ಮಂಗಳವಾರ, ಸೆಪ್ಟೆಂಬರ್ 17, 2019
27 °C

ಚಂದ್ರಯಾನ–2 ಲ್ಯಾಂಡರ್‌ ಇಳಿಸಲು ಕ್ಷಣಗಣನೆ

Published:
Updated:

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದತ್ತ ಚಲಿಸಿರುವ ಚಂದ್ರಯಾನ–2 ಬಾಹ್ಯಾಕಾಶ ನೌಕೆಯಿಂದ ‘ವಿಕ್ರಮ್’ ಲ್ಯಾಂಡರ್‌ ಇಳಿಸುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಕಕ್ಷೆ, ಲ್ಯಾಂಡರ್‌ ನಿಯಂತ್ರಣ ಕೇಂದ್ರದಲ್ಲಿ ವಿಜ್ಞಾನಿಗಳಿಂದ ಅಂತಿಮ ಸಿದ್ಧತೆ ನಡೆದಿದೆ.

ಶನಿವಾರ ಮುಂಜಾನೆ 1.30ರಿಂದ 2.20ರ ಅವಧಿಯಲ್ಲಿ ಮಾತೃ ನೌಕೆಯಿಂದ ಪ್ರತ್ಯೇಕ ಗೊಳ್ಳುವ ಲ್ಯಾಂಡರ್‌ ಚಂದ್ರನ ನೆಲವನ್ನು ಸ್ಪರ್ಶ ಮಾಡಲಿದೆ. ಬಳಿಕ ರೋವರ್‌ ‘ಪ್ರಗ್ಯಾನ್‌’ ಚಲಿಸುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಭಾರತವಲ್ಲದೆ ವಿಶ್ವದ ಹಲವು ದೇಶಗಳ ಆಸಕ್ತರು ಕಾಯುತ್ತಿದ್ದಾರೆ.

ಇಸ್ರೊದಲ್ಲಿ ಅಪ್ರತಿಮ ವಿಜ್ಞಾನಿಗಳಿದ್ದರೂ, ಹಗುರ ಚಂದ್ರ ಸ್ಪರ್ಶ ಸುಸೂತ್ರವಾಗಿ ನಡೆಯಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಜುಲೈ 22ರಂದು ಚಂದ್ರಯಾನ ನೌಕೆ ಉಡಾವಣೆ, ಕಕ್ಷೆಯಲ್ಲಿ ನೌಕೆಯನ್ನು ಮೇಲೇರಿಸುತ್ತಾ ಹೋಗಿದ್ದು, ಚಂದ್ರನ ಕಕ್ಷೆ ಪ್ರವೇಶ ಹಾಗೂ ಕಕ್ಷೆಯ ಅವರೋಹಣ ಯಶಸ್ವಿಯಾಗಿ ನಡೆದಿದೆ.

‘ಚಂದ್ರಯಾನ–1’ ಮತ್ತು ‘ಮಂಗಳಯಾನ–1’ರಲ್ಲಿ ಕಕ್ಷೆಗೆ ಸೇರಿಸುವ ಕಾರ್ಯ ಯಶಸ್ವಿಯಾಗಿ ನಡೆದಿತ್ತು. ‘ಲ್ಯಾಂಡರ್‌ ಇಳಿಸುವ ಕೌಶಲಕ್ಕೆ ಕೈಹಾಕಿರುವುದು ಇದೇ ಮೊದಲು. ಈ ಪ್ರಕ್ರಿಯೆ ನಾಜೂಕಿನದು. ಸಣ್ಣ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಭೂನಿಯಂತ್ರಣ ಕೇಂದ್ರದಿಂದ ಎಲ್ಲವನ್ನು ನಿಭಾಯಿಸಲಾಗುತ್ತದೆ. ಇದೂ ನಮಗೆ ಹೊಸದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Post Comments (+)