ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಬೋಟ್‌ಗಳಿಗೆ ಚರ್ಮ ಬಂತು!

Published 9 ಜುಲೈ 2024, 22:02 IST
Last Updated 9 ಜುಲೈ 2024, 22:02 IST
ಅಕ್ಷರ ಗಾತ್ರ

‘ಸ್ಟಾರ್‌ ಟ್ರೆಕ್’ ಅಥವಾ ‘ಸ್ಟಾರ್‌ ವಾರ್ಸ್‌’ ಕಥೆಗಳಲ್ಲಿ ರೋಬೋಟ್‌ಗಳು ಸಂಪೂರ್ಣ ಮನುಷ್ಯಸ್ವರೂಪವನ್ನೇ ಪಡೆದಿರುವುದನ್ನು ನಾವು ಅಚ್ಚರಿಯಿಂದ ಓದಿದ್ದೇವೆ. ಸಿನಿಮಾ, ಕಿರುತೆರೆ ಧಾರಾವಾಹಿಗಳಲ್ಲಿ ವೀಕ್ಷಿಸಿ ಅಚ್ಚರಿ ಪಟ್ಟಿದ್ದೇವೆ; ಕೆಲವೊಮ್ಮೆ ನಿಬ್ಬೆರಗಾಗಿದ್ದೇವೆ. ಇದು ಕೇವಲ ಕಾಲ್ಪನಿಕ ಅಥವಾ ಕಥೆಗಳಲ್ಲಿ ಮಾತ್ರ ಕಾಣುವಂಥದ್ದು ಎನ್ನುವ ಕಾಲ ತೀರಾ ದೂರವಿಲ್ಲ. ಈಗಾಗಲೇ ರೋಬೋಟ್‌ಗಳಿಗೆ ಮನುಷ್ಯನ ಸಹಜರೂಪವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕೃತಕ ಚರ್ಮವನ್ನು ವಿಜ್ಞಾನಿಗಳು ಸಿದ್ಧಪಡಿಸಿಬಿಟ್ಟಿದ್ದಾರೆ.

‘ರೋಬೋಟ್‌’ ಎಂದರೆ ಅದಕ್ಕೆ ಲೋಹದ ಮೈ, ಚರ್ಮದ ಜಾಗದಲ್ಲಿ ಪ್ಲಾಸ್ಟಿಕ್ ಅಥವಾ ಫೈಬರ್‌ ಹೊರಗವಚ ಇರುವುದೆಂಬ ಅಭಿಪ್ರಾಯ ಈಗಿದೆ. ಈಗ ನಾವು ನೋಡುತ್ತಿರುವ ರೋಬೋಟ್‌ಗಳು ಅಥವಾ ಈಗಾಗಲೇ ನೋಡಿರುವ ರೋಬೋಟ್‌ಗಳಿಗೆ ಇದು ಅನ್ವಯಿಸುತ್ತದೆ. ಆದರೆ, ಮುಂದೆಯೂ ಹೀಗೆಯೇ ಇರಬೇಕು ಎಂಬ ನಿಯಮವೇನೂ ಇಲ್ಲ. ಅಲ್ಲದೇ, ದಿನೇ ದಿನೇ ರೋಬೋಟ್‌ಗಳು ಮನುಷ್ಯನ ಸ್ವರೂಪವನ್ನು ಪಡೆಯುತ್ತ, ಸಾಮಾಜಿಕವಾಗಿ ಹೆಚ್ಚು ಮನ್ನಣೆಯನ್ನು ಪಡೆಯುವತ್ತ ಸಾಗುತ್ತಿವೆ. ಕೃತಕವಾದ ಯಾಂತ್ರಿಕ ನೋಟ ರೋಬಾಟ್‌ಗೆ ಇದ್ದಷ್ಟೂ ಅದು ಮನುಷ್ಯನಿಗೆ ಹತ್ತಿರವಾಗದು ಎಂಬ ಸತ್ಯ ಈಗ ವಿಜ್ಞಾನಿಗಳಿಗೆ ತಿಳಿದಿದೆ. ಹಾಗಾಗಿ, ಸ್ನಾಯು, ರಕ್ತ, ಮಾಂಸಗಳನ್ನು ಒಳಗೊಂಡ ರೋಬೋಟ್‌ಗಳು ಸಿದ್ಧವಾಗುತ್ತಿವೆ. ಅದಕ್ಕೆ ಕಳಶವಿತ್ತಂತೆ ಅತ್ಯಂತ ಸಹಜ ನೋಟವನ್ನು ನೀಡಬಲ್ಲ ಚರ್ಮವನ್ನೂ ವಿಜ್ಞಾನಿಗಳು ಸೃಷ್ಟಿಸಿದ್ದಾರೆ.

ಜಪಾನ್‌ನ ಟೋಕಿಯೋ ವಿಶ್ವವಿದ್ಯಾಲಯದ ರೋಬೋಟಿಕ್‌ ವಿಭಾಗದ ಹಿರಿಯ ವಿಜ್ಞಾನಿ ಶೋಜಿ ಟಕೇಉಚಿ ನೇತೃತ್ವದ ತಂಡವು ಈ ಸಂಶೋಧನೆಯನ್ನು ಮಾಡಿದೆ. ಈ ವಿಜ್ಞಾನಿಗಳ ತಂಡವು ಸೃಷ್ಟಿಸಿರುವ ರೋಬೋಟ್‌ನ ಚರ್ಮಕ್ಕೆಒಂದು ವೇಳೆ ಗಾಯವಾದರೆ ಆಗ ಅದರಿಂದ ರಕ್ತ ಸುರಿಯುತ್ತದೆ. ಚರ್ಮಕ್ಕೆ ಗಾಸಿಯಾದರೆ, ಅದು ವಾಸಿಯಾಗುತ್ತದೆ. ಚರ್ಮ ಕಾಲಾನುಸಾರವಾಗಿ, ವಯಸ್ಸಿಗೆ ತಕ್ಕಂತೆ ರೂಪಾಂತರಗೊಳ್ಳುತ್ತದೆ. ಯೌವನದಿಂದ ಮುಪ್ಪಿನವರೆಗೂ ಮನುಷ್ಯನ ಚರ್ಮ ಹೇಗೆಲ್ಲಾ ಬದಲಾಗುವುದೋ ಅದೇ ರೀತಿ ಈ ರೋಬೋಟ್‌ನ ಚರ್ಮವೂ ಬದಲಾಗುತ್ತಿರುತ್ತದೆ!

‘ಈ ನೈಸರ್ಗಿಕ ಗುಣವನ್ನು ರೋಬೋಟ್‌ ಚರ್ಮಕ್ಕೆ ನೀಡಬೇಕಾದ್ದು ನಮ್ಮ ಮೊದಲ ಆದ್ಯತೆಯಾಗಿದೆ. ಏಕೆಂದರೆ ಚರ್ಮದ ಮೂಲಕವೇ ಯಾವುದೇ ಜೀವಿಯೊಂದನ್ನು ಗುರುತಿಸುವುದು. ಅದು ಸಹಜವಾಗಿದ್ದಷ್ಟೂ ಅದನ್ನು ಯಂತ್ರವಲ್ಲ ಎಂದು ಭಾವಿಸಬಹುದು. ಜೊತೆಗೆ, ಮನುಷ್ಯರಿಗೆ ಮನುಷ್ಯರನ್ನೇ ಸಂಪೂರ್ಣವಾಗಿ ಹೋಲುವ ರೋಬೋಟ್‌ಗಳನ್ನು ನೀಡಿದರೆ ಮಾತ್ರ ಸಾಮಾಜಿಕವಾಗಿ ಹೆಚ್ಚು ಮನ್ನಣೆ ಸಿಗುತ್ತದೆ. ಆದ್ದರಿಂದ ನಾವು ಸಂಶೋಧಿಸಿರುವ ಚರ್ಮವು ಹೆಚ್ಚು ಸಾಮಾಜಿಕ ಮನ್ನಣೆಯನ್ನು ಪಡೆಯುವ ಗುಣವನ್ನು ಹೊಂದಿರುತ್ತದೆ’ ಎಂದು ಶೋಜಿ ವಿವರಣೆಯನ್ನು ನೀಡಿದ್ದಾರೆ.

‘ಎಷ್ಟು ಸಾಧ್ಯವೋ ಅಷ್ಟು ಸಹಜತೆಯನ್ನು ನೀಡುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಕೀಲುಗಳಿರುವ ಜಾಗಗಳಲ್ಲೆಲ್ಲಾ ಮನುಷ್ಯನ ಚರ್ಮದಲ್ಲಿ ಸುಕ್ಕುಗಳು ಇರುತ್ತವೆ. ಈ ಸುಕ್ಕುಗಳ ಕಾರಣದಿಂದಲೇ ಕೀಲುಗಳು ಮಡುಚಲು ಅಥವಾ ಬಿಚ್ಚಿಕೊಳ್ಳಲು ಜಾಗ ಹಾಗೂ ಸಡಿಲತೆ ಸಿಗುತ್ತದೆ. ಚರ್ಮಕ್ಕೆ ಹಿಗ್ಗುವ, ಕುಗ್ಗುವ ಗುಣ ಇರಬೇಕು. ಆಗ ಮಾತ್ರವೇ ದೇಹದ ಒಳಗಿರುವ ಮೂಳೆ, ಮಾಂಸ, ಸ್ನಾಯು, ರಕ್ತ ಹಾಗೂ ನರಮಂಡಳಕ್ಕೆ ತಕ್ಕಂತೆ ಹೊರ ನೋಟ ಸಿಗಲು ಸಾಧ್ಯವಾಗುತ್ತದೆ. ಈ ನೈಸರ್ಗಿಕ ಸ್ವರೂಪವನ್ನು ನಾವು ನಕಲು ಮಾಡಿ ಚರ್ಮವನ್ನು ಸಿದ್ಧಪಡಿಸಿದ್ದೇವೆ’ ಎಂದೂ ಅವರು ವಿಶ್ಲೇಷಿಸಿದ್ದಾರೆ.

ಇವು ‘ಆ್ಯಂಡ್ರ್ಯಾಯ್ಡ್‌’:

ಈ ಚರ್ಮವಿರುವ ರೋಬೋಟ್‌ ಅನ್ನು ‘ರೋಬೋಟ್‌’ ಎನ್ನುವುದಕ್ಕಿಂತ ‘ಆ್ಯಂಡ್ರ್ಯಾಯ್ಡ್‌’ ಎಂದು ಕರೆಯಬೇಕಾಗುತ್ತದೆ. ಈ ‘ಆ್ಯಂಡ್ರ್ಯಾಯ್ಡ್‌’ನಲ್ಲಿ ಅಸ್ಥಿಪಂಜರ, ಸ್ನಾಯು, ಮಾಂಸದಂತಹ ಸಾವಯವ ಅಂಶಗಳು ಇರುತ್ತವೆ. ಅದರ ಹೊರಭಾಗದಲ್ಲಿ ಚರ್ಮವು ಇಡೀ ದೇಹಕ್ಕೆ ಆಸರೆ, ರೂಪ ಹಾಗೂ ಸಹಜತೆಯನ್ನು ಕೊಡುತ್ತದೆ.

ಈ ಚರ್ಮಕ್ಕೆ ವಿಜ್ಞಾನಿಗಳು ಕಚ್ಛಾವಸ್ತುಗಳನ್ನು ಕೃತಕವಾಗಿಯೇ ಸಂಸ್ಕರಿಸಿದ್ದಾರೆ. ಆದರೆ, ಹಲವು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡಿದ್ದಾರೆ. ಅಂದರೆ, ಚರ್ಮಕ್ಕೆ ಸಹಜತೆಯನ್ನು ನೀಡಲು ವಿವಿಧ ಬಗೆಯ ಎಣ್ಣೆಗಳ ಬಳಕೆಯಾಗಿದೆ. ಈ ಚರ್ಮದಲ್ಲಿ ಬೆವರಿನ ಜೊತೆಗೆ, ಜಿಡ್ಡಿನ ಅಂಶವೂ ಹೊರಸೂಸಿ, ಮನುಷ್ಯರಂತೆಯೇ ವರ್ತಿಸುತ್ತದೆ. ಅಲ್ಲದೇ, ಭಯವಾಗುವಂತಹ ಸಂದರ್ಭಗಳಲ್ಲಿ ಮೈ ಬೆವರುವುದು, ಸೆಕೆಗೆ ಬೆವರಿ ಸ್ಪಂದಿಸುವಂತಹ ಪ್ರಕ್ರಿಯೆಗಳೂ ಇಲ್ಲಿ ನಡೆಯುತ್ತವೆ. ಇವೆಲ್ಲದಕ್ಕೂ ಅಗತ್ಯವಾದ ವಸ್ತುಗಳನ್ನು ರೋಬೋಟ್‌ನ ದೇಹದಲ್ಲಿ ಇರಿಸಲಾಗಿರುತ್ತದೆ ಎಂದು ವಿಜ್ಞಾನಿಗಳು ಮಾಹಿತಿಯನ್ನು ನೀಡಿದ್ದಾರೆ.

ಎಲ್ಲೆಲ್ಲಿ ಬಳಕೆ?:

ಸಾಮಾನ್ಯವಾಗಿ ಈ ಬಗೆಯ ರೋಬೋಟ್‌ಗಳು ದಿನಬಳಕೆ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವ ಯೋಜನೆ ಇದೆ. ಅಂದರೆ, ಮನೆಗಳಲ್ಲಿ, ಕಚೇರಿಗಳಲ್ಲಿ ವಿವಿಧ ಕಾರ್ಯಗಳಿಗೆ ತಕ್ಕಂತೆ ಬಳಕೆ ಸಾಧ್ಯವಿದೆ. ಅಂದರೆ, ಮಾನವನು ನಿಭಾಯಿಸುತ್ತಿರುವ ಯಾವುದೇ ಸಾಮಾಜಿಕ ಪಾತ್ರವನ್ನೂ ಈ ರೋಬೋಟ್‌ಗಳು ನಿಭಾಯಿಸಬಲ್ಲವು. ವೃತ್ತಿಪರರಾಗಿ, ಸ್ನೇಹಿತರಾಗಿ, ಸಹಾಯಕರಾಗಿ ಇತ್ಯಾದಿ. ಅಲ್ಲದೇ, ಈ ರೋಬೋಟ್‌ಗಳು ವಾಸ್ತವದಲ್ಲಿ ಕೃತಕವಾಗಿರುವ ಕಾರಣ ಕೆಲವು ಕಠಿಣ ಪರಿಸ್ಥಿತಿಗಳಲ್ಲಿ ಸುಸ್ತಾಗದೇ ಕಾರ್ಯ ನಿರ್ವಹಿಸುವ ಶಕ್ತಿ–ಸಾಮರ್ಥ್ಯಗಳು ಈ ರೋಬಾಟ್‌ಗಳಿಗೆ ಇರುತ್ತವೆ. ಹಾಗಾಗಿ, ಕೈಗಾರಿಕೆ, ರಕ್ಷಣೆ, ವೈಜ್ಞಾನಿಕ ಪ್ರಯೋಗಗಳಲ್ಲೂ ಕಾರ್ಯನಿರ್ವಹಿಸಲು ಇವು ಅತಿ ಸೂಕ್ತವಾಗಿದೆ ಎಂದು ವಿಜ್ಞಾನಿಗಳು ದೃಢವಾಗಿ ನಂಬಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT