ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Tecno POVA 5 Pro: ಬಜೆಟ್ ಬೆಲೆಯಲ್ಲಿ ಎಲ್ಇಡಿ ಬೆಳಕಿನ ಆಕರ್ಷಕ ಫೋನ್

Published : 21 ಆಗಸ್ಟ್ 2023, 14:11 IST
Last Updated : 21 ಆಗಸ್ಟ್ 2023, 14:11 IST
ಫಾಲೋ ಮಾಡಿ
Comments

ಕೈಗೆಟಕುವ ಬೆಲೆಗಳಲ್ಲಿ ಉತ್ತಮ ಗುಣವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ಗಳನ್ನು ಸುಮಾರು 70 ದೇಶಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿರುವ ಟೆಕ್‌ನೊ, ಕಳೆದ ವಾರವಷ್ಟೇ ಪೋವಾ 5 ಸರಣಿಯ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಟೆಕ್‌ನೊ "ಪೋವಾ 5 ಪ್ರೊ 5ಜಿ" ಫೋನ್ ಬಿಡುಗಡೆಗೆ ಮುನ್ನವೇ ಪ್ರಜಾವಾಣಿಗೆ ರಿವ್ಯೂಗೆ ದೊರೆತಿದ್ದು, ಎರಡು ವಾರ ಬಳಸಿದ ಬಳಿಕ ಅದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಪ್ರಮುಖ ವೈಶಿಷ್ಟ್ಯಗಳು

  • ಡಿಸ್‌ಪ್ಲೇ (ಸ್ಕ್ರೀನ್): 6.78 ಇಂಚು FHD+, 120Hz ರಿಫ್ರೆಶ್ ರೇಟ್, 1080x2460 ರೆಸಲ್ಯೂಶನ್

  • ಗಾತ್ರ: 168.61×76.61×9.00 ಮಿಮೀ

  • ಸೆಲ್ಫಿ ಕ್ಯಾಮೆರಾ: 16MP ಮತ್ತು ಫ್ಲ್ಯಾಶ್‌ಲೈಟ್

  • ಪ್ರಧಾನ ಕ್ಯಾಮೆರಾ: 50MP ಅವಳಿ ಕ್ಯಾಮೆರಾ, ಅವಳಿ ಫ್ಲ್ಯಾಶ್ ಲೈಟ್

  • ಮೆಮೊರಿ: 16GB (8GB RAM + 8GB ಮೆಮೊರಿ ಫ್ಯೂಶನ್)

  • ಆಂತರಿಕ ಮೆಮೊರಿ: 128GB ಹಾಗೂ 256ಜಿಬಿ (ಎರಡು ಮಾದರಿಗಳಲ್ಲಿ ಲಭ್ಯ)

  • ಬ್ಯಾಟರಿ: 5000mAh, 68W ವೇಗದ ಚಾರ್ಜಿಂಗ್ ಬೆಂಬಲ

  • ಕಾರ್ಯಾಚರಣೆ ವ್ಯವಸ್ಥೆ: ಆಂಡ್ರಾಯ್ಡ್ 13 ಆಧಾರಿತ HiOS 13.0

  • ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 6080

  • ವಿಶೇಷತೆಗಳು: ಆರ್ಕ್ ಇಂಟರ್‌ಫೇಸ್‌ನ ಆರ್‌ಜಿಬಿ ಬಣ್ಣಗಳ ಬೆಳಕಿನ ರೇಖೆಗಳು, ಲಿಕ್ವಿಡ್ ಕೂಲಿಂಗ್ ಸಿಸ್ಟಂ, ಡ್ಯುಯಲ್ ಡಿಟಿಎಸ್ ಸಹಿತ ಸ್ಟೀರಿಯೊ ಸ್ಪೀಕರ್, ಎನ್ಎಫ್‌ಸಿ.

ವಿನ್ಯಾಸ

ಬಾಕ್ಸ್ ತೆರೆದಾಗಲೇ ಗಮನ ಸೆಳೆಯುವುದು ಇದರ ಹಿಂಭಾಗದ ಕವಚದ ವಿನ್ಯಾಸ. 3 ಆಯಾಮಗಳ (3ಡಿ) ವಿನ್ಯಾಸ ಕಾಣಿಸುತ್ತದೆಯಾದರೂ, ಗಾಜಿನ ಸಮತಲದ ಮೇಲ್ಮೈ ಹೊಂದಿದೆ. ಆದರೆ ಹಿಂಭಾಗದ ಪ್ಯಾನೆಲ್ ಒಳಗೆ ತ್ರಿಕೋನಾಕಾರದಲ್ಲಿರುವ ರೇಖೆಗಳಲ್ಲಿ ಎಲ್ಇಡಿ ದೀಪ ಅಳವಡಿಸಲಾಗಿದ್ದು, ಆರ್‌ಜಿಬಿ ಬಣ್ಣಗಳಿಂದ ಬೆಳಗುತ್ತದೆ. ಕರೆ, ಸಂದೇಶ ಬಂದಾಗ ಅಥವಾ ಹಾಡು ಪ್ಲೇ ಮಾಡುವಾಗ ಈ ದೀಪವನ್ನು ಬೆಳಗುವಂತೆ ಮಾಡಬಹುದು. ಅಮೆರಿಕದಲ್ಲಿ ಜನಪ್ರಿಯವಾಗಿರುವ ಈ ಹೊಸ ವೈಶಿಷ್ಟ್ಯವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಟೆಕ್‌ನೊ ತನ್ನ ಪೋವಾ 5 ಪ್ರೊ ಬಜೆಟ್ ಫೋನ್‌ನಲ್ಲಿ ಪರಿಚಯಿಸಿದ್ದು, ಇದನ್ನು ಆರ್ಕ್ ಇಂಟರ್‌ಫೇಸ್ ಎಂದು ಕರೆದಿದೆ. ಈ ಬೆಳಕಿನ ರೇಖೆಗಳು ಬೆಳಗುವ ರೀತಿಯನ್ನು ಮತ್ತು ಬಣ್ಣವನ್ನು ಕೊಂಚ ಮಟ್ಟಿಗೆ ನಮಗೆ ಬೇಕಾದಂತೆ ಹೊಂದಿಸಿಕೊಳ್ಳುವ ಆಯ್ಕೆ ಇದೆ. ಅದನ್ನು ನಾವು ಸೆಟ್ಟಿಂಗ್ಸ್ ಮೆನುವಿನ "ಸ್ಪೆಶಲ್ ಫಂಕ್ಷನ್" ಹೆಸರಿನ ಸಬ್-ಮೆನುವಿನಲ್ಲಿ ನಿಭಾಯಿಸಬಹುದು. 6.78 ಇಂಚಿನ ದೊಡ್ಡ ಫೋನ್ ಆದರೂ, ತೂಕ 213 ಗ್ರಾಂ ಮಾತ್ರ ಇದೆ. ಬಾಕ್ಸ್‌ನಲ್ಲಿ 68W ಚಾರ್ಜರ್, ಯುಎಸ್‌ಬಿ ಟೈಪ್ ಸಿ ಕೇಬಲ್, ಸಿಮ್ ಇಜೆಕ್ಟರ್ ಪಿನ್ ಜೊತೆಗೆ ಹಿಂಭಾಗದ ಪಾಲಿಕಾರ್ಬೊನೇಟ್ ಕವಚವನ್ನೂ ನೀಡಲಾಗಿದೆ.

ಫೋನ್ ಕಡು ನೀಲಿ (ಡಾರ್ಕ್ ಇಲ್ಯೂಶನ್) ಹಾಗೂ ಸಿಲ್ವರ್ ಫ್ಯಾಂಟಸಿ ಎಂಬ ಹೆಸರಿನ ಎರಡು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಡಿಸ್‌ಪ್ಲೇ

6.78 ಇಂಚಿನ ದೊಡ್ಡ ಗಾತ್ರದ ಸ್ಕ್ರೀನ್, 120Hz FHD+ ಎಲ್‌ಸಿಡಿ ಡಿಸ್‌ಪ್ಲೇ ಇದ್ದು, ಒಳಾಂಗಣದ ಬಳಕೆಯಲ್ಲಿಯೂ ಬೆಳಕಿನ ಪ್ರಖರತೆಯು ಚೆನ್ನಾಗಿದೆ. ಒಳ್ಳೆಯ ವರ್ಣವೈಭವವನ್ನು ಪ್ರದರ್ಶಿಸುತ್ತದೆ ಮತ್ತು ಚಿತ್ರ ಅಥವಾ ವಿಡಿಯೊಗಳು ಶಾರ್ಪ್ ಆಗಿ ಕಾಣಿಸುತ್ತವೆ.

ಕ್ಯಾಮೆರಾ

50 ಮೆಗಾಪಿಕ್ಸೆಲ್ ಪ್ರಧಾನ ಸೆನ್ಸರ್ ಹಾಗೂ ಒಂದು ಎಐ ಸೆನ್ಸರ್ ಇರುವ ಅವಳಿ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಕ್ಯಾಮೆರಾ ಆ್ಯಪ್‌ನಲ್ಲಿ ಫಿಲ್ಮ್, ಎಐ ಕ್ಯಾಮ್, ಬ್ಯೂಟಿ, ಪೋರ್ಟ್ರೇಟ್ ಹಾಗೂ ಸೂಪರ್ ನೈಟ್ ಎಂಬ ಮೋಡ್‌ಗಳನ್ನು ನಮಗೆ ಬೇಕಾದಂತೆ ಬಳಸಿಕೊಳ್ಳಬಹುದು. ಹೊರಾಂಗಣದಲ್ಲಿ ಉತ್ತಮ ಫೋಟೊ ಸೆರೆಯಾಗುತ್ತದೆ. ಈ ಬೆಲೆಯ ಶ್ರೇಣಿಯ ಫೋನ್‌ಗಳಲ್ಲಿ ಇಷ್ಟು ಸ್ಪಷ್ಟ ಫೋಟೊ ಸೆರೆಯಾಗುವುದು ವಿಶೇಷ.

ಕಾರ್ಯ ನಿರ್ವಹಣೆ

ಪೋವಾ 5 ಪ್ರೊ 5ಜಿ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಹೊಂದಿದ್ದು, 8ಜಿಬಿ RAM ಇದೆ. ಇನ್ನೂ 8ಜಿಬಿ RAM ಅನ್ನು ಫ್ಯೂಶನ್ ಎಂಬ ತಂತ್ರಜ್ಞಾನದ ಮೂಲಕ ಹೆಚ್ಚಿಸಿಕೊಳ್ಳುವ ಆಯ್ಕೆಯಿದೆ. ಎಂದರೆ, ತೀರಾ ಗ್ರಾಫಿಕ್ಸ್ ಇರುವ ಗೇಮ್ಸ್ ಆಡುವಾಗ ಅಗತ್ಯವಿದೆ ಎಂದಾದರೆ 128ಜಿಬಿ (256ಜಿಬಿ ಆವೃತ್ತಿಯೂ ಲಭ್ಯ) ಆಂತರಿಕ ಸ್ಟೋರೇಜ್‌ನಿಂದಲೇ RAM ಹೆಚ್ಚಿಸಿಕೊಳ್ಳುವ ಆಯ್ಕೆಯದು. ಆಂಡ್ರಾಯ್ಡ್ 13 ಆಧಾರಿತ ಹಾಯ್ ಒಎಸ್ 13.1 ಇದರಲ್ಲಿದ್ದು, ಹಲವು ಕೆಲಸಗಳನ್ನು ಏಕಕಾಲಕ್ಕೆ ಮಾಡಲು (ಮಲ್ಟಿಟಾಸ್ಕಿಂಗ್) ಯಾವುದೇ ಅಡ್ಡಿಯಾಗಲಿಲ್ಲ. ಗೇಮ್ಸ್ ಕೂಡ ಸುಲಲಿತವಾಗಿ ಆಡಬಹುದಾಗಿದೆ. 5ಜಿ ಬೆಂಬಲವಿದ್ದು, ಕೆಲವೊಂದು ಬ್ಲಾಟ್‌ವೇರ್‌ಗಳನ್ನೂ ಸೇರಿಸಲಾಗಿದೆ. ಇವುಗಳಲ್ಲಿ ಅಗತ್ಯವಿಲ್ಲವೆಂದಾದರೆ ಕೆಲವನ್ನು ಅನ್ಇನ್‌ಸ್ಟಾಲ್ ಮಾಡಬಹುದು. ಹಾಡನ್ನು ಸ್ಪೀಕರ್‌ನಲ್ಲೇ ಕೇಳಲು ಡಿಟಿಎಸ್ ಧ್ವನಿ ಪರಿಣಾಮವಿರುವ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಉತ್ತಮ ಅನುಕೂಲ ಒದಗಿಸುತ್ತವೆ.

ಬ್ಯಾಟರಿ

ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ 5000mAh ಚಾರ್ಜಿಂಗ್ ಸಾಮರ್ಥ್ಯದ ಬ್ಯಾಟರಿ ಇದ್ದು, ಸಾಮಾನ್ಯ ಬಳಕೆಯಲ್ಲಿ ದಿನವಿಡೀ ಚಾರ್ಜ್ ಸಾಲುತ್ತದೆ. ಇದರ ಜೊತೆಗೆ ನೀಡಲಾಗಿರುವ, 68W ಸಾಮರ್ಥ್ಯದ ಬ್ಯಾಟರಿ ಚಾರ್ಜಿಂಗ್ ಅಡಾಪ್ಟರ್ ಬಳಸಿದರೆ, ಅತ್ಯಂತ ವೇಗವಾಗಿ ಎಂದರೆ ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷದಲ್ಲಿ ಶೇ.50ರಷ್ಟು ಚಾರ್ಜ್ ಆಗುತ್ತದೆ. ಬಾಕ್ಸ್‌ನಲ್ಲಿ ಕೆಲವು ಕಂಪನಿಗಳು ಚಾರ್ಜಿಂಗ್ ಅಡಾಪ್ಟರ್ ನೀಡದಿರುವ ಈ ಸಮಯದಲ್ಲಿ ಟೆಕ್‌ನೊ ಬಜೆಟ್ ಬೆಲೆಯಲ್ಲೂ ವೇಗದ ಚಾರ್ಜರ್ ನೀಡುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.

ಬ್ಯಾಟರಿ ವಿಶೇಷತೆ ಎಂದರೆ ಬೈಪಾಸ್ ಚಾರ್ಜಿಂಗ್ ವ್ಯವಸ್ಥೆ. ಎಂದರೆ, ಫೋನ್‌ನಲ್ಲಿ ಬೇರೆ ಕೆಲಸದಲ್ಲಿ ನಿರತವಾಗಿರುವಾಗ ಉದಾಹರಣೆಗೆ ಗೇಮ್ ಆಡುತ್ತಿರುವಾಗ, ಚಾರ್ಜಿಂಗ್‌ಗೆ ಇರಿಸಿದರೆ ಅದು ಬ್ಯಾಟರಿಯನ್ನು ಬೈಪಾಸ್ ಮಾಡಿ ನೇರವಾಗಿ ಮದರ್‌ಬೋರ್ಡ್ ಮೂಲಕ ಕೆಲಸ ಸಾಧಿಸುತ್ತದೆ. ಇದರಿಂದ ಬ್ಯಾಟರಿ ಬಾಳಿಕೆಯೂ ಹೆಚ್ಚುತ್ತದೆ ಮತ್ತು ಸಾಧನದ ಉಷ್ಣತೆಯನ್ನೂ ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇಷ್ಟೇ ಅಲ್ಲದೆ 10W ಸಾಮರ್ಥ್ಯದ ರಿವರ್ಸ್ ಚಾರ್ಜಿಂಗ್ ಬೆಂಬಲವಿದೆ. ಎಂದರೆ, ತುರ್ತು ಸಂದರ್ಭಗಳಲ್ಲಿ ಈ ಫೋನ್‌ನ ಬ್ಯಾಟರಿಯಿಂದ ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ಮುಂತಾದ ಬೇರೆ ಸಾಧನಗಳನ್ನು ಕೂಡ ಸ್ವಲ್ಪ ಮಟ್ಟಿಗೆ ಚಾರ್ಜ್ ಮಾಡಬಹುದಾಗಿದೆ.

ವಿಶೇಷತೆಗಳು

ಮೊದಲ ಗಮನ ಸೆಳೆಯುವ ವಿಷಯವೆಂದರೆ ಹಿಂಭಾಗದ ಕವಚದಲ್ಲಿರುವ ಹೊಳೆಯುವ ದೀಪ. ಅದರ ಹೊರತಾಗಿ, 'ಸ್ಪೆಶಲ್ ಫಂಕ್ಷನ್' ವಿಭಾಗದಲ್ಲಿ ಈ ಬೆಳಕಿನ ಪರಿಣಾಮವನ್ನು ಬದಲಾಯಿಸುವ, ಮಲ್ಟಿ-ವಿಂಡೋ ತೆರೆದು ಹಲವು ಕೆಲಸಗಳನ್ನು ಒಂದೇ ಸ್ಕ್ರೀನ್‌ನಿಂದ ನಿಭಾಯಿಸುವ ವೈಶಿಷ್ಟ್ಯವಿದೆ. ಇಲ್ಲೇ, ಮೆಮ್-ಫ್ಯೂಶನ್ ಎಂಬ ವಿಭಾಗಕ್ಕೆ ಹೋದರೆ, ವರ್ಚುವಲ್ RAM ಹೆಚ್ಚಿಸುವ ಆಯ್ಕೆ ಗೋಚರಿಸುತ್ತದೆ. ಕಿಡ್ಸ್ ಮೋಡ್, ಗೇಮ್ ಮೋಡ್, ಕೆಲವೊಂದು ಅಗತ್ಯವಾದ ಸೋಷಿಯಲ್ ಮೀಡಿಯಾಗಳ ಎರಡೆರಡು ಆ್ಯಪ್‌ಗಳ ಬಳಕೆಗೆ ಅವಕಾಶ ನೀಡುವ 'ಆ್ಯಪ್ ಟ್ವಿನ್' ಆಯ್ಕೆಯಿದೆ. ಸೋಷಿಯಲ್ ಟರ್ಬೋ ಎಂಬ ವಿಭಾಗದಲ್ಲಿ ಧ್ವನಿ ಬದಲಿಸುವ, ಸ್ಟಿಕರ್ ಮಾಡುವ, ವಿಡಿಯೊ ತಿದ್ದುಪಡಿ ಮಾಡುವುದೇ ಮೊದಲಾದ ವಿಶೇಷ ಕೆಲಸಗಳನ್ನು ಕೂಡ ನಿಭಾಯಿಸಬಹುದು.

ಪೋವಾ 5 ಪ್ರೊ 5ಜಿ 128ಜಿಬಿ ಫೋನ್‌ನ ಬೆಲೆ ₹14,999 ಹಾಗೂ 256 ಜಿಬಿ ಆವೃತ್ತಿಯ ಬೆಲೆ ₹15,999 ಆಗಿದೆ. ಈ ಬೆಲೆಯ ಶ್ರೇಣಿಯಲ್ಲಿ ಪೋವಾ 5 ಪ್ರೊ 5ಜಿ ಫೋನ್ ಪರಿಗಣಿಸಬಹುದಾದ ಸಾಧನ. 68W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್, ಆರ್ಕ್ ಇಂಟರ್‌ಫೇಸ್, ಮತ್ತು ದೊಡ್ಡ ಗಾತ್ರ - ಈ ಫೋನ್‌ನ ಪ್ರಧಾನ ಆಕರ್ಷಣೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT