ನಮ್ಮ ಸುತ್ತಮುತ್ತ ಹಾರಾಡುವ ಹಕ್ಕಿಗಳನ್ನು ನೋಡಿದಾಗ ಅವು ಸುಲಭವಾಗಿ ಗಾಳಿಯಲ್ಲಿ ಹಾರುವುದನ್ನು, ತೇಲುವುದನ್ನು ಕಂಡು ನಲಿಯುತ್ತೇವೆ. ಈ ಹಾರಾಟದ ಹಿಂದೆ ಕೋಟ್ಯಂತರ ವರ್ಷಗಳ ವಿಕಾಸದ ರಹಸ್ಯ ಅಡಗಿದೆ. ಈಗ ಅದೇ ರಹಸ್ಯವನ್ನು ಬಳಸಿಕೊಂಡು ಹೆಚ್ಚು ಶಕ್ತಿಯುತವಾದ ಡ್ರೋನ್ಗಳನ್ನು ತಯಾರಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮುಂಬೈ ಐಐಟಿಯ ಸಂಶೋಧಕರು ಜಂಟಿಯಾಗಿ ಒಂದು ಅದ್ಭುತ ವಿಷಯವನ್ನು ಪತ್ತೆ ಹಚ್ಚಿದ್ದಾರೆ. ಪಕ್ಷಿಗಳ ರೆಕ್ಕೆಗಳಲ್ಲಿರುವ ಗರಿಗಳು (Feathers) ಒಟ್ಟಾಗಿರುವ ರೆಕ್ಕೆಗಿಂತ ಎರಡು ಪಟ್ಟು ಹೆಚ್ಚು ಎತ್ತುವ ಶಕ್ತಿಯನ್ನು (Lift) ನೀಡಬಲ್ಲವು ಎಂಬುದನ್ನು ಸಂಶೋಧನೆಯೊಂದು ಈಗ ಸಾಬೀತು ಮಾಡಿದೆ.

ಸಾಮಾನ್ಯವಾಗಿ ನಾವು ಬಳಸುವ ಡ್ರೋನ್ಗಳು ಪ್ಲಾಸ್ಟಿಕ್ ಅಥವಾ ಲೋಹದ ಒಂದೇ ಅಖಂಡ ರೆಕ್ಕೆಯನ್ನು ಹೊಂದಿರುತ್ತವೆ. ಆದರೆ ಹಕ್ಕಿಗಳ ರೆಕ್ಕೆ ಹಾಗಿರುವುದಿಲ್ಲ. ಅವುಗಳಲ್ಲಿ ನೂರಾರು ಸಣ್ಣ ಸಣ್ಣ ಗರಿಗಳು ಒಂದರ ಮೇಲೊಂದು ಹಂಚಿನ ಮನೆಯ ಮಾಡಿನಂತೆ ಜೋಡಿ ಸಲ್ಪಟ್ಟಿರುತ್ತವೆ. ಹಕ್ಕಿಯು ತನ್ನ ರೆಕ್ಕೆಯನ್ನು ಕೆಳಕ್ಕೆ ಬಡಿಯುವಾಗ (Downstroke), ಈ ಗರಿಗಳೆಲ್ಲವೂ ಒಂದಕ್ಕೊಂದು ಬಿಗಿಯಾಗಿ ಅಂಟಿಕೊಳ್ಳುತ್ತವೆ. ಇದರಿಂದ ಒಂದು ಭದ್ರವಾದ ಮೇಲ್ಮೈ ಸೃಷ್ಟಿಯಾಗಿ, ಗಾಳಿಯನ್ನು ಕೆಳಕ್ಕೆ ತಳ್ಳುವ ಮೂಲಕ ಹಕ್ಕಿ ಮೇಲಕ್ಕೆ ಏರಲು ಸಹಾಯ ಮಾಡುತ್ತದೆ. ಆದರೆ ನಿಜವಾದ ಚಮತ್ಕಾರ ನಡೆಯುವುದು ರೆಕ್ಕೆಯನ್ನು ಮೇಲೆತ್ತಿದಾಗ.

ಹಕ್ಕಿಯು ತನ್ನ ರೆಕ್ಕೆಯನ್ನು ಮೇಲಕ್ಕೆ ಎತ್ತುವ ಸಮಯದಲ್ಲಿ (Upstroke), ಈ ಗರಿಗಳು ಸ್ವಲ್ಪ ಓರೆಯಾಗಿ ಪರಸ್ಪರ ಬೇರ್ಪಡುತ್ತವೆ. ಇದು ಮನೆಯ ಕಿಟಕಿಗಳಲ್ಲಿರುವ ‘ವೆಂಟಿಲೇಟರ್’ ಅಥವಾ ಕವಾಟದಂತೆ (Check valve) ಕೆಲಸ ಮಾಡುತ್ತದೆ. ಇದರಿಂದ ಗಾಳಿಯು ಗರಿಗಳ ನಡುವಿನ ಸಣ್ಣ ಸಣ್ಣ ಸಂದುಗಳ ಮೂಲಕ ಸುಲಭವಾಗಿ ಹಾದುಹೋಗುತ್ತದೆ. ಇದನ್ನು ವಿಜ್ಞಾನಿಗಳು ‘ಬಯಾಸ್ಡ್ ಪಿಚಿಂಗ್’ (biased pitching) ಎಂದು ಕರೆಯುತ್ತಾರೆ. ಇದರಿಂದ ಆಗುವ ಲಾಭವೆಂದರೆ, ರೆಕ್ಕೆಯನ್ನು ಮೇಲೆತ್ತುವಾಗ ಎದುರಾಗುವ ಗಾಳಿಯ ಪ್ರತಿರೋಧವು ಗಣನೀಯವಾಗಿ ಕಡಿಮೆಯಾಗುತ್ತದೆ. ಅದೇ ನಮ್ಮ ಡ್ರೋನ್ಗಳ ವಿಷಯಕ್ಕೆ ಬಂದರೆ, ಅವುಗಳ ರೆಕ್ಕೆಗಳು ಘನವಾಗಿದ್ದು (Solid), ಮೇಲೆತ್ತುವಾಗ ಗಾಳಿಯನ್ನು ವಿರೋಧಿಸುತ್ತವೆ. ಇದು ಡ್ರೋನ್ ಅನ್ನು ಕೆಳಕ್ಕೆ ಎಳೆಯುವ ‘ನಕಾರಾತ್ಮಕ ಲಿಫ್ಟ್’ ಅನ್ನು ಸೃಷ್ಟಿಸುತ್ತದೆ; ಜೊತೆಗೆ ಬ್ಯಾಟರಿಶಕ್ತಿಯನ್ನೂ ವ್ಯರ್ಥ ಮಾಡುತ್ತದೆ.

ಈ ವಿದ್ಯಮಾನವನ್ನು ಅಧ್ಯಯನ ಮಾಡಲು ಸಂಶೋಧಕರು ‘ವೈಕಾರ್ 3ಡಿ’ (ViCar3D) ಎಂಬ ವಿಶೇಷ ಕಂಪ್ಯೂಟರ್ ತಂತ್ರಾಂಶವನ್ನು ಬಳಸಿದ್ದಾರೆ. ಈ ತಂತ್ರಾಂಶವು ಗಾಳಿಯ ಚಲನೆಯನ್ನು ದ್ರವದಂತೆ ಮಾದರಿ ಮಾಡಿ, ರೆಕ್ಕೆಗಳ ಸುತ್ತ ಅದು ಹೇಗೆ ಹರಿಯುತ್ತದೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ. ಸಂಶೋಧಕರು ಮೂರು ಸಣ್ಣ ಸಣ್ಣ ಪಟ್ಟಿಗಳನ್ನು ಪಕ್ಷಿಯ ಗರಿಗಳಂತೆ ಜೋಡಿಸಿ, ಅವುಗಳ ಉದ್ದ ಮತ್ತು ವಿನ್ಯಾಸವನ್ನು ಬದಲಿಸುತ್ತಾ ನೂರಾರು ಪ್ರಯೋಗಗಳನ್ನು ಮಾಡಿದರು. ಈ ಸಂಕೀರ್ಣವಾದ ದತ್ತಾಂಶವನ್ನು ವಿಶ್ಲೇಷಿಸಲು ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನೂ ಬಳಸಿಕೊಂಡಿದ್ದಾರೆ.

ಈ ಸಂಶೋಧನೆಯಿಂದ ತಿಳಿದುಬಂದ ಮತ್ತೊಂದು ಮುಖ್ಯ ವಿಷಯವೆಂದರೆ, ಮೊದಲ ಗರಿಯಿಂದ ಹೊರಬರುವ ಗಾಳಿಯ ಅಲೆಗಳು ಅದರ ಹಿಂದಿರುವ ಗರಿಗಳು ಇನ್ನೂ ಉತ್ತಮವಾಗಿ ಕೆಲಸ ಮಾಡಲು ಸಹಾಯ ಮಾಡುತ್ತವೆ. ಅಂದರೆ, ರೆಕ್ಕೆಯ ಪ್ರತಿಯೊಂದು ಭಾಗವೂ ಪರಸ್ಪರ ಸಹಕರಿಸುತ್ತಾ ಇಡೀ ಹಾರಾಟವನ್ನು ಸುಲಭವಾಗಿಸುತ್ತವೆ. ಇದರಿಂದಾಗಿ ಅಷ್ಟೇ ಪ್ರಮಾಣದ ಬ್ಯಾಟರಿ ಶಕ್ತಿಯನ್ನು ಬಳಸಿ, ಅಖಂಡ ರೆಕ್ಕೆಗಳಿಗಿಂತ ಎರಡು ಪಟ್ಟು ಹೆಚ್ಚು ತೂಕವನ್ನು ಹೊರುವ ಅಥವಾ ಹೆಚ್ಚು ಕಾಲ ಹಾರುವ ಸಾಮರ್ಥ್ಯವನ್ನು ಈ ಹೊಸ ವಿನ್ಯಾಸದ ಡ್ರೋನ್ಗಳು ಪಡೆಯಲಿವೆ.

ನಮ್ಮ ಕರ್ನಾಟಕದಂತಹ ರಾಜ್ಯಗಳಲ್ಲಿ ಡ್ರೋನ್ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕೃಷಿಯಲ್ಲಿ ಔಷಧವನ್ನು ಸಿಂಪಡಿಸಲು, ಅರಣ್ಯ ಪ್ರದೇಶಗಳ ಮೇಲೆ ನಿಗಾ ಇಡಲು ಅಥವಾ ತುರ್ತು ಸಂದರ್ಭಗಳಲ್ಲಿ ಔಷಧಗಳನ್ನು ಪೂರೈಸಲು ನಾವು ಡ್ರೋನ್ಗಳನ್ನು ಅವಲಂಬಿಸುತ್ತಿದ್ದೇವೆ. ಆದರೆ ಕಡಿಮೆ ಬ್ಯಾಟರಿಯಲ್ಲಿ ಹೆಚ್ಚು ದೂರ ಕ್ರಮಿಸುವುದು ಮತ್ತು ಹೆಚ್ಚು ತೂಕದ ವಸ್ತುಗಳನ್ನು ಹೊರುವುದು ಇಂದಿನ ಅಗತ್ಯವಾಗಿದೆ.

ಇಷ್ಟಾದರೂ ಈ ಸಂಶೋಧನೆಯು ಸದ್ಯಕ್ಕೆ ಕಂಪ್ಯೂಟರ್ ಸಿಮ್ಯುಲೇಶನ್ಗಳಿಗೆ ಸೀಮಿತವಾಗಿದೆ. ನೈಜ ಜಗತ್ತಿನಲ್ಲಿ ಹಕ್ಕಿಗಳ ಗರಿಗಳು ಕೇವಲ ಚಪ್ಪಟೆಯಾದ ಪಟ್ಟಿಗಳಲ್ಲ, ಅವುಗಳು ಬಾಗುವ ಗುಣ ಹೊಂದಿವೆ ಮತ್ತು ಸಂಕೀರ್ಣವಾದ ಮೂರು ಆಯಾಮದ (3D) ರಚನೆಯನ್ನು ಹೊಂದಿವೆ. ಆದ್ದರಿಂದ, ಈ ವಿನ್ಯಾಸವನ್ನು ನಿಜವಾದ ಡ್ರೋನ್ಗಳಲ್ಲಿ ಅಳವಡಿಸುವ ಮೊದಲು ಇನ್ನೂ ಅನೇಕ ಪರೀಕ್ಷೆಗಳು ನಡೆಯಬೇಕಿದೆ. ಏನೇ ಆದರೂ ಲಕ್ಷಾಂತರ ವರ್ಷಗಳಿಂದ ಪ್ರಕೃತಿ ತನ್ನಲ್ಲಿ ಅಡಗಿಸಿಟ್ಟುಕೊಂಡಿದ್ದ ಈ ತಂತ್ರಜ್ಞಾನವು ಭವಿಷ್ಯದ ವಾಯುಯಾನ ಕ್ಷೇತ್ರಕ್ಕೆ ಹೊಸ ದಾರಿಯನ್ನು ತೋರಿಸಿದೆ.

ಪ್ರಕೃತಿಯಿಂದ ಸ್ಫೂರ್ತಿ ಪಡೆದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಈ ವಿಧಾನಕ್ಕೆ ‘ಬಯೋಮಿಮಿಕ್ರಿ’ (Biomimicry) ಎಂದು ಹೆಸರು. ಒಂದು ಪುಟ್ಟ ಹಕ್ಕಿಯ ರೆಕ್ಕೆಯಲ್ಲಿ ಇಷ್ಟೊಂದು ವಿಜ್ಞಾನ ಅಡಗಿದೆ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ. ಈ ತಂತ್ರಜ್ಞಾನವು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ, ಮುಂದಿನ ದಿನಗಳಲ್ಲಿ ಆಕಾಶದಲ್ಲಿ ಹಕ್ಕಿಗಳಂತೆ ರೆಕ್ಕೆ ಬಡಿಯುತ್ತಾ ಹಾರುವ ಸಣ್ಣ ರೋಬೋಟಿಕ್ ಡ್ರೋನ್ಗಳನ್ನು ನಾವು ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.