ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಕಾರ್ಯಾಚರಣೆ, ಗುಣಮಟ್ಟದ ಫೊಟೊಗೆ Samsung Galaxy M53

Last Updated 29 ಮೇ 2022, 11:34 IST
ಅಕ್ಷರ ಗಾತ್ರ

ಸ್ಯಾಮ್ಸಂಗ್‌ ಕಂಪನಿಯು ‘ಎಂ’ ಸರಣಿಯಲ್ಲಿ ಆಕರ್ಷಕ ದರ, ಅದಕ್ಕೂ ಮುಖ್ಯವಾಗಿ ಸೆಗ್ಮೆಂಟ್‌ನಲ್ಲಿಯೇ ಮೊದಲು ಎನ್ನುವಂತಹ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಹಾದಿಯಲ್ಲಿ ‘ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಂ53’ ಸ್ಮಾರ್ಟ್‌ಫೋನ್‌108 ಎಂಪಿ ಕ್ಯಾಮೆರಾದಿಂದ ಗಮನಸೆಳೆಯುತ್ತದೆ. 6ಜಿಬಿ+128 ಜಿಬಿಯ ಬೆಲೆ ₹ 26,499.

ಎಂ53 ಸ್ಮಾರ್ಟ್‌ಫೋನ್‌ 6.7 ಇಂಚು ಸೂಪರ್ ಅಮೊ ಎಲ್‌ಇಡಿ+ ಡಿಸ್‌ಪ್ಲೆ 120 ಹರ್ಟ್ಸ್‌ ರಿಫ್ರೆಶ್ ರೇಟ್‌ ಹೊಂದಿದೆ. 6ಎನ್‌ಎಂ ಮೀಡಿಯಾಟೆಕ್‌ ಡೈಮೆನ್ಸಿಟಿ 900 ಪ್ರೊಸೆಸರ್‌ ಮತ್ತು 5000 ಎಂಎಎಚ್‌ ಬ್ಯಾಟರಿ ಒಳಗೊಂಡಿದೆ. ಪಾಲಿಕಾರ್ಬೊನೇಟ್‌ ಪ್ಯಾನಲ್‌ ಹೊಂದಿದ್ದು, ಮ್ಯಾಟ್‌ ಫಿನಿಷ್‌ ಮಾಡಲಾಗಿದೆ. 176 ಗ್ರಾಂ ತೂಕ ಇದ್ದು, 7.4ಎಂಎಂ ದಪ್ಪ ಇರುವುದರಿಂದ ಈ ಫೋನ್‌ ಹಗುರಾಗಿದ್ದು, ತೆಳುವಾಗಿಯೂ ಇದೆ. ಹೆಡ್‌ಫೋನ್‌ ಜಾಕ್‌ ಇಲ್ಲ. ಈಗ ಎಲ್ಲರೂ ಬ್ಲುಟೂತ್ ಸಾಧನವನ್ನೇ ಹೆಚ್ಚಾಗಿ ಬಳಸುವುದರಿಂದ ಇದು ಕೊರತೆ ಎಂದು ಅನ್ನಿಸುವುದಿಲ್ಲ. ಸ್ಕ್ರೀನ್‌ ಬ್ರೈಟ್‌ನೆಸ್ ವಿಷಯದಲ್ಲಿ ಎಚ್‌ಡಿಆರ್‌10 ಇಲ್ಲ. ಬೆಲೆಯ ದೃಷ್ಟಿಯಿಂದ ನೋಡುವುದಾದರೆ ಇದನ್ನು ನೀಡಬಹುದಿತ್ತು.

108ಎಂಪಿ ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆ. ಹಗಲಿನ ವೇಳೆ ತೆಗೆದ ಚಿತ್ರದಲ್ಲಿ ವಿವರಗಳು ಬಹಳ ಸ್ಪಷ್ಟ ಮತ್ತು ನಿಖರವಾಗಿ ದಾಖಲಾಗಿವೆ. ಆದರೆ ಮಂದ ಬೆಳಕಿನಲ್ಲಿ ಚಿತ್ರದ ಗುಣಮಟ್ಟ ಸಮಾಧಾನಕರವಾಗಿದೆ. ನೈಟ್‌ ಮೋಡ್‌ನಲ್ಲಿ ತೆಗೆದ ಚಿತ್ರವೂ ತಕ್ಕ ಮಟ್ಟಿಗೆ ಪರವಾಗಿಲ್ಲ. ಇಂಟರ್‌ನೆಟ್‌ ಸಂಪರ್ಕ ಇದ್ದಾಗ ಫನ್‌ ಮೋಡ್‌ ಆಯ್ಕೆ ಬಳಸುವುದು ಮಜವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೊಟೊ ಹಂಚಿಕೊಳ್ಳುವ ಗೀಳು ಇರುವವರಿಗೆ ಈ ಆಯ್ಕೆ ಇಷ್ಟವಾಗುತ್ತದೆ. 32 ಎಂಪಿ ಸೆಲ್ಫಿ ಕ್ಯಾಮೆರಾ ಚೆನ್ನಾಗಿ ಕೆಲಸ ಮಾಡುತ್ತದೆ.

ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಂ53
ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಂ53

ಗೇಮ್‌ ಆಡುವಾಗ ಫೋನ್‌ ಹ್ಯಾಂಗ್‌ ಆಗುತ್ತಿದೆ. ಹೈ ರೆಸಲ್ಯೂಷನ್ಸ್‌ ಗ್ರಾಫಿಕ್ಸ್‌ ಇರುವ ರೋಡ್‌ ರ್‍ಯಾಷ್, ಸ್ಮ್ಯಾಷ್‌ಹಿಟ್‌ ತರಹದ ಗೇಮ್‌ ಆಡುವಾಗ ಫೋನ್‌ ಹ್ಯಾಂಗ್‌ ಆಗುತ್ತಿದೆ. ವೇಪರ್‌ ಚೇಂಬರ್‌ ವ್ಯವಸ್ಥೆ ಅಳವಡಿಸಿರುವುದರಿಂದ ಫೋನ್‌ ಹೆಚ್ಚು ಬಿಸಿ ಆಗುವುದಿಲ್ಲ. ರ್‍ಯಾಮ್‌ 6 ಹಾಗೂ 8 ಜಿಬಿ ಆಯ್ಕೆಗಳಲ್ಲಿ ಲಭ್ಯವಿದೆ. ರೋಮ್‌ 128 ಜಿಬಿ ಇದೆ. ಎಕ್ಸ್‌ಟರ್ನಲ್‌ ಮೆಮೊರಿ 1ಟಿಬಿವರೆಗೂ ವಿಸ್ತರಣೆ ಸಾಧ್ಯ. ಆದರೆ, ಎರಡನೇ ಸಿಮ್‌ ಹಾಕಿದರೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕಲು ಆಗುವುದಿಲ್ಲ.

ಆಬ್ಜೆಕ್ಟ್‌ ಇರೇಸರ್‌ ಆಯ್ಕೆ ಒಂದು ಹಂತದ ಮಟ್ಟಿಗೆ ಚೆನ್ನಾಗಿ ಕೆಲಸ ಮಾಡುತ್ತದೆ. ಚಿತ್ರದಲ್ಲಿ ಒಂದು ನಿರ್ದಿಷ್ಟ ವಸ್ತು ತೆಗೆಯಬೇಕು ಎಂದಾದರೆ ‘ಆಬ್ಜೆಕ್ಟ್‌ ಇರೇಸರ್‌’ ಆಯ್ಕೆ ಮಾಡಿ ಆ ನಿರ್ದಿಷ್ಟ ವಸ್ತುವಿನ ಮೇಲೆ ಕ್ಲಿಕ್‌ ಮಾಡಿದರೆ ಅದು ಅಲ್ಲಿಂದ ಇರೇಸ್ ಆಗುತ್ತದೆ. ಆದರೆ, ಮೂಲ ಚಿತ್ರದಲ್ಲಿ ಏನನ್ನೂ ಅಳಿಸಲಾಗಿದೆ ಎನ್ನುವ ಸುಳಿವು ಸಿಗುವಂತೆ ಆ ಜಾಗವು ಸ್ವಲ್ಪ ಬ್ಲರ್‌ ಆಗಿರುತ್ತದೆ. ಚಿತ್ರದಲ್ಲಿರುವ ವಸ್ತುಗಳು ಒಂದಕ್ಕೊಂದು ಅಂಟಿಕೊಂಡಿದ್ದರಂತೂ ಆಗ ಮೂಲ ಚಿತ್ರವನ್ನು ಮ್ಯಾನುಪ್ಯುಲೇಟ್‌ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಫೊಟೊ ರಿ–ಮಾಸ್ಟರ್‌ ಆಯ್ಕೆ ಉತ್ತಮವಾಗಿದೆ. ಹಳೆಯ ಬ್ಲಾಕ್‌ ಆ್ಯಂಡ್ ವೈಟ್ ಚಿತ್ರಗಳಿಗೆ ಹೊಸತನ ನೀಡಲು ಉಪಯುಕ್ತವಾಗಿದೆ.

ರ್‍ಯಾಮ್‌ ಪ್ಲಸ್‌: ಹೈ ರೆಸಲ್ಯೂಷನ್‌ ಇರುವ ಗೇಮ್‌ ಆಡುವಾಗ ಅಥವಾ ವಿಡಿಯೊ ನೋಡುವಾಗ ಫೋನ್‌ನ ರ್‍ಯಾಮ್‌ ಸಾಮರ್ಥ್ಯವನ್ನು 2, 4, ಅಥವಾ 6 ಜಿಬಿಯಷ್ಟು ಹೆಚ್ಚಿಸುವ ರ್‍ಯಾಮ್‌ ಪ್ಲಸ್‌ ಆಯ್ಕೆ ಉಪಯುಕ್ತವಾಗಿದೆ. ಆದರೆ, ಹೀಗೆ ಮಾಡುವಾಗ ಪ್ರತಿ ಬಾರಿಯೂ ಫೋನ್‌ ಅನ್ನು ರಿಸ್ಟಾರ್ಟ್‌ ಮಾಡಬೇಕಾಗುತ್ತದೆ. ಇದು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ.

ಹಲವು ಥರ್ಡ್‌ಪಾರ್ಟಿ ಆ್ಯಪ್‌ಗಳು ಮೊದಲೇ ಇನ್‌ಸ್ಟಾಲ್‌ ಆಗಿರುತ್ತದೆ. ಇವುಗಳಲ್ಲಿ ಬಹಳಷ್ಟನ್ನು ಅನ್‌ಇನ್‌ಸ್ಟಾಲ್‌ ಮಾಡಲು ಆಗುವುದಿಲ್ಲ. ಇದರಿಂದ ಅನವಶ್ಯಕವಾಗಿ ಫೋನ್‌ನ ಜಾಗ ವ್ಯರ್ಥವಾಗುತ್ತದೆ.

ಮೋಷನ್‌ ಆ್ಯಂಡ್‌ ಗೆಸ್ಚರ್‌: ಫೋನ್ ಎತ್ತಿದರೆ ಸ್ಕ್ರೀನ್ ಆನ್ ಆಗುವುದು, ಮೊಬೈಲ್‌ ಮೇಲೆ ಎರಡು ಬಾರಿ ಟ್ಯಾಪ್‌ ಮಾಡಿದರೆ ಸ್ಕ್ರೀನ್ ಆನ್/ಆಫ್ ಆಗುವುದು, ಸ್ಕ್ರೀನ್ ನೋಡುತ್ತಿರುವಾಗ ಸ್ವಯಂಚಾಲಿತವಾಗಿ ಲಾಕ್ ಆಗದಂತೆ ಮಾಡಲು, ಸ್ಕ್ರೀನ್ ಮೇಲೆ ಕೈಯಿಟ್ಟರೆ ರಿಂಗಿಂಗ್‌ ಸೌಂಡ್‌ ಮ್ಯೂಟ್‌ ಆಗುವುದು, ಅಂಗೈ ತೋರಿಸಿದರೆ ಸೆಲ್ಫಿ ಸೆರೆಹಿಡಿಯುವುದು... ಹೀಗೆ ಚಲನೆ ಹಾಗೂ ಸನ್ನೆಗೆ ಸಂಬಂಧಿಸಿದ ಆಧುನಿಕ ವೈಶಿಷ್ಟ್ಯಗಳು ಫೋನ್ ಬಳಕೆಯನ್ನು ಸುಲಭಗೊಳಿಸಿವೆ.

ಇದರಲ್ಲಿ ಫಿಂಗರ್‌ಪ್ರಿಂಟ್‌ ಸ್ಕ್ಯಾನ್‌ ಆಯ್ಕೆಯನ್ನು ಫೋನ್‌ನ ಸ್ವಿಚ್‌ ಆಫ್‌ ಬಟನ್‌ ಜಾಗದಲ್ಲಿಯೇ ಅಳವಡಿಸಲಾಗಿದೆ. ಇದು ಕಿರಿಕಿರಿ ಉಂಟುಮಾಡುತ್ತದೆ. ಹೀಗಿದ್ದರೂ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಬಹಳ ವೇಗವಾಗಿ ಕೆಲಸ ಮಾಡುತ್ತದೆ.

5000 ಎಂಎಎಚ್‌ ಬ್ಯಾಟರಿ ಹೊಂದಿದೆ. ಫೋನ್‌ ಜೊತೆ ಚಾರ್ಜಿಂಗ್‌ ಅಡಾಪ್ಟರ್‌ ನೀಡಿಲ್ಲ. ಯುಎಸ್‌ಬಿ ಚಾರ್ಜಿಂಗ್‌ ಕೇಬಲ್ ಮಾತ್ರ ನೀಡಲಾಗಿದೆ. ಈ ಕೇಬಲ್‌ ಸಹ ಎರಡೂ ಕಡೆ ‘ಸಿ’ ಟೈಪ್‌ನದ್ದು. ಇದು ಈ ಫೋನ್‌ನ ದೊಡ್ಡ ಮೈನಸ್‌. ಯುಎಸ್‌ಬಿ ಚಾರ್ಜಿಂಗ್‌ ಕೇಬಲ್‌ ₹ 100ಕ್ಕೆಲ್ಲಾ ಖರೀದಿಸಬಹುದು. ಆದರೆ, ಅಡಾಪ್ಟರ್‌ ಮುಖ್ಯ. ನಿರ್ದಿಷ್ಟವಾಗಿ ಇಂತಿಷ್ಟೇ ವೊಲ್ಟ್ಸ್‌ನದ್ದು ಇರಬೇಕು. ಆದರೆ, ಮೊಬೈಲ್‌ ಅಂಗಡಿಗಳಲ್ಲಿ ಖರೀದಿಸುವ ಅಡಾಪ್ಟರ್‌ ಒರಿಜಿನಲ್‌ ಎನ್ನುವುದಕ್ಕೆ ಯಾವುದೇ ಖಾತರಿ ಇರುವುದಿಲ್ಲ. ಈಗಂತೂ ಬ್ರ್ಯಾಂಡ್‌ ಹೆಸರಿನಲ್ಲಿಯೇ ನಕಲಿ ಚಾರ್ಜರ್‌ಗಳು ಆನ್‌ಲೈನ್‌ನಲ್ಲಿ, ಮಳಿಗೆಗಳಲ್ಲಿ ಸಿಗುತ್ತಿವೆ. ಹೀಗಿರುವಾಗ ಕಂಪನಿ ಚಾರ್ಜಿಂಗ್‌ ಅಡಾಪ್ಟರ್‌ ನೀಡದೇ ಇರುವುದು ಅಚ್ಚರಿಯ ನಿರ್ಧಾರವೇ ಸರಿ. ಇದರಿಂದ ಕಂಪನಿ ಉಳಿಸುವುದಾದರೂ ಏನು ಎನ್ನುವುದೇ ದೊಡ್ಡ ಪ್ರಶ್ನೆ? ಕಂಪನಿಯದ್ದೇ ಚಾರ್ಜರ್‌ ಬಳಸಿದರೆ ವೊಲ್ಟೇಜ್‌ನಲ್ಲಿ ವ್ಯತ್ಯಾಸ ಆಗುವುದಿಲ್ಲ. ಬ್ಯಾಟರಿಯೂ ಹೆಚ್ಚು ಬಾಳಿಕೆ ಬರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಬ್ಯಾಟರಿ ಶೇ 0–100ರಷ್ಟು ಪೂರ್ತಿ ಚಾರ್ಜ್‌ ಆಗಲು ಎರಡು ಗಂಟೆ ಬೇಕು. ಈಗಿನ ಫಾಸ್ಟ್‌ ಚಾರ್ಜರ್‌ ಕಾಲದಲ್ಲಿ ಇಷ್ಟು ಸಮಯ ತೆಗೆದುಕೊಳ್ಳುವುದು ಈ ಫೋನ್‌ನ ತಾಂತ್ರಿಕ ಹಿನ್ನಡೆ ಎನ್ನಬಹುದು.

ಒಟ್ಟಾರೆಯಾಗಿ ಗೇಮಿಂಗ್‌ ಆಯ್ಕೆಯನ್ನು ಹೊರತುಪಡಿಸಿ, ವೇಗದ ಕಾರ್ಯಾಚರಣೆ, ಗುಣಮಟ್ಟದ ಫೊಟೊ ತೆಗೆಯಲು ಉತ್ತಮ ಆಯ್ಕೆ ಇದಾಗಿದೆ.

ವೈಶಿಷ್ಟ್ಯ

ಡಿಸ್‌ಪ್ಲೇ; 6.7 ಇಂಚು, ಸೂಪರ್ ಅಮೊ ಎಲ್‌ಇಡಿ ಪ್ಲಸ್
ಕ್ಯಾಮೆರಾ; 108+8+ 2+2ಎಂಪಿ
ಸೆಲ್ಫಿ ಕ್ಯಾಮೆರಾ: 32 ಎಂಪಿ
ಮೆಮೊರಿ; 6ಜಿಬಿ+128 ಜಿಬಿ, 8ಜಿಬಿ+128ಜಿಬಿ
ಒಎಸ್‌: ಆಂಡ್ರಾಯ್ಡ್‌ 12 ಆಧಾರಿತ ಒನ್‌ ಯುಐ 4.1
ಬ್ಯಾಟರಿ; 5000 ಎಂಎಎಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT