ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಿಡಮರಗಳಿಗೂ ಕ್ಯಾನ್ಸರ್ ?

–ನೂರ್ ನವಾಜ್ ಎ. ಎಸ್.
Published 14 ಮೇ 2024, 22:10 IST
Last Updated 14 ಮೇ 2024, 22:10 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಕ್ಯಾನ್ಸರ್ ಗೆಡ್ಡೆಗಳು ಉಂಟಾಗುವುದೇ ದೇಹದ ಯಾವುದೋ ಒಂದು ಭಾಗದ ಜೀವಕೋಶಗಳ ಅನಿಯಮಿತ ಅಥವಾ ಅನಿಯಂತ್ರಿತ ಗುಣೀಕೃತ ವಿಭಜನೆಯಿಂದ. ಇದು ದೇಹಕ್ಕೆ ಬೇಡವಾದ ಹೆಚ್ಚುವರಿ ಬೆಳವಣಿಗೆಯ ಒಂದು ರೂಪ. ಇದನ್ನೇ ನಾವು ‘ಕ್ಯಾನ್ಸರ್’ ಎನ್ನುವುದಾದರೆ, ಹೌದು ಗಿಡ-ಮರಗಳಿಗೂ ಕ್ಯಾನ್ಸರ್ ಬರುತ್ತದೆ. ಹಾಗಾದರೆ ಗಿಡ-ಮರಗಳು ಇದನ್ನು ನಿಭಾಯಿಸುವ ತಂತ್ರಗಾರಿಕೆ ಏನು? ಗಿಡ-ಮರಗಳಿಗೆ ಕಾಡುವ ಕ್ಯಾನ್ಸರ್‌ನಿಂದ ಮುಕ್ತಿ ಪಡೆಯುವ ಶಕ್ತಿಯು ಅವುಗಳಲ್ಲೇ ‘ಸೆಲ್ಫ್ ಪ್ರೊಗ್ರಾಂ’ ಆಗಿದೆಯೆ? ಅಥವಾ ಮನುಷ್ಯರಂತೆ ಅವುಗಳೂ ಸಾವಿಗಿಡಾಗುತ್ತವೆಯೆ?

ಸಸ್ಯಗಳಲ್ಲಿ ಕಾಣುವ ಗಡ್ಡೆಗಳಿಗೂ ಹಾಗೂ ಮನುಷ್ಯರನ್ನು ಕಾಡುವ ಕ್ಯಾನ್ಸರ್ ಗಡ್ಡೆಗಳಿಗೂ ಹೆಚ್ಚು ವ್ಯತ್ಯಾಸಗಳೇನಿಲ್ಲ. ಆದರೆ ಅದರ ಪರಿಣಾಮ ಮಾತ್ರ ವಿಭಿನ್ನವಾಗಿತ್ತವೆ. ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಉಂಟಾಗುವ ಕ್ಯಾನ್ಸರ್ ಗಡ್ಡೆಗಳು ಜೀವಕೋಶಗಳ ವಿಭಜನೆಯ ಪ್ರತಿಫಲವೇ ಆಗಿರುತ್ತದೆ.

ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಬೆಳವಣಿಗೆಯು ಶರೀರದ ಜೀವಕೋಶಗಳ ವಿಭಜನೆಯಾಗಿ ಆಂಗಾಂಶಗಳಾಗಿ ತದನಂತರ ಅಂಗಾಂಗಗಳಾಗುತ್ತವೆ. ಇದಕ್ಕೆ ಪೂರಕವಾಗಿ ಕೆಲಸ ಮಾಡುವುದು ‘ಆಕ್ಸಿನ್’ ಮತ್ತು ’ಸೈಟೊಕೈನಿನ್’ ಎಂಬ ಎರಡು ಹಾರ್ಮೋನುಗಳು. ಇವುಗಳ ಉತ್ಪಾದನೆಯಲ್ಲಿ ಸ್ವಲ್ಪ ಏರುಪೇರಾದರೂ ಗಡ್ಡೆಗಳು ಬೆಳೆಯುವುದು ಖಾಯಂ. ಈ ಕೋಶ ವಿಭಜನೆಯನ್ನು ನಿಯಂತ್ರಿಸುವುದು ತಮ್ಮ ವಂಶವಾಹಿಯಲ್ಲಿರುವ ಡಿ.ಎನ್.ಎ.ಯ ಜೀನ್(ಗುಣಾಣು)ಗಳು.
ಇವಲ್ಲದೇ, ‘ಈಸ್ಟ್ರೋಜೆನ್’ ಹಾರ್ಮೋನಿನ ಕೆಲಸ ಕೂಡ ಇದೇ. ಈ ಎಲ್ಲಾ ಹಾರ್ಮೋನುಗಳು ಸಮತೋಲನದಲ್ಲಿ ಉತ್ಪಾದನೆಯಾದರೆ ಕ್ರಿಯೆಗಳು ಸುಗಮವಾಗಿ ನಡೆದರೆ ಆರೋಗ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಇವುಗಳ ಉತ್ಪಾದನೆಯ ಪ್ರಮಾಣದ ಲಯತಪ್ಪಿದರೆ ಜೀವಕೋಶಗಳು ಅಸಮತೋಲನದಿಂದ ಕೋಶದ ಇತರೆ ಪ್ರಕ್ರಿಯೆಗಳು ಉಲ್ಬಣಗಳ್ಳುತ್ತವೆ. ಆಗ ಕೋಶಗಳು ಅನಿಯಮಿತವಾಗಿ ವಿಭಜನೆಯಾಗಲು ಪ್ರಾರಂಭಿಸುತ್ತವೆ. ಇದು ಕೆಲವೊಮ್ಮೆ ಹಠಾತ್ ರೂಪಾಂತರಗೊಂಡ ಡಿ.ಎನ್.ಎ.(ಮುಟೇಷನ್)ಯಿಂದಲೂ ಆಗಲು ಸಾಧ್ಯ. ಸಸ್ಯಗಳಲ್ಲಿ ಹೀಗಾಗುವುದು ಅತಿ ವಿರಳವಾದರೂ ಇದನ್ನು ಸರಿಪಡಿಸಿಕೊಳ್ಳಲು ಸಸ್ಯಗಳು ತಮ್ಮ ವರ್ಣತಂತುಗಳಲ್ಲಿ ಹೆಚ್ಚುವರಿ ಮಾದರಿಗಳು ಡಿಎನ್‌ಎಯ ಕಾರ್ಬನ್ ಕಾಪಿಗಳನ್ನು ಅಡಗಿಸಿಟ್ಟಿರುತ್ತವೆ. ಅದರಲ್ಲೆ ಕ್ಯಾನ್ಸರ್ ರೋಗದ ನ್ಯೂನತೆಯನ್ನು ಸರಿಪಡಿಸುವ ಪ್ರೊಗ್ರಾಮ್ ಕೂಡ ಅಡಗಿರುತ್ತದೆ.
ಸಸ್ಯಗಳಲ್ಲಿ ಕ್ಯಾನ್ಸರ್ ಗಡ್ಡೆ ಉಂಟುಮಾಡುವ ಕೆಲವು ಸೂಕ್ಷ್ಮಾಣುಜೀವಾಣುಗಳನ್ನು ನೋಡುವುದಾದರೆ ಬ್ಯಾಕ್ಟೀರಿಯಾ, ಶಿಲೀಂದ್ರ ಹಾಗು ವೈರಾಣುಗಳದ್ದು ಮೇಲುಗೈ.

‘ಅಗ್ರೊಬ್ಯಾಕ್ಟಿರಿಯಂ ಟುಮೆಫೇಶಿಯನ್ಸ್’ ಎನ್ನುವ ಬ್ಯಾಕ್ಟಿರಿಯವು, ‘ಕ್ರೌನ್ ಗಾಲ್’ ಎಂಬ ಕ್ಯಾನ್ಸರನ್ನು ಉಂಟುಮಾಡುತ್ತವೆ. ಈ ಬ್ಯಾಕ್ಟಿರಿಯವು ನೈಸರ್ಗಿಕದತ್ತವಾದ ನಮಗೆ ದೊರೆತ ಒಂದು ಸ್ವಾಭಾವಿಕ ಜೆನೆಟಿಕ್ ಇಂಜಿನಿಯರ್. ಇದರ ಸಹಾಯವಿಲ್ಲದೇ ನಮ್ಮ ಫಾರ್ಮಾ ಕಂಪನಿಗಳು ಯಾವುದೇ ಔಷಧವನ್ನು ತಯಾರಿಸಲು ಅಸಾಧ್ಯವೇ. ಇದು ಮಾಡುವ ಸೋಂಕಿನಲ್ಲಿ ಒಂದು ಬ್ಯಾಕ್ಟಿರಿಯಾ ಹೊರಗಿನ ಜೀವಿಯೊಂದು ತನ್ನ ಜೀವಕೋಶದ ವಂಶವಾಹಿಯಲ್ಲಿನ ಡಿಎನ್‍ಎಯನ್ನು ಅತಿಥೇಯ (ಹೋಸ್ಟ್) ಜೀವಕೋಶಗಳೊಳಗೆ ತುರುಕಿಸುತ್ತದೆ. ಸ್ವಾಭಾವಿಕವಾಗಿ ಜೀವಕೋಶವು ವಿಭಜನೆಗೆ ಒಳಗಾದಾಗ ತನ್ನ ಮೂಲ ಡಿಎನ್‍ಎ ಪ್ರತಿಗಳನ್ನು (ರೆಪ್ಲಿಕೇಷನ್) ತಯಾರಿಸುತ್ತದೆ. ಆದರೆ, ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಸ್ಯದ ತಾಯಿಕೋಶವಲ್ಲದೆ ಇನ್ನೊಂದು ಪರಕೀಯ ಜೀವಿಯಿಂದ ಬಲವಂತವಾಗಿ ಪರಕೀಯ ಗುಣಾಣುಗಳು ಹೊಕ್ಕುವುದು ಅತಿ ವಿರಳ, ವಿಶೇಷ ವಿದ್ಯಾಮಾನ. ಇದರಿಂದ ಸಸ್ಯಗಳ ಜೀವಕೋಶಗಳ ಚಟುವಟಿಕೆಗಳನ್ನು ಹೈಜಾಕ್ ಮಾಡಿ ನಂತರ ತನ್ನದೇ ರೀತಿಯಲ್ಲಿ ಹತೋಟಿ ಮಾಡಿ ಬೆಳವಣಿಗೆ ಕುಂಠಿತಗೊಳಿಸುತ್ತದೆ. ಹೀಗೆ ಬ್ಯಾಕ್ಟೀರಿಯಾದ ಗುಣಾಣುಗಳು ತನ್ನದೇ ರೀತಿಯಲ್ಲಿ ತನಗೆ ಬೇಕಾದಂತೆ ಕೋಶವಿಭಜನೆಗೆ ಮುನ್ನುಡಿ ಬರೆಯುತ್ತದೆ. ಇಲ್ಲಿ ಒಂದು ಜೀವಿಯು ಇನ್ನೊಂದು ಜೀವಿಯನ್ನು ನಿಯಂತ್ರಣದಲ್ಲಿರಿಸಿ ಆತಿಥೇಯ ಜೀವಿಯಲ್ಲಿ ಆಶ್ರಯ ಪಡೆದು ಅದನ್ನು ಸಾಯಲು ಬಿಡದೆ ಬದುಕಲು ಬಿಡದೇ ಜೀವನ ಸಾಗಿಸುತ್ತದೆ.

‘ಉಸ್ಟಿಲಾಗೋ’ (ಉಸ್ಟಿಲಾಗೋ ಮೇಡಿಸ್) ಶಿಲೀಂದ್ರ, ಇದೂ ಇದೇ ಪ್ರಕಾರದ ಕ್ಯಾನ್ಸರ್ ಗಡ್ಡೆಗಳನ್ನು ಉಂಟುಮಾಡುತ್ತದೆ. ಇದು ಇತಿಹಾಸದಲ್ಲಿ ನೋಡುವುದಾದರೆ ಮೆಕ್ಸಿಕೊ ದೇಶದ ಜನರ ಮುಖ್ಯ ಆಹಾರವಾಗಿದ್ದ ಜೋಳದಿಂದ ತಯಾರಾಗುವ ‘ಹುಟ್ಲೊಕೊಚೆ’ ಎಂಬ ಖಾದ್ಯದ ರುಚಿಯನ್ನೇ ಬದಲಿಸಿದಕ್ಕೆ ಬಹಳ ನಷ್ಟವಾಗಿತ್ತು. ಇಷ್ಟೇ ಅಲ್ಲದೇ, ಜೆಮಿನಿ ವೈರಾಣುಗಳ ಗುಂಪಿಗೆ ಸೇರುವ ಒಂದು ವೈರಸ್ ‘ನಾನೇನು ಕಮ್ಮಿ ಇಲ್ಲ’ ಎನ್ನುವಂತೆ ಬಹುತೇಕ ಗಿಡ-ಮರಗಳಿಗೆ ಕ್ಯಾನ್ಸರ್ ಗೆಡ್ಡೆಗಳನ್ನು ಉಂಟುಮಾಡಿದ್ದೂ ಇದೆ. ಅಷ್ಟೇ ಏಕೆ, ಬೀಡಿ ಸಿಗರೆಟ್ ಸೇದಿದರೆ ಕ್ಯಾನ್ಸರ್ ಬರಿಸುವ ಬೆಳೆಯಾದ ತಂಬಾಕಿಗೂ ಕ್ಯಾನ್ಸರ್ ರೋಗ ಬರುತ್ತದೆಂದರೆ ನಂಬಲೇಬೇಕು.

ಮನುಷ್ಯನಿಗೆ ತಲೆದೋರುವ ಮಿದುಳಿನ ಗಡ್ಡೆಯೂ ಒಂದು ಮಹಾಮಾರಿಯಾಗಿದೆ. ಅಲ್ಲದೇ ಈ ರೋಗದಿಂದ ಶೇ.95ರಷ್ಟು ಜನರು ಬದುಕುಳಿಯುವ ಸಾಧ್ಯತೆ ಕಡಿಮೆ. ಆದರೆ, ಸಸ್ಯಗಳಲ್ಲಿ ಹಾಗಾಗದಂತೆ ತಡೆಯಲು ಮತ್ತು ರೋಗವನ್ನು ಹತ್ತಿಕ್ಕಲು ಅವುಗಳ ಜೀವಕೋಶಗಳಲ್ಲಿ ತಂತ್ರಗಾರಿಕೆಯು ಅಳವಡಿಕೆಯಾಗಿದೆ. ಹಾಗಾಗಿ ಸಸ್ಯಗಳು ಇಂತಹ ಗೆಡ್ಡೆಗಳನ್ನು ಸಾಯಿಸಿ ಹೊಸದಾಗಿ ಚಿಗುರೊಡೆದು ಬದುಕಬಲ್ಲ ಸಾಮರ್ಥ್ಯವನ್ನು ‘ಟೊಟಿಪೊಟೆನ್ಸಿ’ ಎನ್ನುವುದು. ಸರಿಯಾಗಿ ಅರ್ಥ ಮಾಡಿಕೊಳ್ಳುವುದಾದರೆ ಸಾಮಾನ್ಯಕ್ಕಿಂತ ಹೆಚ್ಚು ಜೀವಕೋಶಗಳು ಗಿಡ-ಮರಗಳಲ್ಲೇನಾದರೂ ಉತ್ಪತಿಯಾದರೆ ಉದಾಹರಣೆಗೆ ಎಲೆಗಳಲ್ಲಿ ಅವಶ್ಯಕತೆಗಿಂತ ಹೆಚ್ಚು ಜೀವಕೋಶ ವಿಭಜನೆಯಾದರೆ ಸಸ್ಯವು ಅದನ್ನು ತಂತಾನೆ ಇತರೆ ರಚನೆಗಳಿಗೆ ಉಪಯೋಗಿಸಿಕೊಳ್ಳುತ್ತದೆ. ಇಂತಹ ಸಂಕುಚಿತ ಎಲೆಗಳು ಎಲೆಯ ಸಾಮಾನ್ಯ ರಚನೆಯನ್ನು ಮಾಡಿ ರೋಗವೇ ಇಲ್ಲದಂತೆ ಸರಿಪಡಿಸುವ ಅದ್ಭುತ ಸಾಮರ್ಥ್ಯ ಗಿಡ-ಮರಗಳಿಗಿದೆ.

ಸಸ್ಯಜೀವಕೋಶಗಳ ಹೊರಗವಚ ಕೋಶಭಿತ್ತಿ(ಸೆಲ್‍ವಾಲ್)ಯಿಂದ ಆವೃತಗೊಂಡಿರುವುದರಿಂದ ಸಸ್ಯದ ಒಂದು ಭಾಗದಲ್ಲಿ ಹೂವು ಅಥವಾ ಹಣ್ಣು ಆಥವಾ ಎಲೆ-ಕಾಂಡದಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗೆಡ್ಡೆಯು ಅಷ್ಟು ಸುಲಭವಾಗಿ ಇತರೆ ಭಾಗಗಳಿಗೆ ಪಸರಿಸುವುದು ಅಸಾಧ್ಯ. ಇದರ ಹಿಂದಿನ ತಂತ್ರಗಾರಿಕೆ ಎಂದರೆ ಸಸ್ಯ ಜೀವಕೋಶಗಳ ಮಧ್ಯದಲ್ಲಿ ಕೇವಲ ಆಹಾರದ ಕಣಗಳು ಮತ್ತು ನೀರು ಸರಬರಾಜಾಗುತ್ತದೆ. ಇದರಿಂದ ಗೆಡ್ಡೆ ಉಂಟುಮಾಡುವ ಇತರೆ ಶತ್ರುಗಳನ್ನು ಫಿಲ್ಟರ್ ಮಾಡಿ ಹೊಡೆದೋಡಿಸುತ್ತದೆ.
ಏರುಪೇರಾದ ಹಾರ್ಮೋನುಗಳ ಉತ್ಪಾದನೆ ಮತ್ತು ‘ಮುಟೇಷನ್’(ಜೀವಕೋಶದಲ್ಲಿನ ಸ್ವಯಂ ಬದಲಾವಣೆ)ನಂತಹ ಸಮಸ್ಯೆಗಳು ಸಸ್ಯಗಳ ಜೀವಕೋಶಗಳ ಸಾಮರ್ಥ್ಯವನ್ನು ಕುಗ್ಗಿಸುವುದು ಕ್ಯಾನ್ಸರ್‌ಗೆ ಕಾರಣ. ಆದರೆ ಕೋಶಭಿತ್ತಿ ಹಾಗೂ ಸಸ್ಯಗಳ ಇತರ ರಚನೆಗಳು ಮುಂಬರುವ ಕ್ಯಾನ್ಸರ್ ಗೆಡ್ಡೆಗಳಿಂದ ನಾಷಪಡಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ‘ಸೆಲ್ಫ್ ಪ್ರೊಗ್ರಾಂ’ ಹೊಂದಿವೆ. ಔಷಧೀಯ ವಿಜ್ಞಾನದ ಪ್ರಕಾರ ಮನುಷ್ಯರಲ್ಲಿ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಕೇವಲ ಶೇ. 0.1 ಅಷ್ಟೇ. ಸಸ್ಯಗಳ ಈ ಅದ್ಭುತ ಸಾಮರ್ಥ್ಯ ಪ್ರಾಣಿಗಳಿಗೂ ಧಕ್ಕಿರುತ್ತಿದ್ದರೆ ಕ್ಯಾನ್ಸರನ್ನು ಸುಲಭವಾಗಿ ಗುಣಪಡಿಸಬಹುದಿತ್ತಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT