ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ದಿನದ ವಿಶೇಷ: ಉದ್ಯೋಗ ಸೃಷ್ಟಿಯಲ್ಲಿ ವಿಜ್ಞಾನ

Last Updated 27 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಶ್ರೇಷ್ಠ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಭಾರತೀಯ ವೇದಗಳು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಅಡಿಪಾಯಗಳಾಗಿವೆ.ಸರ್ ಸಿ.ವಿ. ರಾಮನ್‍ರವರಿಗೆ 1930ರಲ್ಲಿ ನೊಬೆಲ್ ಪ್ರಶಸ್ತಿ ದೊರೆತ ಸವಿನೆನಪಿಗಾಗಿ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತೀಯ ಇತಿಹಾಸದಲ್ಲಿ ಖ್ಯಾತ ವಿಜ್ಞಾನಿಗಳಾದ ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ, ನಾಗಾರ್ಜುನ, ಸುಶ್ರುತ, ಚರಕ ಅವರಂತಹ ವಿಜ್ಞಾನಿಗಳು ಖಗೋಳವಿಜ್ಞಾನ, ಆಹಾರವಿಜ್ಞಾನ, ವೇದವಿಜ್ಞಾನ, ಔಷಧವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆಗಳನ್ನು ಮಾಡಲು ಭದ್ರಬುನಾದಿ ಹಾಕಿದ್ದಾರೆ. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಕಳೆದ ಒಂದು ದಶಕದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ.

ನಾಲ್ಕನೇ ಕೈಗಾರಿಕಾ ಕ್ರಾಂತಿಯ ಎಲ್ಲಾ ಅಂಶಗಳಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ಸಂಶೋಧನೆಗಳ ಪ್ರಕಾರ, ಪ್ರಸ್ತುತ ಪ್ರಾಥಮಿಕ ಶಾಲೆಗೆ ಪ್ರವೇಶಿಸುವ ಶೇ 65ರಷ್ಟು ಮಕ್ಕಳು ಈಗ ಅಸ್ತಿತ್ವದಲ್ಲಿಯೇ ಇಲ್ಲದ, ಮುಂದೊಂದು ದಿನ ಸೃಷ್ಟಿಯಾಗಬಹುದಾದ ಹೊಸ ಉದ್ಯೋಗಗಳನ್ನು ಪಡೆಯಲಿದ್ದಾರೆ. 2022-23ರ ಹೊತ್ತಿಗೆ ಪ್ರಪಂಚದಾದ್ಯಂತ 17 ಲಕ್ಷಕ್ಕಿಂತಲೂ ಹೆಚ್ಚು ಹೊಸ ಹೊಸ ಡಿಜಿಟಲ್ ತಂತ್ರಜ್ಞಾನ ಸಂಬಂಧದ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದ್ದು, ಜೊತೆಗೆ ಐಟಿ ಕೌಶಲ ಹೊಂದಿರುವ ಶೇ 90ರಷ್ಟು ತಜ್ಞರ ಕೊರತೆಯನ್ನು ನೀಗಿಸಬೇಕಾಗಿದೆ.

ಸಂಶೋಧಕ ಪ್ರೊ. ಕೀತ್ ಸಾಯರ್, ವಿಜ್ಞಾನದ ದೃಷ್ಟಿಕೋನದ ಮುಖಾಂತರ ಹೊಸ ವಿಧಾನಗಳನ್ನು ಅರಿತರೆ ಸೃಜನಶೀಲತೆಯನ್ನು ಹೆಚ್ಚು ಬೆಳೆಸಿಕೊಳ್ಳಬಹುದು ಎನ್ನುತ್ತಾರೆ.

ಬೌದ್ಧಿಕ ವಾತಾವರಣವನ್ನು ಸೃಷ್ಟಿಸಲು ನಾವುಇಂಟರ್ನೆಟ್‌ ಆಫ್ ಥಿಂಗ್ಸ್ (ಐಒಟಿ) ವಿಷಯವನ್ನು ಸರಿಯಾಗಿ ಅರ್ಥೈಸಬೇಕಾಗಿದೆ. ಉದಾಹರಣೆಗೆ ವಿದ್ಯಾರ್ಥಿಗಳು ತಾವು ತಯಾರಿಸುವ ಪ್ರಾಜೆಕ್ಟ್‌ ವರ್ಕ್‌ಗಳು ಕ್ಲೌಡ್‌ ಆಧಾರಿತ ಸಿಮ್ಯುಲೇಟರ್ ಜ್ಞಾನವನ್ನು ಸೇರಿಸಿ ಯಶಸ್ವಿಗೊಳಿಸಲು ವೇದಿಕೆಯನ್ನು ನಾವು ಸಿದ್ಧಪಡಿಸಬೇಕಿದೆ.

ವಿಶ್ವದ ಪ್ರಮುಖ ಐಟಿ ಕೌಶಲ ಮತ್ತು ವೃತ್ತಿ ನಿರ್ಮಾಣ ಕಂಪನಿಗಳು ಪರಿಚಯಿಸಿದ ಅನೇಕ ವಿಧದ ನೂತನ ತಂತ್ರಜ್ಞಾನಗಳು, ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ಇರುವಂತಹ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಾರ್ಗದರ್ಶಕರು ಆನ್‌ಲೈನ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿ ತಮ್ಮ ಪ್ರಾಜೆಕ್ಟ್‌ನ ಅಭಿವೃದ್ಧಿಯ ಬಗ್ಗೆ ವಿವಿಧ ಹಂತಗಳಲ್ಲಿ ಮಾಹಿತಿಯನ್ನು ರಿಯಲ್‌ ಟೈಮ್‌ನಲ್ಲಿ ವಿನಿಮಯ ಮಾಡಿಕೊಳ್ಳುವ ಮೂಲಕ ಅತ್ಯಂತ ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಪರಿಹಾರವನ್ನು ಸುಲಭವಾಗಿ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿವೆ.

ಕೃತಕ ಬುದ್ಧಿಮತ್ತೆ ಬಳಸಿಕೊಂಡು ನುರಿತ ಪ್ರಾಧ್ಯಾಪಕರುಪಾಠಮಾಡುವ ವೈಖರಿ ಅನುಕರಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ತಮಗಿಷ್ಟವಿರುವ ಬೋಧಕರ ಪಾಠಗಳನ್ನು ಅವರ ಅನುಪಸ್ಥಿತಿಯಲ್ಲಿಯೂ ತಂತ್ರಜ್ಞಾನದ ನೆರವಿನಿಂದ ಪಡೆಯಲು ಸಹಕಾರಿಯಾಗಲಿದೆ. ಅಲ್ಲದೆಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ತಪ್ಪಿಸಲು, ಪರೀಕ್ಷೆಗಳಲ್ಲಿ ಪಾರದರ್ಶಕತೆಯನ್ನು ತರಲು ಈ ತಂತ್ರಜ್ಞಾನವನ್ನು ಇತ್ತೀಚೆಗೆ ಯಶಸ್ವಿಯಾಗಿ ಬಳಸಲಾಗುತ್ತಿದೆ. ಇತ್ತೀಚಿಗೆ ಇದೇ ಜ್ಞಾನವನ್ನು ಬಳಸಿ ಕೃಷಿ ಇಲಾಖೆಯು ರೈತರ ಬೆಳೆ ಸಮೀಕ್ಷೆಯನ್ನು ನಡೆಸಿ, ಪ್ರಕೃತಿ ವಿಕೋಪ, ಅತಿವೃಷ್ಟಿ-ಅನಾವೃಷ್ಟಿಗಳಿಂದ ಹಾನಿಗೊಳಗಾದ ಅರ್ಹ ರೈತ ಫಲಾನುಭವಿಗಳನ್ನು ಆಯ್ಕೆಮಾಡಲು ಸಾಧ್ಯವಾಗಿದೆ. ಕೋವಿಡ್‌ ಹರಡದಂತೆ ತಡೆಯಲು ಆರೋಗ್ಯ ಸೇತು ಆ್ಯಪ್‍ ಹೇಗೆ ನೆರವಿಗೆ ಬಂತು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.

ತಂತ್ರಜ್ಞಾನವು ವಿದ್ಯಾರ್ಥಿಗಳಿಗೆ ಸಂವಾದಾತ್ಮಕ ಅನುಭವವನ್ನು ನೀಡುವುದರ ಜೊತೆಗೆ ಅವರಲ್ಲಿ ಕಲಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಕಲಿಯುವ ಕುತೂಹಲ ಹಾಗೂ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಶಿಕ್ಷಕರು ನೀಡಿರುವ ಕ್ಲಾಸ್‌ ಅಸೈನ್‌ಮೆಂಟ್‌ಗಳನ್ನುಶಾಲೆಯ ಹೊರಗೆ ಎಲ್ಲಿ ಬೇಕಾದರೂ ಮಾಡಬಹುದಾಗಿದೆ. ಅರ್ಥವಾಗದ ವಿಷಯವನ್ನು ಅರಿತುಕೊಳ್ಳಲು ಆನ್‌ಲೈನ್‌ ತಂತ್ರಜ್ಞಾನದ ನೆರವಿನಿಂದ ಪರಿಣತರ ಸಹಾಯವನ್ನು ಪಡೆಯಬಹುದು. ಈ ತಂತ್ರಜ್ಞಾನವು ಶಾಲೆ ಮತ್ತು ಮನೆ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದೆ.

ತಂತ್ರಜ್ಞಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆ ಆಗಿದ್ದು, ಹಿಂದಿನ ದಶಕಕ್ಕೆ ಹೋಲಿಸಿದರೆ, ಕಲಿಕಾ ಮಟ್ಟವು ಹತ್ತು ಪಟ್ಟು ಹೆಚ್ಚಾಗಿದೆ. ಆಧುನಿಕ ತರಗತಿಯ ಪ್ರಮುಖ ಲಕ್ಷಣವೆಂದರೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ. ವಿವಿಧ ಗ್ಯಾಜೆಟ್‌ಗಳ ಮುಖಾಂತರ ಕಲಿಕೆಯನ್ನು ಉತ್ತೇಜಿಸಲು ಶಿಕ್ಷಕರು ಇಂದು ಗ್ರೂಪ್ ಚಾಟ್‍ಗಳು ಮತ್ತು ಆನ್‌ಲೈನ್‌ ಫಾರ್ಮ್‌ ಮುಂತಾದ ವಿವಿಧ ವಿಧಾನಗಳನ್ನು ಬಳಸುತ್ತಿದ್ದಾರೆ. ಆ್ಯನಿಮೇಶನ್ ವಿಡಿಯೊಗಳು ಅತ್ಯಂತ ಕಠಿಣವಾದ ವಿಷಯಗಳನ್ನು ಸುಲಭವಾಗಿ ಅರ್ಥೈಸಲು ಸಹಾಯ ಮಾಡುತ್ತಿವೆ.

ಇ- ಪುಸ್ತಕಗಳು ವಿದ್ಯಾರ್ಥಿಗಳ ಬೆನ್ನು ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಶಿಕ್ಷಕರು ಈಗ ಸ್ಲೈಡ್ ಹಾಗೂ ಸ್ಮಾರ್ಟ್‌ ಕ್ಲಾಸ್‌ರೂಮ್‌ ಬಳಸುತ್ತಿದ್ದು ವಿವಿಧ ವಿಷಯಗಳನ್ನು ಆಸಕ್ತಿಕರವಾಗಿ ತೋರಿಸುವುದರಮೂಲಕ ತರಗತಿಯಲ್ಲಿ ಪಾಠದ ಬಗ್ಗೆ ಆಕರ್ಷಣೆ ಉಂಟುಮಾಡುತ್ತಿದ್ದಾರೆ.

ಬದಲಾದ ತಂತ್ರಜ್ಞಾನದ ನೆರವಿನಿಂದ ಕಲಿಯಲು ಸಾಧ್ಯವಿಲ್ಲ ಎಂದು ಭಾವಿಸುವವರೂ ಇಂದು ವಿಜ್ಞಾನ ಪಾಠಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವೆ ಅಂತರವನ್ನು ಕಡಿಮೆ ಮಾಡಲು ಸಹ ತಂತ್ರಜ್ಞಾನ ಸಹಾಯ ಮಾಡಿದೆ.

ತಾಂತ್ರಿಕ ಪ್ರಗತಿಯಿಂದ ಭವಿಷ್ಯದಲ್ಲಿ ಉದ್ಭವಿಸುವ ಪ್ರಮುಖ ಪ್ರಶ್ನೆಯೆಂದರೆ ಉದ್ಯೋಗ ಮತ್ತು ಕಾರ್ಮಿಕರ ಕಲ್ಯಾಣ. ಏಕೆಂದರೆ ಯಾವುದೇ ಸರ್ಕಾರಗಳು ಸಮಾಜದ ಮತ್ತು ಆರ್ಥಿಕ ಶಕ್ತಿಯ ಸಮತೋಲನವನ್ನು ಕಾಪಾಡಲು ಇವುಗಳು ಬಹು ಮುಖ್ಯ. ಇತ್ತೀಚೆಗೆ ಹಲವು ನೂತನ ತಂತ್ರಜ್ಞಾನಗಳನ್ನು ಹಲವಾರು ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಬಳಕೆಮಾಡಲಾಗುತ್ತಿದೆ. ಉದಾಹರಣೆಗೆ 5G ಸಂವಹನ ತಂತ್ರಜ್ಞಾನ ಹೆಚ್ಚು ವೇಗವಾಗಿ ಡೇಟಾ ಕೊಂಡೊಯ್ಯುವ ಕೆಲಸ ಮಾಡುತ್ತಿದೆ.

ಇಂಡಸ್ಟ್ರಿ 4.0 ಎಂದು ಕರೆಯಲ್ಪಡುವ ಹೊಸ ಕೈಗಾರಿಕಾ ಕ್ರಾಂತಿಯು ಹೆಚ್ಚು ವ್ಯಾಪಕವಾಗಿ ಬೆಳೆಯುತ್ತಿದ್ದು, ಇದರಿಂದ ಉತ್ಪಾದನಾ ಮಾರ್ಗಗಳಲ್ಲಿ ಯಾಂತ್ರೀಕೃತ ರೋಬೊಟೈಸೇಷನ್‌ ಆಗುತ್ತಿದ್ದು, ವಿವಿಧ ಕೌಶಲಗಳನ್ನು ಹೊಂದಿದ ವೃತ್ತಿಪರರಿಗೆ ಮಾತ್ರ ಇನ್ನುಮುಂದೆ ಕೆಲಸದ ಭದ್ರತೆ ಒದಗಲಿದೆ.

ಈ ನಿಟ್ಟಿನಲ್ಲಿ ಯುವಪೀಳಿಗೆ ಶಿಕ್ಷಣದ ಜೊತೆಗೆ ಕೌಶಲವೃದ್ಧಿಯಲ್ಲಿ ಆಸಕ್ತಿ ಇದ್ದರೆ, ಬದಲಾಗುವ ತಂತ್ರಜ್ಞಾನದ ಹರಿವಿನೊಂದಿಗೆ ಸಾಗುವುದನ್ನು ರೂಢಿಸಿಕೊಳ್ಳಬೇಕಿದೆ.

(ಲೇಖಕ: ಕುಲಪತಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT