ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬಾಹ್ಯಾಕಾಶ ನಿಲ್ದಾಣದಲ್ಲಿ ಗಾಳಿ ಸೋರಿಕೆ, ಪತ್ತೆಗೆ ಹರಸಾಹಸ

ನಾಸಾ, ರಷ್ಯಾ ಖಗೋಳ ವಿಜ್ಞಾನಿಗಳು, ಗಗನಯಾತ್ರಿಗಳಿಂದ ಸತತ ಪ್ರಯತ್ನ
Last Updated 2 ಸೆಪ್ಟೆಂಬರ್ 2020, 1:43 IST
ಅಕ್ಷರ ಗಾತ್ರ

ಭೂ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್-International Space Station‌) ಕೆಲವು ತಿಂಗಳುಗಳಿಂದೀಚೆಗೆ ನಿರಂತರವಾಗಿ ಗಾಳಿ ಸೋರಿಕೆಯಾಗುತ್ತಿದ್ದು, ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ಹಾಗೂ ರಷ್ಯಾ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ (ರೊಸ್‌ಕಾಸ್ಮೊಸ್‌) ಖಗೋಳ ವಿಜ್ಞಾನಿಗಳು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.

ದೊಡ್ಡ ಪ್ರಮಾಣದ ಸೋರಿಕೆ ಅಲ್ಲ. ದಿನಕ್ಕೆ 220 ಗ್ರಾಂಗಳಷ್ಟು ಗಾಳಿ ಹೊರಬರುತ್ತಿದೆ ಎಂದು ಹೇಳಲಾಗುತ್ತಿದೆ. ಪರಿಸ್ಥಿತಿ ಗಂಭೀರವಲ್ಲದಿದ್ದರೂ ಹಾಗೆ ಬಿಟ್ಟರೆ ಅಪಾಯ ಖಚಿತ. 2019ರ ಸೆಪ್ಟೆಂಬರ್‌ನಲ್ಲೇ ಸೋರಿಕೆ ಆರಂಭವಾಗಿದ್ದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಹೊರಬರುತ್ತಿರುವುದು ಅವರ ಗಮನಕ್ಕೆ ಬಂದಿದೆ. ಆದರೆ, ಎಲ್ಲಿಂದ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಆಗಿಲ್ಲ. ಇದು ಅವರ ತಲೆನೋವಿಗೆ ಕಾರಣ.

ಸದ್ಯ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂವರು ಗಗನಯಾತ್ರಿಗಳಿದ್ದಾರೆ. ನಾಸಾದ ಕ್ರಿಸ್ ಕ್ಯಾಸಿಡಿ, ರಷ್ಯಾದ ಅನಾಟೊಲಿ ಇವಾನಿಶಿನ್‌ ಮತ್ತು ಇವಾನ್‌ ವಾಗ್ನೆರ್‌ ಅವರು ವಿವಿಧ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ.

ಸೋರಿಕೆಯು ನಿಗದಿತ ವಿತಿಗಿಂತ ಕೆಳಗಿನ ಪ್ರಮಾಣದಲ್ಲೇ ಇರುವುದರಿಂದ ಪರಿಸ್ಥಿತಿ ಕೈಮೀರಿಲ್ಲ, ಗಗನಯಾತ್ರಿಗಳ ಜೀವಕ್ಕೂ ಅಪಾಯ ಇಲ್ಲ ಎಂದು ನಾಸಾ ಹೇಳಿದೆ.

ಪರಿಸ್ಥಿತಿ ಗಂಭೀರವಾಗಿಲ್ಲದೇ ಇರುವುದರಿಂದ ಹಾಗೂ ಗಗನಯಾತ್ರಿಗಳು ಬಾಹ್ಯಾಕಾಶ ನಡಿಗೆ, ವಿವಿಧ ಅಧ್ಯಯನಗಳಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಗಾಳಿ ಸೋರಿಕೆ ಬಗ್ಗೆ ಗಮನ ಹರಿಸಿರಲಿಲ್ಲ.

12 ದಿನಗಳಿಂದೀಚೆಗೆ ಸೋರಿಕೆಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ವಿಜ್ಞಾನಿಗಳು ಹಾಗೂ ಗಗನಯಾನಿಗಳು ತೊಡಗಿಕೊಂಡಿದ್ದಾರೆ. ಆಗಸ್ಟ್‌ 21ರಿಂದ ಆಗಸ್ಟ್‌ 25ರವರೆಗೆ ಗಗನಯಾತ್ರಿಗಳು ನಿಲ್ದಾಣದಲ್ಲಿ ಸೋರಿಕೆ ಪತ್ತೆ ಹಚ್ಚುವ ಯತ್ನ ನಡೆಸಿದ್ದಾರೆ. ವಿಜ್ಞಾನಿಗಳು ಭೂಮಿಯಿಂದಲೇ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಅವುಗಳನ್ನು ಅವಲೋಕಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಾರದಲ್ಲಿ ವಿವರಗಳು ಲಭ್ಯವಾಗಲಿದೆ ಎಂದು ನಾಸಾ ಹೇಳಿದೆ.

ಐಎಸ್‌ಎಸ್‌: ಏನು, ಎತ್ತ?

400 ಟನ್‌ಗಳಷ್ಟು ತೂಗುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಫುಟ್ಬಾಲ್‌ ಮೈದಾನದಷ್ಟು ದೊಡ್ಡದಿದೆ. 1998ರಿಂದ ನೆಲದಿಂದ 400 ಕಿ.ಮೀ ಎತ್ತರದಲ್ಲಿ ಭೂ ಕಕ್ಷೆಯಲ್ಲಿ ಸುತ್ತುತ್ತಿದೆ (ಹಂತ ಹಂತವಾಗಿ ನಿಲ್ದಾಣವನ್ನು ವಿಸ್ತರಿಸಲಾಗಿದೆ). 2000ನೇ ಇಸವಿಯ ನವೆಂಬರ್‌ 2ರಿಂದ ಗಗನಯಾತ್ರಿಗಳು ನಿಲ್ದಾಣದಲ್ಲಿ ವಾಸವಿದ್ದಾರೆ. ಇದುವರೆಗೆ 62 ತಂಡಗಳು ಅಲ್ಲಿಗೆ ಹೋಗಿವೆ. ಈಗ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು 63ನೇ ತಂಡದ ಸದಸ್ಯರು.

ಐಎಸ್‌ಎಸ್‌ನಲ್ಲಿ ಎರಡು ವಿಭಾಗಗಳಿವೆ (ಸೆಗ್‌ಮೆಂಟ್‌). ಒಂದು ಅಮೆರಿಕದ್ದು, ಇನ್ನೊಂದು ರಷ್ಯಾದ್ದು. ಯಾವ ಭಾಗದಲ್ಲಿ ಗಾಳಿ ಸೋರಿಕೆಯಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಕಳೆದ ವಾರ ಮೂವರೂ ಗಗನಯಾತ್ರಿಗಳು ಐದು ದಿನಗಳ ಕಾಲ ರಷ್ಯಾದ ಭಾಗದಲ್ಲಿ ಉಳಿದುಕೊಂಡು ಸೋರಿಕೆ ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಒಳಗಡೆ, ಗಗನಯಾತ್ರಿಗಳ ವಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ ಗಾಳಿಯ ಒತ್ತಡವನ್ನು ನಿರ್ವಹಿಸಲಾಗುತ್ತದೆ. ನಿಲ್ದಾಣದಿಂದ ನಿರಂತರವಾಗಿ ಗಾಳಿ ಹೊರ ಹೋಗುತ್ತಿದ್ದರೆ, ಒಳಗೆ ಒತ್ತಡ ಕಡಿಮೆಯಾಗುತ್ತದೆ. ಇದು ಮಿತಿಗಿಂತ ಕೆಳಗಡೆ ಬಂದರೆ ಗಗನಯಾತ್ರಿಗಳ ಜೀವಕ್ಕೆ ಕುತ್ತು ತಂದೊಡ್ಡಬಲ್ಲುದು. ಹಾಗಾಗಿ, ಯಾವಾಗಲೂ ಒತ್ತಡ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಸೋರಿಕೆ ಹೆಚ್ಚಾದರೆ, ನಿಲ್ದಾಣದ ಒಳಗಡೆ ನಿಗದಿತ ಒತ್ತಡ ಕಾಪಾಡುವ ನಿಟ್ಟಿನಲ್ಲಿ ನೈಟ್ರೋಜನ್‌ ಬಳಸಬೇಕಾಗುತ್ತದೆ. ಇದಕ್ಕಾಗಿ ನೈಟ್ರೋಜನ್‌ ಅನ್ನು ಭೂಮಿಯಿಂದ ತೆಗೆದುಕೊಂಡು ಹೋಗಿ ಐಎಸ್‌ಎಸ್‌ನಲ್ಲಿ ದಾಸ್ತಾನು ಇರಿಸಲಾಗಿದೆ.

ಸೋರಿಕೆ ಇದೇ ಮೊದಲಲ್ಲ

ಬಾಹ್ಯಾಕಾಶ ನಿಲ್ದಾಣದಲ್ಲಿ ಗಾಳಿ ಸೋರಿಕೆಯಾಗುವುದು ಇದೇ ಮೊದಲೇನಲ್ಲ. ಕೆಲವು ಬಾರಿ ಆಗಿದೆ. 22 ವರ್ಷಗಳಿಂದ ನಿರಂತರವಾಗಿ ಕಾರ್ಯಾಚರಿಸುತ್ತಿರುವ ನಿಲ್ದಾಣವನ್ನು ನಿರ್ವಹಿಸುವುದೇ ದೊಡ್ಡ ಸವಾಲು. ಆಗಾಗ ಒಂದಿಲ್ಲೊಂದು ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಗಗನಯಾತ್ರಿಗಳು ತಮ್ಮ ಅಧ್ಯಯನ, ಸಂಶೋಧನೆಯ ಜೊತೆಗೆ ಈ ಕೆಲಸವನ್ನೂ ಮಾಡುತ್ತಿರುತ್ತಾರೆ.

2004ರಲ್ಲಿ ಗಾಳಿ ಸೋರಿಕೆ ಕಂಡು ಬಂದಿತ್ತು. 2015ರಲ್ಲಿ ನಿಲ್ದಾಣದಲ್ಲಿ ವಿಷಕಾರಿ ಅಮೋನಿಯ ಅನಿಲ ಸೋರಿಕೆಯಾಗುತ್ತಿದೆ ಎಂಬ ಸುದ್ದಿ ಹರಡಿತ್ತು. ಆಗ ಗಗನಯಾತ್ರಿಗಳ ಸುರಕ್ಷತೆ ಬಗ್ಗೆ ಆತಂಕವೂ ವ್ಯಕ್ತವಾಗಿತ್ತು. ಅವರು ತಕ್ಷಣ, ಐಎಸ್‌ಎಸ್‌ನ ಅಮೆರಿಕದ ವಿಭಾಗದಿಂದ ರಷ್ಯಾದ ಘಟಕಕ್ಕೆ ತೆರಳಿದ್ದರು. ನಂತರ ಸ್ಪಷ್ಟನೆ ನೀಡಿದ್ದ ನಾಸಾ, ಕಂಪ್ಯೂಟರ್‌ ರಿಲೆ ಹಾಗೂ ಸೆನ್ಸರ್‌ನ ದೋಷದಿಂದ ಸಮಸ್ಯೆ ಆಗಿತ್ತು ಎಂದು ಹೇಳಿತ್ತು. 2018ರಲ್ಲಿ ರಷ್ಯಾಕ್ಕೆ ಸೇರಿದ ವಿಭಾಗದಲ್ಲಿ ಗಾಳಿ ಸೋರಿಕೆ ಕಂಡು ಬಂದಿತ್ತು. ಸಣ್ಣ ರಂಧ್ರವನ್ನು ಬೇಗ ಪತ್ತೆ ಹಚ್ಚಿದ್ದ ಗಗನಯಾತ್ರಿಗಳು, ಅದನ್ನು ಮುಚ್ಚುವಲ್ಲಿ ಯಶಸ್ವಿಯಾಗಿದ್ದರು.

ಈ ಬಾರಿ, ಗಗನಯಾತ್ರಿಗಳು, ನಾಸಾ ಹಾಗೂ ರಷ್ಯಾದ ವಿಜ್ಞಾನಿಗಳಿಗೆ ಇದುವರೆಗೆ ಸೋರಿಕೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಕಳೆದ ವಾರದ ಕಾರ್ಯಾಚರಣೆಯಲ್ಲಿ ಸಂಗ್ರಹಿಸಿರುವ ದತ್ತಾಂಶಗಳನ್ನು ಅವಲೋಕಿಸಿ ಸೋರಿಕೆಯನ್ನು ಪತ್ತೆ ಹಚ್ಚಬಹುದು ಎಂಬ ನಿರೀಕ್ಷೆಯಲ್ಲಿ ವಿಜ್ಞಾನಿಗಳಿದ್ದಾರೆ. ಅದು ಸಾಧ್ಯವಾಗದೇ ಹೋದರೆ, ಸೋರಿಕೆ ಪತ್ತೆಗೆ ಇನ್ನಷ್ಟು ಹರಸಾಹಸ ಪಡಬೇಕಾಗುವುದು ಖಚಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT