ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕನ್ನು ಹಿಡಿದಿಡುವ ಅಯಸ್ಕಾಂತ

Published 23 ಆಗಸ್ಟ್ 2023, 0:30 IST
Last Updated 23 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ನಕ್ಷತ್ರಗಳಿಗೂ ಸಾವಿರುತ್ತದೆ. ಈ ಹಂತವನ್ನು ತಲುಪಿದಾಗ ಅವು ಅಪಾರ ಶಕ್ತಿಯನ್ನು ಹೊರಚೆಲ್ಲಿ ಸ್ಫೋಟಗೊಳ್ಳುತ್ತವೆ. ಸ್ಫೋಟದ ಬಳಿಕ ಉಳಿದುಕೊಳ್ಳುವ ನಕ್ಷತ್ರದ ತಿರುಳು, ಅಥವಾ ಮಧ್ಯಭಾಗ ಅಪಾರ ಅಯಸ್ಕಾಂತೀಯ ಗುಣವನ್ನು ಹೊಂದಿರುತ್ತದೆ.

ಬೆಳಕನ್ನು ಹಿಡಿದಿಡಲು ಸಾಧ್ಯವೇ? ಕಷ್ಟಸಾಧ್ಯ – ಎಂಬ ಉತ್ತರ ತಕ್ಷಣ ಬರಬಹುದೋ ಏನೋ? ಬೆಳಕನ್ನು ಉತ್ಪಾದಿಸಬಹುದೇ ಹೊರತು ಒಂದೆಡೆ ಕೂಡಿಹಾಕಲಾಗದು ಎಂಬ ವಾದ ಬಹುಕಾಲದಿಂದಲೂ ಇದೆ. ಆದರೆ, ವಿಜ್ಞಾನಿಗಳಿಗೆ ಒಮ್ಮೆ ಹೀಗೆ ಸವಾಲು ಹಾಕಿಬಿಟ್ಟರೆ ಅದನ್ನು ಸಾಧಿಸಿ ತೋರಿಸುವವರೆಗೂ ಅವರಿಗೆ ನೆಮ್ಮದಿ ಇರದು. ಹೀಗೆ, ಸವಾಲನ್ನು ಸ್ವೀಕರಿಸಿ ಬೆಳಕನ್ನು ಒಂದೆಡೆ ಬಂಧಿಸಿ ಇಡುವಲ್ಲಿ ಇಲ್ಲಿನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಅದರಲ್ಲೂ, ಈ ಸಂಶೋಧನೆಯಲ್ಲೊಂದು ವಿಶೇಷವಿದೆ. ಬಂಧಿಸಿಟ್ಟ ಬೆಳಕು ಎಷ್ಟು ಕಾಲ ಬಂಧನದಲ್ಲೇ ಇದ್ದರೂ ಕೊಂಚವೂ ಮಾಸದಂತೆ, ಕ್ಷೀಣಿಸದಂತೆ, ಇದ್ದ ಹಾಗೆಯೇ ಇರುವಂತಹ ಸಾಮರ್ಥ್ಯ ಇರುವಂತೆಯೂ ವಿಜ್ಞಾನಿಗಳು ವಿಧಾನವನ್ನು ಕಂಡುಹಿಡಿದಿದ್ದಾರೆ.

ಅಮೆರಿಕದ ಸಿಟಿ ಕಾಲೇಜ್ ಆಫ್ ನ್ಯೂಯಾರ್ಕ್‌ ವಿಜ್ಞಾನಿಗಳ ತಂಡವು ಹೊಸತೊಂದು ರೀತಿಯ ಆಯಸ್ಕಾಂತವನ್ನು ಕಂಡುಹಿಡಿದಿದೆ. ಈ ಆಯಸ್ಕಾಂತವು ಅದೆಷ್ಟು ಬಲಶಾಲಿಯಾಗಿದೆ ಎಂದರೆ, ಅದರಿಂದ ಬೆಳಕಿಗೂ ತಪ್ಪಿಸಿಕೊಂಡುಹೋಗಲು ಸಾಧ್ಯವಿಲ್ಲ. ಒಮ್ಮೆ ಈ ಆಯಸ್ಕಾಂತಕ್ಕೆ ಸಿಲುಕಿದ ಬೆಳಕು, ಆ ಆಯಸ್ಕಾಂತದ ಒಳಗೆ ಶಾಶ್ವತವಾಗಿ ಇರುವಂತೆ ಆಗುತ್ತದೆ. ಆದರೆ, ಬೇಕಾದಾಗ ಅಗತ್ಯವಿದ್ದಷ್ಟು ಬೆಳಕನ್ನು ಮಾತ್ರವೇ ಹೊರತೆಗೆಯುವ ವಿಧಾನವೂ ಇಲ್ಲಿ ಆವಿಷ್ಕಾರಗೊಂಡಿದೆ.

ಈ ಸಂಶೋಧನೆಯ ಬಗ್ಗೆ ತಿಳಿಯಬೇಕಾದರೆ, ಮೊದಲು ಮತ್ತೊಂದು ವೈಜ್ಞಾನಿಕ ವಿಸ್ಮಯದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅದೇ ಕಪ್ಪುರಂಧ್ರಗಳ ರಹಸ್ಯ. ಈ ಕಪ್ಪುರಂಧ್ರಗಳು ಒಮ್ಮೆ ಮನೋಜ್ಞವಾಗಿ ಬದುಕಿ, ಪ್ರಜ್ವಲಿಸಿ, ಆಯುಸ್ಸನ್ನು ಪೂರ್ಣಗೊಳಿಸಿರುವ ನಕ್ಷತ್ರಗಳು. ಇವನ್ನು ‘ಕೃಷ್ಣಕಾಯ’ಗಳೆಂದೂ ಕರೆಯಲಾಗುವುದು. ಹಿಂದೊಮ್ಮೆ ನಕ್ಷತ್ರಗಳ ಹುಟ್ಟು–ಸಾವಿನ ಬಗ್ಗೆ ‘ಪ್ರಜಾವಾಣಿ’ಯ ತಂತ್ರಜ್ಞಾನ ಪುಟದಲ್ಲಿ ಚರ್ಚಿಸಲಾಗಿತ್ತು (‘ಸಾವನ್ನೂ ಗೆದ್ದ ಗ್ರಹ’ – 12 ಜುಲೈ, 2023). ಎಲ್ಲ ಜೀವಿಗಳಿಗೆ ತಮ್ಮ ಜೀವಿತಾವಧಿಯಲ್ಲಿ ಹುಟ್ಟು, ಬಾಲ್ಯ, ಯೌವನ, ಪ್ರೌಢ, ವೃದ್ಧಾಪ್ಯದಂತೆ ವಿವಿಧ ಹಂತಗಳು ಇರುವಂತೆ ನಕ್ಷತ್ರಗಳಿಗೂ ವಿವಿಧ ಹಂತಗಳಿರುತ್ತವೆ.

ನಕ್ಷತ್ರಗಳು ಈ ಹಂತಗಳಲ್ಲಿ ತಮ್ಮ ಬಣ್ಣ, ಗಾತ್ರ, ಶಾಖ, ಪ್ರಭೆಯನ್ನು ಬದಲಿಸಿಕೊಳ್ಳುತ್ತಿರುತ್ತವೆ. ನಕ್ಷತ್ರಗಳಿಗೂ ಸಾವಿರುತ್ತದೆ. ಈ ಹಂತವನ್ನು ತಲುಪಿದಾಗ ಅವು ಅಪಾರ ಶಕ್ತಿಯನ್ನು ಹೊರಚೆಲ್ಲಿ ಸ್ಫೋಟಗೊಳ್ಳುತ್ತವೆ. ಸ್ಫೋಟದ ಬಳಿಕ ಉಳಿದುಕೊಳ್ಳುವ ನಕ್ಷತ್ರದ ತಿರುಳು, ಅಥವಾ ಮಧ್ಯಭಾಗ ಅಪಾರ ಆಯಸ್ಕಾಂತೀಯ ಗುಣವನ್ನು ಹೊಂದಿರುತ್ತದೆ. ಇದೆಷ್ಟು ಶಕ್ತಿಶಾಲಿಯಾದ ಆಯ್ಕಸ್ಕಾಂತೀಯ ಗುಣವನ್ನು ಹೊಂದಿರುತ್ತದೆಯೆಂದರೆ, ಅದರಿಂದ ಬೆಳಕು ಸಹ ತಪ್ಪಿಸಿಕೊಳ್ಳಲಾಗದು!

ಈ ಕೃಷ್ಣಕಾಯಗಳು ಇಂದಿಗೂ ಬಲು ನಿಗೂಢ. ಇವನ್ನು ಕಪ್ಪುರಂಧ್ರಗಳೆಂದೂ, ಇವು ಬೇರೊಂದು ಕಾಲಮಾನಕ್ಕೆ, ಸ್ಥಳಕ್ಕೆ ಮಾರ್ಗ ಒದಗಿಸುವ ಬಾಹ್ಯಾಕಾಶದ ಹೆದ್ದಾರಿಗಳೆಂದೂ ವ್ಯಾಖ್ಯಾನಿಸಲ್ಪಟ್ಟಿವೆ. ಆದರೆ, ಈ ವೈಜ್ಞಾನಿಕ ವಾದಗಳನ್ನು ಪ್ರಾಯೋಗಿಕವಾಗಿ ನಿರೂಪಿಸುವ ಅರ್ಹತೆ ಮಾನವ ಪ್ರಭೇದಕ್ಕೆ ಇಕ್ಕೂ ಸಿಕ್ಕಿಲ್ಲ. ಮನುಷ್ಯನ ಆಯುಸ್ಸು, ದೈಹಿಕ ಸಾಮರ್ಥ್ಯದ ಮಿತಿ – ಇತ್ಯಾದಿಗಳು ಇದಕ್ಕೆ ಕಾರಣ. ಆದರೆ, ಈ ವೈಜ್ಞಾನಿಕ ವಾದಗಳನ್ನು ಈ ಕಪ್ಪುರಂಧ್ರಗಳು ಇರುವಲ್ಲಿಗೇ ಹೋಗಿ ನಿರೂಪಿಸಬೇಕು ಎಂದೇನೂ ಇಲ್ಲ. ಈ ಬಗೆಯ ಅಂತರಿಕ್ಷದ ಅದ್ಭುತಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ಸೃಷ್ಟಿಸಿ, ಕೆಲವು ವಾದಗಳನ್ನು ಸಾಬೀತುಪಡಿಸುವ ಸಾಧ್ಯತೆಗಳು ಇರುತ್ತವೆ. ಅಂಥದ್ದೇ ಒಂದು ಪ್ರಯೋಗವನ್ನು ನಡೆಸಿ, ವಿಜ್ಞಾನಿಗಳು ಇಲ್ಲಿ ಯಶಸ್ಸು ಕಂಡಿದ್ದಾರೆ.

ಅಮೆರಿಕದ ಸಿಟಿ ಕಾಲೇಜ್ ಆಫ್ ನ್ಯೂಯಾರ್ಕ್‌ ವಿಜ್ಞಾನಿಗಳ ತಂಡವು ಇದೇ ಬಗೆಯ ಪ್ರಯೋಗವೊಂದನ್ನು ಮಾಡಿದೆ. ಈ ತಂಡಕ್ಕೆ ‘ಕೃಷ್ಣಕಾಯ’ವೇ ಸ್ಫೂರ್ತಿ! ಕೃಷ್ಣಕಾಯಗಳ ಆಯಸ್ಕಾಂತ ಗುಣವನ್ನು ಅಧ್ಯಯನ ಮಾಡಿರುವ ತಂಡವು ಅತ್ಯಂತ ಶ‌ಕ್ತಿಶಾಲಿಯಾದ ಆಯ್ಕಸ್ಕಾಂತವು ಬೆಳಕನ್ನು ಬಂಧಿಸಿ ಇಡಬಲ್ಲದೇ ಎಂಬುದನ್ನು ಪ್ರಯೋಗದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಭಾರತ ಮೂಲದ ಭೌತವಿಜ್ಞಾನಿ ವಿನೋದ್ ಎಂ. ಮೆನನ್ ಹಾಗೂ ತಂಡವು ಈ ಸಂಶೋಧನೆ ಮಾಡಿದೆ. ತಮ್ಮ ಸಂಶೋಧನೆಯನ್ನು ಈ ತಂಡವು ‘ನೇಚರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ.

ಈ ವಿಜ್ಞಾನಿಗಳ ತಂಡವು ಬಹು ಪದರಗಳುಳ್ಳ ಆಯಸ್ಕಾಂತವನ್ನು ತಮ್ಮ ಸಂಶೋಧನೆಗೆ ಬಳಸಿಕೊಂಡಿದ್ದಾರೆ. ಆಯಸ್ಕಾಂತಗಳಲ್ಲಿ ಎರಡು ವಿಧ. ಭೂಮಿಯೊಳಗೆ ನೈಸರ್ಗಿಕವಾಗಿ ಸಿಗುವ ಆಯಸ್ಕಾಂತ. ಮತ್ತೊಂದು, ಕೃತಕವಾಗಿ ವಿದ್ಯುತ್‌ ಪ್ರವಾಹ ಹಾಗೂ ಇತರ ಕೃತಕ ವಿಧಾನಗಳಿಂದ ಉತ್ಪಾದಿಸುವ ಆಯಸ್ಕಾಂತ. ಕೆಲವು ಆಯಸ್ಕಾಂತಗಳು ವಿದ್ಯುತ್‌ ಪ್ರವಾಹ ಆದಾಗ ಮಾತ್ರ ಶಕ್ತಿ ಪಡೆದುಕೊಂಡು ಆಯಸ್ಕಾಂತೀಯ ಗುಣವನ್ನು ಹೊಂದುತ್ತವೆ. ವಿಜ್ಞಾನಿಗಳು ತಮ್ಮ ಪ್ರಯೋಗಕ್ಕೆ ಕೃತಕ ಆಯಸ್ಕಾಂತವನ್ನು ಬಳಸಿದ್ದಾರೆ. ಅಂದರೆ, ಆಯಸ್ಕಾಂತೀಯ ಕ್ಷೇತ್ರವನ್ನು ಸೃಷ್ಟಿಸಿ ಬಹು ಪದರಗಳಲ್ಲಿ ಹಲವು ಆಯಸ್ಕಾಂತಗಳನ್ನು ಇರಿಸಿ, ಬೆಳಕನ್ನು ಕೇಂದ್ರವೊಂದರಲ್ಲಿ ಬಂಧಿಸಿ ಇಡುವಂತೆ ಮಾಡಿದ್ದಾರೆ.

ಇಲ್ಲಿ ವಿದ್ಯುತ್‌ ಪ್ರವಾಹ ಇರುವ ಕಾರಣ ಆಯಸ್ಕಾಂತದ ಆಯಸ್ಕಾಂತೀಯ ಶಕ್ತಿಯನ್ನು ನಿಯಂತ್ರಿಸಬಹುದು. ಹೆಚ್ಚಿಸುವ, ಕುಗ್ಗಿಸುವ ಸಾಧ್ಯತೆ ಇರುತ್ತದೆ. ಈ ಆಯಸ್ಕಾಂತ ಮೂಲಕ ಬೆಳಕನ್ನು ಹಾಯಿಸಿದಾಗ ಆಯಸ್ಕಾಂತದ ಪ್ರಭಾವಕ್ಕೆ ಸಿಲುಕಿ ಒಳಗೆ ಬಂಧಿಸಲ್ಪಟ್ಟಿದೆ. ‘ಬೆಳಕಿಗೆ ಅತಿ ಪ್ರಖರವಾದ ಪ್ರತಿಫಲನ ಶಕ್ತಿ ಇರುತ್ತದೆ. ಒಮ್ಮೆ ಪದರಗಳುಳ್ಳ ಆಯಸ್ಕಾಂತದ ಒಳಗೆ ಹೋಗುವ ಬೆಳಕು ಒಳಭಾಗದಲ್ಲಿಯೇ ಪ್ರತಿಫಲಗೊಳ್ಳುತ್ತ ಸದಾ ಅಲ್ಲಿಯೇ ಇರುತ್ತದೆ. ಜೊತೆಗೆ, ಬೆಳಕಿನ ಶಕ್ತಿಯನ್ನು ಹೆಚ್ಚಿಸುವ ಸಾಧ್ಯತೆಯೂ ಇದರಿಂದ ಹೆಚ್ಚಾಗುತ್ತದೆ’ ಎಂದು ತಂಡದ ಪ್ರಮುಖ ವಿಜ್ಞಾನಿ ಫ್ಲೋರಿಯನ್ ಡರ್ನ್‌ಬರ್ಗರ್‌ ತಿಳಿಸಿದ್ದಾರೆ.

ಬಳಕೆ ಎಲ್ಲೆಲ್ಲಿ?:

ಇದಕ್ಕೆ ಬಳಕೆಯ ಸಾಧ್ಯತೆಗಳು ಸಾಕಷ್ಟಿವೆ. ಶೇಖರಿಸಿದ ಬೆಳಕನ್ನು ಮರುಬಳಕೆ ಮಾಡುವುದು. ಅಂದರೆ ಬೆಳಕನ್ನು ವಿದ್ಯುತ್ತಾಗಿ ಪರಿವರ್ತಿಸುವ ಸಾಧ್ಯತೆಗಳನ್ನು ಮತ್ತಷ್ಟು ಸಂಶೋಧನೆಗಳಿಗೆ ಒಳಪಡಿಸುವುದು. ಈಗಾಗಲೇ ಬೆಳಕನ್ನು ವಿದ್ಯುತ್ತಾಗಿ ಪರಿವರ್ತನೆ ಮಾಡುವ ತಂತ್ರಜ್ಞಾನ ಶೋಧವಾಗಿದೆ. ಇದರಿಂದ ಬೆಳಕನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನೆ ಮಾಡುವ ಅವಕಾಶ ಸಿಕ್ಕಂತಾಗುತ್ತದೆ. ಅಲ್ಲದೇ, ಬೆಳಕಿನ ಮೂಲಕ ದತ್ತಾಂಶ ರವಾನೆ ಮಾಡುವ ತಂತ್ರಜ್ಞಾನವೂ ನಮ್ಮಲ್ಲಿ ಆಗಲೇ ಇದೆ. ಇದನ್ನು ಮತ್ತಷ್ಟು ಹೊಸ ಬಗೆಗಳಲ್ಲಿ ಸಂಶೋಧನೆ ಮಾಡುವ ಅವಕಾಶಗಳು ಇದರಿಂದ ಸಿಕ್ಕಂತೆ ಆಗುತ್ತದೆ.

ಜೊತೆಗೆ, ಅತಿ ಸರಳವಾಗಿ ಬೆಳಕನ್ನು ಬೆಳಕಂತೆ ಮಾಡಿಕೊಳ್ಳುವ ಸಾಧ್ಯತೆಗಳೂ ಇದರಿಂದ ಹೆಚ್ಚುತ್ತದೆ. ಆಯಸ್ಕಾಂತದ ಶಕ್ತಿಗೆ ಅನುಸಾರವಾಗಿ ಬೆಳಕನ್ನು ಸಂಗ್ರಹಿಸುವ ಸಾಮರ್ಥ್ಯವೂ ಏರಿಳಿತವಾಗುತ್ತದೆ. ಪ್ರಬಲವಾದ ಆಯಸ್ಕಾಂತವು ಹೆಚ್ಚು ಪ್ರಮಾಣದ ಬೆಳಕನ್ನು ಶೇಖರಿಸಿಡಬಲ್ಲದು. ಆದರೆ, ಬೆಳಕನ್ನು ಶೇಖರಿಸಲು ಈ ವಿಜ್ಞಾನಿಗಳು ಕಂಡು ಹಿಡಿದಿರುವ ವಿಧಾನಗಳು ತಿಳಿದಿರಬೇಕು. ಹಾಗಾಗಿ, ಎಲ್ಲ ಆಯಸ್ಕಾಂತಗಳೂ ಬೆಳಕನ್ನು ಹಿಡಿದಿಡಲಾರವು ಎಂಬ ಅಂಶವನ್ನು ಸತ್ಯವನ್ನು ಅಲ್ಲಗಳೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT