ಬೆಂಗಳೂರು: ಚಂದಿರನ ಅಂಗಳಕ್ಕೆ ನೌಕೆ ಕಳುಹಿಸಿ ಅಧ್ಯಯನ ನಡೆಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮೂರನೇ ಪ್ರಯತ್ನಕ್ಕೆ ಜುಲೈ 14ರಂದು ಮುಹೂರ್ತ ನಿಗದಿಯಾಗಿದೆ.
ಭಾರತ ತನ್ನ ಚಂದ್ರ ಅನ್ವೇಷಣಾ ಯೋಜನೆ ‘ಚಂದ್ರಯಾನ–3’ದ ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲ್ಯಾಂಡರ್ ಮತ್ತು ರೋವರ್ ಹೊತ್ತ ನೌಕೆಯನ್ನು 14ರಂದು ಮಧ್ಯಾಹ್ನ 2.35ಕ್ಕೆ ಉಡ್ಡಯನಗೊಳಿಸಲು ನಿರ್ಧರಿಸಿದೆ ಎಂದು ಇಸ್ರೊ ಗುರುವಾರ ಟ್ವೀಟ್ ಮಾಡಿದೆ.
ಚಂದ್ರನ ಮೇಲ್ಮೈನಲ್ಲಿ ಸುರಕ್ಷಿತವಾಗಿ ಲ್ಯಾಂಡರ್ ಇಳಿಸುವುದು, ಬಳಿಕ ರೋವರ್ ಅನ್ನು ಕಾರ್ಯಾಚರಣೆಗೆ ಇಳಿಸುವುದು ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಈ ಯೋಜನೆಯ ಮೂಲ ಗುರಿಗಳಾಗಿವೆ. ಅಲ್ಲಿನ ಶಿಲಾತಳದ ಮೇಲಿನ ಘನ ಪದಾರ್ಥ, ಮೇಲ್ಮೈನ ಹೆಪ್ಪುಗಟ್ಟುವ ಪರಿಸರ ಹಾಗೂ ಧಾತು ರೂಪದ ಸಂಯೋಜನೆ ಇತ್ಯಾದಿ ಅಧ್ಯಯನಕ್ಕೆ ಇಸ್ರೊ ಉದ್ದೇಶಿಸಿದೆ.
ಚಂದ್ರಯಾನ–3 ಯೋಜನೆಯು ಲ್ಯಾಂಡರ್ ಮತ್ತು ರೋವರ್ ಹೊಂದಿದ್ದು, ಎಲ್‌ವಿಎಂ–3 ಉಡ್ಡಯನ ವಾಹಕದ (ನ್ಯೂ ಹೆವಿಲಿಫ್ಟ್ ಲಾಂಚ್ ವಹಿಕಲ್) ಮೂಲಕ ಉಡ್ಡಯನಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿಯೇ ಈ ಉಡ್ಡಯನ ವಾಹಕದ ಅಗತ್ಯ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಚಂದ್ರನ 100 ಕಿಲೋಮೀಟರ್ ಕಕ್ಷೆವರೆಗೆ ಲ್ಯಾಂಡರ್ ಮತ್ತು ರೋವರ್ ಅನ್ನು ಈ ಉಡ್ಡಯನ ವಾಹಕ (ಪ್ರೊಪಲ್ಷನ್ ಮಾಡ್ಯುಲ್) ಒಯ್ಯುಲಿದೆ ಎಂದು ಮಾಹಿತಿ ನೀಡಿದ್ದಾರೆ.
ಲ್ಯಾಂಡರ್ ಚಂದಿರನ ಮೇಲ್ಮೈನಲ್ಲಿ ಸುರಕ್ಷಿತವಾಗಿ ಇಳಿದ ಮೇಲೆ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಲು ರೋವರ್ ಅನ್ನು ಹೊರಬಿಡುತ್ತದೆ. ಚಂದ್ರನ ಮೇಲ್ಮೈನ ತಾಪಮಾನ ಅಧ್ಯಯನ ಮಾಡುವ ಸಾಧನಗಳನ್ನೂ ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದ್ದು, ಆ ಸಾಧನಗಳು ಕಳುಹಿಸಿಕೊಡುವ ಮಾಹಿತಿ ಇಸ್ರೋ ವಿಜ್ಞಾನಿಗಳ ಅಧ್ಯಯನಕ್ಕೆ ನೆರವಿಗೆ ಬರಲಿವೆ.
ಜೊತೆಗೆ, ಚಂದ್ರನ ಒಂದೇ ದಿಕ್ಕಿನಲ್ಲಿ ಸಾಗುವ ತೀಕ್ಷ್ಣ ಬೆಳಕಿನ ದೂರದ ಅಧ್ಯಯನವನ್ನು ನಡೆಸುವ ಸಾಧನವನ್ನೂ ಲ್ಯಾಂಡರ್ ಹೊಂದಿದೆ. ಇದನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ ಅಭಿವೃದ್ಧಿಪಡಿಸಿದೆ.
ಆ. 23 ಅಥವಾ 24ಕ್ಕೆ ಇಳಿಸಲು ಚಿಂತನೆ:
ಚಂದ್ರಯಾನ 2ರ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವಲ್ಲಿ ವಿಫಲವಾಗಿತ್ತು. ಈ ಅನುಭವದಿಂದ ಪಾಠ ಕಲಿತಿರುವ ಇಸ್ರೊ ವಿಜ್ಞಾನಿಗಳು ಈ ಬಾರಿ ಚಂದ್ರಯಾನ– 3 ಯೋಜನೆಯನ್ನು ಯಶಸ್ವಿಗೊಳಿಸುವ ಹುಮ್ಮಸ್ಸಿನಲ್ಲಿದ್ದಾರೆ. ಆ ಮೂಲಕ ಚಂದಿರನ ಅನ್ವೇಷಣೆಯೆಡೆಗಿನ ಹೊಸ ಬದ್ಧತೆ ಮತ್ತು ಹೊಸ ವೈಜ್ಞಾನಿಕ ಆವಿಷ್ಕಾರಗಳತ್ತ ಬೆಳಕು ಚೆಲ್ಲುವುದು ಇಸ್ರೋದ ಧ್ಯೇಯವಾಗಿದೆ.
‘ಆಗಸ್ಟ್ 23 ಅಥವಾ 24ರಂದು ಚಂದ್ರನ ಮೇಲ್ಮೈನಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲಾಗುವುದು. ಚಂದ್ರನಲ್ಲಿನ ಒಂದು ದಿನವು ಭೂಮಿ ಮೇಲಿನ 14 ದಿನಗಳಿಗೆ ಸರಿಸಮನಾಗಿದೆ. ಈ ಅವಧಿಯಲ್ಲಿಯೇ ಲ್ಯಾಂಡರ್ ಇಳಿಸಲಾಗುವುದು’ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.
‘ಚಂದ್ರನ ಅಂಗಳದಲ್ಲಿ ಸೂರ್ಯೋದಯವಾಗುವ ಅವಧಿ ನಿರ್ಧರಿಸಿ ಲ್ಯಾಂಡರ್ ಅನ್ನು ಸುಗಮವಾಗಿ (ಸಾಫ್ಟ್ ಲ್ಯಾಂಡಿಂಗ್) ಇಳಿಸಲು ನಿರ್ಧರಿಸಲಾಗಿದೆ. ಈ ಪ್ರಕ್ರಿಯೆ ನಡೆಯುವಾಗ ಅಲ್ಲಿ ನೇಸರನ ಬೆಳಕು ಇರಲೇ ಬೇಕು. ಚಂದಿರನಲ್ಲಿ ಸೂರ್ಯನ ಬೆಳಕು ಮೂಡಲು 14ರಿಂದ 15 ದಿನಗಳು ಬೇಕು. ಹಾಗಾಗಿ, ಮುಂದಿನ ಎರಡು ವಾರಗಳ ಕಾಲ ಅಲ್ಲಿ ಬೆಳಕಿನ ಪ್ರತಿಫಲನ ಇರುವುದಿಲ್ಲ’ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.