನಿರ್ವಹಣೆ, ಬ್ಯಾಟರಿ ಬಳಕೆ ಮತ್ತಿತರ ಮಾನದಂಡಗಳಲ್ಲಿ ಉಳಿದ ಸ್ಮಾರ್ಟ್‌ಫೋನ್‌ಗಳಿಗಿಂತ ಇದು ಸಾಕಷ್ಟು ಮುಂಚೂಣಿಯಲ್ಲಿ ಇದೆ.

ನೆಟ್‌ಫ್ಲಿಕ್ಸ್‌ ವಿಡಿಯೊ

ವಿಡಿಯೊ ಸೇವೆಗಳನ್ನು ಒದಗಿಸುವ ನೆಟ್‌ಫ್ಲಿಕ್ಸ್‌ನ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನೂ ವೀಕ್ಷಿಸುವ ಸೌಲಭ್ಯವಾಗಿರುವ ಹೈ ಡೈನಮಿಕ್‌ ರೇಂಜ್‌ (ಎಚ್‌ಡಿಆರ್‌) ಸ್ಕ್ರೀನ್ ಸೌಲಭ್ಯವನ್ನೂ ಈ ಫೋನ್‌ ಒಳಗೊಂಡಿದೆ.

ಆಕರ್ಷಕ ನೋಟ ಮತ್ತು ಅತ್ಯಂತ ತ್ವರಿತ ಕಾರ್ಯನಿರ್ವಹಣೆಯ ಈ ಫೋನ್‌ ಮೂರು ಆಕರ್ಷಕ ವರ್ಣಗಳಾದ ನೆಬ್ಯುಲಾ ಬ್ಲ್ಯೂ, ಮಿರರ್‌ ಗ್ರೇ ಮತ್ತು ಆಲ್ಮಂಡ್‌ನಲ್ಲಿ ಲಭ್ಯ ಇದೆ. 6 ಜಿಬಿ ಬೆಲೆ ₹ 48,999 ರಿಂದ ಆರಂಭಗೊಳ್ಳುತ್ತದೆ. 12 ಜಿಬಿ ರ್‍ಯಾಮ್‌ ಸಾಮರ್ಥ್ಯದ ಬೆಲೆ ₹ 57,999 ಇದೆ.

ವೈಶಿಷ್ಟ್ಯಗಳು

* ಗಮನ ಸೆಳೆಯುವ ಆಕರ್ಷಕ ನೋಟ

* ಆಂಡ್ರಾಯ್ಡ್‌ ಆಕ್ಸಿಜೆನ್‌ ಆಪರೇಟಿಂಗ್‌ ಸಿಸ್ಟಮ್‌

* 6, 8 ಮತ್ತು 12 ಜಿಬಿ ರ‍್ಯಾಮ್‌

* ಗೊರಿಲ್ಲಾ ಗ್ಲಾಸ್‌ 5
* ಪ್ರಕಾಶಮಾನವಾದ ಡಿಸ್‌ಪ್ಲೆ. ತುಂಬ ಸುರಳಿತ ನಿರ್ವಹಣೆ
* ಸ್ಟಿರಿಯೊ ಸ್ಪೀಕರ್ ಕರ್ಣಾನಂದಕರ
* ತುಂಬ ಚೆನ್ನಾಗಿರುವ ವಿಡಿಯೊ ಡಿಸ್‌ಪ್ಲೇ
* ಬ್ಯಾಟರಿಯ ಅತ್ಯುತ್ತಮ ಕಾರ್ಯನಿರ್ವಹಣೆ
* ಫಿಂಗರ್‌ಪ್ರಿಂಟ್ ಮತ್ತು ಫೇಸ್‌ ಲಾಗ್‌ ಸರಳ

* 16 ಮೆಗಾಪಿಕ್ಸೆಲ್‌ನಪಾಪ್‌ ಅಪ್‌ ಸೆಲ್ಫಿ ಕ್ಯಾಮೆರಾ ಹಿಂಬದಿಯ ಮೂರು (48 ಎಂಪಿ+16 ಎಂಪಿ ಮತ್ತು 8ಎಂಪಿ) ಕ್ಯಾಮೆರಾಗಳಲ್ಲಿ 7 ಪಿ ಲೆನ್ಸ್. ವೈಡ್‌ ಆ್ಯಂಗಲ್ ಶಾಟ್‌ ಮಿತಿಗಳು

* 260 ಗ್ರಾಂ ತೂಕದ ದೊಡ್ಡ ಗಾತ್ರ. ಬಳಕೆಗೆ ಕೊಂಚ ಭಾರ
* ವೈರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯ ಇಲ್ಲ

* ಎಫ್‌ಎಂ ರೇಡಿಯೊ ಇಲ್ಲ
* ಕಡಿಮೆ ಬೆಳಕಿನಲ್ಲಿ ಕ್ಯಾಮೆರಾ ಕಾರ್ಯನಿರ್ವಹಣೆ ತೃಪ್ತಿದಾಯಕವಾಗಿಲ್ಲ

ಜೆನ್‌ ಮೋಡ್ ವೈಶಿಷ್ಟ್ಯತೆ

ಆ್ಯಪ್‌ಗಳ ವ್ಯಸನಕ್ಕೆ ಒಳಗಾದವರು ಮೊಬೈಲ್‌ನಿಂದ ಕೆಲ ನಿಮಿಷಗಳವರೆಗಾದರೂ ಅವುಗಳ ಆಕರ್ಷಣೆಯಿಂದ ದೂರವಾಗಿ ಬಾಹ್ಯ ಪ್ರಪಂಚದಲ್ಲಿ ನೆಮ್ಮದಿಯಿಂದ ಇರಲು ಜೆನ್‌ ಮೋಡ್‌ (Zen Mode) ಚಾಲನೆ ನೀಡಬೇಕು. ಈ ಮೋಡ್‌ಗೆ ಚಾಲನೆ ನೀಡಿದರೆ 20 ನಿಮಿಷಗಳವರೆಗೆ ಕಡ್ಡಾಯವಾಗಿ ಆ್ಯಪ್‌ಗಳಿಂದ ದೂರ ಇರಬೇಕಾಗುತ್ತದೆ. ಚಾಲನೆ ಮಾಡಿದ 3 ಸೆಕೆಂಡುಗಳಲ್ಲಿ ರದ್ದು ಮಾಡಬಹುದು. ಆದರೆ, ಮಧ್ಯದಲ್ಲಿ ಇದನ್ನು ನಿಲ್ಲಿಸಲು ಬರುವುದಿಲ್ಲ. ಮೊಬೈಲ್‌ ರಿಸ್ಟಾರ್ಟ್‌ ಮಾಡಿದರೂ ಉಪಯೋಗ ಇರಲಾರದು. ಕರೆಗಳನ್ನು ಸ್ವೀಕರಿಸಬಹುದು. ತುರ್ತು ಕರೆಗಳನ್ನಷ್ಟೇ ಮಾಡಬಹುದು. ಕ್ಯಾಮೆರಾ ಬಳಸಬಹುದು. 20 ನಿಮಿಷದ ನಂತರವೂ ಮತ್ತೆ 20 ನಿಮಿಷ ಮುಂದುವರೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT